ಗರ್ಭಾವಸ್ಥೆ ಕೊನೆಯಲ್ಲಿ ಕೊರೋನಾ ಟೆಸ್ಟಿಂಗ್ ಕಿಟ್ ಸೃಷ್ಟಿ!| ಮುಂಬೈನ ಮೃಣಾಲ್ ಭೋಸ್ಲೆ ಸಾಧನೆ| ಕೇವಲ 6 ತಿಂಗಳಲ್ಲಿ ಕಿಟ್ ಆವಿಷ್ಕಾರ| ಸಾಮಾನ್ಯ ಕಿಟ್‌ಗೆ 4500 ರು.| ಹೊಸ ಕಿಟ್‌ಗೆ ಕೇವಲ 1200 ರು.| ಸಾಮಾನ್ಯ ಕಿಟ್ ಮೂಲಕ 8 ತಾಸಿನಲ್ಲಿ ರೋಗ ಪತ್ತೆ| ಹೊಸ ಕಿಟ್ ಮೂಲಕ ಕೇವಲ 2.5 ತಾಸಿನಲ್ಲಿ ಫಲಿತಾಂಶ| ಕಿಟ್ ಸಿದ್ಧವಾಗುವ ಕೇವಲ 1 ದಿನ ಮೊದಲು ವೈದ್ಯೆಗೆ ಹೆರಿಗೆ
ಮುಂಬೈ(ಮಾ.30): ಕೊರೋನಾ ವೈರಸ್ ವಿರುದ್ಧ ಹೋರಾಡಲು ವೈದ್ಯರು ತೋರುತ್ತಿರುವ ಅರ್ಪಣಾ ಮನೋಭಾವಕ್ಕೆ ಇದೊಂದು ನಿದರ್ಶನ. ಮುಂಬೈನ ವೈರಸ್ ಶಾಸ್ತ್ರಜ್ಞೆ ಡಾ
ಮೃಣಾಲ್ ಭೋಸ್ಲೆ ಅವರು ತಾವು ಗರ್ಭಾವಸ್ಥೆಯ ಕೊನೆಯ ಹಂತದಲ್ಲಿದ್ದರೂ ಹಾಗೂ ಈ ಹಂತದಲ್ಲಿ ಆರೋಗ್ಯ ಸಮಸ್ಯೆಎದುರಿಸುತ್ತಿದ್ದರೂ ಕೊರೋನಾ ವೈರಸ್‌ನ ದೇಶದ ಮೊತ್ತಮೊದಲ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದ್ದಾರೆ.
ಕೊರೋನಾ ವ್ಯಾಪಕ ಆಗುತ್ತಿದ್ದಂತೆಯೇ ಇದರ ಟೆಸ್ಟಿಂಗ್ ಕಿಟ್ ಸಿದ್ಧಪಡಿಸುವುದು ಸವಾಲಿನದಾಗಿತ್ತು. ಆದರೂ ವೈರಾಣು ತಜ್ಞೆಯಾದ ಮೃಣಾಲ್ ಅವರು ಗರ್ಭಾವಸ್ಥೆಯ ಕೊನೆಯ ಹಂತದಲ್ಲೂ ಛಲಬಿಡದೇ ಈ ಕಿಟ್ ಸಿದ್ಧಪಡಿಸುವ ತಂಡದ ನೇತೃತ್ವ ವಹಿಸಿದರು. ದಾಖಲೆಯ ಕೇವಲ 6 ವಾರದ ಅವಧಿಯಲ್ಲಿ ಟೆಸ್ಟಿಂಗ್ ಕಿಟ್ ಸಿದ್ಧಪಡಿಸಿದರು.
ತಾವು ಸಿದ್ಧಪಡಿಸಿದ ಕಿಟ್ ಅನ್ನು ಸರ್ಕಾರಕ್ಕೆ ಮೌಲ್ಯಮಾಪನಕ್ಕೆ ಕಳಿಸುವ 1 ದಿನ ಮುಂಚಿತವಷ್ಟೇ ಮೃಣಾಲ್ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಅದೂ ಸಿಸೇರಿಯನ್ ಮೂಲಕ.
‘ನನಗೆ ಗರ್ಭಾವಸ್ಥೆಯಲ್ಲಿ ತೊಂದರೆ ಇತ್ತು. ಸಿಸೇರಿಯನ್ ಆಗಬಹುದು ಎಂಬ ಸುಳಿವು ಇತ್ತು. ಆದರೂ ನನ್ನ ಆರೋಗ್ಯ ಕಡೆಗಣಿಸಿ ನಾನು ಕಿಟ್ ಸಿದ್ಧಪಡಿಸುವ ಸವಾಲಿನ ಕೆಲಸ ಮಾಡಿದೆ. ದೇಶದ ಜನರಿಗೆ ನಾನು ಸೇವೆ ಸಲ್ಲಿಸಬೇಕಿತ್ತು’ ಎಂದು ಹೃದಯಸ್ಪರ್ಶಿ ಪ್ರತಿಕ್ರಿಯೆ ನೀಡಿದ್ದಾರೆ ಮೃಣಾಲ್.
‘ನನಗೆ ಈಗ ಇಬ್ಬರು ಮಕ್ಕಳು ಜನಿಸಿದಂತಾಗಿದೆ. ಒಂದು ನನ್ನ ಮಗು. ಇನ್ನೊಂದು ಟೆಸ್ಟಿಂಗ್ ಕಿಟ್’ ಎಂದು ಭಾವಪರವಶರಾಗಿ ಅವರು ಹೇಳಿದರು.
ಪುಣೆಯ ಮೈಲ್ಯಾಬ್ ಡಿಸ್ಕವರಿ ವತಿಯಿಂದ ಈ ಕಿಟ್ ಸಿದ್ಧಪಡಿಸಲಾಗಿದೆ. ಸಾಮಾನ್ಯ ಟೆಸ್ಟಿಂಗ್ ಕಿಟ್ ಮೂಲಕ ಪರೀಕ್ಷೆ ನಡೆಸಿದಾಗ ಫಲಿತಾಂಶ ಬರಲು 8 ತಾಸು ಬೇಕಾಗುತ್ತದೆ. ಆದರೆ ಮೃಣಾಲ್ ಸಿದ್ಧಪಡಿಸಿದ ಕಿಟ್‌ನಲ್ಲಿ ಕೇವಲ 2.5 ಗಂಟೆಯಲ್ಲಿ ಪರೀಕ್ಷಾ ಫಲಿತಾಂಶ ಲಭ್ಯವಾಗುತ್ತದೆ.
ಅಲ್ಲದೆ, ಸರ್ಕಾರವು ಈವರೆಗೆ 1 ಪರೀಕ್ಷಾ ಕಿಟ್‌ಗೆ 4500 ರು. ವ್ಯಯಿಸುತ್ತಿತ್ತು. ಮೃಣಾಲ್ ಕಂಡುಹಿಡಿದ ಕಿಟ್ ಕೇವಲ 1200 ರು.ಗೆ ಲಭ್ಯ.