ಲಾರ್ಡ್ಸ್ ಟೆಸ್ಟ್ ಮೇಲೆ ಸಂಪೂರ್ಣ ಬಿಗಿಹಿಡಿತ ಸಾಧಿಸಿದ ಆಸ್ಟ್ರೇಲಿಯಾ
ಕೊನೆಯ ದಿನ ಟೆಸ್ಟ್ ಗೆಲ್ಲಲು ಬೆನ್ ಸ್ಟೋಕ್ಸ್ ಪಡೆಗೆ 257 ರನ್ ಅವಶ್ಯಕತೆ
ಈಗಾಗಲೇ ಮೊದಲ ಟೆಸ್ಟ್ ಪಂದ್ಯ ಗೆದ್ದಿರುವ ಆಸ್ಟ್ರೇಲಿಯಾ
ಲಂಡನ್(ಜು.02): ಆ್ಯಷಸ್ ಸರಣಿಯ 2ನೇ ಟೆಸ್ಟ್‌ನಲ್ಲಿ ಆಸ್ಟ್ರೇಲಿಯಾ ಜಯದ ನಿರೀಕ್ಷೆಯಲ್ಲಿದೆ. 2ನೇ ಇನ್ನಿಂಗ್ಸಲ್ಲಿ 279 ರನ್ ಕಲೆಹಾಕಿದ ಆಸೀಸ್ ಇಂಗ್ಲೆಂಡ್ ಗೆಲುವಿಗೆ 371 ರನ್ ಗುರಿ ನಿಗದಿಪಡಿಸಿದೆ. ಇನ್ನು ಸವಾಲಿನ ಗುರಿ ಬೆನ್ನತ್ತಿರುವ ಆತಿಥೇಯ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿದೆ. ಕೊನೆಯ ದಿನ ಲಾರ್ಡ್ಸ್ ಟೆಸ್ಟ್ ಪಂದ್ಯವನ್ನು ಗೆಲ್ಲಬೇಕಿದ್ದರೇ ಬೆನ್ ಸ್ಟೋಕ್ಸ್ ಪಡೆ ಇನ್ನೂ 257 ರನ್ ಬಾರಿಸಬೇಕಿದೆ.
2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಆರಂಭಿಕ ಆಘಾತಕ್ಕೆ ಗುರಿಯಾಯಿತು. 13 ರನ್ ಗಳಿಸುವಷ್ಟರಲ್ಲಿ ಜಾಕ್ ಕ್ರಾಲಿ ಹಾಗೂ ಓಲಿ ಪೋಪ್‌ರ ವಿಕೆಟ್ ಕಳೆದುಕೊಂಡಿತು. ಇನ್ನು ಮಾಜಿ ನಾಯಕ ಜೋ ರೂಟ್ ಕೂಡಾ ಹೆಚ್ಚು ಹೊತ್ತು ಕ್ರೀಸ್‌ನಲ್ಲಿರಲು ಆಸೀಸ್ ನಾಯಕ ಪ್ಯಾಟ್ ಕಮಿನ್ಸ್ ಅವಕಾಶ ನೀಡಲಿಲ್ಲ. ಜೋ ರೂಟ್ 18 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಮತ್ತೋರ್ವ ಬ್ಯಾಟರ್ ಹ್ಯಾರಿ ಬ್ರೂಕ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಹ್ಯಾರಿ ಬ್ರೂಕ್ ಕೇವಲ 4 ರನ್ ಗಳಿಸಿ ಕಮಿನ್ಸ್ ಬೌಲಿಂಗ್‌ನಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಸದ್ಯ ಇಂಗ್ಲೆಂಡ್ ಆರಂಭಿಕ ಬ್ಯಾಟರ್ ಬೆನ್ ಡುಕೆಟ್(50) ಹಾಗೂ ನಾಯಕ ಬೆನ್ ಸ್ಟೋಕ್ಸ್(29) ಐದನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದು, ಇಂಗ್ಲೆಂಡ್ ಸೋಲಿನಿಂದ ಪಾರಾಗಬೇಕಿದ್ದರೇ ಈ ಜೋಡಿ ಜವಾಬ್ದಾರಿಯುತ ಆಟ ಆಡಬೇಕಿದೆ.
undefined
Ashes 2023: ಇಂಗ್ಲೆಂಡ್ ಎದುರು ಬೃಹತ್ ಮುನ್ನಡೆಯತ್ತ ಆಸ್ಟ್ರೇಲಿಯಾ
ಇನ್ನು ಇದಕ್ಕೂ ಮೊದಲು 3ನೇ ದಿನದಂತ್ಯಕ್ಕೆ 2 ವಿಕೆಟ್‌ಗೆ 130 ರನ್ ಗಳಿಸಿದ್ದ ಆಸೀಸ್, 4ನೇ ದಿನವಾದ ಶನಿವಾರ ಆ ಮೊತ್ತಕ್ಕೆ 149 ರನ್ ಸೇರಿಸಿತು. ಖವಾಜ 77, ಸ್ಮಿತ್ 34 ರನ್ ಗಳಿಸಿದರು. ಗಾಯದ ನಡುವೆಯೂ ಕ್ರೀಸ್‌ಗಿಳಿದ ನೇಥನ್ ಲಯನ್ ಕೊನೆ ವಿಕೆಟ್‌ಗೆ ಸ್ಟಾರ್ಕ್ ಜೊತೆ ಸೇರಿ 15 ರನ್ ಸೇರಿಸಿದರು. ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ 4 ವಿಕೆಟ್ ಕಿತ್ತರು. ಇನ್ನು ಜೋಶ್ ಟಂಗ್ ಹಾಗೂ ಓಲಿ ರಾಬಿನ್‌ಸನ್ ತಲಾ 2 ವಿಕೆಟ್ ಪಡೆದರೆ ನಾಯಕ ಬೆನ್ ಸ್ಟೋಕ್ಸ್ ಮತ್ತು ಅನುಭವಿ ವೇಗಿ ಜೇಮ್ಸ್ ಆಂಡರ್‌ಸನ್ ತಲಾ ಒಂದೊಂದು ವಿಕೆಟ್ ತಮ್ಮ ಖಾತೆಗೆ ಸೇರಿಸಿಕೊಂಡರು.
ದುಲೀಪ್ ಟ್ರೋಫಿ: ಕೇಂದ್ರ, ಉತ್ತರ ವಲಯ ಸೆಮೀಸ್‌ಗೆ
ಬೆಂಗಳೂರು: ಕೇಂದ್ರ ವಲಯ ಹಾಗೂ ಉತ್ತರ ವಲಯ ತಂಡಗಳು ದುಲೀಪ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಸೆಮಿಫೈನಲ್ ಪ್ರವೇಶಿಸಿವೆ. ನಗರದ ಆಲೂರು ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಪೂರ್ವ ವಲಯದ ವಿರುದ್ಧ ಕೇಂದ್ರ ವಲಯ 170 ರನ್‌ಳಿಂದ ಜಯಿಸಿತು. ಗೆಲುವಿಗೆ 300 ರನ್ ಗುರಿ ಪಡೆದ ಪೂರ್ವ ವಲಯ 3ನೇ ದಿನದಂತ್ಯಕ್ಕೆ 69ಕ್ಕೆ 6 ವಿಕೆಟ್ ಕಳೆದುಕೊಂಡಿತ್ತು. 4ನೇ ದಿನವೂ ಯಾವುದೇ ಹೋರಾಟ ಪ್ರದರ್ಶಿಸದ ತಂಡ 129ಕ್ಕೆ ಆಲೌಟ್ ಆಯಿತು. ಸ್ಪಿನ್ನರ್ ಸೌರಭ್ ಕುಮಾರ್ 8 ವಿಕೆಟ್ ಕಬಳಿಸಿ ಗೆಲುವಿನ ರೂವಾರಿ ಎನಿಸಿಕೊಂಡರು.
ಉತ್ತರಕ್ಕೆ 555 ರನ್ ಜಯ!
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಕ್ವಾರ್ಟರ್‌ನಲ್ಲಿ ಈಶಾನ್ಯದ ವಿರುದ್ಧ ಉತ್ತರ ವಲಯ 511 ರನ್‌ಗಳಿಂದ ಜಯ ಗಳಿಸಿತು. 666 ರನ್ ಗುರಿ ಬೆನ್ನತ್ತಿದ ಈಶಾನ್ಯ 2ನೇ ಇನ್ನಿಂಗ್ಸ್‌ನಲ್ಲಿ ಕೇವಲ 154ಕ್ಕೆ ಸರ್ವಪತನ ಕಂಡಿತು.
ಜುಲೈ 5ರಿಂದ ಸೆಮೀಸ್
ಟೂರ್ನಿಯ ಸೆಮಿಫೈನಲ್ ಪಂದ್ಯಗಳು ಬುಧವಾರದಿಂದ ಆರಂಭಗೊಳ್ಳಲಿದೆ. ಕೇಂದ್ರ ವಲಯ ತಂಡ ಪಶ್ಚಿಮ ವಲಯದ ವಿರುದ್ಧ ಆಡಲಿದ್ದು, ಮತ್ತೊಂದು ಸೆಮೀಸ್‌ನಲ್ಲಿ ದಕ್ಷಿಣ ವಲಯಕ್ಕೆ ಉತ್ತರ ವಲಯದ ಸವಾಲು ಎದುರಾಗಲಿದೆ. ಕಳೆದ ಋತುವಿನಲ್ಲಿ ಫೈನಲ್ ಪ್ರವೇಶಿಸಿದ್ದ ಪಶ್ಚಿಮ ಹಾಗೂ ದಕ್ಷಿಣ ವಲಯ ಈ ಬಾರಿ ನೇರವಾಗಿ ಸೆಮೀಸ್‌ಗೇರಿದ್ದವು.