ರೋ-ಕೊ, ರಾಹುಲ್, ಭುವಿ ಸೇರಿ 2027ರ ವಿಶ್ವಕಪ್ ಗೆಲ್ಲುವ ತಂಡದ ಆಯ್ಕೆಗೆ ರವಿಶಾಸ್ತ್ರಿ ಚೀಫ್ ಸೆಲೆಕ್ಟರ್ ಆಗಬೇಕು-ಚೋಪ್ರ!

Published : Aug 04, 2026, 04:15 PM IST
Team India Ravi Shastri

ಸಾರಾಂಶ

2027ರ ಏಕದಿನ ವಿಶ್ವಕಪ್‌ಗಾಗಿ ರವಿ ಶಾಸ್ತ್ರಿ ಆಯ್ಕೆ ಮಾಡಿದ ಸಂಭಾವ್ಯ ತಂಡವನ್ನು ವಿಶ್ಲೇಷಿಸಿದ ಆಕಾಶ್ ಚೋಪ್ರ, ಕೆಲವು ಆಟಗಾರರ ಆಯ್ಕೆಯನ್ನು ಪ್ರಶ್ನಿಸಿದ್ದಾರೆ. ಶಾಸ್ತ್ರಿ ಅವರ ತಂಡಕ್ಕೆ 10ಕ್ಕೆ 8 ಅಂಕ ನೀಡಿದರೂ, ತಂಡದಲ್ಲಿ ಎಡಗೈ ವೇಗದ ಬೌಲರ್ ಇಲ್ಲದಿರುವ ಕೊರತೆಯನ್ನು ಎತ್ತಿ ತೋರಿಸಿದ್ದಾರೆ.

ಮುಂದಿನ ವರ್ಷ ದಕ್ಷಿಣ ಆಫ್ರಿಕಾ, ಜಿಂಬಾಬ್ವೆ ಮತ್ತು ನಮೀಬಿಯಾದಲ್ಲಿ ನಡೆಯಲಿರುವ 2027ರ ಏಕದಿನ ವಿಶ್ವಕಪ್‌ಗಾಗಿ, ಭಾರತ ತಂಡದ ಮಾಜಿ ಕೋಚ್ ರವಿ ಶಾಸ್ತ್ರಿ 15 ಸದಸ್ಯರ ಸಂಭಾವ್ಯ ತಂಡವೊಂದನ್ನು ಆಯ್ಕೆ ಮಾಡಿದ್ದಾರೆ. ಈ ತಂಡದ ಬಗ್ಗೆ ಮಾಜಿ ಆರಂಭಿಕ ಆಟಗಾರ ಆಕಾಶ್ ಚೋಪ್ರ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಶಾಸ್ತ್ರಿ ಅವರ ತಂಡ ಚೆನ್ನಾಗಿದ್ದರೂ, ವಾಸ್ತವದಲ್ಲಿ ಇಂತಹ ತಂಡವನ್ನು ಆಯ್ಕೆ ಮಾಡುವ ಸಾಧ್ಯತೆಯೇ ಇಲ್ಲ ಎಂದು ಚೋಪ್ರ ನೇರವಾಗಿ ಹೇಳಿದ್ದಾರೆ. ಆದರೂ, ಶಾಸ್ತ್ರಿ ಅವರ ಆಯ್ಕೆಗೆ 10ಕ್ಕೆ 8 ಅಂಕಗಳನ್ನು ನೀಡಿದ್ದಾರೆ.

ಆರ್‌ಸಿಬಿಯ ಸ್ಟಾರ್ ಬ್ಯಾಟರ್ ಮತ್ತು ಬೌಲರ್ ಆಯ್ಕೆ

ಶುಭಮನ್ ಗಿಲ್ ನಾಯಕತ್ವದ ಈ ತಂಡದಲ್ಲಿ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಯಶಸ್ವಿ ಜೈಸ್ವಾಲ್, ಕೆ.ಎಲ್. ರಾಹುಲ್, ರಿಷಭ್ ಪಂತ್, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್ ಮತ್ತು ಕುಲ್ದೀಪ್ ಯಾದವ್ ಅವರನ್ನು ಶಾಸ್ತ್ರಿ ಆಯ್ಕೆ ಮಾಡಿದ್ದರು. ಇದರಲ್ಲಿ ಆರ್‌ಸಿಬಿಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ಸ್ಟಾರ್ ಬೌಲರ್ ಸ್ವಿಂಗ್ ಸ್ಪೆಷಲಿಸ್ಟ್ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.

ಜೈಸ್ವಾಲ್ ಆಯ್ಕೆಗೆ ಸಮ್ಮತಿಸದ ಚೋಪ್ರಾ

ಆದರೆ, ಓಪನಿಂಗ್‌ಗೆ ಈಗಾಗಲೇ ಸಾಕಷ್ಟು ಆಯ್ಕೆಗಳಿರುವಾಗ ಯಶಸ್ವಿ ಜೈಸ್ವಾಲ್ ಅವರನ್ನು ತಂಡಕ್ಕೆ ಸೇರಿಸಿದ್ದು ತಮಗೆ ಆಶ್ಚರ್ಯ ತಂದಿದೆ ಎಂದು ಆಕಾಶ್ ಚೋಪ್ರ ಹೇಳಿದ್ದಾರೆ. ಏಕದಿನ ಪಂದ್ಯಗಳಲ್ಲಿ ಜೈಸ್ವಾಲ್ ಎರಡು ಶತಕ ಬಾರಿಸಿರುವುದು ನಿಜ. ಆದರೆ, ರಿಷಭ್ ಪಂತ್ ಆಯ್ಕೆಯನ್ನು ರವಿ ಶಾಸ್ತ್ರಿ ಹೇಗೆ ಸಮರ್ಥಿಸಿಕೊಳ್ಳುತ್ತಾರೆ? ಎಂದು ಚೋಪ್ರ ಪ್ರಶ್ನಿಸಿದ್ದಾರೆ. ಸತತವಾಗಿ ಏಕದಿನ ತಂಡದಿಂದ ಹೊರಗಿರುವ ಪಂತ್, ವಿಶ್ವಕಪ್ ಹತ್ತಿರ ಬಂದಾಗ ದಿಢೀರ್ ಅಂತ ತಂಡಕ್ಕೆ ವಾಪಸ್ ಬರುತ್ತಾರಾ ಎಂಬುದು ಅನುಮಾನ. ಸದ್ಯಕ್ಕೆ ಇಶಾನ್ ಕಿಶನ್ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂಬುದನ್ನು ಚೋಪ್ರ ನೆನಪಿಸಿದ್ದಾರೆ.

ಒಬ್ಬನೇ ಒಬ್ಬ ಎಡಗೈ ಬೌಲರ್ ಇಲ್ಲ

ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಅವರಂತಹ ಎಡಗೈ ಸ್ಪಿನ್ ಆಲ್‌ರೌಂಡರ್‌ಗಳ ಜೊತೆ ಹಾರ್ದಿಕ್ ಪಾಂಡ್ಯರನ್ನು ಸೇರಿಸಿದ್ದು ಸರಿಯಾದ ನಿರ್ಧಾರ. ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್‌ಗಿಂತ ಅನುಭವಕ್ಕೆ ಮಣೆ ಹಾಕಿರುವುದು ಸಹಜ. ಬುಮ್ರಾ, ಸಿರಾಜ್, ಕುಲ್ದೀಪ್ ಸಹಜ ಆಯ್ಕೆಗಳು. ಆದರೆ, ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ತಂಡಕ್ಕೆ ಕರೆತಂದಿದ್ದು ಆಶ್ಚರ್ಯಕರ ಆಯ್ಕೆ. ಇನ್ನು ತಂಡದಲ್ಲಿ ಒಬ್ಬೇ ಒಬ್ಬ ಎಡಗೈ ವೇಗದ ಬೌಲರ್ ಇಲ್ಲದಿರುವುದು ದೊಡ್ಡ ಕೊರತೆ ಎಂದು ಚೋಪ್ರ ವಿಶ್ಲೇಷಿಸಿದ್ದಾರೆ.

ಸದ್ಯದ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ಅವರ ಅವಧಿ ಶೀಘ್ರದಲ್ಲೇ ಮುಗಿಯಲಿದ್ದು, ಬಿಸಿಸಿಐನ ಮುಂದಿನ ಚೀಫ್ ಸೆಲೆಕ್ಟರ್ ಆಗಿ ರವಿ ಶಾಸ್ತ್ರಿ ಬರಬಹುದು ಎಂಬ ಮಾತುಗಳು ಕ್ರಿಕೆಟ್ ವಲಯದಲ್ಲಿ ಹರಿದಾಡುತ್ತಿವೆ. 'ರವಿ ಶಾಸ್ತ್ರಿ ಅವರೇ ಸ್ವತಃ ಸೆಲೆಕ್ಟರ್ ಆದರೆ ಮಾತ್ರ ಇಂತಹ ತಂಡವನ್ನು ಆಯ್ಕೆ ಮಾಡಲು ಸಾಧ್ಯ. ಏನೇ ಆದರೂ, ಆಯ್ಕೆಗಳು ಕುತೂಹಲಕಾರಿಯಾಗಿರುವುದರಿಂದ 10ಕ್ಕೆ 8 ರೇಟಿಂಗ್ ಕೊಡುತ್ತೇನೆ' ಎಂದು ಹೇಳಿ ಚೋಪ್ರ ತಮ್ಮ ವಿಶ್ಲೇಷಣೆಯನ್ನು ಮುಗಿಸಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ರೋಹಿತ್, ವಿರಾಟ್, ಧೋನಿ ಅಲ್ಲ! ಭಾರತದ ಅತ್ಯಂತ ವಿದ್ಯಾವಂತ ಕ್ರಿಕೆಟಿಗ ಯಾರು ಗೊತ್ತಾ?
ಮೊಹಮ್ಮದ್ ಶಮಿ ಕೆರಿಯರ್ ಕ್ಲೋಸ್.. ಅಗರ್ಕರ್ ಕೊಟ್ಟ ಪರೋಕ್ಷ ಸಂದೇಶದ ಹಿಂದಿದೆ ದೊಡ್ಡ ರಹಸ್ಯ