
ರಿಯಲ್ ಲೈಫ್ 'ಜನ ನಾಯಗನ್' ಪಟ್ಟಕ್ಕೇರಿದ ದಳಪತಿ ವಿಜಯ್!
ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ 'ದಳಪತಿ' ವಿಜಯ್ ಹೊಸ ಸುನಾಮಿ ಸೃಷ್ಟಿಸಿದ್ದಾರೆ. ಸಿನಿಮಾದಲ್ಲಿ ಅಬ್ಬರಿಸುತ್ತಿದ್ದ ಈ ರೌಡಿ ಹೀರೊ, ಈಗ ನಿಜ ಜೀವನದಲ್ಲಿ ತಮಿಳುನಾಡಿನ ಸಿಎಂ ಆಗಿ ಗದ್ದುಗೆ ಏರಿದ್ದಾರೆ. ವಿಜಯ್ ಅವರ ಈ ಐತಿಹಾಸಿಕ ಗೆಲುವನ್ನು ಅಭಿಮಾನಿಗಳು ಹಬ್ಬದಂತೆ ಸಂಭ್ರಮಿಸುತ್ತಿದ್ದಾರೆ. ಆದರೆ, ಈ ಸಂಭ್ರಮದ ನಡುವೆಯೇ ವಿಜಯ್ ಅವರ ಅಪ್ಪಟ ಅಭಿಮಾನಿಗಳನ್ನು ಒಂದು ಪ್ರಶ್ನೆ ಸತತವಾಗಿ ಕಾಡುತ್ತಿದೆ. ಅದೇನಪ್ಪಾ ಅಂದರೆ, ವಿಜಯ್ ಅವರ ಸಿನಿ ಪಯಣದ ಕೊನೆಯ ಕಾಣಿಕೆ 'ಜನ ನಾಯಗನ್' ಸಿನಿಮಾ ಯಾವಾಗ ತೆರೆಗೆ ಬರಲಿದೆ ಎಂಬುದು!
ಲೊಕ ಭವನದಲ್ಲಿ ನಿರ್ಮಾಪಕ: ಶುರುವಾಯ್ತು ಹೊಸ ಚರ್ಚೆ!
ಕೆಲ ದಿನಗಳ ಹಿಂದೆ ವಿಜಯ್ ಅವರು ಸರ್ಕಾರ ರಚನೆಯ ಹಕ್ಕು ಮಂಡಿಸಲು ರಾಜ್ಯಪಾಲರನ್ನು ಭೇಟಿಯಾಗಲು ಲೊಕ ಭವನಕ್ಕೆ ಹೋದಾಗ, ಅವರ ಜೊತೆ ನಿರ್ಮಾಪಕ ವೆಂಕಟ್ ಕೆ. ನಾರಾಯಣ ಕೂಡ ಕಾಣಿಸಿಕೊಂಡಿದ್ದರು. ಇದು ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿತ್ತು. ರಾಜಕೀಯಕ್ಕೂ ಸಿನಿಮಾ ನಿರ್ಮಾಪಕರಿಗೂ ಏನು ಸಂಬಂಧ? ಟಿವಿಕೆ ಪಕ್ಷದಲ್ಲಿ ಯಾವುದೇ ಸ್ಥಾನವಿಲ್ಲದಿದ್ದರೂ ಇವರು ಯಾಕೆ ವಿಜಯ್ ಜೊತೆಗಿದ್ದಾರೆ? ಎಂಬ ಪ್ರಶ್ನೆಗಳು ಎದ್ದಿದ್ದವು.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ವಿಜಯ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಇಡೀ ಕಾಲಿವುಡ್ ಅಂಗಳವೇ ಸಾಕ್ಷಿಯಾಗಿತ್ತು. ಇದೇ ಸಂದರ್ಭದಲ್ಲಿ 'ಜನ ನಾಯಗನ್' ಚಿತ್ರದ ನಿರ್ಮಾಪಕ, ಕೆವಿಎನ್ (KVN) ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ಅವರು ಕಾಣಿಸಿಕೊಂಡಿದ್ದು ವಿಶೇಷವಾಗಿತ್ತು. ಮಾಧ್ಯಮಗಳ ಜೊತೆ ಮಾತನಾಡಿದ ಅವರು ಸಿನಿಮಾದ ಬಗ್ಗೆ ಕುತೂಹಲಕಾರಿ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ. "ನಮಗೆ ಅತೀವ ಸಂತೋಷವಾಗುತ್ತಿದೆ. ಆರಂಭದಲ್ಲಿ ಎಲ್ಲರೂ 'ಜನ ನಾಯಗನ್' ಎನ್ನುವುದು ಕೇವಲ ಒಂದು ಸಿನಿಮಾದ ಶೀರ್ಷಿಕೆ ಎಂದುಕೊಂಡಿದ್ದರು. ಆದರೆ ಇಂದು ವಿಜಯ್ ಅವರು ನಿಜ ಜೀವನದಲ್ಲೂ ತಮಿಳುನಾಡಿನ 'ಜನ ನಾಯಗನ್' (ಜನನಾಯಕ) ಆಗಿ ಹೊರಹೊಮ್ಮಿದ್ದಾರೆ. ಇದು ನಮಗೆ ಹೆಮ್ಮೆಯ ವಿಚಾರ" ಎಂದಿದ್ದಾರೆ.
ವಿಜಯ್ ಅವರ ರಾಜಕೀಯ ಪ್ರವೇಶದ ಕಾರಣದಿಂದಾಗಿ 'ಜನ ನಾಯಗನ್' ಚಿತ್ರಕ್ಕೆ ಆರಂಭದಿಂದಲೂ ಒಂದಲ್ಲ ಒಂದು ವಿಘ್ನಗಳು ಎದುರಾಗುತ್ತಲೇ ಇವೆ. ವಾಸ್ತವವಾಗಿ ಈ ಸಿನಿಮಾ ಜನವರಿ 9ರಂದೇ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಬೇಕಿತ್ತು. ಆದರೆ ಸಿನಿಮಾ ಬಿಡುಗಡೆಯಾಗಿ ಈಗ 4 ತಿಂಗಳು ಕಳೆದರೂ ಸೆನ್ಸಾರ್ ಮಂಡಳಿಯಿಂದ (CBFC) ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡಿರುವ ನಿರ್ಮಾಪಕರು, "ನಾವು ಪ್ರಸ್ತುತ ಸೆನ್ಸಾರ್ ಪ್ರಮಾಣಪತ್ರಕ್ಕಾಗಿ ಕಾಯುತ್ತಿದ್ದೇವೆ. ಪ್ರಮಾಣಪತ್ರ ಕೈ ಸೇರಿದ ಕ್ಷಣವೇ ಬಿಡುಗಡೆಯ ದಿನಾಂಕವನ್ನು ಘೋಷಿಸುತ್ತೇವೆ" ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
ಆದರೆ, 'ವಿಜಯ್ ಜೊತೆ ಕೆವಿಎನ್ ಪ್ರೊಡಕ್ಷನ್ಸ್‌ನ ವೆಂಕಟ್ ಕೆ. ನಾರಾಯಣ ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ? ಎಂಬ ಆ ಪ್ರಶ್ನೆಗೆ ನಿಖರವಾದ ಉತ್ತರ ಸಿಕ್ಕಿಲ್ಲ. ಆದರೆ ಈಗ ವಿಜಯ್ ಸಿಎಂ ಆಗಿರುವುದರಿಂದ ಸಿನಿಮಾ ಬಿಡುಗಡೆಗೆ ಎದುರಾಗಿರುವ ಕಾನೂನು ಅಡೆತಡೆಗಳು ಸುಲಭವಾಗಿ ಬಗೆಹರಿಯಲಿವೆ ಎಂಬ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.
ಒಟ್ಟಿನಲ್ಲಿ, ಪರದೆಯ ಮೇಲೆ 'ಜನ ನಾಯಕ'ನಾಗಿ ಕಾಣಿಸಿಕೊಳ್ಳುವ ಮುನ್ನವೇ ನಿಜ ಜೀವನದಲ್ಲಿ ರಾಜ್ಯವನ್ನಾಳಲು ಸಜ್ಜಾಗಿರುವ ದಳಪತಿ ವಿಜಯ್ ಅವರ ಕೊನೆಯ ಚಿತ್ರವನ್ನು ನೋಡಲು ಇಡೀ ದಕ್ಷಿಣ ಭಾರತವೇ ಕಾತರದಿಂದ ಕಾಯುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.