'ಪ್ರತಿಭೆ ಅನ್ನೋದು ಗಿಫ್ಟ್, ಟೆಂಪರ್‌ಮೆಂಟ್ ಅನ್ನೋದು ಆಯ್ಕೆ': ವೈಭವ್ ಸೂರ್ಯವಂಶಿ ಆಟಕ್ಕೆ ಫಿದಾ ಆದ ಆನಂದ್ ಮಹೀಂದ್ರಾ!

Published : Jun 22, 2026, 12:15 PM IST
anand mahindra On vaibhav suryavanshi

ಸಾರಾಂಶ

15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ತ್ರಿಕೋನ ಸರಣಿಯ ಫೈನಲ್‌ನಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ. ಹಿಂದಿನ ಪಂದ್ಯದಲ್ಲಿ ನಡೆದ ಮಾತಿನ ಚಕಮಕಿಯ ನಂತರ, ತಮ್ಮ ಬ್ಯಾಟ್‌ನಿಂದಲೇ ಉತ್ತರ ನೀಡಿ ತಂಡವನ್ನು ಗೆಲ್ಲಿಸಿದ್ದಾರೆ.

ದಂಬುಲ್ಲಾ (ಜೂ.22): ದಂಬುಲ್ಲಾದ ರಣಗಿರಿ ಇಂಟರ್ನ್ಯಾಷನಲ್ ಸ್ಟೇಡಿಯಂನಲ್ಲಿ ಭಾನುವಾರ ಭಾರತ ‘ಎ’ ಮತ್ತು ಶ್ರೀಲಂಕಾ ‘ಎ’ ತಂಡ ತ್ರಿಕೋನ ಸರಣಿಯ ಫೈನಲಲ್ಲಿ ಮುಖಾಮುಖಿಯಾಗಿದ್ದವು. ಈ ವೇಳೆ ತಮ್ಮ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನದಿಂದ 15 ವರ್ಷದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ (Vaibhav Suryavanshi) ಎಲ್ಲರ ಹೃದಯ ಗೆದ್ದಿದ್ದಾರೆ. ಸದ್ಯ ಭಾರತೀಯ ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿರುವ ವೈಭವ್, ತ್ರಿಕೋನ ಸರಣಿಯ ಫೈನಲ್ ಪಂದ್ಯದಲ್ಲಿ ಬಿರುಗಾಳಿಯಂತೆ ಬ್ಯಾಟ್ ಬೀಸಿ ತಮ್ಮ ಟೀಕಾಕಾರರಿಗೆ ಬ್ಯಾಟ್ ಮೂಲಕವೇ ತಕ್ಕ ಉತ್ತರ ನೀಡಿದ್ದಾರೆ. ಅವರ ಈ ಅದ್ಭುತ ಸಾಧನೆ ಈಗ ಕ್ರಿಕೆಟ್ ಪ್ರೇಮಿಗಳು, ಮಾಜಿ ಆಟಗಾರರು ಮಾತ್ರವಲ್ಲದೆ ಉದ್ಯಮ ರಂಗದ ದಿಗ್ಗಜರ ಗಮನವನ್ನೂ ಸೆಳೆದಿದೆ. ಅವರಲ್ಲಿ ಪ್ರಮುಖರಾದ ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ (Anand Mahindra), ಯುವ ಆಟಗಾರನ ಸಾಮರ್ಥ್ಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಆನಂದ್ ಮಹೀಂದ್ರಾ ಹೇಳಿದ್ದೇನು?

ಪ್ರಸಿದ್ಧ ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಯುವ ಕ್ರಿಕೆಟ್ ಸೆನ್ಸೇಷನ್ ವೈಭವ್ ಅವರ ಬ್ಯಾಟಿಂಗ್‌ಗಿಂತ ಹೆಚ್ಚಾಗಿ, ಅವರು ಒತ್ತಡವನ್ನು ನಿಭಾಯಿಸಿದ ರೀತಿ (Pressure Handling) ಮತ್ತು ಅವರ ಮಾನಸಿಕ ದೃಢತೆಯನ್ನು ಕೊಂಡಾಡಿದ್ದಾರೆ. "ವೈಭವ್ ಬಾರಿಸಿದ ಈ ಐತಿಹಾಸಿಕ ಇನ್ನಿಂಗ್ಸ್‌ಗಿಂತಲೂ, ಆ ಸಂದರ್ಭದಲ್ಲಿ ಅವರು ಪ್ರದರ್ಶಿಸಿದ ಟೆಂಪರ್‌ಮೆಂಟ್‌(ಮಾನಸಿಕ ಸಮತೋಲನ ಮತ್ತು ತಾಳ್ಮೆ) ನನ್ನ ಹೃದಯ ಗೆದ್ದಿದೆ," ಎಂದು ಹೇಳಿದ್ದಾರೆ. ಅಲ್ಲದೆ, ವೈಭವ್ ಅವರನ್ನೇ ಉದಾಹರಣೆಯಾಗಿ ಇಟ್ಟುಕೊಂಡು, ಜೀವನ ಮತ್ತು ವೃತ್ತಿಜೀವನದಲ್ಲಿ ಎದುರಾಗುವ ಸವಾಲು ಹಾಗೂ ಒತ್ತಡಗಳನ್ನು ತಾಳ್ಮೆ ಮತ್ತು ಮನೋಬಲದಿಂದ ಹೇಗೆ ಎದುರಿಸಬೇಕು ಎಂಬುದನ್ನು ವಿವರಿಸಿದ್ದಾರೆ.

ತಮ್ಮ ಟ್ವೀಟ್‌ನಲ್ಲಿ, '11 ಎಸೆತಗಳಲ್ಲಿ ಅರ್ಧಶತಕ, ಅದ್ಭುತ. ಆದರೆ, ನನಗೆ ಇಲ್ಲಿ ಆತನ ಈ ಅಂಕಿ ಅಂಶಕ್ಕಿಂತ ಇನ್ನೊಂದು ವಿಚಾರ ಮೆಚ್ಚುಗೆಯಾಗಿದೆ. ಹಿಂದಿನ ಪಂದ್ಯದಲ್ಲಿ ಮೈದಾನದಲ್ಲಿಯೇ ಮಾತಿನ ಚಕಮಕಿಯಾಗಿತ್ತು. ಈ ಪಂದ್ಯದಲ್ಲಿ ಅದರ ಬ್ಯಾಗೇಜ್‌ ಆತನ ಮೇಲೆ ಸುಲಭವಾಗಿ ಇರುವ ಸಾಧ್ಯತೆ ಇತ್ತು. ಆದರೆ, ಬ್ಯಾಗೇಜ್‌ನ ಬದಲಿಗೆ ಬ್ಯಾಟ್‌ನ ಹಿಡಿದು ಬಂದಿದ್ದ. ಹಾಗೂ ಬ್ಯಾಟ್‌ನಿಂದಲೇ ಮಾತನಾಡಿದ. ಪ್ರತಿಭೆ ಅನ್ನೋದು ಗಿಫ್ಟ್‌, ಆದರೆ ಟೆಂಪರ್‌ಮೆಂಟ್‌ ಅನ್ನೋದು ಆಯ್ಕೆ. ಇದೇ ಟೆಂಪರ್‌ಮೆಂಟ್‌ ಆತನನ್ನು ಸ್ಟಾರ್ ಆಗಿ ಮಾಡಲಿದೆ' ಎಂದು ಬರೆದಿದ್ದಾರೆ.

ಬ್ಯಾಟ್ ಮೂಲಕವೇ ಸೇಡು ತೀರಿಸಿಕೊಂಡ ಯುವ ಬ್ಯಾಟರ್!

ಈ ಫೈನಲ್ ಪಂದ್ಯಕ್ಕೂ ಮುನ್ನ, ಅಂದರೆ ಜೂನ್ 15 ರಂದು ನಡೆದಿದ್ದ ಪಂದ್ಯದಲ್ಲಿ ವೈಭವ್ ಮತ್ತು ಶ್ರೀಲಂಕಾ ‘ಎ’ ತಂಡದ ಆಟಗಾರರ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಅಂದು ನಡೆದಿದ್ದ ಸೂಪರ್ ಓವರ್‌ನಲ್ಲಿ ಇಂಡಿಯಾ ‘ಎ’ ತಂಡವು ಶ್ರೀಲಂಕಾ ‘ಎ’ ವಿರುದ್ಧ ಸೋತಿತ್ತು. ಈ ವೇಳೆ ಶ್ರೀಲಂಕಾ ತಂಡದ ಆಟಗಾರರು ವಿಜಯೋತ್ಸವ ಆಚರಿಸುತ್ತಾ ಭಾರತೀಯ ಆಟಗಾರರನ್ನು ಕೆಣಕಿದ್ದರು (Sledging). ಆಗ ಶ್ರೀಲಂಕಾದ ಫೀಲ್ಡರ್ ವಿಶಾಲ್‌ ಹಲಂಬಗೆ ಮತ್ತು ವೈಭವ್ ನಡುವೆ ಭಾರಿ ಜಗಳ ನಡೆದಿತ್ತು. ಮಾತು ಬೆಳೆದು ಇಬ್ಬರ ನಡುವೆ ತಳ್ಳಾಟವೂ ನಡೆದಿತ್ತು. ಮೈದಾನದಲ್ಲಿ ನಡೆದ ಈ ಗಲಾಟೆಯನ್ನು ಗಂಭೀರವಾಗಿ ಪರಿಗಣಿಸಿದ ಮ್ಯಾಚ್ ರೆಫ್ರಿ, ಇಬ್ಬರ ವಿರುದ್ಧವೂ ಶಿಸ್ತು ಕ್ರಮ ಕೈಗೊಂಡು ಪಂದ್ಯದ ಸಂಭಾವನೆಯಲ್ಲಿ (Match Fees) ಶೇಕಡಾ 50 ರಷ್ಟು ಕಡಿತಗೊಳಿಸಿದ್ದರು.

ಜೂನ್ 15 ರ ಪಂದ್ಯದ ಸೂಪರ್ ಓವರ್‌ನಲ್ಲಿ ಭಾರತ ಸೋತಿದ್ದರೂ ಮತ್ತು ಶ್ರೀಲಂಕಾ ಆಟಗಾರರು ಅತಿಯಾಗಿ ಟೀಕೆಗಳನ್ನು ಮಾಡಿದ್ದರೂ, ವೈಭವ್ ತಮ್ಮ ತಾಳ್ಮೆ ಕಳೆದುಕೊಳ್ಳಲಿಲ್ಲ. ಬದಲಿಗೆ, ಜೂನ್ 21 ರಂದು ನಡೆದ ಫಿನಾಲೆಯಲ್ಲಿ ತಮ್ಮ ಸಂಪೂರ್ಣ ಶಕ್ತಿಯನ್ನು ಮೈದಾನದಲ್ಲಿ ಧಾರೆ ಎರೆದರು. ಶ್ರೀಲಂಕಾ ಬೌಲರ್‌ಗಳನ್ನು ಮನಬಂದಂತೆ ದಂಡಿಸುವ ಮೂಲಕ ಬಡ್ಡಿ ಸಮೇತ ಸೇಡು ತೀರಿಸಿಕೊಂಡರು. ಅಂತಿಮವಾಗಿ ಫೈನಲ್ ಪಂದ್ಯದಲ್ಲಿ ಇಂಡಿಯಾ ‘ಎ’ ತಂಡವು ಶ್ರೀಲಂಕಾ ‘ಎ’ ತಂಡವನ್ನು ಬರೋಬ್ಬರಿ 66 ರನ್‌ಗಳ ಬೃಹತ್ ಅಂತರದಿಂದ ಮಣಿಸಿ, ಭರ್ಜರಿಯಾಗಿ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತು.

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

'ಬೇಕಿದ್ರೆ ಕಡಿಮೆ ಬೆಲೆಗೆ ಶೂ ಕೊಡ್ತೇನೆ, ಆದ್ರೆ...': ಟೆಸ್ಟ್‌ ಕ್ರಿಕೆಟ್‌ ಕಮ್‌ಬ್ಯಾಕ್ ಬಗ್ಗೆ ಮೌನ ಮುರಿದ ವಿರಾಟ್ ಕೊಹ್ಲಿ
ಇಂಗ್ಲೆಂಡ್ ಸರಣಿಗೆ ಭಾರತ ತಂಡ: 3 ವರ್ಷಗಳ ಬಳಿಕ ಸ್ಟಾರ್ ಕಮ್‌ಬ್ಯಾಕ್! ಇನ್ನೊಬ್ಬ ಕ್ರಿಕೆಟಿಗನಿಗೆ ನಿರಾಸೆ