ಲಾಕ್‌ಡೌನ್‌ ಬಳಿಕ ಕೇಂದ್ರದಿಂದ 3ನೇ ಮಿನಿ ಪ್ಯಾಕೇಜ್‌?

By Kannadaprabha NewsFirst Published Apr 6, 2020, 10:39 AM IST
Highlights

ಮತ್ತೊಂದು ಮಿನಿ ಪ್ಯಾಕೇಜ್‌?| ವಿದ್ಯಾರ್ಥಿ, ಕೃಷಿ, ಗ್ರಾಹಕರಿಗೆ ಹೆಚ್ಚು ಒತ್ತು ನೀಡಲು ಚಿಂತನೆ| ಲಾಕ್‌ಡೌನ್‌ ಬಳಿಕ ಕೇಂದ್ರದಿಂದ 3ನೇ ಪ್ಯಾಕೇಜ್‌ ಸಾಧ್ಯತೆ

ನವದೆಹಲಿ(ಏ.06): ಕೊರೋನಾದಿಂದ ತತ್ತರಿಸಿರುವ ದೇಶದ ಆರ್ಥಿಕತೆಗೆ ಚೇತರಿಕೆ ನೀಡಲು ಮತ್ತೊಂದು ಮಿನಿ ಪ್ಯಾಕೇಜ್‌ ಘೋಷಣೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಂಭೀರ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ. ಏ.14ಕ್ಕೆ 21 ದಿನಗಳ ಲಾಕ್‌ಡೌನ್‌ ಅವಧಿ ಮುಗಿಯಲಿದ್ದು, ಬಳಿಕ ಆಯ್ದ ಕೊರೋನಾ ಕ್ಲಸ್ಟರ್‌ಗಳಲ್ಲಿ ಮಾತ್ರವೇ ಪೂರ್ಣ ನಿರ್ಬಂಧ ಮುಂದುವರೆಸುವ ಉದ್ದೇಶ ಸರ್ಕಾರದ್ದು. ಹೀಗಾಗಿ ಉಳಿದ ಪ್ರದೇಶಗಳಲ್ಲಿ ಆರ್ಥಿಕತೆಗೆ ಚೇತರಿಕೆ ನೀಡುವ ಸಲುವಾಗಿ ಮತ್ತೊಂದು ಹಂತದ ಪ್ಯಾಕೇಜ್‌ ಘೋಷಣೆಗೆ ಚಿಂತನೆ ನಡೆಯುತ್ತಿದೆ. ಆದರೆ ಪ್ಯಾಕೇಜ್‌ನ ರೂಪರೇಷೆ ಅಂತಿಮಗೊಂಡಿಲ್ಲ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.

ಮುಖ್ಯವಾಗಿ ಲಾಕ್‌ಡೌನ್‌ ನಂತರದ ಪರಿಸ್ಥಿತಿ ಆಧರಿಸಿ ಪ್ಯಾಕೇಜ್‌ ಘೋಷಣೆಯ ಬಗ್ಗೆ ಚಿಂತನೆಗಳು ನಡೆದಿವೆ. ಜೊತೆಗೆ ಕೆಲವೊಂದು ಅಭಿವೃದ್ಧಿ ಯೋಜನೆಗಳು ಮತ್ತು ಸರ್ಕಾರಿ ಯೋಜನೆಗಳನ್ನು ಲಾಕ್‌ಡೌನ್‌ ನಂತರದ ಪರಿಸ್ಥಿತಿಗೆ ಅನುಗುಣವಾಗಿ ಮರು ಹೊಂದಾಣಿಕೆ ಮಾಡಿ ಬಿಡುಗಡೆ ಮಾಡಲು ಸರ್ಕಾರ ಒಲವು ವ್ಯಕ್ತಪಡಿಸಿದೆ. ಈ ಪೈಕಿ ಸಚಿವಾಲಯಗಳು ನೀಡುವ ವಿದ್ಯಾರ್ಥಿವೇತನ, ಫೆಲೋಶಿಪ್‌, ಮಂಗಾರು ಹಂಗಾಮಿನ ಬಿತ್ತನೆಗೆ ಸಂಬಂಧಿಸಿದ ವಿಷಯಗಳು ಸರ್ಕಾರದ ಆದ್ಯತೆಯ ವಿಷಯಗಳಾಗಿದ್ದು, ಇವುಗಳ ಬಗ್ಗೆ ಒಂದಾದ ಮೇಲೊಂದರಂತೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಒಂದು ವೇಳೆ ಮತ್ತೊಂದು ಪ್ಯಾಕೇಜ್‌ ಘೋಷಿಸಿದ್ದೇ ಆದಲ್ಲಿ, ಅದು ಕೇಂದ್ರ ಸರ್ಕಾರ ಘೋಷಿಸಿದ ಮೂರನೇ ಪ್ಯಾಕೇಜ್‌ ಆಗಿರಲಿದೆ.

ಮಾ.24ರಂದು ಪ್ರಧಾನಿ ಮೋದಿ, ದೇಶವ್ಯಾಪಿ 21 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡುವ ಕೆಲ ಗಂಟೆಗಳ ಮುನ್ನ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ಜನ ಸಾಮಾನ್ಯರ ಸಂಕಷ್ಟದೂರ ಮಾಡುವ ನಿಟ್ಟಿನಲ್ಲಿ ಪ್ಯಾಕೇಜ್‌ ಘೋಷಣೆ ಮಾಡಿದ್ದರು. 2 ದಿನಗಳ ನಂತರ 1.7 ಲಕ್ಷ ಕೋಟಿ ರು.ಮೌಲ್ಯದ ಮತ್ತೊಂದು ಪ್ಯಾಕೇಜ್‌ ಘೋಷಿಸಲಾಗಿತ್ತು.

ಲಾಕ್‌ಡೌನ್‌ನಿಂದಾಗಿ ನಿತ್ಯ ದೇಶ ನಿತ್ಯ 35000 ಕೋಟಿ ರು. ನಷ್ಟಅನುಭವಿಸುತ್ತಿದೆ ಎಂದು ರೇಟಿಂಗ್ಸ್‌ ಏಜೆನ್ಸಿಯೊಂದಿತ್ತು ಹೇಳಿತ್ತು. ಜೊತೆಗೆ ಪ್ರಸಕ್ತ ಹಣಕಾಸು ವರ್ಷದ ಜಿಡಿಪಿ ಬೆಳವಣಿಗೆ ದರ ಶೇ.2ರಷ್ಟಕ್ಕೆ ಕುಸಿಯಲಿದೆ. ಇದು ಕಳೆದ 30 ವರ್ಷಗಳಲ್ಲೇ ಕನಿಷ್ಠವಾಗಿರಲಿದೆ ಎಂದು ರೇಟಿಂಗ್‌ ಏಜೆನ್ಸಿಯಾದ ಫಿಚ್‌ ಹೇಳಿತ್ತು.

click me!