ರೆಡ್​ ಕಾರ್ಪೆಟ್​ ಮೇಲೆ ಎಡವಿ ಬಿದ್ದ ಪ್ರಿಯಾಂಕಾ ಚೋಪ್ರಾ: ಮುಂದಾಗಿದ್ದೇ ಬೇರೆ...

By Suvarna News  |  First Published May 12, 2023, 5:34 PM IST

ರೆಡ್ ಕಾರ್ಪೆಟ್​ ಮೇಲೆ ನಡೆಯುತ್ತಿದ್ದಾಗ ಒಂದೊಮ್ಮೆ ನಟಿ ಪ್ರಿಯಾಂಕಾ ಚೋಪ್ರಾ ಎಡವಿಬಿದ್ದಿದ್ದರಂತೆ. ಅದರ ಬಗ್ಗೆ ಅವರು ಹೇಳಿದ್ದೇನು?
 


ಪ್ರಸ್ತುತ ಹಾಲಿವುಡ್‌ನಲ್ಲಿ  ಮಿಂಚುತ್ತಿರುವ ನಟಿ ಪ್ರಿಯಾಂಕಾ ಚೋಪ್ರಾ (Priyanka Chopra) ತಾವು ಅನುಭವಿಸಿರುವ ಹಲವಾರು ವಿಷಯಗಳ ಬಗ್ಗೆ ಇದಾಗಲೇ ಮಾತನಾಡಿದ್ದಾರೆ. ನಟಿ ತಮ್ಮ ಬಣ್ಣ, ಮೂಗಿನಿಂದಾಗಿ ಇದಾಗಲೇ ಹಲವಾರು ಬಾರಿ ಬಾಡಿ ಷೇಮಿಂಗ್​ಗೆ ಒಳಗಾಗಿದ್ದರೂ ನಟಿ, ಜಾಗತಿಕ ಐಕಾನ್ ಎಂದೇ ಖ್ಯಾತರಾಗಿದ್ದಾರೆ. ಮಿಸ್‌ ವರ್ಲ್ಡ್ ಪಟ್ಟ ಗೆದ್ದು ನಂತರ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿ ಇಂದಿಗೂ ಟಾಪ್‌ ಹಿರೋಯಿನ್‌ಗಳ ಪಟ್ಟಿಯಲ್ಲಿದ್ದಾರೆ ದೇಸಿ ಗರ್ಲ್‌ ಪ್ರಿಯಾಂಕಾ ಚೋಪ್ರಾ. ದೊಡ್ಡ ದೊಡ್ಡ ಹಿಟ್‌ ಸಿನಿಮಾ, ಜಾಹೀರಾತು ಅದು ಇದು ಅಂತಾ ಬ್ಯುಸಿ ಇದ್ದ ಚೆಲುವೆ ಕೊನೆಗೂ 2018ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಪ್ರಿಯಾಂಕ ಚೋಪ್ರಾ 2018 ಡಿಸೆಂಬರ್‌ನಲ್ಲಿ ತಮ್ಮ ಗೆಳೆಯ, ವಿದೇಶಿ ಗಾಯಕ ನಿಕ್ ಜೋನಸ್ ಕೈ ಹಿಡಿದರು.  ಬಾಡಿಗೆ ತಾಯ್ತನದ ಮೂಲಕ ಮಾಲ್ತಿ ಮೇರಿ (Malti Marie) ಎಂಬ ಮಗಳನ್ನು ಪಡೆದಿರುವ ನಟಿ ಪ್ರಿಯಾಂಕಾ,  ತಾವು ಮಿಸ್​ ವರ್ಲ್ಡ್​ ಆದ ಸಂದರ್ಭದಲ್ಲಿ ನಿಕ್​ ಜೋನಸ್​ ಅವರು ಏಳು ವರ್ಷದವರಿರುವ ಬಗ್ಗೆಯೂ ಹೇಳಿಕೊಂಡಿದ್ದಾರೆ.   

ಇದೀಗ ಅವರು ತಾವು ಎಡವಿಬಿದ್ದ ಬಗ್ಗೆ  ದಿ ವ್ಯೂ ಎಂಬ ಟಾಕ್ ಶೋನಲ್ಲಿ (The Veiw) ಮಾತನಾಡಿದ್ದಾರೆ. ರೆಡ್ ಕಾರ್ಪೆಟ್‌ನಲ್ಲಿ ಹೆಜ್ಜೆ ಹಾಕುತ್ತಿದ್ದಾಗ   ಎಡವಿ ಬಿದ್ದ ಬಗ್ಗೆ ಅವರು ಹೇಳಿಕೊಂಡಿದ್ದಾರೆ. ತಾವು ಎಡವಿದರೂ ಯಾವುದೇ ವಿಡಿಯೋಗ್ರಾಫರ್ ಅಥವಾ ಪೋಟೋಗ್ರಾಫರ್ ಈ ಘಟನೆಯನ್ನು ಸೆರೆಹಿಡಿಯಲಿಲ್ಲ ಎಂಬುದೇ ಅಚ್ಚರಿ ಎಂದು ಅವರು ತಿಳಿಸಿದ್ದಾರೆ. ಹೌದು. ಚಿತ್ರ ವಿಚಿತ್ರ ಬಟ್ಟೆ ತೊಟ್ಟು ಕಷ್ಟಪಟ್ಟು ನಡೆಯುವುದು ಈಗೀಗ ಫ್ಯಾಷನ್​ ಅನ್ನಿಸಿಬಿಟ್ಟಿದೆ. ನಡೆಯಲೂ ಆಗದೇ, ನಿಂತುಕೊಳ್ಳಲೂ ಆಗದೇ ಇರುವ ವಿಚಿತ್ರ ಭಾರಿ ಡ್ರೆಸ್​ಗಳನ್ನು ನಟಿಯರು ಧರಿಸುತ್ತಾರೆ. ಅಂಥ ಸಂದರ್ಭದಲ್ಲಿ ಅವರು ಎಡವಿ ಬೀಳುವುದು ಸಾಮಾನ್ಯ. ಅಂಥದ್ದೇ ಒಂದು ಘಟನೆ ಪ್ರಿಯಾಂಕಾ ಅವರಿಗೂ ನಡೆಯಿತು. ಹೀಗೆ ಎಡವಿದ ಸಂದರ್ಭದಲ್ಲಿ  ಕೂಡಲೇ ಯಾವುದೇ ಫೋಟೋಗ್ರಾಫರ್ ಕ್ಷಣಮಾತ್ರದಲ್ಲಿ ಸೆರೆಹಿಡಿದು ವೈರಲ್​ ಮಾಡುತ್ತಾರೆ. ಆದರೆ ಆ ನಿಟ್ಟಿನಲ್ಲಿ ತಾನು ಅದೃಷ್ಟವಂತೆ ಎಂದಿದ್ದಾರೆ ಪ್ರಿಯಾಂಕಾ.

Tap to resize

Latest Videos

ಮದುವೆಗೂ ಮುನ್ನ ಹಲವರ ಜೊತೆ ಡೇಟಿಂಗ್​: ಎಲ್ಲವನ್ನೂ ಬಾಯ್ಬಿಟ್ಟ Priyanka Chopra
 
 ಈ ಘಟನೆಯ ಯಾವುದೇ ಫೋಟೇಜ್ ಅಥವಾ ವರದಿ ಸಾಮಾಜಿಕ ತಾಣದಲ್ಲಾಗಲೀ ಯಾವುದೇ ಸುದ್ದಿಮಾಧ್ಯಮದಲ್ಲಾಗಲೀ ಬಂದಿಲ್ಲ ಎಂಬುದೇ ಚಮತ್ಕಾರದ ವಿಷಯವಾಗಿದೆ ಎಂದು ಪ್ರಿಯಾಂಕಾ ತಿಳಿಸಿದ್ದು,  ತನ್ನ 23 ವರ್ಷಗಳ ಸಿನಿ ವೃತ್ತಿ ಜೀವನದಲ್ಲಿ (Cine) ಇಂತಹ ಘಟನೆ ಸಂಭವಿಸಿಯೇ ಇಲ್ಲ ಎಂದು ತಿಳಿಸಿದ್ದಾರೆ. ನಾನು ಹೀಗೆ ಎಡವಿ ಬಿದ್ದಾಗ ಫೋಟೋಗ್ರಾಫರ್ ಇಲ್ಲವೇ ವಿಡಿಯೋಗ್ರಾಫರ್ ತಮ್ಮ ತಮ್ಮ ಕ್ಯಾಮೆರಾಗಳನ್ನು ಕೆಳಕ್ಕೆ ಹಿಡಿದುಕೊಂಡು ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ, ಆರಾಮಾಗಿರಿ ಎಂದು  ಸಲಹೆ ನೀಡಿದರು. ನನಗೆ ಇಂದಿಗೂ ಅದನ್ನು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ ಎಂದಿದ್ದಾರೆ. ಅದಾದ ಮೇಲೂ ಕೆಲವು ಬಾರಿ ಆಗೀಗ ಎಡವಿದ್ದು ಇದೆ. ಆದರೆ ಆ ವಿಷಯದಲ್ಲಿಯೂ ನಾನು ಲಕ್ಕಿ ಎಂದಿರುವ ನಟಿ, ನೀವು ಯಾವಾಗಲೂ ತುಂಬಾ ಸರಳ ಹಾಗೂ ಸುಂದರ ಎಂದು ಫೋಟೋಗ್ರಾಫರ್‌ಗಳನ್ನು  ಬಣ್ಣಿಸಿದ್ದಾರೆ.  ಹಾಗಾಗಿ ಇದುವರೆಗೆ ನಾನು ರೆಡ್ ಕಾರ್ಪೆಟ್‌ನಲ್ಲಿ ಬಿದ್ದಂತಹ ಯಾವುದೇ ವಿಡಿಯೋ ಕ್ಲಿಪ್‌ಗಳು ದೊರೆಯಲು ಸಾಧ್ಯವೇ ಇಲ್ಲ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. 

ಇದೇ ಸಂದರ್ಭದಲ್ಲಿ ಮಾಜಿ ಸ್ನೇಹಿತರ ಬಗ್ಗೆಯೂ ನಟಿ ಮಾತನಾಡಿದ್ದಾರೆ.  ತಮ್ಮ ಬಾಯ್​ಫ್ರೆಂಡ್ಸ್ (Boyfriends) ಎಲ್ಲಾ ಒಳ್ಳೆಯವರು ಮತ್ತು ಉತ್ತಮ ವ್ಯಕ್ತಿತ್ವವನ್ನು ಹೊಂದಿದ್ದರು ಎಂದು ನಟಿ ಹೇಳಿದ್ದಾರೆ. ನಾನು ನಟಿಸಿದ ನಟರ ಜೊತೆ ಆಗಾಗ ಡೇಟ್ ಮಾಡುತ್ತಿದ್ದೆ ಎಂದು ನಟಿ ಪ್ರಿಯಾಂಕಾ ಚೋಪ್ರಾ ಹೇಳಿದ್ದಾರೆ.  ನಾನು ಯಾವಾಗಲೂ ನನ್ನ ಸೆಟ್‌ನಲ್ಲಿ ಭೇಟಿಯಾದ ಸಹ ನಟರೊಂದಿಗೆ ಡೇಟಿಂಗ್ (Dating) ಮಾಡಿದ್ದೇನೆ. ಸಂಬಂಧಕ್ಕೆ ಬೆಲೆ ಕೊಡುತ್ತೇನೆ. ಪ್ರತಿಯೊಂದು ಸಂಬಂಧವು ಹೇಗಿರಬೇಕು ಎಂಬ ಕಲ್ಪನೆಯನ್ನು ನಾನು ಹೊಂದಿದ್ದೇನೆ.  ನನ್ನ ಜೀವನದಲ್ಲಿ ಬಂದ ಜನರ ಬಗ್ಗೆ ಹೇಗೆ ಸಂಬಂಧ ಹೊಂದಬೇಕು, ಡೇಟಿಂಗ್​ ಯಾವ ವ್ಯಕ್ತಿಯ ಜೊತೆ ಮಾಡಬೇಕು ಎಂಬ ತಿಳಿವಳಿಕೆ ನನಗಿತ್ತು. ಆದ್ದರಿಂದ  ಉತ್ತಮ ವ್ಯಕ್ತಿಗಳೊಂದಿಗೆ ಡೇಟಿಂಗ್ ಮಾಡಿದ್ದೇನೆ ಎಂದು ನಟಿ ಪ್ರಿಯಾಂಕಾ ಹೇಳಿದ್ದಾರೆ.  

ಮೂಗನ್ನು ಅಂದಗೊಳಿಸಲು ಹೋಗಿ ಖಿನ್ನತೆಗೆ ಜಾರಿದ್ದ ಪ್ರಿಯಾಂಕಾ ಚೋಪ್ರಾ!

 

click me!