ಅಂಡರ್-19 ಏಷ್ಯಾಕಪ್‌ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ವೀರೂ ಪುತ್ರ..! ಪಾಕ್ ಎದುರಿನ ಫೈನಲ್‌ಗೂ ಮುನ್ನ ತಂದೆ ಜತೆ ಮಾತನಾಡಿದ್ರಾ ಆರ್ಯವೀರ್ ಸೆಹ್ವಾಗ್?

Published : Nov 15, 2026, 09:46 AM ISTUpdated : Nov 15, 2026, 10:00 AM IST
Aaryavir Sehwag

ಸಾರಾಂಶ

ಅಂಡರ್-19 ಏಷ್ಯಾಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ತಂಡ ಚಾಂಪಿಯನ್ ಆಗಿದೆ. ವಿರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಸೆಹ್ವಾಗ್ ಅತ್ಯುತ್ತಮ ಪ್ರದರ್ಶನ ನೀಡಿ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದಿದ್ದಾರೆ.

ಬೆಂಗಳೂರು(ನ.15): ಟೀಂ ಇಂಡಿಯಾ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಸೆಹ್ವಾಗ್, ಅಂಡರ್-19 ಏಷ್ಯಾಕಪ್ 2026 ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದಿದ್ದಾರೆ. ಶನಿವಾರ ಪಾಕಿಸ್ತಾನ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಭಾರತ ತಂಡ ರೋಚಕ ಗೆಲುವು ದಾಖಲಿಸಿ ಪ್ರಶಸ್ತಿ ಎತ್ತಿಹಿಡಿದಿದೆ. ಇದರ ಬೆನ್ನಲ್ಲೇ ಆರ್ಯವೀರ್ ಟೂರ್ನಿಯ ಶ್ರೇಷ್ಠ ಆಟಗಾರ (Player of the Tournament) ಪ್ರಶಸ್ತಿಗೂ ಭಾಜನರಾಗಿದ್ದಾರೆ.

ಲಕ್ಷ್ಯ ರೈಚಂದಾನಿ ನಾಯಕತ್ವದ ಭಾರತ ತಂಡ ಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಒಂದು ವಿಕೆಟ್‌ನಿಂದ ಮಣಿಸಿ ದಾಖಲೆಯ ಒಂಬತ್ತನೇ ಬಾರಿ ಅಂಡರ್-19 ಏಷ್ಯಾಕಪ್ ಪ್ರಶಸ್ತಿ ಗೆದ್ದುಕೊಂಡಿತು. ಈ ಮಹತ್ವದ ಪಂದ್ಯದಲ್ಲೂ ಆರ್ಯವೀರ್ ಬ್ಯಾಟ್‌ನಿಂದ ಉತ್ತಮ ಪ್ರದರ್ಶನ ಹೊರಬಂದಿದ್ದು, 61 ಎಸೆತಗಳಲ್ಲಿ 58 ರನ್ ಗಳಿಸಿದರು. ಈ ಮೂಲಕ ಫೈನಲ್‌ನಲ್ಲೂ ತಂಡದ ಗೆಲುವಿನ ಹೋರಾಟಕ್ಕೆ ಕೊಡುಗೆ ನೀಡಿದರು.

ಐದು ಪಂದ್ಯಗಳಲ್ಲಿ 361 ರನ್; ಆರ್ಯವೀರ್‌ಗೆ ಶ್ರೇಷ್ಠ ಆಟಗಾರ ಪ್ರಶಸ್ತಿ

ಅಂಡರ್-19 ಏಷ್ಯಾಕಪ್ 2026ರಲ್ಲಿ ಆರ್ಯವೀರ್ ಸೆಹ್ವಾಗ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಿಂದ ಒಟ್ಟು 361 ರನ್ ಗಳಿಸಿದ ಅವರು, ಆವೃತ್ತಿಯ ಗರಿಷ್ಠ ರನ್ ಸ್ಕೋರರ್ ಎನಿಸಿಕೊಂಡರು. ಅವರ ಬ್ಯಾಟಿಂಗ್ ಸರಾಸರಿ 90.25 ಆಗಿತ್ತು. ನಿರಂತರವಾಗಿ ರನ್ ಗಳಿಸುವ ಮೂಲಕ ತಂಡದ ಪ್ರಮುಖ ಬ್ಯಾಟರ್ ಆಗಿ ಗುರುತಿಸಿಕೊಂಡ ಆರ್ಯವೀರ್, ಫೈನಲ್‌ನಲ್ಲೂ ಅರ್ಧಶತಕ ಸಿಡಿಸಿ ತಮ್ಮ ಉತ್ತಮ ಲಯವನ್ನು ಮುಂದುವರಿಸಿದರು. ಈ ಪ್ರದರ್ಶನದ ಫಲವಾಗಿ ಅವರಿಗೆ ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಒಲಿಯಿತು.

338 ರನ್‌ಗಳ ಗುರಿ ಬೆನ್ನಟ್ಟುವಾಗ ತಂಡದ ಯೋಜನೆ ಏನಿತ್ತು?

ಪಾಕಿಸ್ತಾನ ವಿರುದ್ಧದ ಫೈನಲ್‌ನಲ್ಲಿ 338 ರನ್‌ಗಳ ಬೃಹತ್ ಗುರಿ ಬೆನ್ನಟ್ಟುವಾಗ ಭಾರತ ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಚರ್ಚೆಯ ಬಗ್ಗೆ ಆರ್ಯವೀರ್ ಮಾತನಾಡಿದ್ದಾರೆ. ಪಿಚ್ ಬ್ಯಾಟಿಂಗ್‌ಗೆ ಉತ್ತಮವಾಗಿದ್ದರಿಂದ ಸಹಜ ಆಟವಾಡಿದರೆ ಗುರಿ ತಲುಪಬಹುದು ಎಂಬ ವಿಶ್ವಾಸ ತಂಡಕ್ಕಿತ್ತು ಎಂದು ಅವರು ಹೇಳಿದ್ದಾರೆ. “ಡ್ರೆಸ್ಸಿಂಗ್ ರೂಮ್‌ನಲ್ಲಿ ಪಿಚ್ ಬ್ಯಾಟಿಂಗ್‌ಗೆ ತುಂಬಾ ಚೆನ್ನಾಗಿದೆ, ಇದು ಅಷ್ಟೊಂದು ದೊಡ್ಡ ಮೊತ್ತವಲ್ಲ ಎಂಬ ಚರ್ಚೆ ನಡೆಯಿತು. ನಾವು ನಮ್ಮ ಸಹಜ ಆಟವಾಡಿ, ಸಾಮಾನ್ಯವಾಗಿ ಆಡುವ ಹೊಡೆತಗಳನ್ನು ಆಡಿದರೆ ಗುರಿ ತಲುಪಬಹುದು ಎಂಬ ನಂಬಿಕೆಯಿತ್ತು. ಗುರಿಯನ್ನು ಬೆನ್ನಟ್ಟುತ್ತೇವೆ ಎಂಬ ವಿಶ್ವಾಸ ಯಾವಾಗಲೂ ನಮ್ಮಲ್ಲಿತ್ತು,” ಎಂದು ಆರ್ಯವೀರ್ ತಿಳಿಸಿದ್ದಾರೆ.

ಕೊನೆಯ 10 ಓವರ್‌ಗಳಲ್ಲಿ 100-120 ರನ್ ಗಳಿಸುವ ಯೋಜನೆ!

ಫೈನಲ್‌ನಲ್ಲಿ 300ಕ್ಕೂ ಹೆಚ್ಚು ರನ್‌ಗಳ ಗುರಿ ಎದುರಿದ್ದರೂ ಭಾರತ ತಂಡದ ಯೋಜನೆಯಲ್ಲಿ ಯಾವುದೇ ಬದಲಾವಣೆ ಇರಲಿಲ್ಲ ಎಂದು ಆರ್ಯವೀರ್ ಹೇಳಿದ್ದಾರೆ. ಟೀಮ್ ಮೀಟಿಂಗ್‌ನಲ್ಲಿ ಕೊನೆಯ 10 ಓವರ್‌ಗಳಲ್ಲಿ 100ರಿಂದ 120 ರನ್ ಗಳಿಸುವ ಸಾಧ್ಯತೆಗಳ ಬಗ್ಗೆಯೂ ಚರ್ಚಿಸುತ್ತಿದ್ದೆವು ಎಂದು ಅವರು ವಿವರಿಸಿದ್ದಾರೆ.

“ನಮ್ಮ ತಂಡದ ಮೀಟಿಂಗ್‌ಗಳಲ್ಲಿ ಕೊನೆಯ 10 ಓವರ್‌ಗಳಲ್ಲಿ 100 ಅಥವಾ 120 ರನ್‌ಗಳನ್ನು ಹೇಗೆ ಗಳಿಸಬಹುದು ಎಂಬುದರ ಬಗ್ಗೆ ಮಾತನಾಡಿದ್ದೆವು. ಪಿಚ್ ಕೂಡ ಬ್ಯಾಟಿಂಗ್‌ಗೆ ಉತ್ತಮವಾಗಿತ್ತು. ಹೀಗಾಗಿ ಯಾರಾದರೂ ಒಬ್ಬರು ಕೊನೆಯವರೆಗೂ ಬ್ಯಾಟಿಂಗ್ ಮಾಡಬೇಕಿತ್ತು. ಲಕ್ಷ್ಯ ಆ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದರು. ಅವರಿಗೆ ಅಭಿನಂದನೆಗಳು. ಕೊನೆಯಲ್ಲಿ ಮೋಹಿತ್ ಮತ್ತು ಮನಾಲ್ ಆಡಿದ ಆಟವೂ ಅದ್ಭುತವಾಗಿತ್ತು. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ,” ಎಂದು ಆರ್ಯವೀರ್ ಹೇಳಿದ್ದಾರೆ.

ತಂದೆ ವಿರೇಂದ್ರ ಸೆಹ್ವಾಗ್ ಜೊತೆ ಮಾತನಾಡಿದ್ದಾರಾ ಆರ್ಯವೀರ್?

ಟೂರ್ನಿಯ ಶ್ರೇಷ್ಠ ಆಟಗಾರ ಪ್ರಶಸ್ತಿ ಗೆದ್ದ ಬಳಿಕ ಆರ್ಯವೀರ್ ಅವರ ತಂದೆ ವಿರೇಂದ್ರ ಸೆಹ್ವಾಗ್ ಜೊತೆ ಮಾತನಾಡಿದ್ದಾರೆಯೇ ಎಂಬ ಪ್ರಶ್ನೆಯೂ ಎದುರಾಯಿತು. ಇದಕ್ಕೆ ಉತ್ತರಿಸಿದ ಯುವ ಆಟಗಾರ, ಇನ್ನೂ ತಂದೆಯೊಂದಿಗೆ ಮಾತನಾಡಿಲ್ಲ. ಬಳಿಕ ಮಾತನಾಡುತ್ತೇನೆ ಎಂದು ತಿಳಿಸಿದ್ದಾರೆ. “ಇಲ್ಲ ಸರ್, ಇನ್ನೂ ಮಾತನಾಡಿಲ್ಲ. ಬಳಿಕ ಮಾತನಾಡುತ್ತೇನೆ,” ಎಂದು ಆರ್ಯವೀರ್ ಹೇಳಿದ್ದಾರೆ.

ತಂದೆ ವಿರೇಂದ್ರ ಸೆಹ್ವಾಗ್ ಅವರಂತೆ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಆರ್ಯವೀರ್, ಅಂಡರ್-19 ಏಷ್ಯಾಕಪ್‌ನಲ್ಲಿ ತೋರಿದ ಪ್ರದರ್ಶನದೊಂದಿಗೆ ಭಾರತೀಯ ಕ್ರಿಕೆಟ್‌ನಲ್ಲಿ ಭರವಸೆಯ ಯುವ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಚಿನ್ ಕಣ್ಣು ಪರಿಸರದ ಮೇಲೆ, ರಹಾನೆ ಆಸಕ್ತಿ ಅಡುಗೆಮನೆಯ ಮೇಲೆ! ಇಬ್ಬರ ಹೊಸ ಉದ್ಯಮದ ಕಥೆ ಏನು?
ಏಷ್ಯಾ ಕಪ್: ಸೆಹ್ವಾಗ್ ಪುತ್ರನಿಗೆ ಸರಣಿ ಶ್ರೇಷ್ಠ ಗರಿ; ಜೂನಿಯರ್ ದ್ರಾವಿಡ್ ಸಾಧನೆ ಏನು? ಇಲ್ಲಿದೆ ರಿಪೋರ್ಟ್ ಕಾರ್ಡ್!