ಜಕ್ಕಣ್ಣನ ಕೋಟೆಗೆ ಕನ್ನ; ಲೀಕ್‌ ಆಯ್ತು ʻವಾರಣಾಸಿʼ ಸ್ಟೋರಿ ಲೈನ್, ಈಗೇನ್‌ ಮಾಡ್ತಾರೆ ನಿರ್ದೇಶಕ ರಾಜಮೌಳಿ?

Published : Apr 09, 2026, 05:59 PM IST
SS Rajamouli Mahesh Babu

ಸಾರಾಂಶ

ಕೇವಲ ಮಹೇಶ್ ಬಾಬು ಮಾತ್ರವಲ್ಲದೆ, ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ, ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾದಲ್ಲಿ ದೊಡ್ಡ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 2027ರ ಏಪ್ರಿಲ್‌ನಲ್ಲಿ ಈ ಸಿನಿಮಾ ತೆರೆಗೆ ಬರುವ ಪ್ಲ್ಯಾನ್ ಇದೆ. ಆದರೆ ಈಗ ಹೀಗಾಗಿದೆ! ಮುಂದೇನು?

ವಾರಣಾಸಿ ಕಥೆ ಲೀಕ್, ಮುಂದೇನು ಗತಿ?

ಇಡೀ ವಿಶ್ವವೇ ಎದುರು ನೋಡುತ್ತಿರುವ ಸಿನಿಮಾ ಅಂದ್ರೆ ಅದು ‘SSMB29’. ರಾಜಮೌಳಿ (SS Rajamouli) ಮತ್ತು ಮಹೇಶ್ ಬಾಬು (Mahesh Babu) ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಈ ಪ್ಯಾನ್ ವರ್ಲ್ಡ್ ಸಿನಿಮಾ ‘ವಾರಣಾಸಿ’ (Varanasi) ಸದ್ಯ ಸಿನಿರಂಗದ ಹಾಟ್ ಟಾಪಿಕ್. ಎಲ್ಲವೂ ಗುಟ್ಟಾಗಿ ನಡೆಯುತ್ತಿದೆ ಅಂದುಕೊಳ್ಳುವಷ್ಟರಲ್ಲಿ, ಚಿತ್ರತಂಡಕ್ಕೆ ಭಾರಿ ಆಘಾತ ಎದುರಾಗಿದೆ. ರಾಜಮೌಳಿ ಎಷ್ಟೇ ರಹಸ್ಯವಾಗಿ ಕಥೆ ಬಚ್ಚಿಟ್ಟರೂ, ಹಾಲಿವುಡ್ ಮಟ್ಟದ ಒಂದು ಎಡವಟ್ಟಿನಿಂದ ಈಗ ಇಡೀ ಚಿತ್ರದ ಕಥೆ ಸೋರಿಕೆಯಾಗಿದೆ ಎಂಬ ಸುದ್ದಿ ಗಾಂಧಿನಗರದಿಂದ ಹಿಡಿದು ಹಾಲಿವುಡ್‌ವರೆಗೆ ಸಂಚಲನ ಮೂಡಿಸಿದೆ!

ಹಾಲಿವುಡ್ ಸಂಸ್ಥೆಯಿಂದಲೇ ಆಯ್ತು ಎಡವಟ್ಟು!

‘ವಾರಣಾಸಿ’ ಸಿನಿಮಾದ ವಿಎಫ್‌ಎಕ್ಸ್ (VFX) ಕೆಲಸಗಳಿಗಾಗಿ ರಾಜಮೌಳಿ ಅವರು ವಿಶ್ವಪ್ರಸಿದ್ಧ ‘ಸಿನೆಸೈಟ್’ (Cinesite) ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ. ಈ ಸಂಸ್ಥೆ ಈ ಹಿಂದೆ ‘ಅಕ್ವಾಮ್ಯಾನ್’, ‘ಸ್ಪೈಡರ್ ಮ್ಯಾನ್’ ಅಂತಹ ಬೃಹತ್ ಸಿನಿಮಾಗಳಿಗೆ ಕೆಲಸ ಮಾಡಿದೆ. ಆದರೆ, ಇದೇ ಸಂಸ್ಥೆಯ ವೆಬ್‌ಸೈಟ್‌ನಲ್ಲಿ ‘ವಾರಣಾಸಿ’ ಸಿನಿಮಾದ ಸಾರಾಂಶ (Synopsis) ಪ್ರಕಟವಾಗಿದ್ದು, ಈಗ ಸೋಶಿಯಲ್ ಮೀಡಿಯಾದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ.

ಏನಿದು ‘ವಾರಣಾಸಿ’ ಕಥೆ? ಟೈಮ್ ಟ್ರಾವೆಲ್ ಜಾದೂ!

ಸೋರಿಕೆಯಾಗಿರುವ ಮಾಹಿತಿಯ ಪ್ರಕಾರ, ಈ ಸಿನಿಮಾದಲ್ಲಿ ಮಹೇಶ್ ಬಾಬು ‘ರುದ್ರ’ ಎಂಬ ಪರಮ ಶಿವಭಕ್ತನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬರೀ ಕಾಡಿನ ಸಾಹಸ ಅಂದುಕೊಂಡಿದ್ದ ಅಭಿಮಾನಿಗಳಿಗೆ ಈಗ ‘ಟೈಮ್ ಟ್ರಾವೆಲ್’ (Time Travel) ಎಂಬ ಎಲಿಮೆಂಟ್ ದೊಡ್ಡ ಕಿಕ್ ಕೊಟ್ಟಿದೆ. ರುದ್ರನು ಕಳೆದುಹೋಗಿರುವ ಬ್ರಹ್ಮಾಂಡದ ಒಂದು ಅದ್ಭುತ ಕಲಾಕೃತಿಯನ್ನು ಹುಡುಕಲು ಸಮಯದ ಹಿಂದಕ್ಕೆ ಪಯಣಿಸುತ್ತಾನೆ. ಈ ಕಲಾಕೃತಿ ಸಾಕ್ಷಾತ್ ‘ರಾಮಾಯಣ’ ಕಾಲದ್ದು ಎಂಬುದು ಮತ್ತೊಂದು ವಿಶೇಷ!

ಇನ್ನು ಈ ಚಿತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ‘ಕುಂಭ’ ಎಂಬ ವಿಲನ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆರಂಭದಲ್ಲಿ ರುದ್ರನಿಗೆ ಸಹಾಯ ಮಾಡುವಂತೆ ನಟಿಸುವ ಕುಂಭ, ನಂತರ ಆ ರಾಮಾಯಣ ಕಾಲದ ಅಮೂಲ್ಯ ವಸ್ತುವನ್ನು ಪಡೆದು ಇಡೀ ಜಗತ್ತನ್ನೇ ಆಳುವ ದುರುದ್ದೇಶ ಹೊಂದಿರುತ್ತಾನೆ. ಈ ಕುತಂತ್ರವನ್ನು ರುದ್ರ ಹೇಗೆ ಮೆಟ್ಟಿ ನಿಲ್ಲುತ್ತಾನೆ ಎಂಬುದೇ ಸಿನಿಮಾದ ಹೈಲೈಟ್ ಅಂತೆ.

ರಾಜಮೌಳಿ ನೆಕ್ಸ್ಟ್ ಪ್ಲ್ಯಾನ್ ಏನು?

ತಮ್ಮ ಸಿನಿಮಾದ ಒಂದು ಪುಟ್ಟ ಫೋಟೋ ಕೂಡ ಆಚೆ ಬರದಂತೆ ನೋಡಿಕೊಳ್ಳುವ ರಾಜಮೌಳಿ ಅವರಿಗೆ ಈ ಕಥೆ ಸೋರಿಕೆ ವಿಚಾರ ದೊಡ್ಡ ತಲೆನೋವು ತಂದಿದೆ. ಜಕ್ಕಣ್ಣ ಸುಮ್ಮನೆ ಕೂರುವವರಲ್ಲ, ಈಗಲೇ ಭದ್ರತೆಯನ್ನು ಹತ್ತು ಪಟ್ಟು ಹೆಚ್ಚಿಸಿರುವ ಅವರು, ಪ್ರೇಕ್ಷಕರ ಕುತೂಹಲ ಉಳಿಸಿಕೊಳ್ಳಲು ಕಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನು ಮಾಡಿದರೂ ಅಚ್ಚರಿಯಿಲ್ಲ! ಈಗಾಗಲೇ ವಿಜಯೇಂದ್ರ ಪ್ರಸಾದ್ ಅವರ ಕಥೆಯಲ್ಲಿ ಪುರಾಣ, ವಿಜ್ಞಾನ ಮತ್ತು ಜಾನಪದದ ಸಮ್ಮಿಶ್ರಣವಿದ್ದು, ಚಿತ್ರದ ಸ್ಕೇಲ್ ನೋಡಿ ಬಾಲಿವುಡ್‌ನಿಂದ ಹಾಲಿವುಡ್‌ವರೆಗೆ ಎಲ್ಲರೂ ದಂಗಾಗಿದ್ದಾರೆ.

ತಾರಾಗಣದ ಅಬ್ಬರ!

ಕೇವಲ ಮಹೇಶ್ ಬಾಬು ಮಾತ್ರವಲ್ಲದೆ, ಗ್ಲೋಬಲ್ ಸ್ಟಾರ್ ಪ್ರಿಯಾಂಕಾ ಚೋಪ್ರಾ, ಬಹುಭಾಷಾ ನಟ ಪ್ರಕಾಶ್ ರಾಜ್ ಮತ್ತು ಪೃಥ್ವಿರಾಜ್ ಸುಕುಮಾರನ್ ಈ ಸಿನಿಮಾದಲ್ಲಿ ದೊಡ್ಡ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. 2027ರ ಏಪ್ರಿಲ್‌ನಲ್ಲಿ ಈ ಸಿನಿಮಾ ತೆರೆಗೆ ಬರುವ ಪ್ಲ್ಯಾನ್ ಇದೆ.

ಒಟ್ಟಿನಲ್ಲಿ, ಕಥೆ ಲೀಕ್ ಆಗಿದ್ದರೂ ಸಹ, ರಾಜಮೌಳಿ ಅವರ ವಿಶುವಲ್ ಮ್ಯಾಜಿಕ್ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಏಕೆಂದರೆ, ರಾಜಮೌಳಿ ಕಥೆಗಿಂತ ಹೆಚ್ಚಾಗಿ ಅದನ್ನು ತೆರೆಯ ಮೇಲೆ ತೋರಿಸುವ ರೀತಿಯೇ ಬೇರೆ! ‘ವಾರಣಾಸಿ’ ಭಾರತೀಯ ಚಿತ್ರರಂಗದ ಹೊಸ ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಪುಟ್ನಂಜ'ನ ಸುಂದರಿ ಮೀನಾ ಮಾಡಿದ್ರು ರಿಯಲ್ ಎಸ್ಟೇಟ್‌ನಲ್ಲಿ ಸುನಾಮಿ; ನಟಿಯ ಬಂಗಲೆಗೆ ಭಾರೀ ರೇಟ್‌!
Dhurandhar 2 OTT Release: ಬಾಕ್ಸ್‌ ಆಫೀಸ್‌ ನಡುಗಿಸಿರೋ ರಣವೀರ್‌ ಸಿಂಗ್‌ ಸಿನಿಮಾ ಒಟಿಟಿ ರಿಲೀಸ್‌ ಡೇಟ್?