
ಇಂದು ಯಾರ ಬಳಿಯೂ ಸಮಯ ಇಲ್ಲ. ಬೆಳಗ್ಗೆ ಎದ್ದು ರೆಡಿಯಾಗಿ ಕೆಲಸಕ್ಕೆ ಹೋಗುವುದು. ಕೆಲಸ ಮುಗಿದ ಬಳಿಕ ಮತ್ತೆ ಮನೆಗೆ ಹಿಂದಿರುಗಿ ಬರೋದು. ಇದು ಎಲ್ಲರ ಕ್ರಮಬದ್ಧವಾದ ಜೀವನಶೈಲಿಯಾಗಿರುತ್ತದೆ. ರಜಾದಿನದಂದು ಒಂದು ಗಂಟೆ ಹೆಚ್ಚು ನಿದ್ದೆ ಮಾಡೋದು ಬಿಟ್ರೆ ದಿನನಿತ್ಯದ ಜೀವನಶೈಲಿಯಲ್ಲಿ ಯಾವುದೇ ಬದಲಾವಣೆಗಳಿರಲ್ಲ. ಈ ರೀತಿಯ ಜಡ ಜೀವನಶೈಲಿಯಿಂದಾಗಿ ಜನರು ಮಾನಸಿಕವಾಗಿ ಕುಗ್ಗುತ್ತಾರೆ. ಕೆಲಸ ಮತ್ತು ಸಾಂಸರಿಕ ಒತ್ತಡಗಳಿಗೆ ಸಿಲುಕಿ ಪ್ರಾಣ ಕಳೆದುಕೊಳ್ಳುವ ನಿರ್ಧಾರಕ್ಕೆ ಬರುತ್ತಾರೆ. ಚಿಕ್ಕ ಚಿಕ್ಕ ಕಾರಣಗಳಿಗೆ ಪ್ರಾಣ ಕಳೆದುಕೊಂಡಿರುವ ಉದಾಹರಣೆಗಳಿವೆ.
ಇಂದು ನಾವು ಹೇಳುತ್ತಿರುವ ಕಿರುಚಿತ್ರ ನೋಡಿದ್ರೆ ಜೀವನದ ಮೇಲೆ ಪ್ರೀತಿಯುಂಟಾಗುತ್ತದೆ. ಈ ಕಿರುಚಿತ್ರದ ಹೆಸರು 'ಗೌರಿ'. 26 ನಿಮಿಷದ ಈ ಗೌರಿ ಹೆಸರಿನ ಕಿರುಚಿತ್ರ ನಿಮ್ಮಲ್ಲಿ ಬದುಕುವ ಹುಮ್ಮಸ್ಸನ್ನುಂಟು ಮಾಡುತ್ತದೆ. ಈ ಕಿರುಚಿತ್ರ ನೋಡಿದ್ರೆ ಬಳಿಕ ಜೀವನದ ಪ್ರತಿಯೊಂದು ಕ್ಷಣವನ್ನು ಆನಂದಿಸಬೇಕೆಂಬ ಹೆಬ್ಬಯಕೆ ಉಂಟಾಗುತ್ತದೆ. ಗೌರಿಯಾಗಿ ಜೋಡಿಹಳ್ಳಿ ಸೀರಿಯಲ್ ಖ್ಯಾತಿಯ ಚೈತ್ರಾ ರಾವ್ ನಟಿಸಿದ್ದಾರೆ. ಈ ಕಿರುಚಿತ್ರ ನೋಡಿದಾಗ ನಮ್ಮಲ್ಲಿಯೂ ಒಬ್ಬ ಗೌರಿ ಇದ್ದಾಳೆ ಅಲ್ಲವಾ ಅನ್ನಿಸುತ್ತದೆ.
ಯಾರು ಈ ಗೌರಿ? ನಿಮ್ಮಲ್ಲಿಯೂ ಇದ್ದಳಾ?
ಮಹಾನಗರದಲ್ಲಿ ವಾಸಿಸುತ್ತಿರುವ ಮಧ್ಯಮ ವರ್ಗದ ಹುಡುಗಿಯೇ ಗೌರಿ. ದೈನಂದಿನ ಕೆಲಸಗಳಿಂದ ಗೌರಿ ಬೇಸುತ್ತಿರುತ್ತಾಳೆ. ಈ ಎಲ್ಲಾ ಕೆಲಸಗಳಿಂದ ಮುಕ್ತಿ ಪಡೆದುಕೊಳ್ಳಲು ಬಯಸುತ್ತಿರುತ್ತಾಳೆ. ಇದಕ್ಕಾಗಿ ಒಂದೊಳ್ಳೆ ಸಮಯಕ್ಕಾಗಿ ಗೌರಿ ಕಾಯುತ್ತಿರುತ್ತಾಳೆ. ಜೀವನದಿಂದ ಮುಕ್ತಿ ಪಡೆದುಕೊಳ್ಳುವ ಸಂದರ್ಭದಲ್ಲಿಯೇ ಗೌರಿಗೆ, ಹಿಂದೆಂದೂ ಕಾಣಿಸದ ಸಂತೋಷದ ಸಣ್ಣ ಕ್ಷಣಗಳನ್ನು ಕಂಡುಕೊಳ್ಳುತ್ತಾಳೆ.
ಮಾಡುವ ಕೆಲಸದಲ್ಲಿ ನಿರಾಸಕ್ತಿ ಹೊಂದಿರುವ ಗೌರಿ
ಗೌರಿ ಮಧ್ಯಮವರ್ಗದವಳಾಗಿದ್ದು, ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುತ್ತಿರುತ್ತಾರೆ. ಹಾಸಿಗೆ ಹಿಡಿದಿರುವ ವೃದ್ಧನನ್ನು ಆರೈಕೆ ಮಾಡೋದು ಮತ್ತು ಮನೆಗೆಲಸ ಮಾಡೋದು ಗೌರಿಯ ಕೆಲಸ. ಸಂಬಳ ನೀಡುತ್ತಿದ್ರೂ ಗೌರಿಗೆ ತಾನು ಮಾಡುವ ಕೆಲಸದಲ್ಲಿಯೂ ಕೊಂಚವೂ ಆಸಕ್ತಿಯಿರಲ್ಲ. ಮನೆ ಮಾಲೀಕರ ನಿರ್ದೇಶನದ ಮೇರೆಗೆ ಯಂತ್ರದಂತೆ ಎಲ್ಲಾ ಕೆಲಸಗಳನ್ನು ಗೌರಿ ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುತ್ತಿರುತ್ತಾಳೆ.
ಸಾಯುವ ಮುನ್ನ ಚೆಂದದ ಡ್ರೆಸ್ ಮತ್ತು ಸ್ವಲ್ಪ ಮೇಕಪ್
ಹೀಗಿರುವಾಗ ಒಂದು ದಿನ ಗೌರಿಯ ತಾಯಿ, ನಾನು ಪಕ್ಕದ್ಮನೆಯವರ ಜೊತೆಯಲ್ಲಿ ಧರ್ಮಸ್ಥಳಕ್ಕೆ ಹೋಗುತ್ತೇನೆ ಎಂಬ ವಿಷಯ ಹೇಳುತ್ತಾರೆ. ಈ ವೇಳೆ ಮನೆಯಲ್ಲಿ ಒಂಟಿಯಾದ ಗೌರಿ, ಪ್ರಾಣ ಕಳೆದುಕೊಳ್ಳಲು ನಿರ್ಧರಿಸುತ್ತಾಳೆ. ಸತ್ತ ಮೇಲೆ ತಾನು ಚೆನ್ನಾಗಿ ಕಾಣಿಸಬೇಕೆಂದು ಒಳ್ಳೆಯ ಡ್ರೆಸ್ ಧರಿಸಿ ಮೇಕಪ್ ಸಹ ಮಾಡಿಕೊಳ್ಳುತ್ತಾಳೆ. ಎಲ್ಲರಂತೆ ಡೆತ್ ನೋಟ್ ಬರೆಯಲು ಗೌರಿ ಮುಂದಾಗುತ್ತಾಳೆ.
ಕೊನೆ ಕ್ಷಣದಲ್ಲಿ ಸಂತೋಷದ ಕ್ಷಣಗಳು
ತಾನೇಕೆ ಸಾಯುತ್ತಿದ್ದೇನೆಂದು ಗೊತ್ತಿಲ್ಲದ ಗೌರಿಗೆ ತನ್ನ ಸಾವಿಗೆ ಕಾರಣ ಯಾರು ಎಂದು ಬರೆಯಬೇಕೆಂದು ತೋಚುವುದಿಲ್ಲ. ಮೊದಲಿಗೆ ನನ್ನ ಅಮ್ಮನ ತಲೆಕಡೆಸಿರುವ ಟಿವಿ ಸೀರಿಯಲ್‌ಗಳ ಹೆಸರು ಬರೆದ್ರೆ ಹೇಗೆ ಎಂದು ಯೋಚಿಸುತ್ತಾಳೆ. ಒಂದು ವೇಳೆ ರಾಜಕಾರಣಿಗಳ ಹೆಸರು ಬರೆದ್ರೆ ಈ ನ್ಯೂಸ್ ಅವರೇ ಇದನ್ನು ಮುಚ್ಚಿ ಹಾಕ್ತಾರೆ ಎಂದು ಕೊನೆಗೆ ಈ ಸಿನಿಮಾ ಹೀರೋಯಿನ್‌ಗಳ ಹೆಸರು ಬರೀತಿನಿ ಎಂದು ಗೌರಿ ನಗುತ್ತಾಳೆ. ನಂತರ ಗೌರಿ ಒಂದಿಷ್ಟು ಮಾತ್ರೆಗಳನ್ನು ತೆಗೆದುಕೊಳ್ಳುತ್ತಾಳೆ. ಮುಂದೆ ಗೌರಿ ಸಾಯ್ತಾಳೆ? ಮಾತ್ರೆ ತೆಗೆದುಕೊಂಡ ನಂತರ ಆಕೆಯ ಕಣ್ಮುಂದೆ ಬರುವ ವಿಷಯಗಳೇನು? ಆ ಸಮಯದಲ್ಲಿ ಗೌರಿ ಕಂಡುಕೊಳ್ಳುವ ಜೀವನದ ಸಂತೋಷದ ಕ್ಷಣಗಳು ಹೇಗಿರುತ್ತೆ ಎಂಬುದನ್ನು ತಿಳಿದುಕೊಳ್ಳಲು ಶಾರ್ಟ್ ಫಿಲಂ ನೋಡಿ. ಈ ಭಾವನಾತ್ಮಕ ಕಿರುಚಿತ್ರ ಯುಟ್ಯೂಬ್‌ನಲ್ಲಿದ್ದು, ವೀಕ್ಷಕರು ಉಚಿತವಾಗಿ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.