ಹಚ್ಚೋಣ ಏಕತಾ ದೀಪ: ಇಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ಬೆಳಕಿನ ಅಭಿಯಾನ!

Published : Apr 05, 2020, 07:40 AM ISTUpdated : Apr 05, 2020, 08:38 AM IST
ಹಚ್ಚೋಣ ಏಕತಾ ದೀಪ: ಇಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ಬೆಳಕಿನ ಅಭಿಯಾನ!

ಸಾರಾಂಶ

ಹಚ್ಚೋಣ ಏಕತಾ ದೀಪ| ಇಂದು ರಾತ್ರಿ 9ರಿಂದ 9 ನಿಮಿಷಗಳ ಕಾಲ ಬೆಳಕಿನ ಅಭಿಯಾನ| 130 ಕೋಟಿ ಜನರು ಒಗ್ಗಟ್ಟಿನ ಮಂತ್ರ ಜಪಿಸಲು ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ| ಕೊರೋನಾ ವಿರುದ್ಧ ಸಮರಕ್ಕೆ ಉತ್ಸಾಹ ತುಂಬುವ ಅಭಿಯಾನಕ್ಕೆ ಭಾರೀ ಪ್ರತಿಕ್ರಿಯೆ ಸಾಧ್ಯತೆ

ನವದೆಹಲಿ(ಏ.04): ಕೊರೋನಾ ವೈರಸ್‌ ಎಂಬ ಗಾಢಾಂಧಕಾರದಿಂದ ದೇಶವನ್ನು ಹೊಸ ಬೆಳಕಿನೆಡೆಗೆ ಒಯ್ಯಲು ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿರುವ ದೀಪ ಬೆಳಗುವ ಅಭಿಯಾನಕ್ಕೆ ಭಾನುವಾರ ಭರ್ಜರಿ ಯಶಸ್ಸು ಲಭಿಸುವ ಎಲ್ಲ ಸಾಧ್ಯತೆ ಇದೆ.

ಭಾನುವಾರ ರಾತ್ರಿ 9ಕ್ಕೆ ಸರಿಯಾಗಿ 9 ನಿಮಿಷಗಳ ಕಾಲ ಮನೆಯ ವಿದ್ಯುತ್‌ ದೀಪಗಳನ್ನು ಆರಿಸಿ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ದೀಪ ಬೆಳಗುವಂತೆ ಮೋದಿ ಅವರು ದೇಶದ ಜನತೆಗೆ ಕರೆ ನೀಡಿದ್ದಾರೆ. ಸಾಂಪ್ರದಾಯಿಕ ದೀಪ, ಮೋಂಬತ್ತಿ, ಟಾಚ್‌ರ್‍ ಅಥವಾ ಮೊಬೈಲ್‌ ಫ್ಲಾಶ್‌ಲೈಟ್‌ ಪೈಕಿ ಯಾವುದಾದರೂ ಒಂದನ್ನು ಬಳಸುವ ಮೂಲಕ ಈ ಅಭಿಯಾನದಲ್ಲಿ ಜನರು ಪಾಲ್ಗೊಳ್ಳಬಹುದಾಗಿದೆ.

ಸಂಜೆ ಬದಲು ಮೋದಿ ಬೆಳಗ್ಗೆ ಮಾತನಾಡಿದ್ಧೇಕೆ? ಚಿಂತಕ ಚಕ್ರವರ್ತಿ ಕೊಟ್ಟ ಕಾರಣ

ಕೊರೋನಾ ಸೋಂಕಿನಿಂದ ದೇಶವನ್ನು ಪಾರು ಮಾಡಲು 21 ದಿನಗಳ ಕಾಲ ಇಡೀ ದೇಶವನ್ನು ಲಾಕ್‌ಡೌನ್‌ ಮಾಡಲಾಗಿದೆ. ಈ ಅವಧಿಯಲ್ಲಿ ಏಕಾಂತವಾಸದಿಂದ ಬೇಸತ್ತಿರುವ ಜನರಲ್ಲಿ ಹೊಸ ಉತ್ಸಾಹ ತುಂಬಲು ಹಾಗೂ ಈ ಸಂಕಷ್ಟದ ಸಂದರ್ಭದಲ್ಲಿ ಒಗ್ಗಟ್ಟಿನ ಮಂತ್ರ ಜಪಿಸಲು ಮತ್ತು ಇಡೀ ದೇಶವೇ ವೈರಸ್‌ ವಿರುದ್ಧ ಸಮರ ಸಾರಿದೆ ಎಂಬ ಸಂದೇಶ ಸಾರಲು ಮೋದಿ ಅವರು ಈ ಅಭಿಯಾನಕ್ಕೆ ಕರೆ ನೀಡಿದ್ದಾರೆ ಎಂಬ ವಿಶ್ಲೇಷಣೆಗಳಿವೆ.

ಮೋದಿ ಅವರು ಈ ರೀತಿಯ ವಿಶಿಷ್ಟಅಭಿಯಾನಕ್ಕೆ ಕರೆ ನೀಡುತ್ತಿರುವುದು ಇದೇ ಮೊದಲಲ್ಲ. ಪ್ರಧಾನಿ ಅವರ ಸೂಚನೆಯಂತೆ ಮಾ.22ರ ಭಾನುವಾರ ಇಡೀ ದೇಶವೇ ಬಂದ್‌ ಆಗಿತ್ತು. ಜನತಾ ಕಫ್ರ್ಯೂ ಎಂಬ ಮೋದಿ ಅವರ ಆಲೋಚನೆಗೆ ಇಡೀ ದೇಶವೇ ಅಭೂತಪೂರ್ವ ರೀತಿಯಲ್ಲಿ ಸ್ಪಂದಿಸಿತ್ತು. ಕೊರೋನಾ ವೈರಸ್‌ ತಾಂಡವವಾಡುತ್ತಿದ್ದರೂ ಜೀವ ಲೆಕ್ಕಿಸದೇ ದುಡಿಯುತ್ತಿರುವ ವೈದ್ಯರು, ಆರೋಗ್ಯ ಸಿಬ್ಬಂದಿ, ಏರ್‌ಪೋರ್ಟ್‌ ನೌಕರರು, ಸರ್ಕಾರಿ ಉದ್ಯೋಗಿಗಳು, ಮಾಧ್ಯಮ ಸಿಬ್ಬಂದಿಗೆ ಮನೆಯ ಬಾಗಿಲು ಅಥವಾ ಬಾಲ್ಕನಿಯಲ್ಲಿ ನಿಂತು ಗಂಟೆ, ಜಾಗಟೆ ಬಾರಿಸಲು ಮೋದಿ ನೀಡಿದ್ದ ಸಲಹೆಗೂ ದೇಶವಾಸಿಗಳು ಭಾರಿ ಸಂಖ್ಯೆಯಲ್ಲಿ ಸ್ಪಂದಿಸಿದ್ದರು. ಅದೇ ರೀತಿ ದೀಪ ಬೆಳಗುವ ಆಂದೋಲನವೂ ಯಶಸ್ವಿಯಾಗಲಿದೆ ಎಂದೇ ಹೇಳಲಾಗುತ್ತಿದೆ.

ಮಾ.25ರಿಂದ ದೇಶ ಲಾಕ್‌ಡೌನ್‌ ಆಗಿದೆ. ಭಾನುವಾರಕ್ಕೆ ಸರಿಯಾಗಿ ಇಡೀ ದೇಶವೇ ಸ್ತಬ್ಧವಾಗಿ ಹೆಚ್ಚೂಕಡಿಮೆ 12 ದಿನಗಳು ಆಗುತ್ತವೆ. ಇನ್ನೂ 9 ದಿನಗಳ ಲಾಕ್‌ಡೌನ್‌ ಮುಂದುವರಿಸಲು ಜನರ ಸಹಕಾರ ಅಗತ್ಯ. ಹೀಗಾಗಿ ಮೋದಿ ಅವರು ಜನರಲ್ಲಿ ಉತ್ಸಾಹ ಮೂಡಿಸಲು ದೀಪ ಬೆಳಗಿಸುವ ಅಭಿಯಾನ ನಡೆಸುತ್ತಿದ್ದಾರೆ. ದೀಪ ಬೆಳಕಿನ ಸಂಕೇತ. ಕೊರೋನಾ ಎಂಬ ಕತ್ತಲಿನಿಂದ ಬೆಳಕಿನೆಡೆಗೆ ಒಯ್ಯಲು ದೇಶ ಶತಪ್ರಯತ್ನ ನಡೆಸುತ್ತಿದೆ ಎಂಬುದನ್ನು ತಿಳಿಸುವ ಸಾಂಕೇತಿಕ ಕ್ರಮವೂ ಇದಾಗಿದೆ ಎಂದು ಹೇಳಲಾಗುತ್ತಿದೆ.

ಏ.5ಕ್ಕೆ 9 ಗಂಟೆಗೆ 9 ದೀಪ ಉರಿಸಲು ಹೇಳಿದ್ದೇಕೆ ಮೋದೀಜಿ?

ಜನರು ಹೀಗೆ ಮಾಡಿ...

1. ಮನೆಯ ಲೈಟ್‌ ಅಷ್ಟೇ ಆಫ್‌ ಮಾಡಿ. ಫ್ರಿಜ್ಜು, ಟೀವಿ, ಫ್ಯಾನು ಇತ್ಯಾದಿಗಳನ್ನು ಬಂದ್‌ ಮಾಡುವುದು ಬೇಡ

2. ಎಲೆಕ್ಟ್ರಿಕ್‌, ಎಲೆಕ್ಟ್ರಾನಿಕ್‌ ಉಪಕರಣ ಆನ್‌ ಮಾಡುವ ಬಗ್ಗೆ ಸಾಮಾಜಿಕ ಜಾಲತಾಣಗಳ ವದಂತಿಗಳನ್ನು ನಂಬಬೇಡಿ

3. ಸುಖಾಸುಮ್ಮನೆ ವಾಷಿಂಗ್‌ ಮಷಿನ್‌, ಗೀಸರ್‌, ಇಸ್ತ್ರಿಪೆಟ್ಟಿಗೆ ಮತ್ತಿತರೆ ಉಪಕರಣಗಳನ್ನು ಆನ್‌ ಮಾಡಿ ಇಡಬೇಡಿ

ದೀಪವನ್ನು ಯಾವ ರೀತಿ ಬೆಳಗಬೇಕು?

- ದೀಪ, ಮೋಂಬತ್ತಿ, ಟಾಚ್‌ರ್‍ ಅಥವಾ ಮೊಬೈಲ್‌ ಫ್ಲಾಷ್‌ಲೈಟ್‌ ಬಳಸಬಹುದು

- ಮನೆಯ ಬಾಗಿಲು ಅಥವಾ ಬಾಲ್ಕನಿಯಲ್ಲಿ 9 ನಿಮಿಷಗಳ ಕಾಲ ದೀಪ ಬೆಳಗಿ

- ಸ್ಯಾನಿಟೈಸರ್‌ ಹಚ್ಚಿದ್ದರೆ ಕೈತೊಳೆದು ದೀಪ ಹಚ್ಚಿ. ಇಲ್ಲವಾದಲ್ಲಿ ಬೆಂಕಿ ಹೊತ್ತೀತು

- ಯಾವ ಕಾರಣಕ್ಕೂ ಬಂಧುಮಿತ್ರರೆಲ್ಲ ಗುಂಪುಗೂಡಿ ದೀಪ ಹಚ್ಚುವ ಸಾಹಸ ಬೇಡ

- ಸಾಮಾಜಿಕ ಅಂತರ ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಇಡೀ ಅಭಿಯಾನವೇ ವಿಫಲ

PREV
click me!

Recommended Stories

ಅಕ್ಷಯ್ ಕುಮಾರ್ ರಾಮಸೇತು ಚಿತ್ರದ 45 ಕಿರಿಯ ಕಲಾವಿದರಿಗೂ ಕೊರೊನಾ ಪಾಸಿಟಿವ್!
ಕೊರೋನಾ ಅಟ್ಟಹಾಸ; 3 ರಾಜ್ಯಗಳಿಗೆ ತಜ್ಞರ ತಂಡ ಕಳುಹಿಸಿದ ಮೋದಿ!