ನಗರದಿಂದ ಹಳ್ಳಿಗೆ ಹೋದವರಿಂದ ಕೊರೋನಾ ಹಬ್ಬುವ ಭೀತಿ: ಕೇಂದ್ರದಿಂದ ಸುಪ್ರೀಂಗೆ ಮಾಹಿತಿ

By Kannadaprabha NewsFirst Published Apr 1, 2020, 7:45 AM IST
Highlights

30% ವಲಸಿಗರಿಗೆ ಸೋಂಕು ಸಾಧ್ಯತೆ!| ನಗರದಿಂದ ಹಳ್ಳಿಗೆ ಹೋದವರಿಂದ ಹಬ್ಬುವ ಭೀತಿ| ಸ್ವತಃ ಕೇಂದ್ರ ಸರ್ಕಾರದಿಂದ ಸುಪ್ರೀಂಗೆ ಮಾಹಿತಿ

ನವದೆಹಲಿ(ಏ.01): ಕೊರೋನಾ ಸೋಂಕಿಗೆ ಬೆಚ್ಚಿ ದೇಶಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿ ಜನ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಆಘಾತಕಾರಿ ಮಾಹಿತಿಯೊಂದನ್ನು ಹೊರಗೆಡವಿದೆ. ಹೀಗೆ ನಗರಗಳಿಂದ ಗ್ರಾಮೀಣ ಪ್ರದೇಶಗಳಿಗೆ ವಲಸೆ ಹೋಗುವವರ ಪೈಕಿ 10ರಲ್ಲಿ ಮೂವರು ತಮ್ಮೊಂದಿಗೆ ಕೊರೋನಾ ವೈರಸ್‌ ಅನ್ನೂ ಕೊಂಡೊಯ್ಯುವ ಸಾಧ್ಯತೆ ಎಂದು ಕೇಂದ್ರ ಸರ್ಕಾರ ಮಂಗಳವಾರ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

ಒಂದು ವೇಳೆ ಸರ್ಕಾರ ನೀಡಿದ ಅಂಕಿ ಅಂಶಗಳಂತೆ ಕೊರೋನಾ ದೇಶದ ಗ್ರಾಮೀಣ ಪ್ರದೇಶಗಳಿಗೆ ಹರಡಿದ್ದೇ ಆದಲ್ಲಿ ಅದು ಮುಂದಿನ ಕೆಲವು ದಿನಗಳಲ್ಲಿ ದಿಢೀರನೆ ಲಕ್ಷಾಂತರ ಸಂಖ್ಯೆಯಲ್ಲಿ ಹೊಸ ಸೋಂಕಿತರ ಪತ್ತೆಗೆ ಕಾರಣವಾಗುವ ಎಲ್ಲಾ ಸಾಧ್ಯತೆಗಳಿವೆ. ಜೊತೆಗೆ ಸೋಂಕು ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮಗಳೆಲ್ಲಾ ವಿಫಲವಾಗುವಂತೆ ಮಾಡುವ ಸಾಧ್ಯತೆ ಇದೆ.

ಕೊರೋನಾ ಸಮಸ್ಯೆ ಕುರಿತು ಕೇರಳ ಹಾಗೂ ಪಶ್ಚಿಮ ಬಂಗಾಳದ ಇಬ್ಬರು ಸಂಸದರು ಸಲ್ಲಿಸಿರುವ ಆನ್‌ಲೈನ್‌ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೋಬ್ಡೆ ನೇತೃತ್ವದ ಪೀಠವವಿಡಿಯೋ ಕಾನ್ಫರೆನ್ಸ್‌ ಮೂಲಕ ಮಂಗಳವಾರ ವಿಚಾರಣೆ ನಡೆಸಿತು.

ಈ ವೇಳೆ ವಲಸಿಗರಿಗೆ ಗಡಿ ತೆರೆಯಬೇಕು ಎಂಬ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಬಗ್ಗೆ ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ‘ಈ ಹಂತದಲ್ಲಿ ವಲಸಿಗರಿಗೆ ಸಂಚಾರಕ್ಕೆ ಅವಕಾಶ ನೀಡುವುದು, ಕೊರೋನಾ ಹರಡುವುದಕ್ಕೆ ಅವಕಾಶ ಕೊಟ್ಟಂತೆ ಆಗುತ್ತದೆ. ಕಳೆದ ಸೆನ್ಸಸ್‌ ವರದಿ ಪ್ರಕಾರ 4.14 ಕೋಟಿ ಜನ ಉದ್ಯೋಗಕ್ಕಾಗಿ ವಲಸೆ ಹೋಗಿದ್ದರು. ಅವರೆಲ್ಲಾ ಇದೀಗ ಕೊರೋನಾದಿಂದಾಗಿ ತವರಿನತ್ತ ಮರಳುತ್ತಿದ್ದಾರೆ’.

‘ಇದೀಗ ಇಡೀ ದೇಶವನ್ನೇ ಲಾಕ್‌ಡೌನ್‌ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿಯೇ ಯಾವುದೇ ಕಾರಣಕ್ಕೂ ವಲಸಿಗರು ಒಂದೆಡೆಯಿಂದ ಇನ್ನೊಂದೆಡೆಗೆ ತೆರಳದಂತೆ ಎಚ್ಚರಿಕೆ ವಹಿಸುತ್ತಿದ್ದೇವೆ. ಈ ಮೂಲಕ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳುತ್ತಿದ್ದೇವೆ. ಇದು ವಲಸಿಗರಿಗೆ ಮಾತ್ರವಲ್ಲದೇ ಗ್ರಾಮೀಣ ಜನತೆಗೂ ಅಪಾಯಕಾರಿ. ಇದುವರೆಗೆ ದೇಶದ ಗ್ರಾಮೀಣ ಭಾಗಕ್ಕೆ ಕೊರೋನಾ ಹಬ್ಬಿಲ್ಲ. ಆದರೆ ಇದೀಗ ವಲಸೆ ಹೋಗುವವರ ಪೈಕಿ 10ರಲ್ಲಿ ಮೂವರು ತಮ್ಮೊಂದಿಗೆ ಕೊರೋನಾ ಸೋಂಕನ್ನು ಗ್ರಾಮೀಣ ಪ್ರದೇಶಕ್ಕೆ ಕೊಂಡೊಯ್ಯುವ ಸಾಧ್ಯತೆ ಇದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವಾದ ಆಲಿಸಿದ ನ್ಯಾಯಪೀಠ ಪಿಐಎಲ್‌ ಕುರಿತ ವಿಚಾರಣೆಯನ್ನು ಏ.7ಕ್ಕೆ ಮುಂದೂಡಿತು. ಇದೇ ವೇಳೆ ‘ವೈರಸ್‌ಗಿಂತ ವೇಗವಾಗಿ ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಇದರಿಂದ ಜನರಲ್ಲಿ ಭೀತಿಯುಂಟಾಗುತ್ತಿದೆ. ವೈರಸ್‌ಗಿಂತ ಹೆಚ್ಚಾಗಿ ಈ ಭೀತಿಯಿಂದಲೇ ಹೆಚ್ಚು ಜನರು ಸಾಯಬಹುದು. ಹೀಗಾಗಿ ಕೊರೋನಾವೈರಸ್‌ ಬಗ್ಗೆ ಸರಿಯಾದ ಮಾಹಿತಿ ನೀಡುವ ವೆಬ್‌ಸೈಟನ್ನು 24 ಗಂಟೆಯೊಳಗೆ ಆರಂಭಿಸಬೇಕು. ಹಾಗೆಯೇ, ವಲಸೆ ಕಾರ್ಮಿಕರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಅವರನ್ನು ದೇಶಾದ್ಯಂತ ಇರಿಸಿರುವ ಆಶ್ರಯ ಮನೆಗಳಲ್ಲಿ ಎಲ್ಲಾ ಸೌಕರ್ಯ ಒದಗಿಸಬೇಕು. ಅವರಿಗೆ ಆಯಾ ಸಮುದಾಯದ ನಾಯಕರಿಂದ ಸಮಾಧಾನ ಹೇಳಿಸಬೇಕು’ ಎಂದು ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತು.

ಯಾವುದೇ ಕಾರಣಕ್ಕೂ ವಲಸೆ ಕಾರ್ಮಿಕರ ಆಶ್ರಯ ಕ್ಯಾಂಪ್‌ಗಳನ್ನು ನಿಯಂತ್ರಿಸಲು ಪೊಲೀಸರನ್ನು ನಿಯೋಜಿಸಬಾರದು. ಬದಲಿಗೆ ವಿಶ್ವಾಸಾರ್ಹ ಸ್ವಯಂಸೇವಕರನ್ನು ನಿಯೋಜಿಸಬೇಕು. ಶೆಲ್ಟರ್‌ ಹೋಮ್‌ಗಳಲ್ಲಿ ವಲಸಿಗರಿಗೆ ಎಲ್ಲ ಸೌಕರ್ಯ ನೀಡಬೇಕು ಎಂದು ಸೂಚಿಸಿತು.

4.14 ಕೋಟಿ ಜನ ವಲಸೆ

- ಜನಗಣತಿ ಪ್ರಕಾರ 4.14 ಕೋಟಿ ಜನ ಉದ್ಯೋಗಕ್ಕಾಗಿ ನಗರಗಳಿಗೆ ವಲಸೆ

- ಇವರ ಪೈಕಿ ಬಹುತೇಕ ಮಂದಿ ಕೊರೋನಾದಿಂದಾಗಿ ಹಳ್ಳಿಗಳಿಗೆ ವಾಪಸ್‌

- ವಲಸಿಗರು ಮರಳುತ್ತಿರುವುದರಿಂದ ಹಳ್ಳಿಗಳಿಗೂ ವೈರಸ್‌ ಹಬ್ಬುವ ಭೀತಿ

- ಇದನ್ನು ತಡೆಗಟ್ಟಲು ಲಾಕ್‌ಡೌನ್‌ ಕ್ರಮ ಅನಿವಾರ್ಯ: ಸುಪ್ರೀಂಗೆ ಕೇಂದ್ರ

ಸುಳ್ಳುಸುದ್ದಿ ತಡೆಯಿರಿ

- ವೈರಸ್‌ಗಿಂತ ವೇಗವಾಗಿ ಸುಳ್ಳುಸುದ್ದಿ ಹಬ್ಬುತ್ತಿವೆ. ಜನರನ್ನು ಹೆದರಿಸುತ್ತಿವೆ

- ಇದನ್ನು ತಡೆಗಟ್ಟಿ, ನಿಖರ ವಿವರ ನೀಡುವ ವೆಬ್‌ಸೈಟ್‌ 24 ತಾಸಲ್ಲಿ ಆರಂಭಿಸಿ

- ವಲಸೆ ಕಾರ್ಮಿಕರಿಗೆ ಸೂಕ್ತ ಆಹಾರ, ಆಶ್ರಯ, ವೈದ್ಯಕೀಯ ಸೌಲಭ್ಯ ನೀಡಿ

- ಮನೋವೈದ್ಯರು, ಆಯಾ ಸಮುದಾಯದ ನಾಯಕರಿಂದ ಸಾಂತ್ವನ ಒದಗಿಸಿ

click me!