
ನಿಯಮ ಮುರಿದ ಸಾಯಿ ಪಲ್ಲವಿ!
ನಟಿ ಸಾಯಿ ಪಲ್ಲವಿ (Sai Pallavi) ದಕ್ಷಿಣ ಭಾರತದ ಸ್ಟಾರ್ ನಟಿ. ಅದ್ಭುತ ನಟನೆ, ನೃತ್ಯ ಹಾಗೂ ಸೌಂದರ್ಯದಿಂದ ಕೋಟ್ಯಂತರ ಅಭಿಮಾನಿಗಳನ್ನು ಗಳಿಸಿರುವ ಮಾಲಯಾಳಂ ನಟಿ. ಸಾಯಿ ಪಲ್ಲವಿ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ ತಮ್ಮ ವ್ಯಕ್ತಿತ್ವದಿಂದಲೂ ಗಮನ ಸೆಳೆಯುವ ನಟಿ. ಸಮಕಾಲೀನ ಕೆಲವು ನಟಿಯರಂತೆ ಗ್ಲಾಮರಸ್, ಮರ ಸುತ್ತುವ ಪಾತ್ರಗಳಲ್ಲಿ ಮಾತ್ರ ನಟಿಸದೆ ಸಮಾಜಕ್ಕೆ ಸಂದೇಶ ನೀಡಬಯಸುವ, ಅಭಿನಯಕ್ಕೆ ಅವಕಾಶವಿರುವ ಸಿನಿಮಾಗಳಲ್ಲೇ ಹೆಚ್ಚು ಕಾಣಿಸಿಕೊಳ್ಳುತ್ತಾರೆ ಸಾಯಿ ಪಲ್ಲವಿ.
ಆದರೆ... ನಟಿ ಸಾಯಿ ಪಲ್ಲವಿ ಮೊದಲ ಬಾರಿ ಬಾಲಿವುಡ್‌ಗೆ ಕಾಲಿಟ್ಟಿದ್ದು, ಮೊದಲ ಹೆಜ್ಜೆಯಲ್ಲೇ ಪ್ರೇಕ್ಷಕರಿಗೆ ಮೋಡಿ ಮಾಡಿದ್ದಾರೆ. ಜೊತೆಗೆ ಮೊದಲ ಬಾಲಿವುಡ್ ಸಿನಿಮಾ ಮೂಲಕ ಇಷ್ಟು ವರ್ಷ ತಾವೇ ಪಾಲಿಸಿಕೊಂಡು ಬಂದ ಸಂಪ್ರದಾಯವೊಂದನ್ನು ಮುರಿದಿದ್ದಾರೆ. ಸಾಯಿ ಪಲ್ಲವಿ ಹಿಂದಿಯ 'ರಾಮಾಯಣ' ಸಿನಿಮಾನಲ್ಲಿ ರಣವೀರ್ ಕಪೂರ್ ಜೋಡಿಯಾಗಿ ಸೀತೆಯ ಪಾತ್ರದಲ್ಲಿ ನಟಿಸುತ್ತಿರುವುದು ಬಹುತೇಕರಿಗೆ ಗೊತ್ತಿದೆ. ಆದರೆ ಸಾಯಿ ಪಲ್ಲವಿಯ ಮೊದಲ ಬಾಲಿವುಡ್ ಸಿನಿಮಾ ರಾಮಾಯಣ ಅಲ್ಲ, ಬದಲಿಗೆ ಆಮಿರ್ ಖಾನ್ ಪುತ್ರ ಝುನೈದ್ ಖಾನ್ ಜೊತೆಗೆ ನಟಿಸಿರುವ 'ಏಕ್ ದಿನ್'.
ಝುನೈದ್ ಖಾನ್-ಸಾಯಿ ಪಲ್ಲವಿ ಜೊಡಿಯ ಏಕ್ ದಿನ್ ಸಿನಿಮಾ 2024ರ ಆರಂಭದಲ್ಲೇ ಚಿತ್ರೀಕರಣ ಶುರುವಾದರೂ ಬಹಳ ತಡವಾಗಿ ಬಿಡುಗಡೆ ಆಗುತ್ತಿದೆ. ಸಿನಿಮಾದ ಟೀಸರ್ ಇಂದು ಬಿಡುಗಡೆ ಆಗಿದ್ದು, ಅದರಲ್ಲಿ ಸಾಯಿ ಪಲ್ಲವಿ ಹಾಗೂ ಝುನೈದ್ ಖಾನ್ ಇಬ್ಬರೂ ಸಖತ್ ಗಮನ ಸೆಳೆಯುತ್ತಿದ್ದಾರೆ.
ಆಮಿರ್ ಖಾನ್ ಪುತ್ರ ಝುನೈದ್ ಖಾನ್ ನಾಯಕನಾಗಿ ಸಾಯಿ ಪಲ್ಲವಿ ನಾಯಕಿಯಾಗಿರುವ 'ಏಕ್ ದಿನ್' ಸಿನಿಮಾ ಅಪ್ಪಟ ಪ್ರೇಮಕಥಾ ಸಿನಿಮಾ. ಇಬ್ಬರು ಭಾರತೀಯರು ಜಪಾನ್ ದೇಶದಲ್ಲಿ ಪರಸ್ಪರ ಪ್ರೀತಿಗೆ ಬೀಳುವ ಕಥೆಯನ್ನು ಈ ಸಿನಿಮಾ ಒಳಗೊಂಡಿದೆ. ಸಿನಿಮಾದ ಬಹುತೇಕ ಚಿತ್ರೀಕರಣವನ್ನು ಜಪಾನ್‌ನಲ್ಲಿಯೇ ಮಾಡಲಾಗಿದ್ದು, ಸಿನಿಮಾದ ಟೀಸರ್‌ನಲ್ಲಿ ಜಪಾನ್ ಸುಂದರ ತಾಣಗಳು ಅದ್ಭುತವಾಗಿ ಕಾಣುತ್ತಿವೆ.
'ಏಕ್ ದಿನ್' ಸಿನಿಮಾ, ಹೆಸರಿನಂತೆ ಒಂದೇ ದಿನದಲ್ಲಿ ನಡೆಯುವ ಕಥೆಯಾಗಿದೆ. ಇದೀಗ ಬಿಡುಗಡೆ ಆಗಿರುವ ಟೀಸರ್‌ನಲ್ಲಿ ಸಾಯಿ ಪಲ್ಲವಿ ತಮ್ಮ ನಟನೆ, ಸೌಂದರ್ಯದಿಂದ ಭಾರೀ ಗಮನಸೆಳೆಯುತ್ತಿದ್ದಾರೆ. ಝುನೈದ್ ಖಾನ್ ಸಹ ಪ್ರಬುದ್ಧ ನಟನೆ ನೀಡಿದಂತೆ ಟೀಸರ್‌ನಲ್ಲಿ ಕಾಣುತ್ತಿದೆ. ಸಿನಿಮಾದ ಕಥೆ ಇಬ್ಬರು ಪ್ರಬುದ್ಧರ ನಡುವೆ ನಡೆಯುವ ಪ್ರೇಮಕಥೆಯನ್ನು ಒಳಗೊಂಡಿದೆಯಂತೆ.
ಹಿಂದಿಯ 'ಏಕ್ ದಿನ್' ಸಿನಿಮಾವನ್ನು ಸುನಿಲ್ ಪಾಂಡೆ ನಿರ್ದೇಶನ ಮಾಡಿದ್ದಾರೆ. ಸಿನಿಮಾಕ್ಕೆ ರಾಮ್ ಸಂಪತ್ ಸಂಗೀತವಿದೆ. ಈ ಸಿನಿಮಾ 2016ರಲ್ಲಿ ಬಿಡುಗಡೆ ಆಗಿದ್ದ ಥಾಯ್ ಸಿನಿಮಾ 'ಏಕ್ ದಿನ್' ರೀಮೇಕ್ ಆಗಿದೆ. ಈ ಮೊದಲು ನಟಿ ಸಾಯಿ ಪಲ್ಲವಿ ರೀಮೇಕ್ ಸಿನಿಮಾಗಳಲ್ಲಿ ನಟಿಸಿಲ್ಲ. ಒಮ್ಮೆ ರೀಮೇಕ್ ಸಿನಿಮಾ ಎಂಬ ಕಾರಣಕ್ಕೆ ಮೆಗಾಸ್ಟಾರ್ ಚಿರಂಜೀವಿ ಜೊತೆ ನಟಿಸುವ ಅವಕಾಶವನ್ನು ನಿರಾಕರಿಸಿದ್ದರು. ಖುದ್ದು ವೇದಿಕೆ ಮೇಲೆ ತಾವು ರೀಮೇಕ್ ಸಿನಿಮಾನಲ್ಲಿ ನಟಿಸುವುದಿಲ್ಲ ಎಂದಿದ್ದರು. ಆದರೆ ಈಗ ಥಾಯ್ ಭಾಷೆಯ 'ಒನ್ ಡೇ' ಸಿನಿಮಾದ ರೀಮೇಕ್‌ನಲ್ಲಿ ಸಾಯಿ ಪಲ್ಲವಿ ನಟಿಸಿದ್ದಾರೆ. 'ಏಕ್ ದಿನ್' ಸಿನಿಮಾ ಮೇ 1 ರಂದು ಬಿಡುಗಡೆ ಆಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.