
ಕೋಲ್ಕತಾ: ಈ ಸೀಸನ್‌ನಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್ ರೈಡರ್ಸ್ ತಂಡಕ್ಕೆ ಕೊನೆಗೂ ಗೆಲುವಿನ ಸಿಹಿ ಸಿಕ್ಕಿದೆ. ಈ ಗೆಲುವಿನಿಂದಾಗಿ ತಂಡದ ಕ್ಯಾಪ್ಟನ್ ಅಜಿಂಕ್ಯ ರಹಾನೆ ನಿಟ್ಟುಸಿರು ಬಿಟ್ಟಿದ್ದಾರೆ. ಭಾನುವಾರ ರಾಜಸ್ಥಾನ ರಾಯಲ್ಸ್ ವಿರುದ್ಧ ರೋಚಕ ಜಯ ಸಾಧಿಸಿದ ನಂತರ ರಹಾನೆ ತಮಾಷೆಯಾಗಿಯೇ ಮಾತು ಆರಂಭಿಸಿದರು.
"ಈ ಸೀಸನ್‌ನ ಮೊದಲ ಆರು ಮ್ಯಾಚ್‌ಗಳಲ್ಲಿ ಐದರಲ್ಲಿ ಸೋತಿದ್ದೆವು. ಹಾಗಾಗಿ, ಮ್ಯಾಚ್ ಮುಗಿದ ತಕ್ಷಣ ಬೇಗ ಡ್ರೆಸ್ಸಿಂಗ್ ರೂಮ್‌ಗೆ ವಾಪಸ್ ಹೋಗಬೇಕಿತ್ತು. ಆದರೆ ಈ ಗೆಲುವಿನ ನಂತರ ಗ್ರೌಂಡ್‌ನಲ್ಲಿ ಹೆಚ್ಚುವರಿಯಾಗಿ ಐದು ನಿಮಿಷ ಕಳೆಯಲು ಅವಕಾಶ ಸಿಕ್ಕಿದ್ದಕ್ಕೆ ಖುಷಿ ಇದೆ," ಎಂದು ರಹಾನೆ ನಕ್ಕರು. ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಅವರನ್ನು ನಾಯಕ ಹಾಡಿ ಹೊಗಳಿದರು. "ರಿಂಕು ಸಿಂಗ್ ಮತ್ತು ವರುಣ್ ಚಕ್ರವರ್ತಿ ಬಗ್ಗೆ ನನಗೆ ತುಂಬಾ ಖುಷಿಯಿದೆ. ವರುಣ್ ಕಳಪೆ ಫಾರ್ಮ್‌ನಲ್ಲಿದ್ದರೂ, ಕಳೆದ ಮೂರು ಪಂದ್ಯಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಹಾಗೆಯೇ, ಮಾನಸಿಕವಾಗಿ ತೀವ್ರ ಒತ್ತಡದಲ್ಲಿದ್ದ ರಿಂಕು, ಪಂದ್ಯವನ್ನು ಫಿನಿಶ್ ಮಾಡಿದ ರೀತಿ ನೋಡಲು ಕಾಯುತ್ತಿದ್ದೆ," ಎಂದು ರಹಾನೆ ಖುಷಿ ವ್ಯಕ್ತಪಡಿಸಿದ್ದಾರೆ.
ಉತ್ತಮ ದೇಶೀಯ ಸೀಸನ್ ನಂತರ ತಂಡಕ್ಕೆ ಬಂದ ಅನುಕೂಲ್ ರಾಯ್ ಅವರ ಪ್ರದರ್ಶನವನ್ನೂ ಅವರು ಶ್ಲಾಘಿಸಿದರು. 156 ರನ್‌ಗಳ ಗುರಿ ಬೆನ್ನಟ್ಟುವಾಗ ಸ್ಟ್ರೈಕ್ ರೇಟ್ ಬಗ್ಗೆ ರಹಾನೆ ತಮ್ಮ ನಿಲುವು ಸ್ಪಷ್ಟಪಡಿಸಿದರು. ಇಂತಹ ಪಿಚ್‌ಗಳಲ್ಲಿ ಸ್ಟ್ರೈಕ್ ರೇಟ್‌ಗೆ ಹೆಚ್ಚು ಪ್ರಾಮುಖ್ಯತೆ ನೀಡಬಾರದು, ಬದಲಾಗಿ ವಿಕೆಟ್‌ಗಳ ನಡುವಿನ ಓಟಕ್ಕೆ ಆದ್ಯತೆ ನೀಡಬೇಕು ಎಂದರು.
"ದೊಡ್ಡ ಸಿಕ್ಸರ್‌ಗಳನ್ನು ಬಾರಿಸುವುದಕ್ಕಿಂತ ಸಿಂಗಲ್ಸ್ ಮತ್ತು ಡಬಲ್ಸ್ ತೆಗೆದು ಸ್ಕೋರ್ ಬೋರ್ಡ್ ಮುಂದೆ ಸಾಗಿಸುವುದರ ಮೇಲೆ ನಾವು ಗಮನ ಹರಿಸಬೇಕಿತ್ತು. ಕಳೆದ ಪಂದ್ಯಗಳಲ್ಲಿ ನಾವು ಇಂತಹ ತಪ್ಪುಗಳನ್ನು ಮಾಡಿದ್ದೆವು. ಈ ಪಂದ್ಯದಿಂದ ಕಲಿಯುವುದು ಬಹಳಷ್ಟಿದೆ," ಎಂದು ರಹಾನೆ ಸೇರಿಸಿದರು. ಮುಂಬರುವ ಐದು ದಿನಗಳ ವಿರಾಮವು ತಂಡಕ್ಕೆ ತಪ್ಪುಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಡ್ರೆಸ್ಸಿಂಗ್ ರೂಮ್‌ನ ವಾತಾವರಣ ಉತ್ತಮವಾಗಿದೆ ಎಂದು ರಹಾನೆ ಹೇಳಿದರು. ಏಪ್ರಿಲ್ 26 ರಂದು ಲಖನೌ ವಿರುದ್ಧ ಕೋಲ್ಕತ್ತಾ ತನ್ನ ಮುಂದಿನ ಪಂದ್ಯವನ್ನು ಆಡಲಿದೆ.
ಆರಂಭದಿಂದಲೂ ಸತತ ಸೋಲುಗಳಿಂದ ಕಂಗೆಟ್ಟಿದ್ದ ಅಜಿಂಕ್ಯ ರಹಾನೆ ನೇತೃತ್ವದ ಕೋಲ್ಕತಾ ನೈಟ್ ರೈಡರ್ಸ್ ತಂಡವು ಇದೀಗ ಗೆಲುವಿನ ಖಾತೆ ತೆರೆಯುತ್ತಿದ್ದಂತೆಯೇ ಕೊಂಚ ಅಂಕಪಟ್ಟಿಯಲ್ಲಿ ಏರಿಕೆ ಕಂಡಿದೆ. ಇದೀಗ ಕೆಕೆಆರ್ ತಂಡವು ಅಂಕಪಟ್ಟಿಯಲ್ಲಿ 09ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಇನ್ನೊಂದೆಡೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡವು ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಜಾರಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.