ಪ್ರವಾಸಿಗರ ತಾಣ; ಗರ ಬಡಿದಂತಾಗಿದೆ ಕೊಡಗು!

By Kannadaprabha NewsFirst Published Mar 24, 2020, 9:28 AM IST
Highlights

ವಿಶ್ವದಾದ್ಯಂತ ಸದ್ದು ಮಾಡುತ್ತಿದ್ದ ಕೊರೋನಾ ಸೋಂಕು ಬಗ್ಗೆ ಸುದ್ದಿ ಮಾತ್ರ ಕೇಳುತ್ತಿದ್ದ ಕೊಡಗಿನ ಜನತೆಗೆ ಮೊನ್ನೆ ದಿಢೀರ್‌ ಆತಂಕ ಉಂಟಾಯಿತು. ದುಬೈನಿಂದ ಬಂದ ವ್ಯಕ್ತಿಯೊಬ್ಬನಿಗೆ ಕೊರೋನಾ ಸೋಂಕು ದೃಢಪಟ್ಟು ಕೊಡಗು ತಲ್ಲಣಗೊಂಡಿತು. ಸೋಂಕು ಶಂಕೆ ವ್ಯಕ್ತವಾಗಿದ್ದಾಗ ಕೊಡಗಿನಲ್ಲಿ ಜನರ ಹಾಗೂ ವಾಹನಗಳÜ ಓಡಾಟ ತೀವ್ರ ಕಡಿಮೆಯಾಯಿತು. ವ್ಯಾಪಾರ ವಹಿವಾಟು ಕುಸಿತ ಕಂಡಿತು. ಎಂದಿನಂತೆ ಜನ ಜೀವನ ಇದ್ದರೂ ಭಯ ಮಾತ್ರ ಕಾಡುತ್ತಲೇ ಇತ್ತು. ಆದರೆ ಈಗ ಪರಿಸ್ಥಿತಿ ಇನ್ನೂ ಬದಲಾಗಿದೆ. ಇದೀಗ ಕೊಡಗು ಲಾಕ್‌ಡೌನ್‌ ಆಗಿದ್ದು ಕೆಲವರು ಓಡಾಡುತ್ತಿದ್ದಾರೆ.

ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ

ಜನ ಹೆಚ್ಚು ಸೇರದಂತೆ ಮನವಿ ಮಾಡುತ್ತಿದ್ದರೂ ಪ್ರವಾಸಿಗರ ಓಡಾಟಕ್ಕೆ ಕಡಿವಾಣ ಬೀಳದ್ದರಿಂದ ಎಲ್ಲ ಪ್ರವಾಸಿತಾಣಗಳನ್ನೂ ಜಿಲ್ಲಾಧಿಕಾರಿಗಳು ಸ್ಥಗಿತಗೊಳಿಸಿದರು. ಇಷ್ಟಾದ ಮೇಲೂ ರಾಜಾಸೀಟು ಬಾಗಿಲು ಮುಚ್ಚಿದ್ದರೂ, ಹೊರ ಭಾಗದಿಂದ ಪ್ರಕೃತಿ ಸೌಂದರ್ಯ ವೀಕ್ಷಿಸಲು ಜನ ಬರಲಾರಂಭಿಸಿದರು. ಇದರಿಂದ ಕೊಡಗಿಗೆ ಪ್ರವಾಸಿಗರು ಬಾರದಂತೆ ಆದೇಶ ಹೊರಡಿಸಲಾಯಿತು.

ಕೊರೋನಾ ಕಾಲದಲ್ಲಿ ಬೆಂದಕಾಳೂರು; ಹೀಗಿದೆ ನೋಡಿ!

ಇದೇ ವೇಳೆ ನಾಪೋಕ್ಲುವಿನ ಕೊಟ್ಟಮುಡಿಯಲ್ಲಿ ಹತ್ತಾರು ಕಾಗೆಗಳು ಸತ್ತುಬಿದ್ದಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಹಕ್ಕಿ ಜ್ವರ ಭೀತಿಯೂ ಜನರನ್ನು ಒಂದೇ ದಿನ ದಂಗು ಬಡಿಸಿತು.

ಕೊಡಗಿನ ಮೂರ್ನಾಡು ಸಮೀಪದ ಕೊಂಡಂಗೇರಿಯ ಕೊತ್ತಿಮೊಟ್ಟೆಎಂಬಲ್ಲಿ ದುಬೈನಿಂದ ಬಂದಿದ್ದ ಸೋಂಕಿತ ತಂಗಿದ್ದ. ಇದರಿಂದ ಮಾ.19ರಿಂದ ಜಿಲ್ಲಾಡಳಿತದಿಂದ ಕೊಂಡಂಗೇರಿಗೆ ಪ್ರವೇಶ ನಿಷೇಧಿಸಿತು. ಕುತ್ತಿಮೊಟ್ಟೆಯನ್ನು ಅತಿ ಸೂಕ್ಷ್ಮಪ್ರದೇಶ ಎಂದು ಘೋಷಣೆ ಮಾಡಿತು. ಬಫರ್‌ ಝೋನ್‌ ಕೂಡ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಯಾರೊಬ್ಬರನ್ನು ಊರಿನ ಒಳಗೆ ಹಾಗೂ ಹೊರಗೆ ಬಿಡದಂತೆ ಪೊಲೀಸರು ಸರ್ಪಗಾವಲು ಹಾಕಲಾಗಿದೆ. ಇಲ್ಲಿನ ನಿವಾಸಿಗಳು ಇದೀಗ ಐದು ದಿನಗಳಿಂದ ಗೃಹ ದಿಗ್ಬಂಧನದಲ್ಲಿ ಜೀವನ ಸಾಗಿಸುತ್ತಿದ್ದು, ಅವರಿಗೆ ಜಿಲ್ಲಾಡಳಿತದಿಂದ ಆಹಾರ ವ್ಯವಸ್ಥೆ ಮಾಡಿಕೊಟ್ಟಿದೆ.

ಸೋಮವಾರದಿಂದ ಲಾಕ್‌ಡೌನ್‌ ಪರಿಸ್ಥಿತಿ ಮುಂದುವರೆದಿದೆ. ಅಂಗಡಿ-ಮುಗ್ಗಟ್ಟು, ಬಸ್‌ ಸೇರಿದಂತೆ ಹಲವು ವಾಹನಗಳನ್ನು ನಿರ್ಬಂಧಿಸಲಾಗಿದೆ. ಕೊಡಗು-ಕೇರಳ ಕಡಿ ಭಾಗವನ್ನು ಬಂದ್‌ ಮಾಡಲಾಗಿದೆ. ಜಿಲ್ಲೆಯಲ್ಲಿ ವಾಹನಗಳು ಓಡಾಡದಂತೆ ಸೂಚನೆ ನೀಡಲಾಗಿದ್ದರೂ ಕೂಡ ಸಾರ್ವಜನಿಕರು ಓಡಾಡುತ್ತಿರುವುದು ಸಾಮಾನ್ಯವಾಗಿದ್ದು, ಪೊಲೀಸರು ಮನೆಗೆ ಕಳುಹಿಸುತ್ತಿದ್ದಾರೆ. ಇಷ್ಟೆಲ್ಲ ಆದರೂ ಹೆಚ್ಚು ಜನರು ಮಾಸ್ಕ್‌ ಧರಿಸದೇ ಹಾಗೇ ಸಂಚರಿಸುತ್ತಿದ್ದಾರೆ.

ಹೀಗೊಂದು ಅವಾಂತರ

ಮಾ.15ರಂದು ದುಬೈನಿಂದ ಬೆಂಗಳೂರಿಗೆ ಬಂದಿದ್ದ ಸೋಂಕಿತ ವ್ಯಕ್ತಿ ನೀಡಿದ್ದ ಹೇಳಿಕೆಯೇ ಅವಾಂತರ ಸೃಷ್ಟಿಸಿದ್ದು. ಬೆಂಗಳೂರಿನಿಂದ ಕೊಡಗಿಗೆ ರಾಜಹಂಸ ಬಸ್‌ ಮೂಲಕ ಬಂದಿದ್ದ ಸೋಂಕಿತ ಮೊದಲು, ಮಾ.15ರಂದು ರಾತ್ರಿ 11:30ಕ್ಕೆ ರಾಜಹಂಸ ಬಸ್‌ನಲ್ಲಿ ಬಂದಿದ್ದೆ ಎಂದಿದ್ದ. ಆದರೆ ಒಂದು ದಿನ ಕಳೆದು ಮಾ.16ರ ರಾತ್ರಿ 12.5ರ ರಾಜಹಂಸ ಬಸ್‌ನಲ್ಲಿ ಬಂದದ್ದು ಎಂದ. ಕೂಡಲೇ ಬಸ್‌ನಲ್ಲಿ ಸಂಚರಿಸಿದವರು ತಪಾಸಣೆಗೆ ಒಳಗಾಗುವಂತೆ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದರು. ಆದರೆ ಸೋಂಕಿತನ ತಪ್ಪಾದ ಹೇಳಿಕೆಯಿಂದ ಕೊಡಗಿನ ಮೂವರು ಶಿಕ್ಷಕರು ತಪಾಸಣೆಗೆ ಒಳಗಾಗಿ ಗಾಬರಿಗೊಂಡಿದ್ದರು. ಆದರೆ ಅವರಿಗೆ ಸೋಂಕು ಇರಲಿಲ್ಲ. ಅಷ್ಟರಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಶಿಕ್ಷಕರಿಂದ ದೂರವಿರುವಂತೆ ಸುಳ್ಳು ಸುದ್ದಿ ಹರಿದಾಡಿ ಆಗಿತ್ತು.

ಕೊರೋನಾ ವೈರಸ್ ಗಾಳಿ ಮೂಲಕ ಹರಡುತ್ತಾ? ವಿಶ್ವಸಂಸ್ಥೆ ಹೇಳೋದೇನು?

ಕರೆ ಮಾಡುವ ಮಂದಿ

‘ಸರ್‌ ಇವತ್ತು ಬಸ್‌ ಇದ್ಯಾ?’, ‘ ಬೆಂಗಳೂರಿನಿಂದ ಕೊಡಗಿಗೆ ಬರಬಹುದಾ?’, ‘ಅಂಗಡಿ ಓಪನ್‌ ಇದ್ಯಾ..ಮಾಹಿತಿ ಕೊಡಿ’, ‘ಬೆಂಗಳೂರಿನಿಂದ ಕೊಡಗಿಗೆ ಬರಬೇಕು. ಹೇಗಾದರೂ ದಯವಿಟ್ಟು ಸಹಾಯ ಮಾಡಿ’ ಅಂತ ಕೊಡಗಿನ ಕನ್ನಡಪ್ರಭ ಪತ್ರಿಕಾ ಕಚೇರಿಗೆ ಕರೆ ಮಾಡುವವರು ಬಹಳ ಮಂದಿ. ಅವರಿಗೆ ಸಾಧ್ಯವಾದಷ್ಟುಮಾಹಿತಿ ನೀಡಲಾಗುತ್ತಿದೆ. ಸದ್ಯಕ್ಕೀಗ ಇಡೀ ಮಡಿಕೇರಿ ಖಾಲಿಯಾಗಿದ್ದು, ನಮ್ಮ ಕಚೇರಿ ಮಾತ್ರ ತೆರೆದಿದ್ದು, ಕೆಲಸದಲ್ಲಿ ತೊಡಗಿದ್ದೇವೆ.

click me!