
ಹಾಂಗ್ಝೂ(ಸೆ.27): ಏಷ್ಯನ್ ಗೇಮ್ಸ್‌ನ ಪುರುಷರ ಕ್ರಿಕೆಟ್ ಪಂದ್ಯದಲ್ಲಿ ನೇಪಾಳ ಕ್ರಿಕೆಟ್ ತಂಡವು ಹಲವು ಐತಿಹಾಸಿಕ ದಾಖಲೆ ನಿರ್ಮಿಸಿದೆ. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಇತಿಹಾಸದಲ್ಲಿ 300+ ರನ್ ಬಾರಿಸಿದ ಮೊದಲ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇನ್ನು ಇದೇ ಪಂದ್ಯದಲ್ಲಿ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಕಳೆದೊಂದು ದಶಕದಿಂದ ಅಜರಾಮರವಾಗಿದ್ದ ಅತಿವೇಗದ ಅರ್ಧಶತಕ ದಾಖಲೆ ನುಚ್ಚು ನೂರಾಗಿದೆ. ಇದಷ್ಟೇ ಅಲ್ಲದೇ ಅತಿವೇಗದ ಶತಕ ಕೂಡಾ ಇದೇ ಪಂದ್ಯದಲ್ಲಿ ದಾಖಲಾಗಿದೆ.
ಇಂದು ಮಂಗೋಲಿಯಾ ವಿರುದ್ದ ನಡೆದ ಪಂದ್ಯದಲ್ಲಿ ನೇಪಾಳ ತಂಡವು ಅಮೋಘ ಪ್ರದರ್ಶನ ತೋರಿ ಮಿಂಚಿದೆ. ಮಂಗೋಲಿಯಾ ವಿರುದ್ದ ನೇಪಾಳ ತಂಡವು ನಿಗದಿತ 20 ಓವರ್‌ಗಳಲ್ಲಿ ಕೇವಲ 3 ವಿಕೆಟ್ ಕಳೆದುಕೊಂಡು 314 ರನ್ ಕಲೆ ಹಾಕಿದೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಗರಿಷ್ಠ ರನ್ ಬಾರಿಸಿದ ಹೊಸ ಮೈಲಿಗಲ್ಲು ನೆಟ್ಟಿತು. ಈ ಮೊದಲು 2019ರಲ್ಲಿ ಐರ್ಲೆಂಡ್ ಎದುರು ಆಫ್ಘಾನಿಸ್ತಾನ ತಂಡವು 278/3 ರನ್ ಗಳಿಸಿದ್ದೇ ಇದುವರೆಗಿನ ಗರಿಷ್ಠ ಸ್ಕೋರ್ ಎನಿಸಿಕೊಂಡಿತ್ತು.
Ind vs Aus: ಟೀಂ ಇಂಡಿಯಾಕ್ಕೆ ಐತಿಹಾಸಿಕ ಕ್ಲೀನ್ ಸ್ವೀಪ್ ಗುರಿ..!
ಇನ್ನು ಇದಷ್ಟೇ ಅಲ್ಲದೇ ನೇಪಾಳದ ಸಿಡಿಲಬ್ಬರದ ಇನಿಂಗ್ಸ್‌ನಲ್ಲಿ ಬರೋಬ್ಬರಿ 26 ಮುಗಿಲೆತ್ತರದ ಸಿಕ್ಸರ್‌ಗಳು ಮೂಡಿ ಬಂದವು. ಇದು ಕೂಡಾ ತಂಡವೊಂದು ಒಂದು ಇನಿಂಗ್ಸ್‌ನಲ್ಲಿ ದಾಖಲಿಸಿದ ಗರಿಷ್ಠ ಸಿಕ್ಸರ್ ಎನಿಸಿಕೊಂಡಿತು. ಈ ಮೊದಲು 2019ರಲ್ಲಿ ಐರ್ಲೆಂಡ್ ಎದುರು ಆಫ್ಘಾನಿಸ್ತಾನ ತಂಡದ ಬ್ಯಾಟರ್‌ಗಳು ಇನಿಂಗ್ಸ್‌ನಲ್ಲಿ 22 ಸಿಕ್ಸರ್ ಸಿಡಿಸಿದ್ದರು.
ಯುವರಾಜ್ ಸಿಂಗ್-ರೋಹಿತ್ ಶರ್ಮಾ ದಾಖಲೆ ನುಚ್ಚುನೂರು:
ನೇಪಾಳ ಆಲ್ರೌಂಡರ್ ದಿಪೇಂದರ ಸಿಂಗ್ ಐರೆ ಕೇವಲ 9 ಎಸೆತಗಳಲ್ಲಿ ಅರ್ಧಶತಕ ಬಾರಿಸುವ ಮೂಲಕ ಯುವರಾಜ್ ಸಿಂಗ್ ಹೆಸರಿನಲ್ಲಿದ್ದ ಅಪರೂಪದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. 2007ರಲ್ಲಿ ನಡೆದ ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್ ಎದುರು ಸ್ಟುವರ್ಟ್ ಬ್ರಾಡ್ ಬೌಲಿಂಗ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸುವುದರ ಜತೆಗೆ ಕೇವಲ 12 ಎಸೆತಗಳಲ್ಲಿ ಫಿಫ್ಟಿ ಬಾರಿಸಿದ್ದರು. ಆದರೆ ಇದೀಗ ದಿಲಿಪ್ ಸಿಂಗ್ ಐರೆ ಕೇವಲ 9 ಎಸೆತಗಳಲ್ಲಿ ಫಿಫ್ಟಿ ಸಿಡಿಸಿದ್ದಾರೆ. ಕೇವಲ 10 ಎಸೆತಗಳನ್ನು ಎದುರಿಸಿದ ಐರೆ 520ರ ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 52 ರನ್ ಬಾರಿಸಿ ಹೊಸ ಮೈಲಿಗಲ್ಲು ನಿರ್ಮಿಸಿದ್ದಾರೆ.
'ಕ್ರಿಕೆಟ್ ದೇವತೆ' ಸ್ಮೃತಿ ಮಂಧನಾ ನೋಡಲು ಬೀಜಿಂಗ್‌ನಿಂದ ಹಾಂಗ್ಝೂಗೆ ಬಂದ ಚೀನಿ ಅಭಿಮಾನಿ..!
ಇನ್ನು ನೇಪಾಳದ ಕುಶಾಲ್ ಮಲ್ಲ ಕೇವಲ 34 ಎಸೆತಗಳಲ್ಲಿ ಸಿಡಿಲಬ್ಬರದ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ್ದ ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಹೆಸರಿನಲ್ಲಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ. ಈ ಮೊದಲು ರೋಹಿತ್ ಶರ್ಮಾ ಹಾಗೂ ಡೇವಿಡ್ ಮಿಲ್ಲರ್ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಇದೀಗ ಕುಸಾಲ್ ಮಲ್ಲ ಕೇವಲ 50 ಎಸೆತಗಳನ್ನು ಎದುರಿಸಿ 8 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 137 ರನ್ ಸಿಡಿಸಿದರು.
ನೇಪಾಳಗೆ 273 ರನ್ ಜಯ:
ಮೊದಲು ಬ್ಯಾಟ್ ಮಾಡಿ 314 ರನ್ ಕಲೆಹಾಕಿದ ನೇಪಾಳ ತಂಡವು, ಇದಾದ ಬಳಿಕ ಮಂಗೋಲಿಯಾ ತಂಡವನ್ನು ಕೇವಲ 41 ರನ್‌ಗಳಿಗೆ ಆಲೌಟ್ ಮಾಡುವ ಮೂಲಕ 273 ರನ್ ಅಂತರದ ದಾಖಲೆಯ ಜಯ ಸಾಧಿಸಿದೆ. ಋತುರಾಜ್ ಗಾಯಕ್ವಾಡ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಅಕ್ಟೋಬರ್ 03ರಂದು ನೇರವಾಗಿ ಕ್ವಾರ್ಟರ್ ಫೈನಲ್ ಪಂದ್ಯವನ್ನಾಡಲಿದೆ. ಫೈನಲ್ ಪಂದ್ಯವು ಅಕ್ಟೋಬರ್ 07ರಂದು ನಡೆಯಲಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.