ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ಸೋಲಿಗೆ ಇಲ್ಲಿದೆ ಮೂರು ಮೇಜರ್ ಕಾರಣ!

Published : Apr 11, 2025, 01:24 PM ISTUpdated : Apr 11, 2025, 01:34 PM IST
ಡೆಲ್ಲಿ ಕ್ಯಾಪಿಟಲ್ಸ್ ಎದುರು ಆರ್‌ಸಿಬಿ ಸೋಲಿಗೆ ಇಲ್ಲಿದೆ ಮೂರು ಮೇಜರ್ ಕಾರಣ!

ಸಾರಾಂಶ

ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತೊಂದು ಸೋಲು ಕಂಡಿದೆ. ಬ್ಯಾಟಿಂಗ್ ವೈಫಲ್ಯ, ಫೀಲ್ಡಿಂಗ್ ತಪ್ಪುಗಳು ಸೋಲಿಗೆ ಕಾರಣ. ಫಿಲ್ ಸಾಲ್ಟ್ ರನೌಟ್ ಮತ್ತು ಮಧ್ಯಮ ಕ್ರಮಾಂಕದ ವೈಫಲ್ಯ ತಂಡಕ್ಕೆ ಹೊಡೆತ ನೀಡಿತು.

ಬೆಂಗಳೂರು: 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಜತ್ ಪಾಟೀದಾರ್ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಎರಡನೇ ಸೋಲು ಅನುಭವಿಸಿದೆ. ತವರಿನಾಚೆ ಮೂರು ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿದ್ದ ಆರ್‌ಸಿಬಿ ತಂಡವು, ಇದೀಗ ತವರಿನಲ್ಲೇ ಎರಡನೇ ಸೋಲು ಅನುಭವಿಸಿದೆ. ಬ್ಯಾಟಿಂಗ್‌ ವೈಫಲ್ಯ ಹಾಗೂ ಕ್ಷೇತ್ರರಕ್ಷಣೆಯಲ್ಲಿ ವೈಫಲ್ಯ ಅನುಭವಿಸಿದ್ದು ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣ ಎನಿಸಿಕೊಂಡಿತು. 

ಇಲ್ಲಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಆರ್‌ಸಿಬಿ ಸ್ಪೋಟಕ ಆರಂಭ ಪಡೆಯಿತಾದರೂ, ಮಧ್ಯಮ ಕ್ರಮಾಂಕದಲ್ಲಿ ದಿಢೀರ್ ಕುಸಿತ ಕಂಡಿತು. ಆರ್‌ಸಿಬಿ ಪರ ಫಿಲ್ ಸಾಲ್ಟ್ ಹಾಗೂ ಟಿಮ್ ಡೇವಿಡ್ ತಲಾ 37 ರನ್ ಗಳಿಸಿದ್ದು ಬಿಟ್ಟರೇ, ಉಳಿದ್ಯಾವ ಬ್ಯಾಟರ್‌ಗಳು 30+ ರನ್ ದಾಖಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ಆರ್‌ಸಿಬಿ ತಂಡವು 7 ವಿಕೆಟ್ ಕಳೆದುಕೊಂಡು 163 ರನ್ ಕಲೆಹಾಕಿತು.

ಜಿಲೇಬಿ ಜೊತೆ ಫ್ಯಾನ್ಸ್‌ಗೆ ಸಿಹಿಯಾದ ಕನ್ನಡ ಕಲಿಸಲು ಆರಂಭಿಸಿದ ಆರ್‌ಸಿಬಿ!

ಇನ್ನು ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ ಕ್ಯಾಪಿಟಲ್ಸ್ ಆರಂಭಿಕ ವೈಫಲ್ಯ ಅನುಭವಿಸಿತಾದರೂ, ಕೆ ಎಲ್ ರಾಹುಲ್, ಅಕ್ಷರ್ ಪಟೇಲ್ ಹಾಗೂ ಟ್ರಿಸ್ಟಿನ್ ಸ್ಟಬ್ಸ್ ಸಮಯೋಚಿತ ಬ್ಯಾಟಿಂಗ್ ನಡೆಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಯಾವುದೇ ಅಪಾಯವಿಲ್ಲದೇ ಗೆಲುವಿನ ದಡ ಸೇರಿಸಿದರು.ಡೆಲ್ಲಿ ಟೂರ್ನಿಯಲ್ಲಿ 4ನೇ ಗೆಲುವು ಸಾಧಿಸಿದರೆ, ಆರ್‌ಸಿಬಿ ತವರಿನಲ್ಲಿ ಎರಡನೇ ಸೋಲು ಕಂಡಿತು. ಅಷ್ಟಕ್ಕೂ ಈ ಪಂದ್ಯದಲ್ಲಿ ಆರ್‌ಸಿಬಿ ಸೋಲಿಗೆ ಕಾರಣವಾಗಿದ್ದೇನು ನೋಡೋಣ ಬನ್ನಿ.

1. ಫಿಲ್ ಸಾಲ್ಟ್ ರನೌಟ್:
ಟಾಸ್ ಸೋತ ಆರ್‌ಸಿಬಿ ತಂಡಕ್ಕೆ ಫಿಲ್ ಸಾಲ್ಟ್ ಸಿಡಿಲಬ್ಬರದ ಆರಂಭ ಒದಗಿಸಿಕೊಟ್ಟರು. ಮೊದಲ ಮೂರು ಓವರ್‌ನಲ್ಲೇ ಆರ್‌ಸಿಬಿ ತಂಡವು 53 ರನ್ ಕಲೆಹಾಕಿತು. ಇದರಲ್ಲಿ ಫಿಲ್ ಸಾಲ್ಟ್ ಅವರದ್ದೇ ಸಿಂಹಪಾಲು ಇತ್ತು.  ಫಿಲ್ ಸಾಲ್ಟ್ ಕೇವಲ 17 ಎಸೆತಗಳನ್ನು ಎದುರಿಸಿ 4 ಬೌಂಡರಿ ಹಾಗೂ ಮೂರು ಮುಗಿಲೆತ್ತರದ ಸಿಕ್ಸರ್‌ಗಳ ನೆರವಿನಿಂದ 37 ರನ್ ಸಿಡಿಸಿದ್ದರು. ಆದರೆ ಮಹತ್ವದ ಘಟ್ಟದಲ್ಲಿ ರನೌಟ್ ಆಗಿದ್ದು, ಆರ್‌ಸಿಬಿಗೆ ಬಲವಾದ ಪೆಟ್ಟು ಬೀಳುವಂತೆ ಮಾಡಿತು.

ನಾನು ಎಂದೆಂದಿಗೂ ಧೋನಿ ಅಭಿಮಾನಿ! ಟ್ರೋಲ್ ಮಾಡಿದವರಿಗೆ ರಾಯುಡು ತಿರುಗೇಟು!

2. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ವೈಫಲ್ಯ:
ಆರ್‌ಸಿಬಿ ತಂಡವು ಸ್ಪೋಟಕ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಹಿನ್ನಡೆ ಅನುಭವಿಸಿದ್ದು ಕೂಡಾ ಆರ್‌ಸಿಬಿ ಸೋಲಿಗೆ ಕಾರಣ ಎನಿಸಿಕೊಂಡಿತು. ದೇವದತ್ ಪಡಿಕ್ಕಲ್ 8 ಎಸೆತಗಳನ್ನು ಎದುರಿಸಿ ಒಂದು ಗಳಿಸಿದರೆ, ಲಿವಿಂಗ್‌ಸ್ಟೋನ್ 4 ಹಾಗೂ ಜಿತೇಶ್ ಶರ್ಮಾ 3 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇನ್ನು ನಾಯಕ ಪಾಟೀದಾರ್ ಕೂಡಾ ದೊಡ್ಡ ಇನ್ನಿಂಗ್ಸ್ ಆಡಲು ವಿಫಲವಾದರು. ಹೀಗಾಗಿ ಆರ್‌ಸಿಬಿ 200+ ರನ್ ದಾಖಲಿಸುವ ಆಸೆಗೆ ಬ್ರೇಕ್ ಬಿದ್ದಿತು.

3. ಕ್ಯಾಚ್ ಡ್ರಾಪ್, ಮ್ಯಾಚ್ ಡ್ರಾಪ್:
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಡೆಲ್ಲಿ 30 ರನ್ ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ಆರಂಭಿಕ ಒತ್ತಡಕ್ಕೆ ಒಳಗಾಗಿತ್ತು. ಈ ಸಂದರ್ಭದಲ್ಲೇ ಯಶ್ ದಯಾಳ್ ಬೌಲಿಂಗ್‌ನಲ್ಲಿ ಕೆ ಎಲ್ ರಾಹುಲ್ ದೊಡ್ಡ ಹೊಡೆತಕ್ಕೆ ಯತ್ನಿಸಿದರು. ಎಕ್ಸ್‌ಟ್ರಾ ಕವರ್‌ನಲ್ಲಿದ್ದ ನಾಯಕ ರಜತ್ ಪಾಟೀದಾರ್, ಈ ಕ್ಯಾಚ್ ಕೈಚೆಲ್ಲಿದರು. ಆಗ ರಾಹುಲ್ ಕೇವಲ 5 ರನ್ ಗಳಿಸಿದರು. ತಮಗೆ ಸಿಕ್ಕ ಜೀವದಾನವನ್ನು ಎರಡೂ ಕೈಗಳಿಂದ ಬಾಚಿಕೊಂಡ ರಾಹುಲ್, ಅಂತಿಮವಾಗಿ 53 ಎಸೆತಗಳನ್ನು ಎದುರಿಸಿ 7 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 93 ರನ್ ಬಾರಿಸುವ ಮೂಲಕ ಆರ್‌ಸಿಬಿ ಸೋಲಿಗೆ ಪ್ರಮುಖ ಕಾರಣರಾದರು.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಐಸಿಸಿ ಟಿ20 ವಿಶ್ವಕಪ್‌ಗೂ ಮುನ್ನ ಆಸೀಸ್‌, ಆಫ್ಘನ್‌ಗೆ ಟಿ20 ಪಂದ್ಯಗಳೇ ಇಲ್ಲ! ಯಾಕೆ?
ಭಾರತ-ದಕ್ಷಿಣ ಆಫ್ರಿಕಾ 2ನೇ ಟಿ20: ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಟೀಂ ಇಂಡಿಯಾ!