
ಕರಾಚಿ (ಏ.15): ಭಾರತದ ಐಪಿಎಲ್ ಮತ್ತು ಪಾಕಿಸ್ತಾನದ ಪಿಎಸ್‌ಎಲ್ ನಡುವೆ ಶ್ರೇಷ್ಠತೆಯ ಬಗ್ಗೆ ನಡೆಯುತ್ತಿರುವ ಚರ್ಚೆಗಳಿಗೆ ಪಾಕಿಸ್ತಾನದ ಅನುಭವಿ ಕ್ರಿಕೆಟಿಗ ಅಹ್ಮದ್ ಶೆಹಜಾದ್ ಖಡಕ್ ಉತ್ತರ ನೀಡಿದ್ದಾರೆ. ಪಿಎಸ್‌ಎಲ್ 2026ರ ಹರಾಜಿನಲ್ಲಿ ಅನ್‌ಸೋಲ್ಡ್ ಆಗಿದ್ದ ಶೆಹಜಾದ್, ಪಾಕಿಸ್ತಾನಿ ಲೀಗ್‌ನಲ್ಲಿ ಆಡುತ್ತಿರುವ ವಿದೇಶಿ ಆಟಗಾರರು ಕೇವಲ ನಿವೃತ್ತರಾದವರು ಅಥವಾ ಐಪಿಎಲ್‌ನಲ್ಲಿ ಯಾರೂ ಖರೀದಿಸದ ಆಟಗಾರರು ಎಂಬ ಕಟು ಸತ್ಯವನ್ನು ಬಿಚ್ಚಿಟ್ಟಿದ್ದಾರೆ. ಶ್ರೀಲಂಕಾದ ಕುಸಲ್ ಮೆಂಡಿಸ್ ಮತ್ತು ದಕ್ಷಿಣ ಆಫ್ರಿಕಾದ ರಿಲೀ ರೊಸೊ ಅವರನ್ನು ಪಾಕಿಸ್ತಾನಿ ಪತ್ರಕರ್ತರು ಐಪಿಎಲ್ ಮತ್ತು ಪಿಎಸ್‌ಎಲ್ ಅನುಭವಗಳನ್ನು ಹೋಲಿಕೆ ಮಾಡುವಂತೆ ಕೇಳಿದ ಪ್ರಶ್ನೆಗೆ ಶೆಹಜಾದ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಪಿಎಸ್‌ಎಲ್‌ನಲ್ಲಿ ಈಗ ಉಳಿದಿರುವುದು ಕೇವಲ ಐಪಿಎಲ್‌ನಿಂದ ನಿವೃತ್ತರಾದವರು ಅಥವಾ ಐಪಿಎಲ್ ಹರಾಜಿನಲ್ಲಿ ಯಾರೂ ಬೇಡವೆಂದ ಆಟಗಾರರು ಮಾತ್ರ. ಯಾರಿಗೆ ಐಪಿಎಲ್‌ನಲ್ಲಿ ಆಡುವ ಸಣ್ಣ ಅವಕಾಶವಿದ್ದರೂ ಅವರು ಐಪಿಎಲ್‌ನ್ನೇ ಆಯ್ಕೆ ಮಾಡುತ್ತಾರೆ (ಉದಾಹರಣೆಗೆ ಡೇವಿಡ್ ವಾರ್ನರ್, ಸ್ಟೀವ್ ಸ್ಮಿತ್). ಇನ್ನು ಎಷ್ಟು ಆಟಗಾರರನ್ನು ನೀವು ನಿಷೇಧಿಸುತ್ತೀರಿ?" ಎಂದು ಪಿಸಿಬಿ ವಿರುದ್ಧ ಗುಡುಗಿದ್ದಾರೆ. ಐಪಿಎಲ್‌ನಲ್ಲಿ ಆಡಲು ಪಿಎಸ್‌ಎಲ್ ಒಪ್ಪಂದವನ್ನು ಅರ್ಧಕ್ಕೆ ಬಿಟ್ಟು ಹೋಗುವ ವಿದೇಶಿ ಆಟಗಾರರನ್ನು ನಿಷೇಧಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (PCB) ಕ್ರಮವನ್ನು ಅವರು ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ಪಿಎಸ್‌ಎಲ್‌ನಲ್ಲಿ ಆಡುತ್ತಿರುವ ಕುಸಲ್ ಮೆಂಡಿಸ್ ಬಳಿ ಪತ್ರಕರ್ತರು, "ಸರ್, ಕಳೆದ ಬಾರಿ ನೀವು ಐಪಿಎಲ್‌ಗೆ ಹೋಗಿದ್ದಿರಿ, ಅದರ ಬಗ್ಗೆ ನಿಮ್ಮ ಅಭಿಪ್ರಾಯವೇನು?" ಎಂದು ಕೇಳಿದ್ದರು. ಈ ಪ್ರಶ್ನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೆಹಜಾದ್, "ನೋಡಿ, ಎಂತಹ ಪ್ರಶ್ನೆಗಳನ್ನು ಅವರು ಕೇಳುತ್ತಿದ್ದಾರೆ," ಎಂದಿದ್ದಾರೆ.
ಇನ್ನು ರಿಲೀ ರೊಸೊ ಹೇಳಿಕೆಯನ್ನು ಟೀಕಿಸಿದ ಅವರು, "ರಿಲೀ ರೊಸೊ ಅವರ ಸಾಧನೆಯ ಬಗ್ಗೆ ಪಿಎಸ್‌ಎಲ್‌ನಲ್ಲಿ ಯಾವುದೇ ಸ್ಪಷ್ಟತೆಯಿಲ್ಲ, ಆದರೆ ಅವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಪಿಎಸ್‌ಎಲ್ ಆಡುತ್ತಿರುವಾಗ ಐಪಿಎಲ್ ಅನ್ನು ಹೊಗಳಲು ಸಾಧ್ಯವಿಲ್ಲ. ಹಾಗಾಗಿ ಅವರು ಐಪಿಎಲ್ ಅನ್ನು 'ಬಾಲಿವುಡ್ ಸಿನಿಮಾ' ಎಂದು ಕರೆದಿದ್ದಾರೆ ಮತ್ತು ಅಸಲಿ ಕ್ರಿಕೆಟ್ ನಡೆಯುತ್ತಿರುವುದು ಪಿಎಸ್‌ಎಲ್‌ನಲ್ಲಿ ಎಂದು ಹೇಳಿದ್ದಾರೆ. ಇದು ಕೇವಲ ಪ್ರಚಾರಕ್ಕಾಗಿ ನೀಡುವ ಹೇಳಿಕೆ," ಎಂದು ಶೆಹಜಾದ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಲೇವಡಿ ಮಾಡಿದ್ದಾರೆ.
ಅಹ್ಮದ್ ಶೆಹಜಾದ್ ಅವರು ಪಿಎಸ್‌ಎಲ್ ಮತ್ತು ಐಪಿಎಲ್ ನಡುವೆ ಯಾವುದೇ ಹೋಲಿಕೆ ಸಾಧ್ಯವಿಲ್ಲ ಮತ್ತು ಐಪಿಎಲ್ ಮುಂದೆ ಪಿಎಸ್‌ಎಲ್ ತೀರಾ ಸಣ್ಣ ಮಟ್ಟದ್ದು ಎಂಬ ಕಟು ವಾಸ್ತವವನ್ನು ತಮ್ಮದೇ ದೇಶದ ಕ್ರಿಕೆಟ್ ಮಂಡಳಿಗೆ ಮನವರಿಕೆ ಮಾಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.