ಬಯೋಬಬಲ್ ಅವ್ಯವಸ್ಥೆಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಬಲಿಯಾಗಿದೆ. ಬಿಸಿಸಿಐ ಹಾಗೂ ಫ್ರಾಂಚೈಸಿಗಳು, ಬಯೋ ಬಬಲ್ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯವೇ ಈ ಆವೃತ್ತಿಯ ಐಪಿಎಲ್ ಅರ್ಧಕ್ಕೇ ಸ್ಥಗಿತಗೊಳ್ಳಲು ಕಾರಣ ಎನ್ನಲಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಮೇ.05): ಅತ್ಯಂತ ಸುರಕ್ಷಿತ ಬಯೋ ಬಬಲ್ ನಿರ್ಮಿಸಿದರೂ ಐಪಿಎಲ್ ಟೂರ್ನಿಗೆ ಕೊರೋನಾ ಸೋಂಕು ಅಡ್ಡಿಯಾಗಿದ್ದು ಎಲ್ಲರಲ್ಲೂ ಸಹಜವಾಗಿಯೇ ಅಚ್ಚರಿ, ಆತಂಕ ಮೂಡಿಸಿದೆ. ಆದರೆ ಬಿಸಿಸಿಐ ಹಾಗೂ ಫ್ರಾಂಚೈಸಿಗಳು, ಬಯೋ ಬಬಲ್ ವಿಚಾರದಲ್ಲಿ ತೋರಿದ ನಿರ್ಲಕ್ಷ್ಯವೇ ಈ ಆವೃತ್ತಿಯ ಐಪಿಎಲ್ ಅರ್ಧಕ್ಕೇ ಸ್ಥಗಿತಗೊಳ್ಳಲು ಕಾರಣ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
2020ರಲ್ಲಿ ಯುಎಇನಲ್ಲಿ ಟೂರ್ನಿ ನಡೆದಾಗ ಬ್ರಿಟನ್ ಮೂಲದ ಕಂಪನಿಯೊಂದರ ಸಹಾಯದಿಂದ ಬಯೋ ಬಬಲ್ ಸಿದ್ಧಪಡಿಸಲಾಗಿತ್ತು. ಅಲ್ಲದೇ ಬಿಸಿಸಿಐ ಹೊರಡಿಸಿದ್ದ ಮಾರ್ಗಸೂಚಿಯನ್ನು ಎಲ್ಲಾ ಫ್ರಾಂಚೈಸಿಗಳು ಕಟ್ಟುನಿಟ್ಟಾಗಿ ಪಾಲಿಸಿದ್ದವು. ಯಾರೇ ಬಯೋ ಬಬಲ್ ನಿಯಮಗಳನ್ನು ಉಲ್ಲಂಘಿಸಿದರೆ 100 ಕೋಟಿ ರು. ವರೆಗೂ ದಂಡ ವಿಧಿಸುವುದಾಗಿ ಬಿಸಿಸಿಐ ಎಚ್ಚರಿಸಿತ್ತು. ಆದರೆ ಈ ವರ್ಷ ಮಾರ್ಗಸೂಚಿ ಪಾಲನೆಯಲ್ಲಿ ಫ್ರಾಂಚೈಸಿಗಳು ಎಡವಟ್ಟು ಮಾಡಿವೆ. ಬಿಸಿಸಿಐ ಸಹ ಸರಿಯಾದ ಮೇಲ್ವಿಚಾರಣೆ ನಡೆಸಿಲ್ಲ ಎನ್ನಲಾಗಿದೆ.
ಈ ವರ್ಷ ಆಗಿರುವ ಲೋಪಗಳು ಏನು? ಆ ವಿವರ ಇಲ್ಲಿದೆ.
1. ಹೋಟೆಲ್‌ಗಳು
ಹೋಟೆಲ್ ಕೊಠಡಿಗಳನ್ನು ಮನಬಂದಂತೆ ಕಾಯ್ದಿರಿಸಲಾಗಿದೆ. ತಂಡವೊಂದು ನಗರವೊಂದರ ಮಾಲ್‌ನೊಳಗೆ ಇರುವ ಹೋಟೆಲ್‌ನಲ್ಲಿ ರೂಂಗಳನ್ನು ಕಾಯ್ದಿರಿಸಿತ್ತು. ಮತ್ತೊಂದು ತಂಡ ಒಂದು ನಗರದಲ್ಲಿ ಉಳಿದುಕೊಂಡಿದ್ದ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ, ಬಳಿಕ 12 ದಿನಗಳ ಬಳಿಕ ಅದೇ ಹೋಟೆಲ್‌ಗೆ ಆಗಮಿಸಿದೆ. ಈ 12 ದಿನಗಳಲ್ಲಿ ಹೋಟೆಲ್ ಅನ್ನು ಸಾವಿರಾರು ಮಂದಿ ಬಳಸಿದ್ದಾರೆ. ಕೆಲ ತಂಡಗಳು ತಮ್ಮೊಂದಿಗೆ ಅಡುಗೆ ಭಟ್ಟರನ್ನೂ ಕರೆದೊಯ್ದಿವೆ. ಕೆಲವು ತಂಡಗಳು ಹೋಟೆಲ್ ಸಿಬ್ಬಂದಿ ಮೇಲೆ ಅವಲಂಬಿತಗೊಂಡಿದ್ದವು. ಆ ಸಿಬ್ಬಂದಿ ಕ್ವಾರಂಟೈನ್ ಅವಧಿ ಮುಗಿಸಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದಾರೆಯೇ ಎನ್ನುವುದನ್ನು ಬಿಸಿಸಿಐ ಖಚಿತ ಪಡಿಸಿಕೊಂಡಿರಲಿಲ್ಲ ಎನ್ನಲಾಗಿದೆ.
IPL 2021 ಸ್ಥಗಿತದಿಂದ ಬಿಸಿಸಿಐಗೆ 2,200 ಕೋಟಿ ರೂಪಾಯಿ ನಷ್ಟ!
ಕೆಲ ತಂಡಗಳು ಹೋಟೆಲ್‌ನ ಒಂದೆರಡು ಮಹಡಿಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಿದ್ದವು. ಕೆಲ ತಂಡಗಳು ಇತರ ಅತಿಥಿಗಳು ಉಳಿದುಕೊಂಡಿರುವ ಮಹಡಿಗಳನ್ನೇ ತಮ್ಮ ಸಿಬ್ಬಂದಿಯನ್ನು ಉಳಿಸಿದ್ದವು ಎಂದು ತಿಳಿದುಬಂದಿದೆ. ಅಲ್ಲದೇ ಹೋಟೆಲ್‌ಗಳನ್ನು ಬದಲಾಯಿಸಿದ ಸನ್ನವೇಶವೂ ನಡೆದಿದೆ ಎನ್ನಲಾಗಿದೆ. ಎಲ್ಲಾ ತಂಡಗಳು ಒಂದೇ ರೀತಿಯ ಕ್ರಮ ಕೈಗೊಂಡಿಲ್ಲ. ಇದು ಬಯೋ ಬಬಲ್‌ನೊಳಗೆ ಸೋಂಕು ನುಸುಳಲು ಕಾರಣವಾಗಿರಬಹುದು.
2. ಅಭ್ಯಾಸ ಅವಧಿಗಳು
ಮೈದಾನ ಸಿಬ್ಬಂದಿ ಇಲ್ಲದೇ ತಂಡಗಳು ಅಭ್ಯಾಸ ನಡೆಸುವುದು ಕಷ್ಟ. ಆದರೆ ಮುಂಬೈ ಹಾಗೂ ಡೆಲ್ಲಿ ಕ್ರೀಡಾಂಗಣಗಳಲ್ಲಿದ್ದ ಮೈದಾನ ಸಿಬ್ಬಂದಿಯನ್ನು ಬಯೋ ಬಬಲ್‌ನಲ್ಲಿ ಇರಿಸಲಾಗಿರಲಿಲ್ಲ. ಅಲ್ಲದೇ ಈ ಕ್ರೀಡಾಂಗಣಗಳ ಹಲವು ಸಿಬ್ಬಂದಿಗೆ ಸೋಂಕು ತಗುಲಿತ್ತು. ಇನ್ನು ಕ್ರೀಡಾಂಗಣಗಳಿಗೆ ಪ್ರಯಾಣಿಸುವ ವೇಳೆ ಬಸ್‌ಗಳನ್ನು ಬಳಕೆ ಮಾಡಲಾಗುತ್ತಿತ್ತು. ಬಸ್ ಚಾಲಕ, ಕ್ಲೀನರ್‌ಗಳನ್ನು ಬಯೋ ಬಬಲ್‌ನಲ್ಲಿ ಇರಿಸಲಾಗಿತ್ತು. ಆದರೆ
3. ವಿಮಾನ ಪ್ರಯಾಣ
6 ನಗರಗಳಲ್ಲಿ ಪಂದ್ಯಗಳನ್ನು ಆಯೋಜಿಸಿದ ಕಾರಣ, ತಂಡಗಳು ವಿಮಾನದಲ್ಲಿ ಪ್ರಯಾಣ ಮಾಡಬೇಕಾಗಿ ಬಂತು. ಪ್ರತ್ಯೇಕ ವಿಮಾನವನ್ನೇ ಬಳಸಿದರೂ, ವಿಮಾನದ ಪೈಲೆಟ್, ಗಗನಸಖಿಯರು, ವಿಮಾನ ನಿಲ್ದಾಣದಲ್ಲಿ ಆಟಗಾರರ ಲಗೇಜ್‌ಗಳನ್ನು ಒಯ್ಯುವ ಸಿಬ್ಬಂದಿ ಇವರಾರಯರೂ ನಿರಂತರವಾಗಿ ಕೋವಿಡ್ ಪರೀಕ್ಷೆಗೆ ಒಳಗಾದವರಲ್ಲ. ವಿಮಾನದಲ್ಲಿ ಆಟಗಾರರು, ಸಿಬ್ಬಂದಿ ಆಹಾರ ಸೇವನೆ ಸಹ ಮಾಡಿದ್ದಾರೆ. ವಿಮಾನ ಪ್ರಯಾಣದ ವೇಳೆಯೂ ಸೋಂಕು ಹರಡಿರಬಹುದು. ತಂಡವೊಂದರ ಸಿಬ್ಬಂದಿ ಪ್ರಕಾರ, ಮುಂಬೈನಲ್ಲಿ ವಿಮಾನ ಬದಲಿಸುವ ವೇಳೆ ಸೋಂಕು ತಗುಲಿರಬಹುದು ಎನ್ನಲಾಗಿದೆ. ಕಳೆದ ವರ್ಷ ಯುಎಇನಲ್ಲಿ ರಸ್ತೆ ಮೂಲಕವಷ್ಟೇ ಪ್ರಯಾಣ ಮಾಡಲಾಗಿತ್ತು.
ಇದಷ್ಟೇ ಅಲ್ಲ, ಈ ಬಾರಿ ಜಿಪಿಎಸ್ ಮೂಲಕ ಆಟಗಾರರು, ಸಿಬ್ಬಂದಿಯ ಓಡಾಟದ ಮಾಹಿತಿ ಕಲೆಹಾಕುವ ವ್ಯವಸ್ಥೆಯೂ ಸರಿಯಿರಲಿಲ್ಲ ಎಂದು ತಂಡವೊಂದರ ಮಾಲೀಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮಾರ್ಗಸೂಚಿ ಪಾಲಿಸುವ ಬಗ್ಗೆ ಸರಿಯಾದ ಮಾಹಿತಿಯನ್ನೇ ಬಿಸಿಸಿಐ ಹಂಚಿಕೊಂಡಿರಲಿಲ್ಲ ಎಂದು ತಿಳಿದುಬಂದಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona