
ಸಾಹಸಸಿಂಹ ಡಾ.ವಿಷ್ಣುವರ್ಧನ್ ನಟನೆಯ ಡಿಸೆಂಬರ್ 31 ಸಿನಿಮಾ ನಿರ್ದೇಶನ ಮಾಡಿದ್ದ ತಮಿಳಿನ ಖ್ಯಾತ ನಟ ಮತ್ತು ನಿರ್ದೇಶಕ ಮನೋಬಾಲಾ ನಿಧನಹೊಂದಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳುತ್ತಿದ್ದ ನಟ ಮನೋಬಾಲ ಅವರು ಇಂದು (ಮೇ 3) ಬೆಳಗ್ಗೆ ಚೆನ್ನೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಕಳೆದ ಎರಡು ವಾರಗಳಿಂದ ಯಕೃತ್ತಿನ ಸಮಸ್ಯೆಯಿಂದ ಬಳುತ್ತಿದ್ದ ಮನೋಬಾಲ ಅವರು ತಮ್ಮ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮನೋಬಾಲ ನಿಧನರಾಗಿದ್ದಾರೆ. ಮನೋಬಾಲ ನಿಧನ ತಮಿಳು ಸಿನಿಮಾರಂಗಕ್ಕೆ ದೊಡ್ಡ ಆಘಾತತಂದಿದೆ.
ನಟ ಮನೋಬಾಲ ಅವರು ಸುಮಾರು 3 ವರ್ಷಗಳ ವೃತ್ತಿ ಜೀವನದಲ್ಲಿ 450ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ಪತ್ನಿ ಉಷಾ ಮತ್ತು ಪುತ್ರ ಹರೀಶ್ ಅವರನ್ನು ಅಗಲಿದ್ದಾರೆ.ನಟ ಮನೋಬಾಲ ಅವರು ಕೇವಲ ತಮಿಳು ಮಾತ್ರವಲ್ಲದೇ, ತೆಲುಗು ಮತ್ತು ಮಲಯಾಳಂನಲ್ಲೂ ನಟಿಸಿದ್ದಾರೆ. ಹಾಸ್ಯಕಲಾವಿದರಾಗಿ ಖ್ಯಾತಿಗಳಿಸಿದ್ದ ಮನೋಬಾಲ ಅವರು ಸಾವು ಅಭಿಮಾನಿಗಳಿಗೆ, ಆಪ್ತರಿಗೆ ದುಃಖ ತಂದಿದೆ.
ಮನೋಬಾಲಾ ಅವರು 1979 ರಲ್ಲಿ ಭಾರತಿರಾಜ ಅವರ 'ಪುತಿಯ ವಾರ್ಪುಗಳ್' ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು. ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ವರದಿಯ ಪ್ರಕಾರ ಮನೋಬಾಲ ಅವರು ಭಾರತಿರಾಜ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಸೇರಿಕೊಂಡರು. ಅನೇಕ ಸಿನಿಮಾಗಳಲ್ಲಿ ನಟಿಸಿರುವ ಮನೋಬಾಲ, ಕೊನೆಯದಾಗಿ ಕಾಜಲ್ ಅಗರ್ವಾಲ್ ಅವರ ಘೋಸ್ಟಿಯಲ್ಲಿ ನಟಿಸಿದ್ದರು. 2023ರಲ್ಲಿ ಮನೋಬಾಲ ಅವರ 3 ಸಿನಿಮಾಗಳು ರಿಲೀಸ್ ಆಗಿವೆ. ಮೆಗಾಸ್ಟಾರ್ ಚಿರಂಜೀವಿ ನಟನೆಯ ವಾಲ್ಟರ್ ವೀರಯ್ಯ, ಕೊಂಡ್ರಾಲ್ ಪಾವಂ ಮತ್ತು ಘೋಷ್ಟಿ ಸಿನಿಮಾದಲ್ಲಿ ನಟಿಸಿದ್ದರು.
1979ರಲ್ಲಿ ನಟನಾಗಿ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ಮನೋಬಾಲ 1982ರಲ್ಲಿ ನಿರ್ದೇಶನಕ್ಕೆ ಇಳಿದರು. ಅಗಾಯ ಗಂಗೈ ಸಿನಿಮಾ ಮನೋಬಾಲ ನಿರ್ದೇಶನದ ಮೊದಲ ಸಿನಿಮಾ. ಸುಮಾರು 25 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಪಿಳ್ಳೈ ನಿಲಾ, ಎನ್ ಪುರುಷಾನ್ತನ್ ಎನಕ್ಕು ಮಟ್ಟುಮ್ತಾನ್, ಕರುಪ್ಪು ವೆಳ್ಳೈ, ಮಲ್ಲು ವೆಟ್ಟಿ ಮೈನರ್ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟನೆ ನಿರ್ದೇಶನ ಮಾತ್ರವಲ್ಲದೇ ಸಿನಿಮಾ ನಿರ್ಮಾಣವನ್ನು ಮಾಡಿದ್ದಾರೆ. ಜೊತೆಗೆ ಕಿರುತೆರೆಯಲ್ಲೂ ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.