Ashes 2021: ಇಂಗ್ಲೆಂಡ್ ಎದುರು ಪಿಂಕ್ ಬಾಲ್ ಟೆಸ್ಟ್ ಗೆದ್ದು ಬೀಗಿದ ಆಸ್ಟ್ರೇಲಿಯಾ

Suvarna News   | Asianet News
Published : Dec 20, 2021, 04:11 PM IST
Ashes 2021: ಇಂಗ್ಲೆಂಡ್ ಎದುರು ಪಿಂಕ್ ಬಾಲ್ ಟೆಸ್ಟ್ ಗೆದ್ದು ಬೀಗಿದ ಆಸ್ಟ್ರೇಲಿಯಾ

ಸಾರಾಂಶ

* ಅಡಿಲೇಡ್ ಟೆಸ್ಟ್ ಗೆದ್ದು ಬೀಗಿದ ಆತಿಥೇಯ ಆಸ್ಟ್ರೇಲಿಯಾ * ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ ಆಸ್ಟ್ರೇಲಿಯಾಗೆ 2-0 ಮುನ್ನಡೆ * ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ಗೆ 275 ರನ್‌ಗಳ ಸೋಲು

ಅಡಿಲೇಡ್‌(ಡಿ.20): ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟರ್‌ ಜೋಸ್ ಬಟ್ಲರ್ (Jos Buttler) ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ನೆಲಕಚ್ಚಿ ಆಡಿದರೂ ಸಹಾ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ. ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದಿಂದಾಗಿ ಪ್ರವಾಸಿ ಇಂಗ್ಲೆಂಡ್ ತಂಡಕ್ಕೆ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ (Ashes Test Series) ಮತ್ತೊಂದು ಸೋಲು ಎದುರಾಗಿದೆ. ಸ್ಟೀವ್ ಸ್ಮಿತ್ (Steve Smith) ನೇತೃತ್ವದ ಆಸ್ಟ್ರೇಲಿಯಾ ತಂಡವು (Australia Cricket Team) 275 ರನ್‌ಗಳ ಅಂತರದಲ್ಲಿ ಪಿಂಕ್ ಬಾಲ್ ಟೆಸ್ಟ್ (Pink Ball Test) ಪಂದ್ಯವನ್ನು ಗೆಲ್ಲುವ ಮೂಲಕ 5 ಪಂದ್ಯಗಳ ಆ್ಯಷಸ್ ಟೆಸ್ಟ್‌ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

ಇಲ್ಲಿನ ಅಡಿಲೇಡ್ ಓವಲ್ ಮೈದಾನದಲ್ಲಿ ಗೆಲ್ಲಲು 468 ರನ್‌ಗಳ ಬೃಹತ್ ಗುರಿ ಪಡೆದ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಂತ್ಯದ ವೇಳೆಗೆ 4 ವಿಕೆಟ್ ಕಳೆದುಕೊಂಡು ಕೇವಲ 82 ರನ್‌ ಬಾರಿಸಿತ್ತು. ಕೊನೆಯ ದಿನ ಪಂದ್ಯ ಗೆಲ್ಲಲು ಬರೋಬ್ಬರಿ 386 ರನ್‌ಗಳ ಅಗತ್ಯವಿತ್ತು. ಐದನೇ ದಿನದಾಟ ಆರಂಭಿಸಿದ ಆಂಗ್ಲರ ಪಡೆಗೆ ಎಡಗೈ ವೇಗಿ ಮಿಚೆಲ್ ಸ್ಟಾರ್ಕ್ (Mitchell Starc) ಮತ್ತೊಮ್ಮೆ ಆಘಾತ ನೀಡುವಲ್ಲಿ ಯಶಸ್ವಿಯಾದರು. ದಯನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಓಲಿ ಪೋಪ್ ಮತ್ತೊಮ್ಮೆ ಒಂದಂಕಿ ಮೊತ್ತಕ್ಕೆ ವಿಕೆಟ್ ಒಪ್ಪಿಸಿದರು. ಕೇವಲ 7 ಎಸೆತಗಳನ್ನು ಎದುರಿಸಿದ್ದ ಪೋಪ್ 4 ರನ್‌ ಬಾರಿಸಿ ಮಿಚೆಲ್ ಸ್ಟಾರ್ಕ್ ಬೌಲಿಂಗ್‌ನಲ್ಲಿ ಸ್ಟೀವ್ ಸ್ಮಿತ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಇನ್ನು ಆಲ್ರೌಂಡರ್ ಬೆನ್ ಸ್ಟೋಕ್ಸ್ (Ben Stokes) ಸಾಕಷ್ಟು ಎಚ್ಚರಿಕೆಯ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾಗಲು ಯತ್ನಿಸಿದರು. ಒಟ್ಟು 77 ಎಸೆತಗಳನ್ನು ಎದುರಿಸಿ ಕೇವಲ 12 ರನ್ ಬಾರಿಸಿ ಸ್ಟೋಕ್ಸ್‌, ಅನುಭವಿ ಸ್ಪಿನ್ನರ್ ನೇಥನ್ ಲಯನ್ (Nathan Lyon) ಎಲ್‌ಬಿ ಬಲೆಗೆ ಬಿದ್ದರು. ಈ ವೇಳೆಗೆ ಇಂಗ್ಲೆಂಡ್ 105 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನತ್ತ ಮುಖ ಮಾಡಿತ್ತು.

ಕೆಚ್ಚೆದೆಯ ಬ್ಯಾಟಿಂಗ್ ನಡೆಸಿದ ಬಟ್ಲರ್: ಐದನೇ ದಿನದಾಟದಾರಂಭದಲ್ಲೇ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಇಂಗ್ಲೆಂಡ್ ತಂಡಕ್ಕೆ ಏಳನೇ ವಿಕೆಟ್‌ಗೆ ಜೋಸ್ ಬಟ್ಲರ್ ಹಾಗೂ ಕ್ರಿಸ್ ವೋಕ್ಸ್ (Chris Woakes) ಜೋಡಿ ಬರೋಬ್ಬರಿ 190 ಎಸೆತಗಳನ್ನು ಎದುರಿಸಿ 61 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾಯಿತು. ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಜೇ ರಿಚರ್ಡ್‌ಸನ್ (Jhye Richardson) ಯಶಸ್ವಿಯಾದರು. ವೋಕ್ಸ್‌ 97 ಎಸೆತಗಳನ್ನು ಎದುರಿಸಿ 7 ಬೌಂಡರಿ ಸಹಿತ 44 ರನ್ ಬಾರಿಸಿ ರಿಚರ್ಡ್‌ಸನ್ ಬೌಲಿಂಗ್‌ನಲ್ಲಿ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಆದರೆ ಮತ್ತೊಂದು ತುದಿಯಲ್ಲಿ ತಂಡವನ್ನು ಶತಾಯಗತಾಯ ಸೋಲಿನಿಂದ ಪಾರು ಮಾಡಲೇಬೇಕು ಎನ್ನುವಂತೆ ಬ್ಯಾಟಿಂಗ್ ನಡೆಸಿದ ಬಟ್ಲರ್, ಆಸೀಸ್ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಬಟ್ಲರ್ ಬರೋಬ್ಬರಿ 207 ಎಸೆತಗಳನ್ನು ಎದುರಿಸಿ ಕೇವಲ 2 ಬೌಂಡರಿ ಸಹಿತ 26 ರನ್ ಬಾರಿಸಿ ಒಂಬತ್ತನೆಯವರಾಗಿ ರಿಚರ್ಡ್‌ಸನ್ ಅವರಿಗೆ ವಿಕೆಟ್ ಒಪ್ಪಿಸಿದರು. ರಾಬಿನ್‌ಸನ್‌ 8 ಹಾಗೂ ಸ್ಟುವರ್ಟ್‌ ಬ್ರಾಡ್ ಅಜೇಯ 9 ರನ್ ಬಾರಿಸಿದರಾದರೂ ತಂಡವನ್ನು ಸೋಲಿನಿಂದ ಪಾರು ಮಾಡಲು ಸಾಧ್ಯವಾಗಲಿಲ್ಲ.

Ashes 2021 : ಇಂಗ್ಲೆಂಡ್ ಹೋರಾಟ, ಗೆಲುವಿನ ಸನಿಹದಲ್ಲಿ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ತಂಡದ ಪರ ಜೇ ರಿಚರ್ಡ್‌ಸನ್‌ 5 ವಿಕೆಟ್ ಕಬಳಿಸಿದರೆ, ಮಿಚೆಲ್ ಸ್ಟಾರ್ಕ್‌ ಹಾಗೂ ನೇಥನ್ ಲಯನ್ ತಲಾ ಎರಡು ವಿಕೆಟ್ ಕಬಳಿಸಿದರು. ಇನ್ನು ಮಿಚೆಲ್ ನೀಸರ್ ಒಂದು ವಿಕೆಟ್ ಉರುಳಿಸಿದರು.

ಹೀಗಿತ್ತು ಪಿಂಕ್ ಬಾಲ್ ಟೆಸ್ಟ್: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ, ಮಾರ್ನಸ್ ಲಬುಶೇನ್ ಆಕರ್ಷಕ ಶತಕ, ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಶತಕ ವಂಚಿತ ಅರ್ಧಶತಕದ ನೆರವಿನಿಂದ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್ ಕಳೆದುಕೊಂಡು 473 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮಿಚೆಲ್ ಸ್ಟಾರ್ಕ್‌ ಹಾಗೂ ನೇಥನ್ ಲಯನ್ ಮಾರಕ ದಾಳಿಗೆ ತತ್ತರಿಸಿ 236 ರನ್‌ಗಳಿಗೆ ಆಲೌಟ್ ಆಗುವ ಮೂಲಕ 237 ರನ್‌ ಬೃಹತ್ ಹಿನ್ನೆಡೆ ಅನುಭವಿಸಿತು. ಭಾರೀ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ, ಮಾರ್ನಸ್ ಲಬುಶೇನ್ ಹಾಗೂ ಟ್ರಾವಿಸ್ ಹೆಡ್ ಬಾರಿಸಿದ ಸಮಯೋಚಿತ ಅರ್ಧಶತಕದ ನೆರನಿಂದ 230 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?