ಆತಿಥೇಯ ಟೀಂ ಇಂಡಿಯಾ ಚೆನ್ನೈನಲ್ಲಿಂದು ಇಂಗ್ಲೆಂಡ್ ಟೆಸ್ಟ್ ಸವಾಲನ್ನು ಎದುರಿಸಲಿದೆ. ವರ್ಷದ ಬಳಿಕ ಭಾರತದಲ್ಲಿ ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ಆರಂಭವಾಗುತ್ತಿದ್ದು, ವೇಗಿ ಜಸ್ಪ್ರೀತ್ ಬುಮ್ರಾ ತವರಿನಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಲು ಸಜ್ಜಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಫೆ.05): ಬಹುನಿರೀಕ್ಷಿತ ಭಾರತ ಹಾಗೂ ಇಂಗ್ಲೆಂಡ್ ನಡುವಿನ 4 ಪಂದ್ಯಗಳ ಟೆಸ್ಟ್ ಸರಣಿಗೆ ಶುಕ್ರವಾರ ಚಾಲನೆ ಸಿಗಲಿದೆ. ಇಲ್ಲಿನ ಚೆಪಾಕ್ ಕ್ರೀಡಾಂಗಣ ಮೊದಲ ಟೆಸ್ಟ್‌ಗೆ ಆತಿಥ್ಯ ವಹಿಸಲು ಸಜ್ಜಾಗಿದ್ದು, ಆಸ್ಪ್ರೇಲಿಯಾದಲ್ಲಿ ಐತಿಹಾಸಿಕ ಟೆಸ್ಟ್ ಸರಣಿ ಗೆದ್ದು ಸಂಭ್ರಮಿಸಿದ್ದ ಭಾರತ ತನ್ನ ಗೆಲುವಿನ ಓಟ ಮುಂದುವರಿಸಲು ಕಾತರಿಸುತ್ತಿದೆ. ಶ್ರೀಲಂಕಾದಲ್ಲಿ 2 ಪಂದ್ಯಗಳ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿ, ಭಾರತೀಯ ಉಪಖಂಡದ ವಾತಾವರಣಕ್ಕೆ ಒಗ್ಗಿಕೊಂಡಿರುವ ಇಂಗ್ಲೆಂಡ್ ಕಠಿಣ ಸ್ಪರ್ಧೆಯೊಡ್ಡಲು ಸಿದ್ಧವಾಗಿದೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸ್ಥಾನ ಪಡೆಯಲು ಎರಡೂ ತಂಡಗಳಿಗೆ ಈ ಸರಣಿ ಮಹತ್ವದ್ದೆನಿಸಿದೆ. ಭಾರತ ಕನಿಷ್ಠ 2 ಪಂದ್ಯಗಳನ್ನು ಗೆದ್ದು, ಗರಿಷ್ಠ 1ರಲ್ಲಿ ಸೋಲಬಹುದಷ್ಟೇ. ಇಂಗ್ಲೆಂಡ್ ಕನಿಷ್ಠ 3 ಪಂದ್ಯಗಳನ್ನು ಗೆಲ್ಲಲೇಬೇಕು.
undefined
ಮೂವರು ಸ್ಪಿನ್ನರ್ಸ್ ಕಣಕ್ಕೆ?: ಮೊದಲ ಟೆಸ್ಟ್‌ಗೆ ಭಾರತ ತಂಡ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕಿಳಿಸುವುದು ಬಹುತೇಕ ಖಚಿತವೆನಿಸಿದೆ. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಯಕ ವಿರಾಟ್ ಕೊಹ್ಲಿ, ಈ ಬಗ್ಗೆ ಸುಳಿವು ನೀಡಿದರು. ರೋಹಿತ್ ಶರ್ಮಾ, ಶುಭ್‌ಮನ್ ಗಿಲ್‌ಗೆ ಹೆಚ್ಚಿನ ಅವಕಾಶ ಸಿಗಲಿದೆ ಎಂದ ಕೊಹ್ಲಿ, ರಿಷಭ್ ಪಂತ್ ವಿಕೆಟ್ ಕೀಪರ್ ಆಗಿ ಆಡಲಿದ್ದಾರೆ ಎಂದು ಖಚಿತಪಡಿಸಿದರು. ಕುಲ್ದೀಪ್ ಯಾದವ್‌ಗೆ ಅವಕಾಶ ಸಿಗಲಿದೆ ಎಂದಿರುವ ವಿರಾಟ್, ಆಲ್ರೌಂಡರ್‌ಗಳಿಗೆ ಪ್ರಾಮುಖ್ಯತೆ ನೀಡುವುದಾಗಿ ತಿಳಿಸಿದ್ದಾರೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಹಾಗೂ ಅಕ್ಷರ್ ಪಟೇಲ್ ನಡುವೆ ಪೈಪೋಟಿ ಇದೆ. ಪೂಜಾರ, ಕೊಹ್ಲಿ, ರಹಾನೆ ಮಧ್ಯಮ ಕ್ರಮಾಂಕದ ಬಲ ಹೆಚ್ಚಿಸಲಿದ್ದಾರೆ. ಜಸ್‌ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ವೇಗದ ಬೌಲಿಂಗ್ ಹೊಣೆ ಹೊರಲಿದ್ದಾರೆ.
ತವರಿನಲ್ಲಿ ಮತ್ತೊಂದು ಜಯಕ್ಕೆ ಟೀಂ ಇಂಡಿಯಾ ಕಾತರ..!
ಇಂಗ್ಲೆಂಡ್‌ಗೆ ರೂಟ್, ಬಟ್ಲರ್ ಬಲ: ಭಾರತದ ಸ್ಪಿನ್ ದಾಳಿಯನ್ನು ಸಮರ್ಥವಾಗಿ ಎದುರಿಸಲು ಇಂಗ್ಲೆಂಡ್ ತನ್ನ ಅನುಭವಿ ಬ್ಯಾಟ್ಸ್‌ಮನ್‌ಗಳಾದ ಜೋ ರೂಟ್, ಜೋಸ್ ಬಟ್ಲರ್ ಹಾಗೂ ಬೆನ್ ಸ್ಟೋಕ್ಸ್ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಮೋಯಿನ್ ಅಲಿ ಸಹ ಭಾರತೀಯರನ್ನು ಕಾಡಬಹುದು. ಆದರೆ ಈ ನಾಲ್ವರನ್ನು ಹೊರತುಪಡಿಸಿ ಉಳಿದ ಆಟಗಾರರಿಗೆ ಭಾರತದಲ್ಲಿ ಆಡಿದ ಅನುಭವ ಕಡಿಮೆ. ಜೇಮ್ಸ್ ಆ್ಯಂಡರ್‌ಸನ್ ಇಲ್ಲವೇ ಸುವರ್ಟ್ ಬ್ರಾಡ್, ಜೋಫ್ರಾ ಆರ್ಚರ್ ವೇಗಿಗಳಾಗಿ ಆಡಲಿದ್ದಾರೆ. ಜ್ಯಾಕ್ ಲೀಚ್ ಹಾಗೂ ಡೊಮಿನಿಕ್ ಬೆಸ್ ಸ್ಪಿನ್ ಆಯ್ಕೆಗಳಾಗಿದ್ದು, ಇಬ್ಬರೂ ಮೊದಲ ಬಾರಿಗೆ ಭಾರತದಲ್ಲಿ ಆಡಲಿದ್ದಾರೆ. ಹೀಗಾಗಿ ಹಿರಿಯ ಆಟಗಾರರ ಮೇಲೆ ಹೆಚ್ಚಿನ ಒತ್ತಡವಿದೆ.
ವರ್ಷದ ಬಳಿಕ ಭಾರತದಲ್ಲಿ ಅಂ.ರಾ.ಕ್ರಿಕೆಟ್
ಚೆನ್ನೈ: ಬರೋಬ್ಬರಿ ಒಂದು ವರ್ಷದ ಬಳಿಕ ಭಾರತದಲ್ಲಿ ಶುಕ್ರವಾರದಿಂದ ಅಂತಾರಾಷ್ಟ್ರೀಯ ಕ್ರಿಕೆಟ್ ಆರಂಭಗೊಳ್ಳಲಿದೆ. 2020ರ ಜ.19ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಭಾರತ-ಆಸ್ಪ್ರೇಲಿಯಾ ನಡುವಿನ ಏಕದಿನ ಪಂದ್ಯವೇ ಕೊನೆ, ಆ ಬಳಿಕ ಕೊರೋನಾದಿಂದಾಗಿ ಭಾರತದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯ ನಡೆದಿರಲಿಲ್ಲ. ಇನ್ನು, ತವರಿನಲ್ಲಿ ಭಾರತ 14 ತಿಂಗಳ ಬಳಿಕ ಟೆಸ್ಟ್ ಪಂದ್ಯವನ್ನು ಆಡಲಿದೆ. 2019ರ ನವೆಂಬರ್‌ನಲ್ಲಿ ಕೋಲ್ಕತಾದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಹಗಲು-ರಾತ್ರಿ ಪಂದ್ಯದ ಬಳಿಕ ಭಾರತ ತವರಿನಲ್ಲಿ ಟೆಸ್ಟ್ ಆಡಿಲ್ಲ.
ತವರಲ್ಲಿ ಬುಮ್ರಾಗೆ ಮೊದಲ ಟೆಸ್ಟ್!
ಭಾರತದ ಮುಂಚೂಣಿ ವೇಗಿ ಜಸ್ಪ್ರೀತ್ ಬುಮ್ರಾ ತವರಿನಲ್ಲಿ ಮೊದಲ ಟೆಸ್ಟ್ ಆಡಲು ಸಜ್ಜಾಗಿದ್ದಾರೆ. 2018ರಲ್ಲಿ ದ.ಆಫ್ರಿಕಾದಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಬುಮ್ರಾ, ಈ ವರೆಗೂ ಆಡಿರುವ ಎಲ್ಲಾ 17 ಟೆಸ್ಟ್‌ಗಳನ್ನು ವಿದೇಶಿ ನೆಲದಲ್ಲೇ ಆಡಿದ್ದಾರೆ. 79 ವಿಕೆಟ್‌ಗಳನ್ನು ಕಬಳಿಸಿದ್ದಾರೆ.
ಸಂಭವನೀಯ ಆಟಗಾರರ ಪಟ್ಟಿ
ಭಾರತ: ರೋಹಿತ್ ಶರ್ಮಾ, ಶುಭ್‌ಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ(ನಾಯಕ), ಅಜಿಂಕ್ಯ ರಹಾನೆ, ರಿಷಭ್ ಪಂತ್, ಆರ್.ಅಶ್ವಿನ್, ವಾಷಿಂಗ್ಟನ್/ಅಕ್ಷರ್, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ, ಜಸ್‌ಪ್ರೀತ್ ಬುಮ್ರಾ.
ಇಂಗ್ಲೆಂಡ್: ರೋರಿ ಬನ್ಸ್‌ರ್, ಡೊಮ್ ಸಿಬ್ಲಿ, ಡೇನಿಯಲ್ ಲಾರೆನ್ಸ್, ಜೋ ರೂಟ್(ನಾಯಕ), ಬೆನ್ ಸ್ಟೋಕ್ಸ್, ಓಲಿ ಪೋಪ್, ಜೋಸ್ ಬಟ್ಲರ್, ಮೋಯಿನ್ ಅಲಿ, ಜೋಫ್ರಾ ಆರ್ಚರ್, ಜ್ಯಾಕ್ ಲೀಚ್, ಬ್ರಾಡ್/ಆ್ಯಂಡರ್‌ಸನ್.
ಆರಂಭ: ಬೆಳಗ್ಗೆ 9.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್