'ವೆಟ್ರಿ'ಯಿಂದಲೇ ಶುರುವಾಗಿತ್ತು ನಟ ವಿಜಯ್ 'ಸೈಲೆಂಟ್ ಆಪರೇಷನ್'.. ಹೆಸರಿನಲ್ಲೇ ಇದೆ ಗೆಲುವಿನ ಮಂತ್ರ!

Published : May 04, 2026, 03:57 PM IST
Thalapathy Vijay

ಸಾರಾಂಶ

2024ರಲ್ಲಿ ಪಕ್ಷ ಘೋಷಣೆ ಮಾಡಿದಾಗ ವಿಜಯ್ ಅವರನ್ನು ಹಲವರು ಲೇವಡಿ ಮಾಡಿದ್ದರು. ಆದರೆ ದಳಪತಿ ಮಾತ್ರ ಚದುರಂಗದಾಟದ ದಾಳಗಳನ್ನು ಬಹಳ ಜಾಣ್ಮೆಯಿಂದ ಉರುಳಿಸಿದರು. ‘ವೆಟ್ರಿ ನಿಚಯಂ’ (ಗೆಲುವು ನಿಶ್ಚಿತ) ಎಂಬ ಘೋಷವಾಕ್ಯದೊಂದಿಗೆ ಜನರ ಮನೆಮನ ತಲುಪಿದರು. ಎಕ್ಸಿಟ್ ಪೋಲ್‌ಗಳ ಲೆಕ್ಕಾಚಾರವನ್ನೆಲ್ಲಾ ಉಲ್ಟಾಪಲ್ಟಾ ಮಾಡಿ, ವಿಜಯ್ ಈಗ ಸಿಎಂ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ.

ದಳಪತಿ ‘ವೆಟ್ರಿ’ಯ ಅಸಲಿ ರಹಸ್ಯ! ಅಂದು ‘ನಾಳೆಯ ತೀರ್ಪು’ ಎಂದಿದ್ದ ನಟ, ಇಂದು ತಮಿಳುನಾಡಿನ ಹೊಸ ಸುಲ್ತಾನ್!

ತಮಿಳುನಾಡು ರಾಜಕೀಯದಲ್ಲಿ ಈಗ ಹೊಸ ಸುನಾಮಿ ಎದ್ದಿದೆ! ಯಾವ ಎಕ್ಸಿಟ್ ಪೋಲ್‌ಗಳಿಗೂ ಸಿಗದ, ಯಾವ ರಾಜಕೀಯ ಪಂಡಿತರಿಗೂ ಊಹಿಸಲು ಸಾಧ್ಯವಾಗದ ಒಂದು ಅದ್ಭುತ ಪವಾಡ ನಡೆದಿದೆ. ಅದುವೇ ದಳಪತಿ ವಿಜಯ್ (Thalapathy Vijay) ಅವರ 'ತಮಿಳಗ ವೆಟ್ರಿ ಕಳಗಂ' (TVK) ಪಕ್ಷದ ಅಭೂತಪೂರ್ವ ಗೆಲುವು. 2026ರ ಈ ವಿಧಾನಸಭಾ ಫಲಿತಾಂಶ ಇಡೀ ದೇಶವನ್ನೇ ಬೆರಗುಗೊಳಿಸಿದೆ. ಆದರೆ, ವಿಜಯ್ ಅವರ ಈ ರಾಜಕೀಯ ಗೆಲುವಿನ ರಹಸ್ಯ ಅಡಗಿರುವುದು ಅವರು ಚಿತ್ರರಂಗಕ್ಕೆ ಕಾಲಿಟ್ಟ ಮೊದಲ ದಿನದಲ್ಲೇ ಎಂಬುದು ನಿಮಗೆ ಗೊತ್ತೇ?

ಹೆಸರಿನಲ್ಲೇ ಇತ್ತು ಗೆಲುವಿನ ಮಂತ್ರ!

ಕಾಕತಾಳೀಯ ನೋಡಿ, ವಿಜಯ್ ಅವರ ಬಣ್ಣದ ಲೋಕದ ಪಯಣ ಶುರುವಾಗಿದ್ದೇ ‘ವೆಟ್ರಿ’ ಎಂಬ ಸಿನಿಮಾದಿಂದ. ತಮಿಳಿನಲ್ಲಿ ‘ವೆಟ್ರಿ’ ಎಂದರೆ ‘ವಿಜಯ’ ಎಂದರ್ಥ. 1984ರಲ್ಲಿ ಅವರ ತಂದೆ ಎಸ್‌ ಎ ಚಂದ್ರಶೇಖರ್ ನಿರ್ದೇಶಿಸಿದ್ದ ಈ ಚಿತ್ರದಲ್ಲಿ ವಿಜಯ್ ಬಾಲನಟನಾಗಿ ಕಾಣಿಸಿಕೊಂಡಿದ್ದರು. ವಿಶೇಷವೆಂದರೆ, ಆ ಸಿನಿಮಾದಲ್ಲಿ ಅಂದಿನ ಸ್ಟಾರ್ ನಟ ವಿಜಯಕಾಂತ್ ನಾಯಕರಾಗಿದ್ದರು. ಅಂದು ವಿಜಯಕಾಂತ್ ಅವರ ಬಾಲ್ಯದ ಪಾತ್ರ ಮಾಡಿದ್ದ ವಿಜಯ್, ಇಂದು ಅವರಂತೆಯೇ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ತಮ್ಮ ಪಕ್ಷದ ಹೆಸರಿನಲ್ಲೂ (ತಮಿಳಗ ವೆಟ್ರಿ ಕಳಗಂ) 'ವೆಟ್ರಿ' ಎಂಬ ಪದವನ್ನೇ ಇಟ್ಟುಕೊಂಡು ಗೆಲುವಿನ ನಗೆ ಬೀರಿದ್ದಾರೆ. ಬಾಲ್ಯದಲ್ಲೇ ಜೊತೆಗಿದ್ದ 'ವೆಟ್ರಿ' ಈಗ ಸಿಎಂ ಕುರ್ಚಿಯವರೆಗೆ ತಂದು ನಿಲ್ಲಿಸಿದೆ!

ಅಂದು ‘ನಾಳೆಯ ತೀರ್ಪು’, ಇಂದು ‘ಜನರ ತೀರ್ಪು’!

ವಿಜಯ್ ಅವರ ತಂದೆ ಮಗನನ್ನು ಹೀರೋ ಮಾಡಲು ಹಗಲಿರುಳು ಶ್ರಮಿಸಿದ್ದರು. 1992ರಲ್ಲಿ ಮಗನನ್ನು ಹೀರೋ ಆಗಿ ಲಾಂಚ್ ಮಾಡುವಾಗ ಅವರು ಇಟ್ಟ ಹೆಸರೇ ‘ನಾಳಯ ತೀರ್ಪು’ (ನಾಳೆಯ ತೀರ್ಪು). ಅಂದು ಆ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಷ್ಟೇನೂ ಸದ್ದು ಮಾಡದಿದ್ದರೂ, ಆ ಶೀರ್ಷಿಕೆ ಮಾತ್ರ ವಿಜಯ್ ಅವರ ಭವಿಷ್ಯವನ್ನು ಬರೆದಂತಿತ್ತು. ಅಂದು ತಂದೆ ಕಂಡ ಮಗನ ಗೆಲುವಿನ ಕನಸು, ಇಂದು ತಮಿಳುನಾಡಿನ ಜನರ ‘ಅಂತಿಮ ತೀರ್ಪು’ ಆಗಿ ಹೊರಹೊಮ್ಮಿದೆ.

ರಜನಿ-ಕಮಲ್ ಮಾಡದ ಮ್ಯಾಜಿಕ್ ವಿಜಯ್ ಮಾಡಿದ್ದೇಗೆ?

ತಮಿಳು ಚಿತ್ರರಂಗದ ಇಬ್ಬರು ದೈತ್ಯ ಶಿಖರಗಳಾದ ರಜನಿಕಾಂತ್ ಮತ್ತು ಕಮಲ್ ಹಾಸನ್ ರಾಜಕೀಯದ ಮಾತುಗಳನ್ನಾಡಿದರು. ರಜನಿಕಾಂತ್ ಕೊನೆ ಕ್ಷಣದಲ್ಲಿ ಹಿಂದೆ ಸರಿದರೆ, ಕಮಲ್ ಹಾಸನ್ ಪಕ್ಷ ಕಟ್ಟಿ ಸೋತು ಸುಣ್ಣವಾದರು. ಆದರೆ ವಿಜಯ್ ಹಾದಿ ಬೇರೆಯೇ ಇತ್ತು. ಅವರು ಎಲ್ಲೂ ಅಬ್ಬರಿಸಲಿಲ್ಲ, ಅನಗತ್ಯ ಹೇಳಿಕೆ ನೀಡಲಿಲ್ಲ. ಬದಲಾಗಿ, ಸದ್ದಿಲ್ಲದೆ ಹಿನ್ನೆಲೆಯಲ್ಲಿ ಸಂಘಟನೆಯನ್ನು ಬಲಪಡಿಸಿದರು. ವಿಜಯ್ ರಾಜಕೀಯಕ್ಕೆ ಬರುತ್ತಾರೆ ಎಂಬ ಗುಲ್ಲೆದ್ದಾಗಲೂ ಅವರು ಮೌನವಾಗಿದ್ದರು. ಅವರ ಈ ‘ಸೈಲೆಂಟ್ ಆಪರೇಷನ್’ ಇಂದು ‘ವೈಲೆಂಟ್ ರಿಸಲ್ಟ್’ ನೀಡಿದೆ!

ಎರಡೇ ವರ್ಷದಲ್ಲಿ ಹಿಸ್ಟರಿ ಕ್ರಿಯೇಟ್!

2024ರಲ್ಲಿ ಪಕ್ಷ ಘೋಷಣೆ ಮಾಡಿದಾಗ ವಿಜಯ್ ಅವರನ್ನು ಹಲವರು ಲೇವಡಿ ಮಾಡಿದ್ದರು. ಆದರೆ ದಳಪತಿ ಮಾತ್ರ ಚದುರಂಗದಾಟದ ದಾಳಗಳನ್ನು ಬಹಳ ಜಾಣ್ಮೆಯಿಂದ ಉರುಳಿಸಿದರು. "ವೆಟ್ರಿ ನಿಚಯಂ.. ವೆಟ್ರಿ ನಿಚಯಂ.." (ಗೆಲುವು ನಿಶ್ಚಿತ) ಎಂಬ ಘೋಷವಾಕ್ಯದೊಂದಿಗೆ ಜನರ ಮನೆಮನ ತಲುಪಿದರು. ಎಕ್ಸಿಟ್ ಪೋಲ್‌ಗಳ ಲೆಕ್ಕಾಚಾರವನ್ನೆಲ್ಲಾ ಉಲ್ಟಾಪಲ್ಟಾ ಮಾಡಿದ ವಿಜಯ್, ಕೇವಲ ಎರಡೇ ವರ್ಷಗಳಲ್ಲಿ ಅಧಿಕಾರದ ಹೊಸ್ತಿಲಿಗೆ ಬಂದು ನಿಂತಿರುವುದು ಸಾಮಾನ್ಯ ಸಾಧನೆಯಲ್ಲ.

ಒಂದೆಡೆ ವಿಜಯ್-ತ್ರಿಷಾ ಅವರ ಬಾಂಧವ್ಯದ ಬಗ್ಗೆ ಗಾಸಿಪ್‌ಗಳು ಹರಿದಾಡುತ್ತಿದ್ದರೂ, ಅದಾವುದಕ್ಕೂ ತಲೆಕೆಡಿಸಿಕೊಳ್ಳದ ದಳಪತಿ, ಇಂದು ತಮಿಳುನಾಡಿನ ‘ರಿಯಲ್ ಹೀರೋ’ ಆಗಿ ಉದಯಿಸಿದ್ದಾರೆ. ಚಿತ್ರಮಂದಿರದಲ್ಲಿ ಶಿಳ್ಳೆ ಹೊಡೆಯುತ್ತಿದ್ದ ಅಭಿಮಾನಿಗಳು ಇಂದು ಮತಯಂತ್ರದ ಮೂಲಕ ತಮ್ಮ ನೆಚ್ಚಿನ ನಟನನ್ನು ಸಿಎಂ ಪೀಠದ ಮೇಲೆ ಕೂರಿಸಿದ್ದಾರೆ. ಇದು ಬರಿ ಆರಂಭವಷ್ಟೇ, ದಳಪತಿಯ ಆಡಳಿತದ ‘ರಿಯಲ್ ಪಿಕ್ಚರ್’ ಇನ್ನು ಮುಂದೆ ಶುರುವಾಗಲಿದೆ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ರಾಮಾಯಣ ಸಿನಿಮಾ ನಂತರ ಬ್ರೇಕ್ ತಗೊಳ್ತೀನಿ: ಯಶ್‌ ನಿರ್ಧಾರಕ್ಕೆ ಕಾರಣವೇನು?
ಶಾಕಿಂಗ್ ಸತ್ಯ: ದಳಪತಿ ವಿಜಯ್ ತಂದೆ ಕನ್ನಡದ ಸೂಪರ್ ಹಿಟ್ ಸಿನಿಮಾಗಳ ಡೈರೆಕ್ಟರ್; ಎಷ್ಟೋ ಜನಕ್ಕೆ ಗೊತ್ತಿಲ್ಲ!