ಇಂಡೋ-ಕಿವೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ

Kannadaprabha News   | Asianet News
Published : Jan 24, 2020, 08:57 AM ISTUpdated : Jan 24, 2020, 10:28 AM IST
ಇಂಡೋ-ಕಿವೀಸ್ ಮೊದಲ ಟಿ20ಗೆ ಕ್ಷಣಗಣನೆ ಆರಂಭ

ಸಾರಾಂಶ

ಟೀಂ ಇಂಡಿಯಾ ಆಕ್ಲೆಂಡ್‌ನಲ್ಲಿಂದು ನ್ಯೂಜಿಲೆಂಡ್ ವಿರುದ್ಧ ಮೊದಲ ಟಿ20 ಪಂದ್ಯವನ್ನಾಡಲಿದೆ. 5 ಪಂದ್ಯಗಳ ಟಿ20 ಸರಣಿ ಇದಾಗಲಿದ್ದು, ಮೊದಲ ಪಂದ್ಯ ಗೆದ್ದು ಸರಣಿಯಲ್ಲಿ ಶುಭಾರಂಭ ಮಾಡಲು ಉಭಯ ತಂಡಗಳು ತುದಿಗಾಲಿನಲ್ಲಿ ನಿಂತಿವೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..

ಆಕ್ಲೆಂಡ್‌(ಜ.24): 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಬಳಿಕ ಭಾರತ-ನ್ಯೂಜಿಲೆಂಡ್ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗುತ್ತಿವೆ. ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬಲಿಷ್ಠ ತಂಡ ಸಿದ್ಧಪಡಿಸಲು ಟೀಂ ಇಂಡಿಯಾ ಪ್ರಯೋಗಗಳನ್ನು ಮುಂದುವರಿಸಲಿದೆ. ನಾಯಕ ವಿರಾಟ್‌ ಕೊಹ್ಲಿ ಹಾಗೂ ಕೋಚ್‌ ರವಿಶಾಸ್ತ್ರಿಗೆ ಆಯ್ಕೆ ಗೊಂದಲ ಶುರುವಾಗಿದೆ.

ಕೆ.ಎಲ್‌.ರಾಹುಲ್‌ ಹಾಗೂ ರೋಹಿತ್‌ ಶರ್ಮಾ ಆರಂಭಿಕರಾಗಿ ಆಡಲಿದ್ದು, 3ನೇ ಕ್ರಮಾಂಕದಲ್ಲಿ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಕಣಕ್ಕಿಳಿಯಲಿದ್ದಾರೆ. ಸಿಕ್ಕ ಕಡಿಮೆ ಅವಕಾಶಗಳನ್ನು ಬಳಸಿಕೊಂಡು 5ನೇ ಕ್ರಮಾಂಕವನ್ನು ಮನೀಶ್‌ ಪಾಂಡೆ ತಮ್ಮದಾಗಿಸಿಕೊಂಡಂತಿದೆ. ಹೀಗಾಗಿ ರಿಷಭ್‌ ಪಂತ್‌ ಹೊರಬೀಳುವ ಸಾಧ್ಯತೆ ಇದೆ. ಒಂದೊಮ್ಮೆ ಪಂತ್‌ರನ್ನೂ ಆಡಿಸಬೇಕಿದ್ದರೆ, ಶಿವಂ ದುಬೆಯನ್ನು ಹೊರಗಿಡಬೇಕಾಗುತ್ತದೆ. ಆಗ ಐವರು ಬೌಲರ್‌ಗಳೊಂದಿಗೆ ಆಡಬೇಕಾಗುತ್ತದೆ.

ನ್ಯೂಜಿಲೆಂಡ್ ತಲುಪಿದ ಟೀಂ ಇಂಡಿಯಾಗೆ ಶುರುವಾಯ್ತು ಆತಂಕ; ತಂಡದಲ್ಲಿಲ್ಲ ಸ್ಟಾರ್ ಪ್ಲೇಯರ್ಸ್!

ರವೀಂದ್ರ ಜಡೇಜಾ ಹಾಗೂ ವಾಷಿಂಗ್ಟನ್‌ ಸುಂದರ್‌ ಆಲ್ರೌಂಡರ್‌ ಸ್ಥಾನಕ್ಕೆ ಪೈಪೋಟಿ ನಡೆಸಲಿದ್ದಾರೆ. ಮೊಹಮದ್‌ ಶಮಿ ಹಾಗೂ ಜಸ್‌ಪ್ರೀತ್‌ ಬುಮ್ರಾ ಕಣಕ್ಕಿಳಿಯದ್ದಾರೆ. ನವ್‌ದೀಪ್‌ ಸೈನಿ ಹಾಗೂ ಶಾರ್ದೂಲ್‌ ಠಾಕೂರ್‌ ಪೈಕಿ ಒಬ್ಬರಿಗೆ ಸ್ಥಾನ ಸಿಗಲಿದೆ. ಸ್ಪಿನ್ನರ್‌ಗಳಾದ ಕುಲ್ದೀಪ್‌ ಯಾದವ್‌ ಹಾಗೂ ಯಜುವೇಂದ್ರ ಚಹಲ್‌ 2019ರ ಏಕದಿನ ವಿಶ್ವಕಪ್‌ ನಂತರ ಒಟ್ಟಿಗೆ ಆಡಿಲ್ಲ. ಇಬ್ಬರ ಪೈಕಿ ಯಾರಿಗೆ ಸ್ಥಾನ ಸಿಗಲಿದೆ ಎನ್ನುವ ಕುತೂಹಲವಿದೆ.

ಕಿವೀಸ್‌ಗೆ ಗಾಯಾಳುಗಳ ಸಮಸ್ಯೆ: ಮತ್ತೊಂದೆಡೆ ನ್ಯೂಜಿಲೆಂಡ್‌ ತವರಿನಲ್ಲಿ ಮತ್ತೊಂದು ಸರಣಿ ಗೆಲ್ಲುವ ಉತ್ಸಾಹದಲ್ಲಿದೆ. ಕಳೆದ ವರ್ಷ ಭಾರತ ವಿರುದ್ಧ 2-1ರಲ್ಲಿ ಸರಣಿ ಗೆದ್ದಿತ್ತು. ಆದರೆ ತಂಡಕ್ಕೆ ಗಾಯಾಳುಗಳ ಸಮಸ್ಯೆ ಎದುರಾಗಿದೆ. ಪ್ರಮುಖ ಬೌಲರ್‌ಗಳಾದ ಟ್ರೆಂಟ್‌ ಬೌಲ್ಟ್‌, ಮ್ಯಾಟ್‌ ಹೆನ್ರಿ, ಲಾಕಿ ಫಗ್ರ್ಯೂಸನ್‌ ಹೊರಬಿದ್ದಿದ್ದಾರೆ. ಈಡನ್‌ ಪಾರ್ಕ್ ಕ್ರೀಡಾಂಗಣದ ಬೌಂಡರಿಗಳು ಸಣ್ಣದಿರುವ ಕಾರಣ, ಇಶ್‌ ಸೋಧಿ ಹಾಗೂ ಮಿಚೆಲ್‌ ಸ್ಯಾಂಟ್ನರ್‌ ಇಬ್ಬರು ಸ್ಪಿನ್ನರ್‌ಗಳನ್ನು ಆಡಿಸುವ ಸಾಧ್ಯತೆ ಇದೆ. ಕೇನ್‌ ವಿಲಿಯಮ್ಸನ್‌, ರಾಸ್‌ ಟೇಲರ್‌ ಮೇಲೆ ತಂಡ ಹೆಚ್ಚಿನ ನಿರೀಕ್ಷೆ ಇರಿಸಿದೆ.

ಪಿಚ್‌ ರಿಪೋರ್ಟ್‌

ಬೆಳಗ್ಗೆ ಮಳೆ ಮುನ್ಸೂಚನೆ ಇದ್ದು, ಪಂದ್ಯದಲ್ಲಿ ಓವರ್‌ ಕಡಿತಗೊಳ್ಳುವ ಸಾಧ್ಯತೆ ಇದೆ. ಈಡನ್‌ ಪಾರ್ಕ್ನ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಬೌಂಡರಿಗಳು ಸಣ್ಣವಿರುವ ಕಾರಣ ದೊಡ್ಡ ಮೊತ್ತ ನಿರೀಕ್ಷೆ ಮಾಡಬಹುದಾಗಿದೆ.

ಪಂದ್ಯ ಆರಂಭ: ಮಧ್ಯಾಹ್ನ 12.20ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಕಾಲ್ತುಳಿತದ ದುರ್ಘಟನೆ ಬಳಿಕ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಡಿ.24ಕ್ಕೆ ಮೊದಲ ಕ್ರಿಕೆಟ್‌ ಪಂದ್ಯ? ಕೊಹ್ಲಿ ಭಾಗಿ
ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?