
ಯಾವ ನೆಲದಲ್ಲಿ ನೆತ್ತರು ಹರಿದಿತ್ತೋ.. ಎಲ್ಲಿ ದಳಪತಿ ವಿಜಯ್ (Thalapathy Vijay) ರಾಜಕೀಯ ಭವಿಷ್ಯ ಮುಗಿಯಿತು ಅಂತ ವಿರೋಧಿಗಳು ಅಟ್ಟಹಾಸಗೈದಿದ್ದರೋ.. ಅದೇ ಕರೂರಿನ ಮಣ್ಣಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಹೆಜ್ಜೆ ಇಟ್ಟಿದ್ದಾರೆ ಜೋಸೆಫ್ ವಿಜಯ್. ಅಂದು ಹೆಣ ಬಿದ್ದ ಜಾಗದಲ್ಲಿ ಇಂದು ಬದುಕಿನ ಭರವಸೆ ಬಿತ್ತಿದ್ದಾರೆ. ಕಾಲ್ತುಳಿತದಲ್ಲಿ ಪ್ರಾಣ ಕಳೆದುಕೊಂಡು ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರಿ ಕೆಲಸ ಕೊಟ್ಟು ಕಣ್ಣೀರು ಒರೆಸಿದ್ದಾರೆ. ಅಷ್ಟೇ ಅಲ್ಲ ಈ ದುರಂಥ ಸಂಭವಿಸಲು ಕಾರಣವಾದ ರಕ್ತ ರಾಜಕೀಯವನ್ನ ಹೊರಗೆ ತರ್ತೀನಿ ಅಂತ ಹೇಳಿ ವಿರೋಧಿಗಳ ಎದೆಯಲ್ಲಿ ನಡುಕ ಹುಟ್ಟಿಸಿದ್ದಾರೆ.
ಕಣ್ಣೀರಿಟ್ಟ ಕರೂರು..! ಸಂತ್ರಸ್ಥ ಕುಟುಂಬಗಳಿಗೆ ಸರ್ಕಾರಿ ಕೆಲಸ..!
ಕರೂರು.. ತಮಿಳುನಾಡಿನ ಒಂದು ಪುಟ್ಟ ಜಿಲ್ಲೆ. ಆದರೆ ತಮಿಳುನಾಡು ರಾಜಕೀಯದ ಇತಿಹಾಸ ಬರೆಯುವಾಗ ಈ ಹೆಸರನ್ನ ಯಾರೂ ಮರೆಯಲು ಸಾಧ್ಯವಿಲ್ಲ. ಕಳೆದ ವರ್ಷ ಅಂದರೆ ಸೆಪ್ಟೆಂಬರ್ 2025 ರಲ್ಲಿ ಇದೇ ಕರೂರಿನ ವೆಲುಸಾಮಿಪುರಂನಲ್ಲಿ ತಮಿಳಗ ವೆಟ್ರಿ ಕಳಗಂ ಪಕ್ಷದ ಬೃಹತ್ ರ‍್ಯಾಲಿ ನಡೆದಿತ್ತು. ವಿಜಯ್ ನೋಡಲಿಕ್ಕೆ, ಅವರ ಭಾಷಣ ಕೇಳಲಿಕ್ಕೆ ಸಾವಿರಾರು ಜನ ನೆರೆದಿದ್ರು.
ಆದರೆ, ಆ ರ‍್ಯಾಲಿ ದುರಂತದಲ್ಲಿ ಕೊನೆಗೊಂಡಿತು. ಕಾಲ್ತುಳಿತಕ್ಕೆ ಸಿಲುಕಿ ಬರೋಬ್ಬರಿ 41 ಅಮಾಯಕ ಜೀವಗಳು ಬಲಿಯಾದವು. ಪೊಲೀಸರ ಅಚಾತುರ್ಯವೋ, ಜನರ ಅಜಾಗರೂಕತೆಯೋ, ಒಟ್ನಲ್ಲಿ ಏಕಾಏಕಿ ಸಂಭವಿಸಿದ ಕಾಲ್ತುಳಿತದಲ್ಲಿ ಪುಟ್ಟ ಮಕ್ಕಳೂ ಸೇರಿದಂತೆ 41 ಜನರು ಪ್ರಾಣಬಿಟ್ಟರು.
ಆವತ್ತು ಆಡಳಿತ ಪಕ್ಷವಾಗಿದ್ದ ಡಿಎಂಕೆ, ವಿರೋದ ಪಕ್ಷವಾಗಿ ಎಐಎಡಿಎಂಕೆ ಇದರ ಹೊಣೆಯನ್ನ ವಿಜಯ್ ತಲೆಗೆ ಕಟ್ಟಿದ್ವು. ವಿಜಯ್ ರಾಜಕೀಯ ಮುಗಿಯಿತು, ಅವರ ಜನಪ್ರಿಯತೆಯೇ ಜನರ ಪ್ರಾಣಕ್ಕೆ ಕಂಟಕವಾಯಿತು ಅಂತ ಅಪಪ್ರಚಾರ ಮಾಡಿದ್ರು.
ಆದರೆ, ಕಾಲ ಚಕ್ರ ಉರುಳಿದೆ. ಇದು 2026 ರ ಜುಲೈ. ಆವತ್ತು ರ‍್ಯಾಲಿ ನಡೆಸಲು ಬಂದಿದ್ದ ನಟ ವಿಜಯ್, ಈಗ ಅದೇ ಕರೂರಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕೃತ ಭೇಟಿ ನೀಡಿದ್ದಾರೆ.
ವಿಜಯ್ ಭೇಟಿ ಕೇವಲ ಒಂದು ಸರ್ಕಾರಿ ಪ್ರವಾಸವಲ್ಲ; ಇದು ಇತಿಹಾಸದ ಸವಾಲಿಗೆ ವಿಜಯ್ ನೀಡಿರೋ ಎದಿರು-ಬದಿರು ಉತ್ತರ! ಆವತ್ತು ಪ್ರಾಣ ಕಳೆದುಕೊಂಡ 32 ಕುಟುಂಬಗಳ ವಾರಸುದಾರರಿಗೆ ಸ್ವತಃ ಸಿಎಂ ವಿಜಯ್ ಸರ್ಕಾರಿ ಉದ್ಯೋಗದ ನೇಮಕಾತಿ ಪತ್ರವನ್ನ ಹಸ್ತಾಂತರಿಸಿದ್ದಾರೆ.
ರಾಜಕೀಯ ಅಧಿಕಾರದ ಹಸಿವಿನ ನಡುವೆ ಅಮಾಯಕರ ಕಣ್ಣೀರು ಸದಾ ಕಡೆಗಣಿಸಲ್ಪಡುತ್ತೆ ಅನ್ನೋ ಮಾತಿದೆ. ಆದರೆ ವಿಜಯ್ ಈ ಭೇಟಿಯ ಮೂಲಕ ಹೊಸದೊಂದು ಸಂದೇಶವನ್ನ ಹೊರಟಿದ್ದಾರೆ. 2025 ರ ಆ ಕಪ್ಪು ದಿನದಂದು ಮಡಿದವರ ಕುಟುಂಬಕ್ಕೆ ಅಂದಿನ ಡಿಎಂಕೆ ಸರ್ಕಾರ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿತ್ತು. ಆದರೆ ವಿಜಯ್ ವೈಯಕ್ತಿಕವಾಗಿ 20 ಲಕ್ಷ ರೂಪಾಯಿ ನೀಡಿದ್ರು. ಅಷ್ಟೇ ತಮ್ಮ ಸರ್ಕಾರ ಬಂದ್ರೆ ಮಡಿದವರ ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಕೊಡ್ತಿನಿ ಅಂದಿದ್ರು. ಆ ಮಾತನ್ನ ಈಗ ಈಡೇರಿಸಿದ್ದಾರೆ ದಳಪತಿ.
ಕೊಲೆಗಾರರಿಗೆ ಕ್ಷಮೆಯಿಲ್ಲ.. ಜನರ ಕೈಬಿಡಲ್ಲ ಜನನಾಯಕನ ಶಪಥ..!
ಹೌದು, ಕರೂರಿನಲ್ಲಿ ನೆರೆದ ಜನಸಾಗರ ಎದುರು ಬೆಂಕಿ ಭಾಷಣ ಮಾಡಿರೋ ವಿಜಯ್ , ಕರೂರಿನ ಕಾಲ್ತುಳಿತ ದುರಂತಕ್ಕೆ ಅಂದಿನ ಡಿಎಂಕೆ ಸರ್ಕಾರದ ಕಪಟ, ಮತ್ತು ಪೊಲೀಸರ ನಾಟಕವೇ ಕಾರಣ ಅಂತ ಆರೋಪ ಮಾಡಿದ್ದಾರೆ.
ನಾವು ಅರಿಯಲೂರ್‌ನಲ್ಲಿ ನಮ್ಮ ಸಭೆಯನ್ನು ಮುಗಿಸಿ ಪೆರಂಬಲೂರ್‌ಗೆ ತೆರಳುವ ಮುನ್ನ, ಅಲ್ಲಿನ ಪೊಲೀಸರು ನಮಗೆ ಮುನ್ನೆಚ್ಚರಿಕೆ ನೀಡಿದರು. 'ಇಲ್ಲಿ ನಿರೀಕ್ಷೆಗಿಂತಲೂ ಹೆಚ್ಚಿನ ಜನಸಂದಣಿ ಇದೆ, ಈಗಾಗಲೇ ತುಂಬಾ ತಡವಾಗಿದೆ, ಆದ್ದರಿಂದ ದಯವಿಟ್ಟು ಇಲ್ಲಿಗೆ ಬರಬೇಡಿ' ಎಂದು ಅವರು ನಮಗೆ ತಿಳಿಸಿದರು. ನಮಗೆ ಬೇರೆ ಯಾವುದೇ ದಾರಿ ಇರಲಿಲ್ಲ, ಏಕೆಂದರೆ ಕಾನೂನು ಸುವ್ಯವಸ್ಥೆ ಮತ್ತು ಪೊಲೀಸರ ಸೂಚನೆಗಳನ್ನು ನಾವು ಗೌರವಿಸಲೇಬೇಕಾಗುತ್ತದೆ. ಅದೇ ಸಮಯದಲ್ಲಿ ಪೆರಂಬಲೂರ್ ಜನರ ಸುರಕ್ಷತೆಯನ್ನು ಮನಸ್ಸಿನಲ್ಲಿಟ್ಟುಕೊಂಡು, ನಾವು ತೀವ್ರವಾದ ಮನದ ನೋವಿನೊಂದಿಗೇ ಅಲ್ಲಿಂದ ವಾಪಸ್ ಬರಬೇಕಾಯಿತು. ತದನಂತರ ನಾವು ಪೆರಂಬಲೂರ್ ಕ್ಷೇತ್ರದ ಜನರಲ್ಲಿ ಕ್ಷಮೆಯನ್ನೂ ಸಹ ಯಾಚಿಸಿದೆವು.
ಇದೇ ರೀತಿ, ನಾವು ನಾಮಕ್ಕಲ್‌ನಲ್ಲಿ ನಮ್ಮ ಸಭೆಯನ್ನು ಮುಗಿಸಿ ಕರೂರ್ ಗೆ ಬರುವ ಮುನ್ನ, ಕರೂರ್ ಪೊಲೀಸರು ಸಹ ನಮಗೆ ಮುಂಚಿತವಾಗಿಯೇ ಇಂತಹ ಮುನ್ನೆಚ್ಚರಿಕೆಯನ್ನು ನೀಡಬಹುದಿತ್ತಲ್ಲವೇ? )
ಹೌದು ಆವತ್ತಿನ ದುರಂತಕ್ಕೆ ಪೊಲೀಸರು ಆಡಿದ ನಾಟಕವೇ ಕಾರಣ ಅಂತ ಆರೋಪಿಸಿದ್ದಾರೆ ವಿಜಯ್. ಅಷ್ಟೇ ಅಲ್ಲ ಹಿಂದಿನ ಡಿಎಂಕೆ ಸರ್ಕಾರ ಸಂಚು ಮಾಡಿತ್ತು. ಅದರಿಂದಲೇ ಇಲ್ಲಿ ರಕ್ತ ಹರಿಯಿತು ಅಂದಿದ್ದಾರೆ.
ನಾವು ಕರೂರ್ ಪೊಲೀಸರನ್ನು ಸಂಪೂರ್ಣವಾಗಿ ನಂಬಿದ್ದೆವು. ನಾನು ಅವರೊಂದಿಗೆ ಮಾತನಾಡುವಾಗ ಅವರಿಗೆ ಧನ್ಯವಾದಗಳನ್ನೂ ಸಹ ಅರ್ಪಿಸಿದ್ದೆ. ಆದರೆ ಇದರ ಹಿಂದೆ ಇಂತಹದ್ದೊಂದು ದೊಡ್ಡ ರಾಜಕೀಯ ಪಿತೂರಿ ಮತ್ತು ನಾಟಕ ನಡೆಯುತ್ತಿದೆ ಎಂಬುದು ನನಗೆ ತಿಳಿದಿರಲಿಲ್ಲ. ಇದಕ್ಕೆಲ್ಲಾ ನಿಜವಾದ ಕಾರಣ ಯಾರು? ಇದೆಲ್ಲವನ್ನೂ ಯಾರ ಸೂಚನೆಯ ಮೇರೆಗೆ ಮಾಡಲಾಯಿತು? 'ಹೀಗೆ ಮಾಡಿ, ಹಾಗೆ ಮಾಡಿ, ಒಂದು ವೇಳೆ ಆ ರೀತಿ ನಡೆದರೆ ಈ ರೀತಿ ಮಾಡಿ' ಎಂದು ಮುಂಚಿತವಾಗಿಯೇ ಯೋಜನೆಗಳನ್ನು ರೂಪಿಸಿ, ನಮ್ಮ ಮೇಲೆ ಒತ್ತಡ ಹೇರಿದವರು ಯಾರು?
ಹೀಗೆ ನೇರವಾಗಿಯೇ ಡಿಎಂಕೆ ಮೇಲೆ ಆರೋಪ ಮಾಡಿರೋ ವಿಜಯ್, ಆ ಕೊಲೆಗಡುರನ್ನ ಸುಮ್ಮನೆ ಬಿಡಲ್ಲ ಅಂದಿದ್ದಾರೆ. ಅವರ ಭ್ರಷ್ಟಾಚಾರ ಹೊರಗೆಳೆದು ಬೆತ್ತಲೆ ಮಾಡ್ತಿನಿ ಅಂತ ಅಬ್ಬರಿಸಿದ್ದಾರೆ.
ವಿರೋಧಿಗಳು ಯಾವ ಮಣ್ಣಿನಲ್ಲಿ ದಳಪತಿ ಕಥೆ ಮುಗಿಯಿತು ಅಂದುಕೊಂಡಿದ್ದರೋ, ಅದೇ ಮಣ್ಣಿನಿಂದ ವಿಜಯ್ ತಮ್ಮ ರಾಜಕೀಯ ಸಾಮ್ರಾಜ್ಯದ ನೈಜ ವಿಸ್ತರಣೆಯನ್ನು ಆರಂಭಿಸಿದ್ದಾರೆ. ಇದು ಕೇವಲ ನೌಕರಿ ಕೊಡುವ ಕಾರ್ಯಕ್ರಮವಲ್ಲ, ಮುಂಬರುವ ತಮಿಳುನಾಡು ರಾಜಕೀಯ ಸಮರಕ್ಕೆ ದಳಪತಿ ವಿಜಯ್ ಇಟ್ಟಿರುವ ಅತ್ಯಂತ ಚಾಣಾಕ್ಷ ನಡೆ ಅಂತಿದ್ದಾರೆ ರಾಜಕೀಯ ಪಂಡಿತರು..!
ಈ ಸ್ಟೋರಿಯನ್ನು'ಸಿನಿಮಾ ಹಂಗಾಮ'ದಲ್ಲಿ ನೋಡಿ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.