ನೋಡಿ! ಕಡಲನಗರಿ ಭವಿಷ್ಯದ ಮೇಲೆ ಕೊರೋನಾ ಕರಿನೆರಳು..

By Kannadaprabha News  |  First Published Mar 24, 2020, 9:41 AM IST

ವಿಮಾನ, ರೈಲು, ಜಲಯಾನ, ಸುವ್ಯವಸ್ಥಿತ ಸಾರಿಗೆ ಸಂಚಾರ ವ್ಯವಸ್ಥೆ ಹೊಂದಿರುವ ಮಂಗಳೂರಿನಲ್ಲಿ ಜನರ ಸಾಂದ್ರತೆ ಹೆಚ್ಚು, ಓಡಾಟವೂ ಹೆಚ್ಚು. ಇದರೊಂದಿಗೆ ವಿದೇಶಗಳಿಗೆ ಓಡಾಟ ನಡೆಸುವವರೂ ಹೆಚ್ಚು. ಇಂಥ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕು ನಗರಕ್ಕೆ ಕಾಲಿಟ್ಟಿದೆ. ಕೇವಲ 50 ಕಿ.ಮೀ. ದೂರದ ಕೇರಳದ ಕಾಸರಗೋಡಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದೆ (20 ದಾಟಿದೆ). ಅತ್ತ ಕೊಡಗಿನಲ್ಲೂ ಸೋಂಕು ಕಂಡುಬಂದಿದೆ. ಇವೆರಡು ಜಿಲ್ಲೆಗಳ ನಡುವೆ ಇರುವ- ಜನಸಾಂದ್ರತೆ ಹೆಚ್ಚಿರುವ ಮಂಗಳೂರಿನಲ್ಲಿ ಜನರ ನಡುವೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೇ ಈಗಿನ ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ.


ಸಂದೀಪ್‌ ವಾಗ್ಲೆ

ಏನೇನಾಯ್ತು?

Tap to resize

Latest Videos

undefined

ವಿಶ್ವದಲ್ಲಿ ಕೊರೋನಾ ಸೋಂಕು ಹರಡುತ್ತಿರುವಾಗಲೇ ಜನವರಿಯಿಂದಲೇ ಮಂಗಳೂರಿನಲ್ಲಿ ನಿಗಾ ಇರಿಸಲಾಗಿತ್ತು. ಏರ್‌ಪೋರ್ಟ್‌, ಬಂದರು, ರೈಲು ನಿಲ್ದಾಣಗಳಲ್ಲಿ ಜನರನ್ನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ದುಬೈ, ಕುವೈಟ್‌, ಕತಾರ್‌, ಸೌದಿ ಅರೇಬಿಯಾದಿಂದ ದಿನವೊಂದಕ್ಕೆ ಏನಿಲ್ಲವೆಂದರೂ 500-600ಕ್ಕೂ ಅಧಿಕ ಮಂದಿ ನಿತ್ಯವೂ ಮಂಗಳೂರಿಗೆ ಬರುತ್ತಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ತಿಂಗಳ ಹಿಂದೆಯೇ ಹೊರದೇಶಗಳ ವಿಲಾಸಿ ಹಡಗುಗಳು ಮಂಗಳೂರಿಗೆ ಇಳಿಯದಂತೆ ನಿರ್ಬಂಧಿಸಲಾಗಿದೆ. ಈಗ ಸೋಮವಾರದಿಂದ ವಿಮಾನಯಾನ ಸೇವೆಯೂ ಸ್ಥಗಿತವಾಗಿದೆ. ರೈಲು ಸಂಚಾರವೂ ಸ್ತಬ್ಧವಾಗಿದೆ. ಆದರೆ ಇದುವರೆಗೆ ಜಿಲ್ಲೆಗೆ ಸಾವಿರಾರು ಮಂದಿ ಆಗಮಿಸಿದ್ದು ಇಲ್ಲೇ ನೆಲೆಸಿದ್ದಾರೆ. ಅವರೆಲ್ಲರಿಂದ ಜನರನ್ನು ದೂರವಿರಿಸುವುದು ಎಷ್ಟರ ಮಟ್ಟಿಗೆ ಸಫಲವಾಗಲಿದೆ ಎನ್ನುವ ಮೇಲೆ ಕೊರೋನಾ ನಿಯಂತ್ರಣ ನಿಂತಿದೆ.

ಪ್ರವಾಸಿಗರ ತಾಣ; ಗರ ಬಡಿದಂತಾಗಿದೆ ಕೊಡಗು!

ಕ್ವಾರಂಟೈನ್‌ನಲ್ಲಿ 2 ಸಾವಿರ ಮಂದಿ

ಇದುವರೆಗೆ ದ.ಕ. ಜಿಲ್ಲೆಯಲ್ಲಿ 37,803 ಜನರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಲಾಗಿದೆ. ಸೋಮವಾರ ಕೊನೆಯ ವಿಮಾನದಲ್ಲಿ ದುಬೈನಿಂದ 109 ಮಂದಿ ಬಂದಿಳಿದಿದ್ದಾರೆ. ಒಟ್ಟು 2139 ಮಂದಿ ವಿದೇಶಗಳಿಂದ ಬಂದು ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ. ಕೊರೋನಾ ಚಿಕಿತ್ಸೆಗಾಗಿಯೇ ಮೀಸಲಿರಿಸಲಾದ ಇಎಸ್‌ಐ ಆಸ್ಪತ್ರೆಯಲ್ಲಿ 27 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ. 5 ಮಂದಿ ಆಸ್ಪತ್ರೆಗಳಿಗೆ ದಾಖಲಾಗಿ ವೈದ್ಯಕೀಯ ನಿಗಾದಲ್ಲಿದ್ದಾರೆ. ಇದುವರೆಗೆ 104 ಶಂಕಿತ ವ್ಯಕ್ತಿಗಳ ಗಂಟಲ ಸ್ರಾವದ ಮಾದರಿ ಕಳುಹಿಸಿಕೊಟ್ಟಿದ್ದರಲ್ಲಿ ಒಂದು ಮಾತ್ರ ಪಾಸಿಟಿವ್‌ ಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಎಲ್ಲ 8 ವೈದ್ಯಕೀಯ ಕಾಲೇಜುಗಳಲ್ಲಿ ತಲಾ 20 ಬೆಡ್‌ಗಳ ಪ್ರತ್ಯೇಕ ವಾರ್ಡ್‌ ಮತ್ತು ಒಂದು ಕ್ರಿಟಿಕಲ್‌ ಯೂನಿಟ್‌ ಮೀಸಲಿರಿಸಬೇಕು ಎನ್ನುವ ಆದೇಶ ಹೊರಡಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿನ ವೆಂಟಿಲೇಟರ್‌ ಬಳಕೆಗೂ ಆಡಳಿತ ನಿರ್ಧರಿಸಿದೆ.

ಸವಾಲುಗಳೇನು?

ಜಿಲ್ಲೆಯಲ್ಲಿ ಪ್ರಸ್ತುತ ಹೋಮ್‌ ಕ್ವಾರಂಟೈನ್‌ನಲ್ಲಿರುವ 2139 ಮಂದಿಯಲ್ಲಿ ಕೆಲವರಿಗೆ ಯಾವ ಸಂದರ್ಭದಲ್ಲೂ ಸೋಂಕು ಕಂಡುಬರುವ ಸಾಧ್ಯತೆ ಇದ್ದೇ ಇದೆ. ಏಕೆಂದರೆ ಇತ್ತೀಚೆಗೆ ಮಂಗಳೂರು ಏರ್‌ಪೋರ್ಟ್‌ ಮೂಲಕ ಆಗಮಿಸಿದ ಕಾಸರಗೋಡು ವ್ಯಕ್ತಿಯಲ್ಲಿ ಸೋಂಕು ದೃಢಪಟ್ಟಿತ್ತು. ನಂತರ ಈಗ ಭಟ್ಕಳದ ವ್ಯಕ್ತಿಗೆ ದೃಢಪಟ್ಟಿದೆ. ಇವರ ಸಂಪರ್ಕಕ್ಕೆ ಬಂದಿರುವವರೂ ಹೋಮ್‌ ಕ್ವಾರಂಟೈನ್‌ನಲ್ಲಿದ್ದಾರೆ. ಅವರು ಮನೆಯಿಂದ ಹೊರಬಾರದಂತೆ ಸೂಚನೆ ನೀಡಲಾಗಿದ್ದರೂ ಅನೇಕರು ಹೊರಗೆ ಬಂದು ಜನರೊಂದಿಗೆ ಬೆರೆಯುತ್ತ ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ. ಇದರಿಂದ ಇತರರೂ ಸೋಂಕಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ಜಿಲ್ಲಾಡಳಿತ ತೀವ್ರ ನಿಗಾ ವಹಿಸಿ ಪ್ರತಿಯೊಬ್ಬರನ್ನು ನಿತ್ಯವೂ ಸಂಪರ್ಕಿಸುತ್ತಿದ್ದರೂ ಕ್ವಾರಂಟೈನ್‌ನಲ್ಲಿರುವವರ ಸಂಖ್ಯೆ ದೊಡ್ಡದಿರುವುದರಿಂದ ಎಲ್ಲರ ಚಲನವಲನಗಳ ಮೇಲೆ ನಿಗಾ ವಹಿಸುವುದು ಅಸಾಧ್ಯವಾಗಿದೆ. ಹೀಗಾಗಿ ಯಾವುದೇ ಸಂದರ್ಭದಲ್ಲೂ ಸೋಂಕು ತೀವ್ರಗತಿಯಲ್ಲಿ ಹರಡುವ ಎಲ್ಲ ಅಪಾಯಗಳು ದಟ್ಟವಾಗಿವೆ.

ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!

ಕೇಸ್‌ ಎಚ್ಚರಿಕೆ ಪಾಲಿಸ್ತಾರಾ ಜನ?

ಇತ್ತ ಜನತಾ ಕಫ್ಯೂ ಸಂಪೂರ್ಣ ಸಹಕಾರ ನೀಡಿದ ಮಂಗಳೂರಿನ ಜನತೆ ಸೋಮವಾರ ಲಾಕ್‌ಡೌನ್‌ ಇದ್ದರೂ ಗುಂಪು ಗುಂಪಾಗಿ ನಗರದಲ್ಲಿ ಸಂಚರಿಸುತ್ತಿದ್ದರು. ಮಾರುಕಟ್ಟೆಗಳು ಕಿಕ್ಕಿರಿದ್ದವು. ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇದರ ಬೆನ್ನಲ್ಲೇ ಅನವಶ್ಯಕವಾಗಿ ಮನೆಯಿಂದ ಹೊರಬಂದರೆ ಕೇಸು ದಾಖಲಿಸುವುದಾಗಿ ಪೊಲೀಸ್‌ ಆಯುಕ್ತರು ಜನತೆಗೆ ಎಚ್ಚರಿಕೆ ನೀಡಿದ್ದಾರೆ. ಇದರ ಜಾರಿ ಎಷ್ಟರ ಮಟ್ಟಿಗೆ ಸಫಲವಾಗಲಿದೆ ನೋಡಬೇಕಿದೆ. ಜನರೂ ಕೂಡ ಪರಿಸ್ಥಿತಿಯ ಗಂಭೀರತೆ ಅರಿಯುವ ಅವಶ್ಯಕತೆ ಇದ್ದೇ ಇದೆ.

click me!