ಐಪಿಎಲ್‌ ತಂಡದ ಬಸ್‌ಗಾಗಿ ಆ್ಯಂಬುಲೆನ್ಸ್ ತಡೆಹಿಡಿದ ಗುಜರಾತ್ ಪೊಲೀಸರು..!

By Suvarna NewsFirst Published May 5, 2021, 11:18 AM IST
Highlights

ಐಪಿಎಲ್‌ ಆಟಗಾರರಿದ್ದ ಬಸ್‌ ಸಾಗಲು ಅನುಕೂಲ ಮಾಡಿಕೊಡಲು ಹೋಗಿ ಆ್ಯಂಬುಲೆನ್ಸ್ ತಡೆ ಹಿಡಿದ ಗುಜರಾತ್ ಸಂಚಾರ ಪೋಲಿಸರ ನಡೆ ಇದೀಗ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಅಹಮದಾಬಾದ್‌(ಮೇ.05): ಐಪಿಎಲ್‌ ಆಟಗಾರರನ್ನು ಕರೆದೊಯ್ಯವ ವಾಹನಕ್ಕಾಗಿ ಪೊಲೀಸರು ನಗರದ ಪಂಜ್ರಾಪೋಲ್‌ನಲ್ಲಿ ಆ್ಯಂಬುಲೆನ್ಸ್ ತಡೆಹಿಡಿದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿವೆ.

ಪಂಜ್ರಾಪೋಲ್ ಸರ್ಕಲ್‌ನಿಂದ ಮೂರು ನೇರಳೆ ಬಣ್ಣದ ಬಸ್‌ಗಳು ಹಾಗೂ 2 ಪೊಲೀಸ್‌ ವಾಹನಗಳು ಸಂಚರಿಸಿವೆ. ಈ ಸಂದರ್ಭದಲ್ಲಿ ಖಾಸಗಿ ಆ್ಯಂಬುಲೆನ್ಸ್‌ವೊಂದನ್ನು ತಡೆಹಿಡಿದು ನಿಲ್ಲಿಸಲಾಗಿದೆ. ಈ ದೃಶ್ಯಾವಳಿಗಳು ವೈರಲ್ ಆಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಿದ್ದಾರೆ. ಈ ವೇಳೆ ಪೊಲೀಸ್‌ ಸಿಬ್ಬಂದಿಗಳಿಂದ ಯಾವುದೇ ಪ್ರಮಾಧವಾಗಿಲ್ಲವೆಂದು ತಿಳಿದುಬಂದಿದೆ.

They Stop Ambulance 🚑 Because Team of Ipl can cross the Road First pic.twitter.com/a54UMomcgR

— Sagar Patel (@sagar_patrakar)

ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಸಂಚಾರಿ ವಿಭಾಗದ ಡಿಸಿಪಿ ತೇಜಸ್ ಪಟೇಲ್, ಈ ಘಟನೆಯಲ್ಲಿ ಪೊಲೀಸರಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ಘಟನೆಯ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರನ್ನು ತನಿಖೆಗೆ ಒಳಪಡಿಸಲಾಯಿತು. ಆ್ಯಂಬುಲೆನ್ಸ್‌ ಅಲ್ಲಿಗೆ ಬರುವ ಮುನ್ನವೇ ಎರಡು ಬಸ್‌ಗಳು ಅಲ್ಲಿಂದ ಹೊರಟುಹೋಗಿತ್ತು ಎಂದು ತಿಳಿದು ಬಂದಿದೆ ಎಂದು ಹೇಳಿದ್ದಾರೆ.

ಐಪಿಎಲ್ ರದ್ದು: ಈ ಸಲ ಕಪ್ ಕೊರೋನಾದ್ದು!

ಒಂದು ವೇಳೆ ಮೂರನೇ ಬಸ್‌ ಏನಾದರೂ ತಡೆದಿದ್ದರೆ, ಬಸ್‌ ಹಾಗೂ ಪೊಲೀಸ್‌ ವಾಹನಗಳ ನಡುವೆ ಅಪಘಾತ ಸಂಭವಿಸುವ ಸಾಧ್ಯತೆಯಿತ್ತು. ಹೀಗಾಗಿ ಸಂಚಾರಿ ಪೊಲೀಸರು ಮೂರನೇ ಬಸ್ ತಡೆದು ನಿಲ್ಲಿಸಲಿಲ್ಲ. ಆಟಗಾರರಿದ್ದ ಬಸ್‌ ಸರ್ಕಲ್‌ ಡಾಟಿ 16 ಸೆಕೆಂಡ್‌ಗಳೊಳಗಾಗಿ ಆ್ಯಂಬುಲೆನ್ಸ್‌ ತೆರಳಲು ಅವಕಾಶ ಮಾಡಿಕೊಡಲಾಯಿತು. ಆ್ಯಂಬುಲೆನ್ಸ್‌ನೊಳಗೆ ರೋಗಿ ಇದ್ದರೋ ಅಥವಾ ರೋಗಿಯನ್ನು ಕರೆತರಲು ಆ್ಯಂಬುಲೆನ್ಸ್‌ ಹೊರಟಿತ್ತೇ ಎನ್ನುವುದರ ಬಗ್ಗೆ ಯಾವುದೇ ಮಾಹಿತಿಯಿಲ್ಲ ಎಂದು ಡಿಸಿಪಿ ತೇಜಸ್ ಪಟೇಲ್ ತಿಳಿಸಿದ್ಧಾರೆ.

ವೈದ್ಯಕೀಯ ಸೌಲಭ್ಯಗಳ ಕೊರತೆಯಿಂದ ಪ್ರತಿನಿತ್ಯ ಸಾವಿರಾರು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ. ಹೀಗಿರುವಾಗ ಆ್ಯಂಬುಲೆನ್ಸ್‌ ತಡೆದು ನಿಲ್ಲಿಸಿದ್ದಕ್ಕೆ ಪೊಲೀಸರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ.

14ನೇ ಆವೃತ್ತಿಯ ಐಪಿಎಲ್‌ ಟೂರ್ನಿಯು ಕೋವಿಡ್ ಕಾರಣದಿಂದಾಗಿ ಮಧ್ಯದಲ್ಲಿಯೇ ಅನಿರ್ದಿಷ್ಟಾವಧಿಗೆ ಮುಂದೂಡಲ್ಪಟ್ಟಿದೆ. ಡೆಲ್ಲಿ ಕ್ಯಾಪಿಟಲ್ಸ್ ಅಮಿತ್ ಮಿಶ್ರಾ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್ ತಂಡದ ವೃದ್ದಿಮಾನ್‌ ಸಾಹಾಗೆ ಕೋವಿಡ್ 19 ಸೋಂಕು ದೃಢಪಟ್ಟ ಬೆನ್ನಲ್ಲೇ ಮುನ್ನೆಚ್ಚರಿಕಾ ಕ್ರಮವಾಗಿ ಬಿಸಿಸಿಐ, ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದೆ.
 

click me!