
ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ ಮುಖ್ಯಸ್ಥ ಅರುಣ್ ಧುಮಾಲ್ 2025ರ ಐಪಿಎಲ್ ಟೂರ್ನಿಯು ಮುಂಬರುವ ಮಾರ್ಚ್ 21ರಿಂದ ಆರಂಭವಾಗಲಿದೆ ಎನ್ನುವುದನ್ನು ಖಚಿತಪಡಿಸಿದ್ದಾರೆ. ಕಳೆದ ಕೆಲತಿಂಗಳ ಹಿಂದಷ್ಟೇ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಎಲ್ಲಾ 10 ಫ್ರಾಂಚೈಸಿಗಳು 639.15 ಕೋಟಿ ರುಪಾಯಿ ಖರ್ಚು ಮಾಡಿ 182 ಆಟಗಾರರನ್ನು ಖರೀದಿಸಿದ್ದವು. ಮುಂಬರುವ ಕೆಲವೇ ದಿನಗಳಲ್ಲಿ 18ನೇ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಅರುಣ್ ಧುಮಾಲ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ.
'ಐಪಿಎಲ್ ಸೀಸನ್ ಮಾರ್ಚ್ ತಿಂಗಳಿನಿಂದ ಆರಂಭವಾಗಲಿದೆ. ಟೂರ್ನಿಯ ಮೊದಲ ಪಂದ್ಯವು ಮಾರ್ಚ್ 21ರಿಂದ ಆರಂಭವಾಗಲಿದೆ. ಇನ್ನು ಟೂರ್ನಿಯ ಸಂಪೂರ್ಣ ವೇಳಾಪಟ್ಟಿಯನ್ನು ಇನ್ನು ಕೆಲವೇ ದಿನಗಳಲ್ಲಿ ಬಿಡುಗಡೆ ಮಾಡಲಿದ್ದೇವೆ ಎಂದು ಧುಮಾಲ್ ಹೇಳಿದ್ದಾರೆ. ಇನ್ನು ಇದೇ ವೇಳೆ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ರೂಲ್ಸ್‌ನಲ್ಲಿ ಯಾವುದೇ ಮಹತ್ವದ ಬದಲಾವಣೆಗಳಿರುವುದಿಲ್ಲ ಎಂದು ಅರುಣ್ ಧುಮಾಲ್ ಸ್ಪಷ್ಟಪಡಿಸಿದ್ದಾರೆ.
ಸಂಸದ್ ಖೇಲ್ ಮಹಾಕುಂಭ್‌ನ ಮೂರನೇ ಆವೃತ್ತಿಯಲ್ಲಿ ಭಾಗವಹಿಸಿ ಮಾತನಾಡಿದ ಅರುಣ್ ಧುಮಾಲ್, ಎರಡರಿಂದ ಮೂರು ಪಂದ್ಯಗಳು ಧರ್ಮಾಶಾಲಾ ಕ್ರಿಕೆಟ್ ಮೈದಾನದಲ್ಲಿ ಆಯೋಜನೆಗೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ. 'ಖಂಡಿತವಾಗಿಯೂ ಹಲವು ರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳನ್ನು ಬಿಲ್ಸಾಪುರ್‌ನಲ್ಲಿ ನಾವು ಆಯೋಜಿಸಲಿದ್ದೇವೆ. ಮುಂದಿನ ಬಾರಿ ಕೂಡಾ ರಣಜಿ ಟ್ರೋಫಿ, ದುಲೀಪ್ ಟ್ರೋಫಿ, ವಿಜಯ್ ಹಜಾರೆ ಹೀಗೆ ಯಾವೆಲ್ಲಾ ಪಂದ್ಯಗಳನ್ನು ಆಯೋಜಿಸಲು ಸಾಧ್ಯವೋ ಅದೆಲ್ಲವನ್ನು ನಾವು ಧರ್ಮಶಾಲಾ ಕ್ರಿಕೆಟ್ ಮೈದಾನದಲ್ಲಿ ಆಯೋಜಿಸಲಿದ್ದೇವೆ. ಕಳೆದ ಬಾರಿ ಎರಡು ಐಪಿಎಲ್ ಪಂದ್ಯಗಳನ್ನು ನಾವು ಆಯೋಜಿಸಿದ್ದೆವು, ಈ ಬಾರಿ ಮೂರು ಪಂದ್ಯಗಳು ನಡೆಯಲಿವೆ. ಇನ್ನು ಐಪಿಎಲ್ ರೂಲ್ಸ್ ವಿಚಾರದಲ್ಲಿ ಯಾವುದೇ ಮಹತ್ವದ ಬದಲಾವಣೆಗಳಿಲ್ಲ. ಐಪಿಎಲ್ ಜಗತ್ತಿನ ಅತ್ಯಂತ ಮಹತ್ವದ ಟಿ20 ಕ್ರಿಕೆಟ್ ಲೀಗ್ ಆಗಿದೆ. ಈ ಟೂರ್ನಿಯಲ್ಲಿ ಜಗತ್ತಿನ ಹಲವು ಪ್ರತಿಭಾನ್ವಿತ ಆಟಗಾರರು ಬಂದು ಆಡುತ್ತಾರೆ. ಈ ಬಾರಿಯ ಐಪಿಎಲ್ ಟೂರ್ನಿಯು ಮತ್ತಷ್ಟು ಚೆನ್ನಾಗಿ ಮೂಡಿ ಬರಲಿದೆ' ಎಂದು ಅರುಣ್ ಧುಮಾಲ್ ಹೇಳಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.