
ತೀವ್ರವಾದ ಕುಡಿತ ಹಾಗೂ ಆರೋಗ್ಯ ಸಮಸ್ಯೆಯಿಂದಾಗಿ ಭಾರತದ ಮಾಜಿ ಕ್ರಿಕೆಟರ್ ವಿನೋದ್ ಕಾಂಬ್ಳಿ ಸಂಕಷ್ಟಕ್ಕೀಡಾಗಿರುವುದು ಎಲ್ಲರಿಗೂ ಗೊತ್ತೆ ಇದೆ. ಕೆಲ ದಿನಗಳ ಹಿಂದೆ ಅವರು ಬೀದಿಯಲ್ಲಿ ನಿಲ್ಲಲಾಗದೇ ತೂರಾಡಿದ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವಿನೋದ್ ಕಾಂಬ್ಳಿ ವೈಯಕ್ತಿಕ ಜೀವನ ಸಾಕಷ್ಟು ಚರ್ಚೆಯಲ್ಲಿದೆ. ಹೀಗಿರುವಾಗ ವಿನೋದ್ ಕಾಂಬ್ಳಿ ಅವರ ಪತ್ನಿ ಆಂಡ್ರಿಯಾ ಹೆವಿಟ್ ಅವರು ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದು, ಹಿಂದೊಮ್ಮೆ ವಿನೋದ್ ಕಾಂಬ್ಳಿಗೆ ವಿಚ್ಚೇದನ ನೀಡಲು ಮುಂದಾಗಿದ್ದ ಬಗ್ಗೆ ಹೇಳಿಕೊಂಡಿದ್ದಾರೆ. ಪತಿಯ ಕುಡಿತದ ಚಟ ಹಾಗೂ ದೈಹಿಕ ಹಿಂಸೆಯ ಕಾರಣಕ್ಕೆ ಹಿಂದೊಮ್ಮೆ ವಿಚ್ಛೇದನಕ್ಕೆ ತಾವು ಅರ್ಜಿ ಸಲ್ಲಿಸಿದ್ದಾಗಿ ಆಂಡ್ರಿಯಾ ಹೇಳಿದ್ದಾರೆ. ಆದರೆ ಮದ್ಯದ ಚಟದಿಂದ ಬಳಲುತ್ತಿದ್ದ ಕಾಂಬ್ಳಿ ಅಸಹಾಯಕ ಸ್ಥಿತಿಯಲ್ಲಿರುವುದನ್ನು ನೋಡಿ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಕುಡಿತದ ಚಟದಿಂದ ಮುಕ್ತಿ ಹೊಂದಲು ವಿನೋದ್ ಕಾಂಬ್ಳಿ ಕನಿಷ್ಠ 14 ಬಾರಿ ಪುನರ್ವಸತಿ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಆದರೂ ಆ ಚಟದಿಂದ ಅವರಿಗೆ ಹೊರಬರಲು ಸಾಧ್ಯವಾಗಿಲ್ಲ.
ಆಂಡ್ರಿಯಾ ಜೊತೆ ವಿನೋದ್ ಕಾಂಬ್ಳಿಯದ್ದು 2ನೇ ಮದುವೆ, ಮೊದಲ ಪತ್ನಿ ನೋಯೆಲ್ಲಾ ಲೂಯಿಸ್ ಅವರೊಂದಿಗಿನ ವಿವಾಹ ಮುರಿದು ಬಿದ್ದ ನಂತರ ವಿನೋದ್ ಕಾಂಬ್ಳಿ ಆಂಡ್ರಿಯಾ ಅವರನ್ನು ಎರಡನೇ ಮದುವೆಯಾದರು. ಅನುಭವಿ ಎಡಗೈ ಬ್ಯಾಟ್ಸ್‌ಮನ್ ಆಗಿದ್ದ ವಿನೋದ್ ಕಾಂಬ್ಳಿ ಆಂಡ್ರಿಯಾ ಅವರನ್ನು 'ತಾನಿಷ್ಕ್' ಜ್ಯುವೆಲರ್ಸ್‌ನ ಜಾಹೀರಾತು ಫಲಕದಲ್ಲಿ ನೋಡಿದರು. ನಂತರ ಅವರನ್ನು ಪ್ರೀತಿಸಿ 2006 ರಲ್ಲಿ ಸಿವಿಲ್ ನ್ಯಾಯಾಲಯದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ಆಂಡ್ರಿಯಾ ಅವರನ್ನು ವಿವಾಹವಾದರು. ಫ್ರೀಲ್ಯಾನ್ಸ್ ಪತ್ರಕರ್ತೆ ಸೂರ್ಯಾಂಶಿ ಪಾಂಡೆ ಅವರೊಂದಿಗೆ ಪಾಡ್‌ಕ್ಯಾಸ್ಟ್ ಕಾರ್ಯಕ್ರಮದಲ್ಲಿ ಮಾತನಾಡಿದ ಆಂಡ್ರಿಯಾ, ವಿನೋದ್ ಕಾಂಬ್ಳಿ ಅವರನ್ನು ತೊರೆಯುವ ಬಗ್ಗೆ ಯೋಚಿಸಿದ್ದೆ ಮತ್ತು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೆ ಆದರೆ ಅವರ ಆರೋಗ್ಯದ ಬಗ್ಗೆ ನಿರಂತರವಾಗಿ ಚಿಂತಿತರಾಗಿದ್ದರಿಂದ ಅದನ್ನು ಹಿಂದಕ್ಕೆ ಪಡೆದಿದ್ದೆ ಎಂದು ಬಹಿರಂಗಪಡಿಸಿದರು.
ನಾನು ಒಮ್ಮೆ ಅದರ ಬಗ್ಗೆ (ಡಿವೋರ್ಸ್) ಯೋಚಿಸಿದೆ. ಆದರೆ ನಾನು ಅವನನ್ನು ಬಿಟ್ಟರೆ ಅವನು ಅಸಹಾಯಕನಾಗುತ್ತಾನೆ ಎಂಬುದನ್ನು ನಾನು ಅರಿತುಕೊಂಡೆ. ಅವನು ಮಗುವಿನಂತೆ, ಮತ್ತು ಅದು ನನಗೆ ನೋವುಂಟು ಮಾಡಿತು ಅಲ್ಲದೇ ನಾನು ಚಿಂತೆ ಮಾಡುವಂತೆ ಮಾಡಿತ್ತು ನಾನು ಒಬ್ಬ ಸ್ನೇಹಿತನನ್ನು ಸಹ ಬಿಡುವುದಿಲ್ಲ, ಮತ್ತು ಅವನು (ವಿನೋದ್ ಕಾಂಬ್ಳಿ) ಸ್ಪಷ್ಟವಾಗಿ ಅದಕ್ಕಿಂತ ಹೆಚ್ಚಿನವನು. ನಾನು ಸುಮ್ಮನೆ ನಡೆದುಕೊಂಡು ಹೋಗುತ್ತಿದ್ದ ಕ್ಷಣಗಳು ಇದ್ದವು ಎಂಬುದು ನನಗೆ ನೆನಪಿದೆ. ಆದರೆ ನಂತರ ನಾನು ಚಿಂತೆಗೀಡಾಗುತ್ತಿದ್ದೆ, ಅವನು ಊಟ ಮಾಡಿದ್ದಾನೋ ಇಲ್ಲವೋ? ಅವನುಹಾಸಿಗೆಯ ಮೇಲೆ ಮಲಗಿದ್ದಾನೋ ಇಲ್ಲವೋ ? ಅವನು ಚೆನ್ನಾಗಿದ್ದಾನೋ ಇಲ್ಲವೋ? ಎಂದು ಚಿಂತೆಯಾಗುತ್ತಿತ್ತು. ಆಗ ನಾನು ಅವನನ್ನು ಪರಿಶೀಲಿಸಬೇಕಾಗಿತ್ತು, ಮತ್ತು ಅವನಿಗೆ ನನ್ನ ಅವಶ್ಯಕತೆ ಇದೆ ಎಂದು ನನಗೆ ಅರ್ಥವಾಗುತ್ತಿತ್ತು ಎಂದು ಆಂಡ್ರಿಯಾ ಹೇಳಿದ್ದಾರೆ.
ಗಮನಾರ್ಹವಾಗಿ, 17 ವರ್ಷಗಳ ದಾಂಪತ್ಯದ ನಂತರ, ಫೆಬ್ರವರಿ 2023 ರಲ್ಲಿ ಆಂಡ್ರಿಯಾ ವಿನೋದ್ ಕಾಂಬ್ಳಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಪೊಲೀಸರಿಗೆ ದೂರು ನೀಡಿದ್ದರು. ಕುಡಿದ ಮತ್ತಿನಲ್ಲಿ ಅಡುಗೆ ಪಾತ್ರೆಯ ಹಿಡಿಕೆಯನ್ನು ಪತ್ನಿ ಮೇಲೆ ಎಸೆದಿದ್ದರಿಂದ ಆಂಡ್ರಿಯಾ ತಲೆಗೆ ಗಾಯವಾಗಿತ್ತು. ಇದಾದ ನಂತರ ಅವರ ದಾಂಪತ್ಯ ಕಲಹ ಬೆಳಕಿಗೆ ಬಂದಿತ್ತು.
ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ, ಮಗ ಜೀಸಸ್ ಕ್ರಿಸ್ಟಿಯಾನೋ ಕಾಂಬ್ಳಿ, ಮತ್ತು ಮಗಳು ಜೋಹಾನ್ನಾ. ಕಾಂಬ್ಳಿಯ ಆರೋಗ್ಯ ಸಮಸ್ಯೆಯ ಸಮಯದಲ್ಲಿ ಇಬ್ಬರೂ ಮಕ್ಕಳನ್ನು ನೋಡಿಕೊಳ್ಳುವುದು ಕಷ್ಟಕರವಾಗಿದ್ದರೂ, ಆ ಅವಧಿಯಲ್ಲಿ ತನ್ನ ಮಗ ತನಗೆ ಸಾಕಷ್ಟು ಸಹಾಯ ಮಾಡಿದ, ಎಂದು ಆಂಡ್ರಿಯಾ ಹೇಳಿದ್ದಾರೆ. ಹೆಚ್ಚಿನ ಸಮಯ, ನಾನು ಪರಿಸ್ಥಿತಿಯನ್ನು ನನಗೆಯೇ ವಿವರಿಸಬೇಕಾಗಿತ್ತು, ನಾನೇ 'ಅಪ್ಪ' ಮತ್ತು ನಾನೇ ಕುಟುಂಬದಲ್ಲಿ ಅಮ್ಮ, ನನ್ನ ಮಗ ಕ್ರಿಸ್ಟಿಯಾನೊ ಎಲ್ಲವನ್ನೂ ಅರ್ಥಮಾಡಿಕೊಳ್ಳುತ್ತಿದ್ದ ಅವನು ನನಗೆ ತೊಂದರೆ ಕೊಡುತ್ತಿರಲಿಲ್ಲ, ನನ್ನ ಮುಖದಲ್ಲಿನ ಎಲ್ಲಾ ಭಾವನೆಗಳಲ್ಲೇ ಅವನು ಎಲ್ಲವನ್ನು ಅರ್ಥಮಾಡಿಕೊಳ್ಳುತ್ತಿದ್ದ ಎಂದು ಆಂಡ್ರಿಯಾ ಕಾಂಬ್ಳಿ ಹೇಳಿದ್ದಾರೆ. ನಮ್ಮ ಮನೆಯ ಸ್ಥಿತಿಯನ್ನು ಮೊದಲ ಬಾರಿ ಅರ್ಥ ಮಾಡಿಕೊಳ್ಳುವ ವೇಳೆ ಮಗ ಕ್ರಿಸ್ಟಿನೋ ಕೇವಲ 4 ವರ್ಷದವನಾಗಿದ್ದ, ಆತ ತನ್ನ ತಾಯಿಯ ಆರೋಗ್ಯದ ಬಗ್ಗೆ ಸದಾ ಚಿಂತಿಸುತ್ತಿದ್ದ ಎಂದು ಆಂಡ್ರಿಯಾ ಹೇಳಿಕೊಂಡಿದ್ದಾರೆ.
ಈ ತಿಂಗಳ ಆರಂಭದಲ್ಲಿ, ಮುಂಬೈ ಕ್ರಿಕೆಟ್ ಅಸೋಸಿಯೇಷನ್ (ಎಂಸಿಎ) ಆಯೋಜಿಸಿದ್ದ ವಾಂಖೆಡೆ ಕ್ರೀಡಾಂಗಣದ 50 ನೇ ವಾರ್ಷಿಕೋತ್ಸವ ಆಚರಣೆಗೆ ಆಂಡ್ರಿಯಾ ತನ್ನ ಪತಿ ವಿನೋದ್ ಕಾಂಬ್ಳಿ ಜೊತೆ ಈ ಕಾರ್ಯಕ್ರಮಕ್ಕೆ ಆಗಮಿಸಿದ್ದರು. , ಅಲ್ಲಿ ಅವರು ಭಾರತದ ಮಾಜಿ ನಾಯಕ ಸುನಿಲ್ ಗವಾಸ್ಕರ್ ಅವರಿಂದ ಕಾಂಬ್ಳಿ ಪ್ರಶಸ್ತಿ ಸ್ವೀಕರಿಸಲು ಸಹಾಯ ಮಾಡಿದ್ದರು. ಒಂದು ವಾರದ ನಂತರ, ಜನವರಿ 19 ರಂದು, ದಂಪತಿಗಳು ಥಾಣೆ ಜಿಲ್ಲೆಯ ಭಿವಂಡಿಯಲ್ಲಿರುವ ಆಸ್ಪತ್ರೆಯಲ್ಲಿ ಕಾಂಬ್ಳಿಯವರ 53 ನೇ ಹುಟ್ಟುಹಬ್ಬವನ್ನು ಅದರ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರೊಂದಿಗೆ ಆಚರಿಸಿದ್ದರು.
ಇತ್ತೀಚೆಗೆ ಕ್ರಿಕೆಟ್ ಲೋಕದ ತಾರೆಗಳ ಜೀವನದಲ್ಲೂ ಡಿವೋರ್ಸ್ ಪ್ರಕರಣಗಳು ಹೆಚ್ಚಾಗ್ತಿವೆ.. ಹೀಗಿರುವಾಗ ಆಂಡ್ರಿಯಾ ಕಾಂಬ್ಳಿಯಂತಹ ಲಕ್ಷಾಂತರ ಹೆಣ್ಣು ಮಕ್ಕಳು ನಮ್ಮ ನಡುವೆ ಇದ್ದಾರೆ. ಗಂಡನ ಎಲ್ಲಾ ಕಿರುಕುಳವನ್ನು ಸಹಿಸಿಕೊಂಡು ಅವರು ಜೊತೆಜೊತೆಗೆ ಜೀವನ ಮಾಡುತ್ತಾರೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ..
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.