ಕನಸಿನ ಬಲಿಷ್ಠ ಟಿ20 ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್‌! 4 ಭಾರತೀಯರಲ್ಲಿ ರೋಹಿತ್‌ಗಿಲ್ಲ ಸ್ಥಾನ

By Naveen Kodase  |  First Published Nov 18, 2024, 6:27 PM IST

ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ತಮ್ಮ ಕನಸಿನ ಬಲಿಷ್ಠ ಟಿ20 ತಂಡವನ್ನು ಆಯ್ಕೆ ಮಾಡಿದ್ದು, ನಾಲ್ವರು ಭಾರತೀಯ ಆಟಗಾರರಿಗೆ ಸ್ಥಾನ ನೀಡಿದ್ದಾರೆ. ಆಧರೆ ರೋಹಿತ್ ಶರ್ಮಾಗೆ ಸ್ಥಾನ ನೀಡದೇ ಇರುವುದು ಅಚ್ಚರಿಗೆ ಕಾರಣವಾಗಿದೆ.


ಬೆಂಗಳೂರು: ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಹಾಗೂ ಆಧುನಿಕ ಕ್ರಿಕೆಟ್‌ನ ಸೂಪರ್ ಸ್ಟಾರ್ ಬ್ಯಾಟರ್ ಎಂದೇ ಗುರುತಿಸಿಕೊಂಡಿರುವ ಎಬಿ ಡಿವಿಲಿಯರ್ಸ್‌ ಇದೀಗ ತಮ್ಮ ಕನಸಿನ ಟಿ20 ತಂಡವನ್ನು ಆಯ್ಕೆ ಮಾಡಿದ್ದಾರೆ. ಎಬಿಡಿ ತಮ್ಮ ಕನಸಿನ ಟಿ20 ತಂಡದಲ್ಲಿ ನಾಲ್ವರು ಭಾರತೀಯರಿಗೆ ಸ್ಥಾನ ನೀಡಿದ್ದಾರೆ. ಆದರೆ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಶತಕ ಸಿಡಿಸಿದ ದಾಖಲೆ ಹೊಂದಿರುವ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಿರುವುದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. 

ಆರ್‌ಸಿಬಿ ತಂಡದ ಆಪತ್ಬಾಂದವ ಎಂದೇ ಕರೆಸಿಕೊಳ್ಳುತ್ತಿದ್ದ ಎಬಿ ಡಿವಿಲಿಯರ್ಸ್‌, ಸಹ ಆಟಗಾರನಾಗಿರುವ ಕ್ರಿಕೆಟ್ ದಂತಕಥೆ ವಿರಾಟ್ ಕೊಹ್ಲಿ ಅವರನ್ನು ತಮ್ಮ ಕನಸಿನ ತಂಡದಲ್ಲಿ ಸ್ಥಾನ ನೀಡಿದ್ದಾರೆ. ಇನ್ನು ಎಬಿ ಡಿವಿಲಿಯರ್ಸ್‌, ಮಹೇಂದ್ರ ಸಿಂಗ್ ಧೋನಿ, ಯುಜುವೇಂದ್ರ ಚಹಲ್ ಹಾಗೂ ಮಾರಕ ಯುವ ವೇಗಿ ಮಯಾಂಕ್ ಯಾದವ್‌ ಅವರನ್ನು ಬ್ಯಾಕ್‌ ಅಪ್ ಆಟಗಾರರನ್ನಾಗಿ ಆಯ್ಕೆ ಮಾಡಿಕೊಂಡಿದ್ದಾರೆ.

Tap to resize

Latest Videos

undefined

ಅಂಜಲಿ ಮದುವೆಗೂ ಮುನ್ನ ಈ ನಟಿ ಜತೆ ಸಚಿನ್ ತೆಂಡುಲ್ಕರ್ ಲವ್ವಿಡವ್ವಿ? ಅಷ್ಟಕ್ಕೂ ಯಾರು ಈ ಶಿಲ್ಪಾ?

ಎಬಿಡಿ ಆಯ್ಕೆ ಮಾಡಿದ ಕನಸಿನ ಟಿ20 ತಂಡದಲ್ಲಿ ವಿರಾಟ್ ಕೊಹ್ಲಿ ಹಾಗೂ ಆಸ್ಟ್ರೇಲಿಯಾದ ಟ್ರ್ಯಾವಿಸ್ ಹೆಡ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇದಾದ ಬಳಿಕ ಅಗ್ರಕ್ರಮಾಂಕದಲ್ಲಿ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್, ಕ್ಯಾಮರೋನ್ ಗ್ರೀನ್ ಹಾಗೂ ದಕ್ಷಿಣ ಆಫ್ರಿಕಾದ ಹೆನ್ರಿಚ್ ಕ್ಲಾಸೆನ್‌ಗೆ ಸ್ಥಾನ ಒದಗಿಸಿದ್ದಾರೆ.

ಮಿಸ್ಟರ್ 360 ಖ್ಯಾತಿಯ ಎಬಿಡಿ ಫಿನಿಶರ್ ರೂಪದಲ್ಲಿ ದಕ್ಷಿಣ ಆಫ್ರಿಕಾದವರೇ ಆದ ಎಡಗೈ ಬ್ಯಾಟರ್ ಡೇವಿಡ್ ಮಿಲ್ಲರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಬೌಲಿಂಗ್ ವಿಭಾಗದಲ್ಲಿ ಎಬಿಡಿ ತಮ್ಮ ಕನಸಿನ ತಂಡದಲ್ಲಿ ಇಬ್ಬರು ವಿಶ್ವದರ್ಜೆಯ ಸ್ಪಿನ್ನರ್‌ಗಳು ಮೂವರು ವೇಗಿಗಳಿಗೆ ಮಣೆ ಹಾಕಿದ್ದಾರೆ. 

ಸ್ಪಿನ್ನರ್‌ಗಳ ರೂಪದಲ್ಲಿ ರಶೀದ್ ಖಾನ್ ಹಾಗೂ ಸುನಿಲ್ ನರೈನ್‌ಗೆ ಸ್ಥಾನ ನೀಡಿದ್ದಾರೆ. ಇನ್ನು ವೇಗದ ಬೌಲರ್‌ಗಳಾಗಿ ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್ ಹಾಗೂ ಕಗಿಸೋ ರಬಾಡಗೆ ಅವಕಾಶ ಕಲ್ಪಿಸಿದ್ದಾರೆ.

ಸಯ್ಯದ್‌ ಮುಷ್ತಾಕ್‌ ಅಲಿ ಟಿ20 ಆಡಿದ ಬಳಿಕ ವೇಗಿ ಮೊಹಮ್ಮದ್ ಶಮಿ ಆಸೀಸ್‌ಗೆ?

ಇನ್ನು ಚಹಲ್‌ ಅವರನ್ನು ಕೈಬಿಟ್ಟು ರಶೀದ್ ಖಾನ್‌ಗೆ ಮಣೆ ಹಾಕಿದ್ದೇಕೆ ಎನ್ನುವುದನ್ನು ಎಬಿಡಿ ವಿವರಿಸಿದ್ದಾರೆ. ರಶೀದ್ ಖಾನ್ ಅತ್ಯದ್ಭುತ ಸ್ಪಿನ್ನರ್. ಆತ ಯಾವುದೇ ಕ್ಷಣದಲ್ಲಿ ಬೇಕಿದ್ದರೂ 2-3 ವಿಕೆಟ್ ಕಬಳಿಸಬಲ್ಲ ಚತುರ ಸ್ಪಿನ್ನರ್. ಬ್ಯಾಟಿಂಗ್‌ನಲ್ಲೂ ಬೇಕಿದ್ದರೂ ತಂಡವನ್ನು ಗೆಲುವಿನ ದಡ ಸೇರಿಸಬಲ್ಲ ಆಟಗಾರ. ಫೀಲ್ಡಿಂಗ್‌ನಲ್ಲೂ ಚುರುಕಾಗಿರುತ್ತಾರೆ. ಇನ್ನು ಚಹಲ್ ನನ್ನ ಕನಸಿನ ತಂಡದಲ್ಲಿ ಯಾಕೆ ಸ್ಥಾನ ಪಡೆದಿಲ್ಲ ಎಂದರೇ, ಆತ ಬ್ಯಾಟಿಂಗ್ ಮಾಡಲ್ಲ. ಫೀಲ್ಡಿಂಗ್‌ನಲ್ಲೂ ರಶೀದ್ ಖಾನ್ ಅವರಷ್ಟು ಚುರುಕು ಇಲ್ಲ. ಈ ಕಾರಣಕ್ಕಾಗಿ ಚಹಲ್ ಬಿಟ್ಟು ರಶೀದ್ ಖಾನ್ ಆಯ್ಕೆ ಮಾಡಿಕೊಂಡಿರುವುದಾಗಿ ಎಬಿಡಿ ಹೇಳಿದ್ದಾರೆ.

ಎಬಿಡಿ ಆಯ್ಕೆ ಮಾಡಿದ ಕನಸಿನ ಟಿ20 ತಂಡ ಹೀಗಿದೆ ನೋಡಿ:

ವಿರಾಟ್ ಕೊಹ್ಲಿ, ಟ್ರ್ಯಾವಿಸ್ ಹೆಡ್, ರಿಷಭ್ ಪಂತ್(ವಿಕೆಟ್ ಕೀಪರ್), ಕ್ಯಾಮರೋನ್ ಗ್ರೀನ್, ಹೆನ್ರಿಚ್ ಕ್ಲಾಸೇನ್, ಡೇವಿಡ್ ಮಿಲ್ಲರ್, ಸುನಿಲ್ ನರೈನ್, ರಶೀದ್ ಖಾನ್, ಭುವನೇಶ್ವರ್ ಕುಮಾರ್, ಕಗಿಸೋ ರಬಾಡ, ಜಸ್ಪ್ರೀತ್ ಬುಮ್ರಾ..

ಮೀಸಲು ಆಟಗಾರರು: ಎಂ ಎಸ್ ಧೋನಿ, ಮಯಾಂಕ್ ಯಾದವ್ ಮತ್ತು ಯುಜುವೇಂದ್ರ ಚಹಲ್.
 

click me!