ಜಸ್ಪ್ರೀತ್ ಬುಮ್ರಾ ಬೌಲಿಂಗ್ ಶೈಲಿಯನ್ನು ಅನುಸರಿಸಿ ಗಮನ ಸೆಳೆದ 14 ವರ್ಷದ ಛೋಟಾ ಬುಮ್ರಾ
ರಾಜಸ್ಥಾನ ಮೂಲದ ಯುವ ವೇಗಿಯ ಬೌಲಿಂಗ್ ವಿಡಿಯೋ ವೈರಲ್
ದೇಶವನ್ನು ಪ್ರತಿನಿಧಿಸುವ ಮಹದಾಸೆ ಹೊಂದಿರುವ 14ರ ಯುವ ಕ್ರಿಕೆಟಿಗ
ನವದೆಹಲಿ(ಮಾ.18): 2016ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಎಂಟ್ರಿಕೊಟ್ಟ ವೇಗಿ ಜಸ್ಪ್ರೀತ್ ಬುಮ್ರಾ, ತಮ್ಮ ಕರಾರುವಕ್ಕಾದ ದಾಳಿಯ ಮೂಲಕ ಎದುರಾಳಿ ತಂಡದ ಬ್ಯಾಟರ್‌ಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ. ಬುಮ್ರಾ ತಮ್ಮ ವಿನೂತನ ಶೈಲಿ ಬೌಲಿಂಗ್ ಮೂಲಕ ಎಲ್ಲಾ ವಯೋಮಾನದ ಕ್ರಿಕೆಟ್ ಅಭಿಮಾನಿಗಳನ್ನು ಬೆರಗುಗೊಳಿಸಿದ್ದಾರೆ. ಅದೇ ರೀತಿ ಹಲವು ಯುವ ಕ್ರಿಕೆಟಿಗರು ಬುಮ್ರಾ ರೀತಿಯಲ್ಲಿಯೇ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ. ಇದೀಗ ರಾಜಸ್ಥಾನ ಮೂಲದ 14 ವರ್ಷದ ಛೋಟಾ ಬುಮ್ರಾ, ಮರುಗಾಡಿನಲ್ಲಿಯೇ ವಿಕೆಟ್‌ಗೆ ಗುರಿಯಿಟ್ಟು ಬೌಲಿಂಗ್ ಮಾಡಿ ಗಮನ ಸೆಳೆದಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.
ಹೌದು, ಜಸ್ಪ್ರೀತ್ ಬುಮ್ರಾ, ತಮ್ಮ ವಿಚಿತ್ರ ಶೈಲಿಯ ಬೌಲಿಂಗ್ ಮೂಲಕ ಅದು ಹೊಸ ಚೆಂಡೇ ಆಗಿರಲಿ, ಅಥವಾ ಡೆತ್ ಓವರ್‌ಗಳೇ ಆಗಿರಲಿ, ಯಾವುದೇ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ದಾಳಿ ನಡೆಸುವ ಚಾಕಚಕ್ಯತೆ ಅವರಿಗೆ ಒಲಿದಿದೆ. ಜಸ್ಪ್ರೀತ್ ಬುಮ್ರಾ, ಟೀಂ ಇಂಡಿಯಾ ಸೇರ್ಪಡೆ ಬಳಿಕ ಭಾರತ ಕ್ರಿಕೆಟ್ ತಂಡದ ವೇಗದ ಬೌಲಿಂಗ್ ವಿಭಾಗ ಮತ್ತಷ್ಟು ಬಲಿಷ್ಠವಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಇನ್ನು ಜಸ್ಪ್ರೀತ್ ಬುಮ್ರಾಗೆ ನಗರಗಳಲ್ಲಿ ಮಾತ್ರವಲ್ಲ, ಸಣ್ಣಪುಟ್ಟ ಹಳ್ಳಿಗಳಲ್ಲೂ ಅವರಿಗೆ ಅಭಿಮಾನಿಗಳಿದ್ದಾರೆ.
'ಏಕದಿನ ಕ್ರಿಕೆಟ್ ಬೋರ್ ಹೊಡಿಸುತ್ತಿದೆ': ಒನ್‌ಡೇ ಕ್ರಿಕೆಟ್ ಬದಲಾವಣೆಗೆ ಸಚಿನ್ ತೆಂಡುಲ್ಕರ್ ಮಹತ್ವದ ಸಲಹೆ
ಇದೀಗ ರಾಜಸ್ಥಾನದ ಹಳ್ಳಿಯೊಂದರ 14 ವರ್ಷದ ಬಾಲ ಕ್ರಿಕೆಟಿಗನೊಬ್ಬ ಜಸ್ಪ್ರೀತ್ ಬುಮ್ರಾ ರೀತಿಯಲ್ಲಿಯೇ ಬೌಲಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಛೋಟಾ ಬುಮ್ರಾ ಬೌಲಿಂಗ್‌ಗೆ ವಿಕೆಟ್‌ಗಳು ಚೆಲ್ಲಾಪಿಲ್ಲಿಯಾಗಿದ್ದು, ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ.
सोने से चमकते , राजस्थान के इस रेगिस्तान की खान में कई हीरे हैं
उनमें से एक ये जेठाराम है pic.twitter.com/N4TlHjCnes
ಛೋಟಾ ಬುಮ್ರಾನಿಗಿದೆ ದೊಡ್ಡ ದೊಡ್ಡ ಕನಸು:
ಜೇಥ್‌ರಾಮ್ ಹೆಸರಿನ ಈ ಛೋಟಾ ಬುಮ್ರಾ, ರಾಜಸ್ಥಾನದ ಗುಡ್‌ಮಲಾನಿ ಎಂಬ ಚಿಕ್ಕ ಹಳ್ಳಿಯ ನಿವಾಸಿಯಾಗಿದ್ದಾನೆ. ಸುಡುವ ಮರಳಿನ ಮೇಲೆ ಬರಿಗಾಲಿನಲ್ಲಿ ಬುಮ್ರಾ ರೀತಿಯಲ್ಲಿ ಬೌಲಿಂಗ್ ಮಾಡುವ ಜೇಥ್‌ರಾಮ್ ಅವರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದರಲ್ಲಿ ಅಚ್ಚರಿಯೇ ಇಲ್ಲ. ಜೇಥ್‌ರಾಮ್ ಬೌಲಿಂಗ್‌ನಲ್ಲಿ ಮೂರು ವಿಕೆಟ್‌ಗಳನ್ನು ಉರುಳಿಸುವ ರೀತಿ ನೋಡಿದರೆ, ಎಂಥಹವರು ಶಬ್ಬಾಸ್ ಎನ್ನಲೇಬೇಕು.
ನಾಲ್ಕು ವರ್ಷಗಳ ಹಿಂದೆ ತಮ್ಮ ಸಂಬಂಧಿಕರ ಮನೆಯ ಟಿವಿಯಲ್ಲಿ ತಾವು ಮೊದಲ ಬಾರಿಗೆ ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುವುದನ್ನು ನೋಡಿದೆ. ಇದಾದ ಬಳಿಕ ಅವರಂತೆಯೇ ಬೌಲಿಂಗ್ ಮಾಡಲು ಪ್ರಯತ್ನ ಆರಂಭಿಸಿದೆ. ಸಂಬಂಧಿಕರ ಮನೆಯಲ್ಲಿ ಯಾವಾಗಲೂ ಜೇಥ್‌ರಾಮ್ ಕ್ರಿಕೆಟ್ ಬಗ್ಗೆ ಮಾತನಾಡುತ್ತಿರುತ್ತಾರಂತೆ. ಟೀಂ ಇಂಡಿಯಾದ ಹಲವು ಬ್ಯಾಟರ್‌ಗಳು ಹಾಗೂ ಬೌಲರ್‌ಗಳೆಂದರೆ ಜೇಥ್‌ರಾಮ್‌ಗೆ ಅಚ್ಚುಮೆಚ್ಚಂತೆ.
ಜೇಥ್‌ರಾಮ್ ಅವರ ತಂದೆ ಹೇಮರಾಮ್ ಕಳೆದ 20 ವರ್ಷಗಳಿಂದ ಮುಂಬೈನ ಬಟ್ಟೆ ಅಂಗಡಿಯಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದಾರೆ. ಜೇಥ್‌ರಾಮ್ ಸದ್ಯ 9ನೇ ತರಗತಿ ಓದುತ್ತಿದ್ದು, ಶಾಲೆ ಮುಗಿಯುತ್ತಿದ್ದಂತೆಯೇ ಕ್ರಿಕೆಟ್ ಅಭ್ಯಾಸ ನಡೆಸುತ್ತಾ ಬಂದಿದ್ದಾರೆ. ವಿದ್ಯಾಭ್ಯಾಸದ ಜತೆಜತೆಗೆ ಜೇಥ್‌ರಾಮ್ ಬೌಲಿಂಗ್ ಅಭ್ಯಾಸವನ್ನು ನಡೆಸುತ್ತಿದ್ದು, ಮುಂದೊಂದು ದಿನ ಭಾರತಕ್ಕಾಗಿ ಆಡಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದಾರೆ.