
ನವದೆಹಲಿ: ಇಂಗ್ಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಭಾರತ ತಂಡ ಪ್ರಕಟಗೊಂಡಿದ್ದು, ವಿರಾಟ್ ಕೊಹ್ಲಿ ಹಾಗೂ ಜಸ್‌ಪ್ರೀತ್ ಬುಮ್ರಾ ತಂಡಕ್ಕೆ ವಾಪಸಾಗಿದ್ದಾರೆ. ಆಲ್ರೌಂಡರ್ ಅಕ್ಷರ್ ಪಟೇಲ್‌ಗೂ ಸ್ಥಾನ ನೀಡಲಾಗಿದೆ. ಈ ಮೂವರು ಅಫ್ಘಾನಿಸ್ತಾನ ವಿರುದ್ಧದ ಸರಣಿಯಿಂದ ವಿಶ್ರಾಂತಿ ಪಡೆದಿದ್ದರು. ಈ ಪೈಕಿ ಓರ್ವ ಸ್ಟಾರ್ ಕ್ರಿಕೆಟಿಗ ಬರೋಬ್ಬರಿ ಮೂರು ವರ್ಷಗಳ ಬಳಿಕ ಏಕದಿನ ಕ್ರಿಕೆಟ್‌ಗೆ ಕಮ್‌ಬ್ಯಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇಂಗ್ಲೆಂಡ್ ಎದುರಿನ ಏಕದಿನ ಸರಣಿಗೆ ಷರತ್ತಿನ ಮೇರಿಗೆ ವಿರಾಟ್ ಕೊಹ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ ಸೋಮವಾರ ಬೆಂಗಳೂರಿನ ಬಿಸಿಸಿಐ ಸೆಂಟರ್ ಆಫ್ ಎಕ್ಸ್‌ಲೆನ್ಸ್‌ನಲ್ಲಿ ಫಿಟ್ನೆಸ್ ಪರೀಕ್ಷೆಗೆ ಒಳಗಾಗಲಿದ್ದು, ಪಾಸಾದರೆ ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಒಂದು ವೇಳೆ ಫಿಟ್ನೆಸ್ ಟೆಸ್ಟ್‌ನಲ್ಲಿ ಕೊಹ್ಲಿ ಫೇಲ್ ಆದರೆ, ತಂಡದಿಂದ ಹೊರಬೀಳಲಿದ್ದಾರೆ.
ಟೀಂ ಇಂಡಿಯಾ ಮಾರಕ ವೇಗಿ ಜಸ್ಪ್ರೀತ್ ಬುಮ್ರಾ 2026ರ ಐಪಿಎಲ್ ಟೂರ್ನಿಯ ಬಳಿಕ ಇದೇ ಮೊದಲ ಸಲ ಮೈದಾನಕ್ಕಿಳಿಯಲು ರೆಡಿಯಾಗಿದ್ದಾರೆ. ಬುಮ್ರಾ ಆಫ್ಘಾನಿಸ್ತಾನ, ಇಂಗ್ಲೆಂಡ್ ಹಾಗೂ ಐರ್ಲೆಂಡ್ ಎದುರಿನ ಟಿ20 ಸರಣಿಗೆ ಸೆಲೆಕ್ಟ್ ಆಗಿರಲಿಲ್ಲ. ಇನ್ನು ಇದಷ್ಟೇ ಅಲ್ಲದೇ ಬುಮ್ರಾ ಬರೋಬ್ಬರಿ ಮೂರು ವರ್ಷಗಳ ಬಳಿಕ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದಹಾಗೆ ಬುಮ್ರಾ 2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಕೊನೆಯ ಬಾರಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದರು. ಇದಾದ ಬಳಿಕ ಬುಮ್ರಾ ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ.
ಆಫ್ಘನ್ ವಿರುದ್ಧ ಶನಿವಾರವಷ್ಟೇ ನಡೆದ 3ನೇ ಏಕದಿನದಲ್ಲಿ ಶತಕ ಸಿಡಿಸಿದ್ದ ಯಶಸ್ವಿ ಜೈಸ್ವಾಲ್‌ರನ್ನು ತಂಡದಿಂದ ಕೈಬಿಡಲಾಗಿದೆ. ವೇಗಿ ಪ್ರಿನ್ಸ್ ಯಾದವ್, ಸ್ಪಿನ್ ಬೌಲಿಂಗ್ ಆಲ್ರೌಂಡರ್ ಹರ್ಷ್ ದುಬೆ ಕೂಡ ಅವಕಾಶ ಪಡೆಯಲು ವಿಫಲರಾಗಿದ್ದಾರೆ. ಭಾರತ ತಂಡ ಇಂಗ್ಲೆಂಡ್ ವಿರುದ್ಧ ಜು.14, 16, 19ರಂದು ಪಂದ್ಯಗಳನ್ನು ಆಡಲಿದೆ. ಜುಲೈ 14ರಂದು ಬರ್ಮಿಂಗ್‌ಹ್ಯಾಮ್‌ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಇದಾದ ಬಳಿಕ ಜುಲೈ 16ರಂದು ಕಾರ್ಡಿಫ್‌ನಲ್ಲಿ ಹಾಗೂ ಜುಲೈ 19ರಂದು ಲಾರ್ಡ್ಸ್‌ನಲ್ಲಿ ಮೂರನೇ ಏಕದಿನ ಪಂದ್ಯ ನಡೆಯಲಿದೆ.
ಶುಭ್‌ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ ಎಲ್ ರಾಹುಲ್, ಇಶಾನ್ ಕಿಶನ್, ವಾಷಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ನಿತೀಶ್ ಕುಮಾರ್ ರೆಡ್ಡಿ, ಕುಲ್ದೀಪ್ ಯಾದವ್, ಜಸ್‌ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ, ಅರ್ಶ್‌ದೀಪ್ ಸಿಂಗ್, ಗುರ್ನೂರ್ ಬ್ರಾರ್.
🚨 News 🚨
India’s ODI squad for the England tour announced.
𝗡𝗢𝗧𝗘: Varun Chakaravarthy has been ruled out of the Ireland T20I Series as he continues his rehab at the BCCI COE.
More Details ▶️ https://t.co/wOdXTQqJto #TeamIndia | #ENGvIND pic.twitter.com/t0GypgM4kp— BCCI (@BCCI) June 21, 2026
ಸ್ಪಿನ್ನರ್ ವರುಣ್ ಚಕ್ರವರ್ತಿ, ಐರ್ಲೆಂಡ್ ವಿರುದ್ಧದ 2 ಟಿ20 ಪಂದ್ಯಗಳ ಸರಣಿಯಿಂದ ಹೊರಬಿದ್ದಿದ್ದಾರೆ. ಐಪಿಎಲ್ ವೇಳೆ ಮೊಣಕಾಲು ಗಾಯಕ್ಕೆ ತುತ್ತಾಗಿದ್ದ ಅವರು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ತಿಳಿದುಬಂದಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.