ಭಾರತ-ಆಸ್ಟ್ರೇಲಿಯಾ ನಡುವಿನ ಸಿಡ್ನಿ ಟೆಸ್ಟ್ ಪಂದ್ಯ ಐತಿಹಾಸಿಕ ಡ್ರಾನಲ್ಲಿ ಅಂತ್ಯವಾಗಿದೆ. ಹನುಮ ವಿಹಾರಿ-ರವಿಚಂದ್ರನ್ ಅಶ್ವಿನ್ ಕೆಚ್ಚೆದೆಯ ಜತೆಯಾಟ ತಂಡವನ್ನು ಸೋಲಿನಿಂದ ಪಾರು ಮಾಡಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಸಿಡ್ನಿ(ಜ.11): ರಿಷಭ್ ಪಂತ್ ಶತಕ ವಂಚಿತ ಬ್ಯಾಟಿಂಗ್(97), ಪೂಜಾರ ಸಮಯೋಚಿತ ಅರ್ಧಶತಕ(77) ಹಾಗೂ ಹನುಮ ವಿಹಾರಿ ಮತ್ತು ರವಿಚಂದ್ರನ್ ಅಶ್ವಿನ್ ಅವರ ರಕ್ಷಣಾತ್ಮಕ ಜತೆಯಾಟದ ನೆರವಿನಿಂದ ಟೀಂ ಇಂಡಿಯಾ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ರೋಚಕ ಡ್ರಾ ಸಾಧಿಸಿದೆ.
ಹೌದು, 407 ರನ್‌ಗಳ ಗುರಿ ಪಡೆದಿದ್ದ ಟೀಂ ಇಂಡಿಯಾ ನಾಲ್ಕನೇ ದಿನದಾಟದಂತ್ಯದ ವೇಳೆಗೆ 2 ವಿಕೆಟ್ ಕಳೆದುಕೊಂಡು 98 ರನ್ ಗಳಿಸಿತ್ತು. ಗೆಲ್ಲಲು ಇನ್ನೂ 309 ರನ್‌ಗಳ ಅಗತ್ಯವಿತ್ತು. ಕೊನೆಯ ದಿನದಾಟದ ಆರಂಭದಲ್ಲೇ ನಾಯಕ ಅಜಿಂಕ್ಯ ರಹಾನೆ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ 4ನೇ ವಿಕೆಟ್‌ಗೆ ಜತೆಯಾದ ಚೇತೇಶ್ವರ್ ಪೂಜಾರ ಹಾಗೂ ರಿಷಭ್ ಪಂತ್ ಶತಕದ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು. ವಿಸ್ಪೋಟಕ ಬ್ಯಾಟಿಂಗ್ ನಡೆಸಿದ ಪಂತ್ 118 ಎಸೆತಗಳನ್ನು ಎದುರಿಸಿ 12 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 97 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದರೊಂದಿಗೆ ಕೇವಲ 3 ರನ್‌ಗಳಿಂದ ಶತಕ ವಂಚಿತರಾದರು. ಮತ್ತೊಂದು ತುದಿಯಲ್ಲಿ ಪೂಜಾರ 205 ಎಸೆತಗಳನ್ನು ಎದುರಿಸಿ 12 ಬೌಂಡರಿ ಸಹಿತ 77 ರನ್ ಬಾರಿಸಿ ವಿಕೆಟ್ ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಜೋಡಿ ಬ್ಯಾಟಿಂಗ್ ಮಾಡಿದ ರೀತಿ ಗಮನಿಸಿದರೆ ಟೀಂ ಇಂಡಿಯಾ ಇನ್ನೇನು ಸುಲಭವಾಗಿ ಟೆಸ್ಟ್ ಪಂದ್ಯವನ್ನು ಜಯಿಸಬಹುದು ಎನ್ನುವ ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಈ ಜೋಡಿ ಬೇರ್ಪಡುತ್ತಿದ್ದಂತೆ ಟೀಂ ಇಂಡಿಯಾಗೆ ಸೋಲಿನ ಭೀತಿ ಮತ್ತೊಮ್ಮೆ ಎದುರಾಯಿತು.
ಪಂತ್ ಅಬ್ಬರ; ರೋಚಕ ಘಟ್ಟದತ್ತ ಸಿಡ್ನಿ ಟೆಸ್ಟ್
Match saved 🙌
Ashwin and Vihari batted well over a hundred deliveries each to earn India a memorable draw 👏🇮🇳
The thrill of Test cricket 😅 ▶️ https://t.co/jOSQoYOuSC pic.twitter.com/N8TDwKmgnZ
ಸೋಲಿನಿಂದ ಬಚಾವ್ ಮಾಡಿದ ಹನುಮ-ಅಶ್ವಿನ್: ಒಂದು ಹಂತದಲ್ಲಿ ಟೀಂ ಇಂಡಿಯಾ 88.2 ಓವರ್‌ಗಳಲ್ಲಿ 272 ರನ್ ಬಾರಿಸಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಜತೆಯಾದ ಹನುಮ ವಿಹಾರಿ ಹಾಗೂ ರವಿಚಂದ್ರನ್ ಅಶ್ವಿನ್ ಜೋಡಿ ಸಾಕಷ್ಟು ರಕ್ಷಣಾತ್ಮಕ ಆಟವಾಡುವ ಮೂಲಕ ತಂಡವನ್ನು ಸೋಲಿನಿಂದ ಪಾರುಮಾಡುವಲ್ಲಿ ಯಶಸ್ವಿಯಾದರು. ಹನುಮ ವಿಹಾರಿ 161 ಎಸೆತಗಳನ್ನು ಎದುರಿಸಿ 4 ಬೌಂಡರಿ ನೆರವಿನಿಂದ ಅಜೇಯ 23 ರನ್ ಬಾರಿಸಿದರೆ, ಅಶ್ವಿನ್ 128 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ ಅಜೇಯ 39 ರನ್ ಬಾರಿಸಿ ಅಜೇಯರಾಗುಳಿದರು. ಒಟ್ಟಾರೆ ಜೋಡಿ 258 ಎಸೆತಗಳನ್ನು ಎದುರಿಸಿ ಮರಿಯದ 62 ರನ್‌ಗಳ ಜತೆಯಾಟವಾಡುವ ಮೂಲಕ ತಂಡವನ್ನು ಸ್ಮರಣೀಯವಾದ ಡ್ರಾ ಮಾಡಿಸುವಲ್ಲಿ ಯಶಸ್ವಿಯಾದರು.
ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ ಸ್ಟೀವ್ ಸ್ಮಿತ್ ಶತಕದ ನೆರವಿನಿಂದ 338 ರನ್ ಬಾರಿಸಿತ್ತು. ಇದಕ್ಕುತ್ತರವಾಗಿ ಭಾರತ ಮೊದಲ ಇನಿಂಗ್ಸ್‌ನಲ್ಲಿ ಕೇವಲ 244 ರನ್‌ಗಳಿಗೆ ಆಲೌಟ್ ಆಗುವ ಹಿನ್ನಡೆ ಅನುಭವಿಸಿತ್ತು. ಇನ್ನು ಎರಡನೇ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 312 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಅಂತಿಮವಾಗಿ ಭಾರತಕ್ಕೆ 407 ರನ್‌ಗಳ ಗುರಿ ನೀಡಿತ್ತು.
ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಕ್ರಮವಾಗಿ ಆಸ್ಟ್ರೇಲಿಯಾ ಮತ್ತು ಭಾರತ ತಂಡಗಳು ಗೆದ್ದುಕೊಂಡಿದ್ದವು. ಇದೀಗ ಮೂರನೇ ಟೆಸ್ಟ್ ಪಂದ್ಯ ಡ್ರಾ ಆಗಿರುವುದರಿಂದ ಬ್ರಿಸ್ಬೇನ್‌ನ ಗಾಬಾ ಮೈದಾನದಲ್ಲಿ ಜನವರಿ 15ರಿಂದ ಆರಂಭವಾಗಲಿರುವ ನಾಲ್ಕನೇ ಹಾಗೂ ಕೊನೆಯ ಟೆಸ್ಟ್ ಪಂದ್ಯದ ಫಲಿತಾಂಶ ಏನಾಗಲಿದೆ ಎನ್ನುವ ಕುತೂಹಲ ಸಾಕಷ್ಟು ಜೋರಾಗಿದೆ.