'ಮನ್‌ ಕಿ ಬಾತ್' ನಲ್ಲಿ ಬೆಂಗಳೂರಿಗ ಸುಧಾಕರ್ ಹೆಬ್ಬಾಳೆಯನ್ನು ಶ್ಲಾಘಿಸಿದ ಮೋದಿ!

By Suvarna NewsFirst Published Mar 30, 2020, 9:25 AM IST
Highlights

ಮೋದಿ ತಮ್ಮ ಮನ್‌ಕಿ ಬಾತ್ ಭಾಷಣದಲ್ಲಿ ಬೆಂಗಳೂರಿಗ ನಿರಂಜನ್‌ ಸುಧಾಕರ್‌ ಹೆಬ್ಬಾಳೆ ಅವರ ಹೆಸರನ್ನು ಪ್ರಸ್ತಾಪಿಸಿದರು. ‘ನಮೋ ಆ್ಯಪ್‌ನಲ್ಲಿ ಬೆಂಗಳೂರಿನ ನಿರಂಜನ್‌ ಸುಧಾಕರ್‌ ಹೆಬ್ಬಾಳೆ ಅವರು, ಕೊರೋನಾ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿರುವವರೇ ನಮ್ಮ ನಿತ್ಯ ಜೀವನದಲ್ಲಿ ನೈಜ ನಾಯಕರು ಎಂದು ಪ್ರಸ್ತಾಪಿಸಿದ್ದಾರೆ. 

ನವದೆಹಲಿ (ಮಾ. 30): ಕೊರೋನಾವೈರಸ್‌ ಹರಡುವುದನ್ನು ತಡೆಯಲು ದೇಶದಲ್ಲಿ ಐತಿಹಾಸಿಕ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ಜನರಿಗಾಗುತ್ತಿರುವ ತೊಂದರೆಗೆ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಕೋರಿದ್ದಾರೆ. ಇದು ಜೀವನ್ಮರಣದ ಪ್ರಶ್ನೆಯಾಗಿದ್ದು, ಈ ಯುದ್ಧದಲ್ಲಿ ಖಂಡಿತ ಭಾರತ ಗೆಲ್ಲಲಿದೆ ಎಂದು ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

‘ನಾನು ಕ್ಷಮೆ ಕೋರುತ್ತೇನೆ... ನೀವೆಲ್ಲ ನನ್ನನ್ನು ಕ್ಷಮಿಸುತ್ತೀರಿ ಎಂಬ ವಿಶ್ವಾಸ ನನಗಿದೆ. ನನ್ನ ಬಡ ಸಹೋದರ ಸಹೋದರಿಯರ ಕಷ್ಟವನ್ನು ನೋಡುತ್ತಿದ್ದರೆ ಅವರು ನಿಶ್ಚಿತವಾಗಿ ‘ಇವರೆಂಥ ಪ್ರಧಾನಿ, ನಮ್ಮನ್ನೆಲ್ಲ ಈ ಪರಿ ಕಷ್ಟಕ್ಕೆ ತಳ್ಳಿದ್ದಾರಲ್ಲ’ ಎಂದು ಶಪಿಸುತ್ತಿದ್ದಾರೆಂದು ನನಗೆ ಅನ್ನಿಸುತ್ತದೆ. ನಾನು ವಿಶೇಷವಾಗಿ ಅವರ ಕ್ಷಮೆ ಕೇಳುತ್ತೇನೆ. ನಿಮಗೆ ಕಷ್ಟವಾಗಿದೆ ಎಂಬುದು ನಿಜ. ಆದರೆ 130 ಕೋಟಿ ಜನರಿರುವ ದೇಶದಲ್ಲಿ ಕೊರೋನಾವೈರಸ್‌ ಹರಡುವುದನ್ನು ತಡೆಯಲು ಬೇರೆ ದಾರಿ ಇರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಲಾಕ್‌ಡೌನ್‌ 'ಅಗತ್ಯ ವಸ್ತುಗಳನ್ನ ಹೆಚ್ಚಿನ ದರಕ್ಕೆ ಮಾರಿದ್ರೆ ಕ್ರಿಮಿನಲ್‌ ಮೊಕದ್ದಮೆ'

ಭಾನುವಾರ ತಮ್ಮ ಮಾಸಿಕ ‘ಮನ್‌ ಕಿ ಬಾತ್‌’ನಲ್ಲಿ ರೇಡಿಯೋ ಭಾಷಣ ಮಾಡಿದ ಮೋದಿ, ಜಗತ್ತಿನಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಿದರೆ ಈ ಲಾಕ್‌ಡೌನ್‌ ಮಾತ್ರ ನಮಗಿರುವ ಏಕೈಕ ದಾರಿಯಾಗಿತ್ತು. ನಿಮ್ಮ ಹಾಗೂ ನಿಮ್ಮ ಕುಟುಂಬ ಸುರಕ್ಷಿತವಾಗಿರಬೇಕು. ಇದಕ್ಕಾಗಿ ಕಠಿಣ ಕ್ರಮ ಕೈಗೊಂಡಿದ್ದೇವೆ. ನಿಮಗಾಗುತ್ತಿರುವ ಕಷ್ಟಕ್ಕೆ ಇನ್ನೊಮ್ಮೆ ಕ್ಷಮೆಯಾಚಿಸುತ್ತೇನೆ ಎಂದು ಹೇಳಿದರು.

ಸೋಂಕು ಶಂಕಿತರು ಕ್ರಿಮಿನಲ್‌ಗಳಲ್ಲ:

ಸಮಸ್ಯೆಯನ್ನು ಚಿಗುರಿನಲ್ಲೇ ಚಿವುಟಿಹಾಕಬೇಕು. ಅದನ್ನು ಬೆಳೆಯಲು ಬಿಟ್ಟರೆ ನಂತರ ಚಿಕಿತ್ಸೆ ಹಾಗೂ ಪರಿಹಾರ ಬಹಳ ಕಷ್ಟವಾಗುತ್ತದೆ. ಹೋಂ ಕ್ವಾರಂಟೈನ್‌ನಲ್ಲಿರುವ ಶಂಕಿತ ಸೋಂಕಿತರನ್ನು ಅಕ್ಕಪಕ್ಕದ ಜನರು ಕೆಟ್ಟದಾಗಿ ನೋಡುತ್ತಿದ್ದಾರೆಂಬ ಸುದ್ದಿಗಳು ಬರುತ್ತಿವೆ. ಇದು ದುರದೃಷ್ಟಕರ. ಅಂತಹ ಘಟನೆಗಳ ಬಗ್ಗೆ ಕೇಳಿ ನನಗೆ ಬಹಳ ನೋವಾಗಿದೆ. ಇಂತಹ ಸ್ಥಿತಿಯಲ್ಲಿ ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕೇ ಹೊರತು ಮಾನವೀಯ ಅಥವಾ ಭಾವನಾತ್ಮಕ ಅಂತರವನ್ನಲ್ಲ. ಅವರೆಲ್ಲ ಕ್ರಿಮಿನಲ್‌ಗಳಲ್ಲ. ಬೇರೆಯವರಿಗೆ ತಮ್ಮಿಂದ ವೈರಸ್‌ ಸೋಂಕು ತಗಲದಿರಲಿ ಎಂದು ಅವರು ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಮೋದಿ ಒತ್ತಿ ಹೇಳಿದರು.

ನೀವು ನಿಮ್ಮನ್ನೂ ನಿಮ್ಮ ಕುಟುಂಬವನ್ನೂ ರಕ್ಷಿಸಿಕೊಳ್ಳಬೇಕು. ಮುಂದಿನ ಅನೇಕ ದಿನಗಳ ಕಾಲ ಇದೇ ತಾಳ್ಮೆಯನ್ನು ತೋರಬೇಕು. ದಯವಿಟ್ಟು ಲಕ್ಷ್ಮಣ ರೇಖೆಯನ್ನು ಪಾಲಿಸಬೇಕು. ಆದರೆ, ಕೆಲವರು ಇದಕ್ಕೆ ಕಿವಿಗೊಡುತ್ತಿಲ್ಲ. ಏಕೆಂದರೆ ಅವರಿಗೆ ಸಮಸ್ಯೆಯ ಗಂಭೀರತೆ ಅರ್ಥವಾಗಿಲ್ಲ. ಅವರಿಗೆ ನಾನು ಹೇಳುವುದಿಷ್ಟೆ- ‘ನೀವು ಲಾಕ್‌ಡೌನ್‌ನ ನಿಯಮಗಳನ್ನು ಪಾಲಿಸದಿದ್ದರೆ ಕೊರೋನಾವೈರಸ್‌ನಿಂದ ನಮ್ಮನ್ನೆಲ್ಲ ರಕ್ಷಿಸಿಕೊಳ್ಳುವುದು ಕಷ್ಟವಾಗುತ್ತದೆ.’

ಮನೆಯಲ್ಲಿರಿ, ಈ ಕಷ್ಟ ಖಂಡಿತಾ ಕಳೆಯಲಿದೆ: ವೀರೇಂದ್ರ ಹೆಗ್ಗಡೆ

ನಿತ್ಯ ಜೀವನದ ಹೀರೋಗಳು:

‘ಲಾಕ್‌ಡೌನ್‌ ವೇಳೆ ಜನಸಾಮಾನ್ಯರಿಗೆ ಕಷ್ಟವಾಗದಿರಲು ಪ್ಲಂಬರ್‌ಗಳು, ಎಲೆಕ್ಟ್ರೀಶಿಯನ್‌ಗಳು, ಕಿರಾಣಿ ಅಂಗಡಿ ಮಾಲಿಕರು, ಇ-ಕಾಮರ್ಸ್‌ ಡೆಲಿವರಿ ಸಿಬ್ಬಂದಿ, ಟೆಲಿಕಾಂ ನೌಕರರು, ಇಂಟರ್ನೆಟ್‌ ಸೇವೆ ಪೂರೈಕೆದಾರರು ಧೈರ್ಯದಿಂದ ಕೆಲಸ ಮಾಡುತ್ತಿದ್ದಾರೆ. ಅವರನ್ನು ನಾನು ನಿತ್ಯಜೀವನದ ಹೀರೋಗಳು ಎನ್ನುತ್ತೇನೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಭಾರತವು ಕೊರೋನಾವೈರಸ್‌ ವಿರುದ್ಧದ ಯುದ್ಧದಲ್ಲಿ ಹೋರಾಡಲು ಸಾಧ್ಯವಾಗುತ್ತಿರುವುದು ಮುಂದಿನ ಸಾಲಿನಲ್ಲಿ ನಿಂತು ಹೋರಾಡುತ್ತಿರುವ ಡಾಕ್ಟರ್‌ಗಳು, ನರ್ಸ್‌ಗಳು, ಅರೆವೈದ್ಯಕೀಯ ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮತ್ತು ನೈರ್ಮಲ್ಯ ಸಿಬ್ಬಂದಿಯಿಂದಾಗಿ. ನಿಮ್ಮ ಆರೋಗ್ಯದ ಬಗ್ಗೆಯೂ ನಮಗೆ ಕಾಳಜಿಯಿದೆ. ಹೀಗಾಗಿ ಇಂತಹ ಸುಮಾರು 20 ಲಕ್ಷ ಸಿಬ್ಬಂದಿಗೆ ಸರ್ಕಾರವು 50 ಲಕ್ಷ ರು.ವರೆಗಿನ ವಿಮೆ ನೀಡುತ್ತಿದೆ. ಈ ಯುದ್ಧದಲ್ಲಿ ನೀವು ದೇಶವನ್ನು ಆತ್ಮವಿಶ್ವಾಸದಿಂದ ಮುನ್ನಡೆಸಬೇಕು’ ಎಂದು ಹೇಳಿದರು.

ಇದೇ ವೇಳೆ ಮೋದಿ ಅವರು ಕೊರೋನಾವೈರಸ್‌ ಸೋಂಕಿನಿಂದ ಗುಣಮುಖರಾದ ಇಬ್ಬರ ಜೊತೆ ಸಂವಾದ ನಡೆಸಿ, ತಮ್ಮತಮ್ಮ ಊರಿನಲ್ಲಿ ಕೊರೋನಾ ಬಗ್ಗೆ ಜಾಗೃತಿ ಮೂಡಿಸುವಂತೆ ಮನವಿ ಮಾಡಿದರು.

click me!