Aaron Finch Retires ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆಸ್ಟ್ರೇಲಿಯಾ ನಾಯಕ..!

By Naveen KodaseFirst Published Sep 10, 2022, 11:25 AM IST
Highlights

ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ ಆ್ಯರೋನ್ ಫಿಂಚ್
ನ್ಯೂಜಿಲೆಂಡ್ ಎದುರು ಕೊನೆಯ ಏಕದಿನ ಪಂದ್ಯವನ್ನಾಡಲಿರುವ ಆಸೀಸ್‌ ನಾಯಕ
ಇನ್ನು ಟಿ20 ತಂಡದ ನಾಯಕನಾಗಿ ಮುಂದುವರೆಯಲಿರುವ ಆ್ಯರೋನ್ ಫಿಂಚ್

ಮೆಲ್ಬೊರ್ನ್‌(ಸೆ.10): ಆಸ್ಟ್ರೇಲಿಯಾ ಸೀಮಿತ ಓವರ್‌ಗಳ ಕ್ರಿಕೆಟ್ ತಂಡದ ನಾಯಕ ಆ್ಯರೋನ್ ಫಿಂಚ್, ಸತತವಾಗಿ ಫಾರ್ಮ್ ಸಮಸ್ಯ ಎದುರಿಸುತ್ತಿದ್ದು, ದಿಢೀರ್ ಎನ್ನುವಂತೆ ಇಂದು ಮುಂಜಾನೆ ಏಕದಿನ ಕ್ರಿಕೆಟ್ ಮಾದರಿಗೆ ಗುಡ್‌ ಬೈ ಹೇಳಿದ್ದಾರೆ. 35 ವರ್ಷದ ಆ್ಯರೋನ್ ಫಿಂಚ್, ನ್ಯೂಜಿಲೆಂಡ್‌ ವಿರುದ್ದ ಸೆಪ್ಟೆಂಬರ್ 11ರಂದು ನಡೆಯಲಿರುವ ಮೂರನೇ ಪಂದ್ಯದಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪರ ಏಕದಿನ ಕ್ರಿಕೆಟ್ ಪಂದ್ಯವನ್ನಾಡಲಿದ್ದಾರೆ. ಇನ್ನು ಆ್ಯರೋನ್ ಫಿಂಚ್, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಲಿದ್ದಾರೆ. 

ಸದ್ಯ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ತವರಿನಲ್ಲಿ, ನ್ಯೂಜಿಲೆಂಡ್‌ ಎದುರು 3 ಪಂದ್ಯಗಳ ಚಾಪೆಲ್-ಹ್ಯಾಡ್ಲಿ ಏಕದಿನ ಸರಣಿಯನ್ನಾಡುತ್ತಿದ್ದು, ಈಗಾಗಲೇ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು 2-0 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಆ್ಯರೋನ್ ಫಿಂಚ್ ಇದುವರೆಗೂ 145 ಏಕದಿನ ಪಂದ್ಯಗಳನ್ನಾಡಿ 17 ಶತಕಗಳ ಸಹಿತ ಒಟ್ಟು 5,401 ರನ್ ಬಾರಿಸಿದ್ದಾರೆ. ಈ ಮೂಲಕ ಆಸೀಸ್ ಕ್ರಿಕೆಟ್ ದಿಗ್ಗಜರಾದ ರಿಕಿ ಪಾಂಟಿಂಗ್(29), ಡೇವಿಡ್ ವಾರ್ನರ್ & ಮಾರ್ಕ್‌ ವಾ(18)  ಬಳಿಕ ಅತಿಹೆಚ್ಚು ಏಕದಿನ ಶತಕ ಬಾರಿಸಿದ ಆಸೀಸ್‌ನ ನಾಲ್ಕನೇ ಬ್ಯಾಟರ್ ಎನಿಸಿಕೊಂಡಿದ್ದರು.

ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಏಕದಿನ ಮಾದರಿಯಲ್ಲಿ 54 ಪಂದ್ಯಗಳಲ್ಲಿ ಮುನ್ನಡೆಸಿರುವ ಆ್ಯರೋನ್ ಫಿಂಚ್, ಇದೊಂದು ಅದ್ಭುತ ಪಯಣವಾಗಿತ್ತು, ಈ ಜರ್ನಿಯಲ್ಲಿ ಸಾಕಷ್ಟು ಅವಿಸ್ಮರಣೀಯ ಕ್ಷಣಗಳು ನನ್ನ ಜತೆಗಿವೆ ಎಂದು ಹೇಳಿದ್ದಾರೆ. ನಾನು ಸಾಕಷ್ಟು ಪ್ರತಿಭಾನ್ವಿತ ಆಟಗಾರರನ್ನೊಳಗೊಂಡ ಏಕದಿನ ತಂಡದ ಭಾಗವಾಗಿರುವುದಕ್ಕೆ ಅದೃಷ್ಟವಂತನೆಂದು ಭಾವಿಸುತ್ತೇನೆ. ಅದೇ ರೀತಿ ನನ್ನ ಜತೆ ಆಡಿದ ಹಾಗೂ ತೆರೆಮರೆಯಲ್ಲಿ ನನ್ನ ಜತೆಯಾದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ಫಿಂಚ್ ಹೇಳಿದ್ದಾರೆ.

A true champion of the white-ball game.

Aaron Finch will retire from one-day cricket after tomorrow’s third and final Dettol ODI vs New Zealand, with focus shifting to leading Australia at the pic.twitter.com/SG8uQuTVGc

— Cricket Australia (@CricketAus)

ಆ್ಯರೋನ್ ಫಿಂಚ್ ಅವರ ನಾಯಕತ್ವದ ಬಗ್ಗೆ ಯಾರೊಬ್ಬರು ಪ್ರಶ್ನೆಯನ್ನು ಎತ್ತಿರಲಿಲ್ಲ. ಆದರೆ ಫಿಂಚ್ ಕಳೆದ 7 ಏಕದಿನ ಇನಿಂಗ್ಸ್‌ಗಳಲ್ಲಿ ಕ್ರಮವಾಗಿ 0,5,5,1,15,0,0 ರನ್‌ಗಳನ್ನಷ್ಟೇ ಬಾರಿಸಿದ್ದಾರೆ. ಆ್ಯರೋನ್ ಫಿಂಚ್ ಕಳಫೆ ಫಾರ್ಮ್‌ನಿಂದ ಬಳಲುತ್ತಿರುವುದರಿಂದ  ಏಕದಿನ ಕ್ರಿಕೆಟ್ ಮಾದರಿಯಲ್ಲಿ ಫಿಂಚ್ ಬದಲಿಗೆ ಬೇರೆ ಆಟಗಾರರನ್ನು ಹುಡುಕುವುದು ಉತ್ತಮ ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದರು.

Aaron Finch: ಟಿ20 ವಿಶ್ವಕಪ್ ಗೆದ್ದ ನಾಯಕ, ಅಂತಾರಾಷ್ಟ್ರಿಯ ಏಕದಿನ ಕ್ರಿಕೆಟ್‌ಗೆ ದಿಢೀರ್ ಗುಡ್‌ ಬೈ..?

ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ಆಸ್ಟ್ರೇಲಿಯಾ ಕ್ರಿಕೆಟ್ ತಂಡವನ್ನು ಕಟ್ಟಲು ಇದು  ಸಕಾಲವೆಂದು ಭಾವಿಸುತ್ತಾ, ನಾನು ಆಸ್ಟ್ರೇಲಿಯಾ ಏಕದಿನ ತಂಡಕ್ಕೆ ವಿದಾಯ ಘೋಷಿಸುತ್ತಿದ್ದೇನೆ. ನನ್ನ ಈ ಪಯಣದಲ್ಲಿ ನನ್ನ ಜತೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ  ಎಂದು ಆ್ಯರೋನ್ ಫಿಂಚ್ ಹೇಳಿದ್ದಾರೆ.

2021ರಲ್ಲಿ ಯುಎಇನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆ್ಯರೋನ್ ಫಿಂಚ್ ನೇತೃತ್ವದ ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಮೊದಲ ಬಾರಿಗೆ ಐಸಿಸಿ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು. ಇನ್ನು 2020ರಲ್ಲಿ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್ ತಂಡದ ನಾಯಕತ್ವ ವಹಿಸಿಕೊಂಡ ಆ್ಯರೋನ್ ಫಿಂಚ್, ತಮ್ಮ ಕಟ್ಟಕಡೆಯ ಗುರಿ 2023 ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅಸ್ಟ್ರೇಲಿಯಾ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸುವುದಾಗಿದೆ ಎಂದು ಹೇಳಿದ್ದರು. ಆದರೆ ಇದೀಗ ಕಳಪೆ ಫಾರ್ಮ್‌ನಿಂದಾಗಿ ಏಕದಿನ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದಾರೆ. ಇನ್ನು ಆಸ್ಟ್ರೇಲಿಯಾದಲ್ಲೇ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿ ಬಳಿಕ ಫಿಂಚ್, ಟಿ20 ಕ್ರಿಕೆಟ್‌ಗೂ ವಿದಾಯ ಘೋಷಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

click me!