
ಕೋಲ್ಕತಾ: ಐಪಿಎಲ್‌ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತನ್ನ ಮೊದಲ ಗೆಲುವನ್ನು ದಾಖಲಿಸಿದೆ. ರಾಜಸ್ಥಾನ ರಾಯಲ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಕೋಲ್ಕತಾ ತಂಡ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು. ಈಡನ್ ಗಾರ್ಡನ್ಸ್‌ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ರಾಜಸ್ಥಾನ, ಒಂಬತ್ತು ವಿಕೆಟ್ ನಷ್ಟಕ್ಕೆ 155 ರನ್ ಗಳಿಸಿತು. ವೈಭವ್ ಸೂರ್ಯವಂಶಿ 28 ಎಸೆತಗಳಲ್ಲಿ 46 ರನ್ ಗಳಿಸಿ ಟಾಪ್ ಸ್ಕೋರರ್ ಎನಿಸಿದರು. ಕೋಲ್ಕತಾ ಪರ ಕಾರ್ತಿಕ್ ತ್ಯಾಗಿ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಇದಕ್ಕೆ ಉತ್ತರವಾಗಿ, ಕೋಲ್ಕತಾ ತಂಡ 19.4 ಓವರ್‌ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ರಿಂಕು ಸಿಂಗ್ 34 ಎಸೆತಗಳಲ್ಲಿ ಅಜೇಯ 53 ರನ್ ಗಳಿಸಿ ಕೋಲ್ಕತಾವನ್ನು ಗೆಲುವಿನ ದಡ ಸೇರಿಸಿದರು.
ಈ ಪಂದ್ಯದಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ಫಾರ್ಮ್‌ಗೆ ಮರಳಿದ ವರುಣ್ ಚಕ್ರವರ್ತಿ, ಒಂದು ಮಹತ್ವದ ಮೈಲಿಗಲ್ಲನ್ನೂ ಸ್ಥಾಪಿಸಿದರು. ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅವರ ವಿಕೆಟ್ ಪಡೆದಾಗ, ವರುಣ್ T20 ಕ್ರಿಕೆಟ್‌ನಲ್ಲಿ 200 ವಿಕೆಟ್‌ಗಳನ್ನು ಪೂರೈಸಿದರು. ಈ ಮೂಲಕ ಅತಿ ವೇಗವಾಗಿ 200 ವಿಕೆಟ್ ಪಡೆದ ಭಾರತೀಯ ಸ್ಪಿನ್ನರ್ ಎಂಬ ದಾಖಲೆಯನ್ನು ತಮ್ಮದಾಗಿಸಿಕೊಂಡರು. ವರುಣ್ ಕೇವಲ 155 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಈ ಹಿಂದೆ 160 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದ ಕುಲ್ದೀಪ್ ಯಾದವ್ ಅವರ ದಾಖಲೆಯನ್ನು ವರುಣ್ ಮುರಿದರು.
ಅಲ್ಲದೆ, ಈ ಮೈಲಿಗಲ್ಲು ತಲುಪಿದ ಎರಡನೇ ವೇಗದ ಭಾರತೀಯ ಬೌಲರ್ ಎಂಬ ಹೆಗ್ಗಳಿಕೆಗೂ ವರುಣ್ ಪಾತ್ರರಾಗಿದ್ದಾರೆ. ಅರ್ಷದೀಪ್ ಸಿಂಗ್ 151 ಇನ್ನಿಂಗ್ಸ್‌ಗಳಲ್ಲಿ 200 ವಿಕೆಟ್ ಪಡೆದು ಮೊದಲ ಸ್ಥಾನದಲ್ಲಿದ್ದಾರೆ. ಜಯದೇವ್ ಉನದ್ಕತ್ (162) ಮತ್ತು ಮೊಹಮ್ಮದ್ ಶಮಿ (165) ನಂತರದ ಸ್ಥಾನಗಳಲ್ಲಿದ್ದಾರೆ.
ರಾಜಸ್ಥಾನ್ ತಂಡಕ್ಕೆ ಆರಂಭಿಕರಾದ ಯಶಸ್ವಿ ಜೈಸ್ವಾಲ್ (39) ಮತ್ತು ಸೂರ್ಯವಂಶಿ (46) ಉತ್ತಮ ಆರಂಭ ನೀಡಿದರು. ಪವರ್‌ಪ್ಲೇ ಓವರ್‌ಗಳಲ್ಲಿ ಇವರಿಬ್ಬರು 10ಕ್ಕಿಂತ ಹೆಚ್ಚು ರನ್‌ರೇಟ್‌ನಲ್ಲಿ 63 ರನ್ ಚಚ್ಚಿದರು. ಆದರೆ, ವರುಣ್ ಚಕ್ರವರ್ತಿ ಬೌಲಿಂಗ್‌ಗೆ ಇಳಿದ ಬಳಿಕ ರಾಜಸ್ಥಾನ ಪತನ ಆರಂಭವಾಯಿತು. ವರುಣ್ ತಮ್ಮ ನಾಲ್ಕು ಓವರ್‌ಗಳಲ್ಲಿ ಕೇವಲ 14 ರನ್ ನೀಡಿ ಮೂರು ಪ್ರಮುಖ ವಿಕೆಟ್‌ಗಳನ್ನು ಕಬಳಿಸಿದರು.
ವರುಣ್‌ಗೆ ಸುನಿಲ್ ನರೈನ್ ಕೂಡ ಉತ್ತಮ ಸಾಥ್ ನೀಡಿದಾಗ ರಾಜಸ್ಥಾನ್ ಬ್ಯಾಟರ್‌ಗಳು ಪರದಾಡಿದರು. ನರೈನ್ 26 ರನ್‌ಗಳಿಗೆ ಎರಡು ವಿಕೆಟ್ ಪಡೆದರು. ರಿಯಾನ್ ಪರಾಗ್ (12) ಮತ್ತು ಧ್ರುವ್ ಜುರೆಲ್ (5) ನಿರಾಸೆ ಮೂಡಿಸಿದ್ದರಿಂದ ರಾಜಸ್ಥಾನ ಸ್ಕೋರ್ 155ಕ್ಕೆ ಸೀಮಿತವಾಯಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.