
ನೂರು ಸುಳ್ಳು ಹೇಳಿ ಒಂದು ಮದುವೆ ಮಾಡ್ಸು ಅಂತಾರೆ ಹಿರಿಯರು. ಆದ್ರೆ ಸೆಲೆಬ್ರಿಟಿಗಳ ವಿಚಾರದಲ್ಲಿ ಮದುವೆ ಆಗೋ ತನಕ ಗುಟ್ಟು ಮಾಡು ಅನ್ನೋದು ಹೊಸ ಗಾದೆ. ಇಷ್ಟು ಕಾಲ ಪ್ರೀತಿ-ಮದುವೆ ವಿಷ್ಯವನ್ನ ಗುಟ್ಟಾಗಿಟ್ಟಿದ್ದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮದುವೆಗೆ ಮೂರು ದಿನ ಇರೋ ಹೊತ್ತಲ್ಲಿ ಗುಟ್ಟು ರಟ್ಟು ಮಾಡಿದ್ದಾರೆ. ಅಷ್ಟಕ್ಕೂ ಇವರು ಇಷ್ಟು ದಿನ ಪ್ರೀತಿ ಗುಟ್ಟಾಗಿಟ್ಟಿದ್ದು ಯಾಕೆ..? ಈ ಸ್ಟೋರಿ ನೋಡಿ.
ಕೊನೆಗೂ ಮದುವೆ ಮ್ಯಾಟರ್ ಒಪ್ಪಿಕೊಂಡ ವಿರೋಶ್..!
ಮದುವೆಗೆ 3 ದಿನ ಮುನ್ನ ಗುಟ್ಟು ರಟ್ಟು ಮಾಡಿದ ಜೋಡಿ
ಯೆಸ್ ಇದೇ ಗುರುವಾರ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಕಲ್ಯಾಣ ನೆರವೇರ್ತಾ ಇದೆ. ಸದ್ಯ ಸಿನಿಲೋಕದಲ್ಲಿ ಈ ತಾರಾಜೋಡಿಯ ಮದುವೆಯದ್ದೇ ಸದ್ದು ಸುದ್ದಿ.
ಅಷ್ಟಕ್ಕೂ ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಇಲ್ಲಿತನಕ ತಮ್ಮ ಪ್ರೀತಿ ಬಗ್ಗೆ ಬಾಯಿ ಬಿಟ್ಟಿರಲಿಲ್ಲ. 2018ರಿಂದಲೂ ಇಬ್ಬರ ನಡುವೆ ಕುಚ್ ಕುಚ್ ನಡೀತಾ ಇದ್ರೂ ಕುಚ್ ಭಿ ನಹಿ ಅಂತಾನೇ ಹೇಳ್ತಾ ಇದ್ರು. ಇದೀಗ ಮದುವೆಗೆ ಮೂರೇ ದಿನ ಇರೋವಾಗ ಇಬ್ಬರೂ ಸೋಷಿಯಲ್ ಮಿಡಿಯಾದಲ್ಲಿ ಮದುವೆ ವಿಷ್ಯವನ್ನ ರಟ್ಟು ಮಾಡಿದ್ದಾರೆ.
ರಶ್ಮಿಕಾ - ವಿಜಯ್ ಪೋಸ್ಟ್ :
ನಮ್ಮ ಅತ್ಯಂತ ಪ್ರೀತಿಯ ಅಭಿಮಾನಿಗಳೇ ನಾವು ಯಾವುದೇ ಪ್ಲ್ಯಾನ್ ಮಾಡುವ ಮುನ್ನ, ನಮಗಾಗಿ ಯಾವುದನ್ನಾದರೂ ಆಯ್ಕೆ ಮಾಡುವ ಮುನ್ನವೇ ನೀವು ಈಗಾಗಲೇ ನಮ್ಮ ಜೊತೆ ಇದ್ದಿರಿ. ಬಹಳಷ್ಟು ಪ್ರೀತಿಯಿಂದ ನೀವು ನಮಗೆ ಒಂದು ಹೆಸರು ನೀಡಿದ್ದೀರಿ. ನೀವು ನಮ್ಮನ್ನು "VIROSH" ಎಂದು ಕರೆದಿದ್ದೀರಿ.
ಆದ್ದರಿಂದ ಇಂದು, ತುಂಬಿದ ಹೃದಯದಿಂದ ನಮ್ಮ ಈ ಬಾಂಧವ್ಯಕ್ಕೆ ನಿಮ್ಮ ಗೌರವಕ್ಕಾಗಿ ಒಂದು ಹೆಸರು ಕೊಡಲು ಬಯಸುತ್ತೇವೆ.
ಹೌದು ಇಂಥದ್ದೊಂದು ಪೋಸ್ಟ್ನ ಜಂಟಿಯಾಗಿ ಹಂಚಿಕೊಂಡು ತಾವು ಹಸೆಮಣೆ ಏರ್ತಾ ಇದ್ದೀವಿ ಅನ್ನೋದನ್ನ ಹೇಳಿಕೊಂಡಿದ್ದಾರೆ ಈ ಜೋಡಿ.
ವಿಜಯ್-ರಶ್ಮಿಕಾ.. 8 ವರ್ಷ ಗುಟ್ಟಾಗಿಟ್ಟಿದ್ಯಾಕೆ ಪ್ರೀತಿ ವಿಷ್ಯ..?
ಹೌದು ರಶ್ಮಿಕಾ ಮತ್ತು ವಿಜಯ್ ದೇವರಕೊಂಡದು ಭರ್ತಿ 8 ವರ್ಷಗಳ ಪ್ರೀತಿ. ಗೀತ ಗೋವಿಂದಂ ಸೆಟ್ನಲ್ಲಿ ನಟಿಸೋವಾಗಲೇ ಇಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು. ಆದ್ರೆ ಅಲ್ಲಿಂದ ಇಲ್ಲಿತನಕ ಈ ಜೋಡಿ ಅಪ್ಪಿ ತಪ್ಪಿನೂ ತಮ್ಮ ಪ್ರೀತಿನ ಒಪ್ಪಿಕೊಂಡಿರಲಿಲ್ಲ.
ಇವರು ಮಾತ್ರ ಅಲ್ಲ ಸಿನಿಲೋಕದ ಅನೇಕ ಸೆಲೆಬ್ರಿಟಿಗಳು ತಮ್ಮ ಪ್ರೀತಿ ವಿಷ್ಯ ಗುಟ್ಟಾಗಿ ಇಡೋದಕ್ಕೆ ಬಯಸ್ತಾರೆ. ಪ್ರೀತಿಸಿದ್ದೇ ಹೌದು ಎಂದಾದ ಮೇಲೆ ಅದನ್ನ ಒಪ್ಪಿಕೊಳ್ಳೋದಕ್ಕೇನು ಕಷ್ಟ ಅನ್ನೋದು ಫ್ಯಾನ್ಸ್ ಪ್ರಶ್ನೆ.
ಲವ್ ಮ್ಯಾಟರ್ ರಟ್ಟಾದ್ರೆ ಸಿನಿಕರೀಯರ್ ಖತಂ..!?
ಹೌದು ಕಲಾವಿದರಿಗೆ ಅವರ 'ಸಿಂಗಲ್' ಸ್ಟೇಟಸ್ ಅನ್ನೋದು ಒಂದು ರೀತಿಯಲ್ಲಿ ಮಾರ್ಕೆಟ್ ವ್ಯಾಲ್ಯೂ ಇದ್ದಂತೆ. ಕಲಾವಿದರನ್ನ ಅಭಿಮಾನಿಗಳು ಕ್ರಶ್ ಥರ ನೋಡ್ತಾರೆ, ರಿಲೇಶನ್‌ಶಿಪ್‌ನಲ್ಲಿದ್ದಾರೆ ಅಂತ ಗೊತ್ತಾದರೆ ಆ ಕ್ರೇಜ್ ಕಮ್ಮಿ ಆಗಬಹುದು ಅನ್ನೋ ಭಯ ಇವರಿಗೂ ಇರುತ್ತೆ. ನಿರ್ಮಾಪಕರಿಗೂ ಇರುತ್ತೆ. ಸೋ ಮದುವೆ ಆಗೋತನಕ ಈ ಪ್ರೀತಿ ವಿಷ್ಯ ಗುಟ್ಟಾಗೇ ಇರಲಿ ಅಂತ ಬಹಳಷ್ಟು ಸೆಲೆಬ್ರಿಟೀಸ್ ಬಯಸ್ತಾರೆ.
ಇನ್ನೂ ಮೊದಲೇ ಲವ್ ವಿಷಯ ಹೇಳಿ, ಆಮೇಲೆ ಬ್ರೇಕಪ್ ಆದರೆ ಜನರು, ಸಮಾಜ, ಸೋಶಿಯಲ್ ಮೀಡಿಯಾ ಟ್ರೋಲ್‌ಗಳು ಸತಾಯಿಸಿಬಿಡ್ತಾವೆ. ಸೋ ಮದುವೆ ತನಕ ಗಪ್ ಚುಪ್ ಇರೋದೇ ವಾಸಿ ಅಂತ ಸೆಲೆಬ್ರಿಟೀಸ್ ಬಯಸ್ತಾರೆ.
ಇನ್ನೂ ರಶ್ಮಿಕಾ ವಿಚಾರಕ್ಕೆ ಬರೋದಾದ್ರೆ 2017ರಲ್ಲೇ ಕನ್ನಡ ನಟ ರಕ್ಷಿತ್ ಶೆಟ್ಟಿ ಜೊತೆಗೆ ಅವರ ನಿಶ್ಚಿತಾರ್ಥ ಆಗಿತ್ತು. ಮರುವರ್ಷ ಇದು ಮುರಿದುಬಿದ್ದಿತ್ತು. ರಕ್ಷಿತ್ ಜೊತೆಗೆ ಬ್ರೇಕ್ಅಪ್ ಮಾಡಿಕೊಂಡಿದ್ದಕ್ಕೆ ರಶ್ಮಿಕಾನ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗಿತ್ತು. ಅಂಥದ್ರಲ್ಲಿ ವಿಜಯ್ ದೇವರಕೊಂಡ ಜೊತೆ ರಿಲೇಷನ್ ಶಿಪ್ ಒಪ್ಪಿಕೊಂಡ್ರೆ ಮತ್ತಷ್ಟು ಟ್ರೋಲ್ ಆಗ್ತೀನಿ ಅನ್ನೋ ಭಯ ರಶ್ಮಿಕಾನ ಕಾಡಿದ್ದಿರಬಹುದು. ಅಂತೆಯೇ ಇಷ್ಟು ಕಾಲ ಈ ವಿಷ್ಯ ಗುಟ್ಟು ಮಾಡಿರಬಹುದು.
ಒಟ್ಟಾರೆ 8 ವರ್ಷಗಳ ಬಳಿಕ, ಮದುವೆಗೆ ಮೂರೇ ದಿನ ಇರೋ ಹೊತ್ತಲ್ಲಿ ಈ ಜೋಡಿ ಮದುವೆ ಆಗ್ತಿದ್ದೀವಿ ಅಂತ ಒಪ್ಪಿಕೊಂಡಿದೆ. ಇಷ್ಟು ದಿನದ ಸಸ್ಪೆನ್ಸ್ನ ಕೊನೆಗೂ ರಿವೀಲ್ ಮಾಡಿದೆ. ಆದ್ರೆ ಇವರು ಸಸ್ಪೆನ್ಸ್ ಅಂತ ಅಂದುಕೊಂಡಿದ್ದು, ಸಸ್ಪೆನ್ಸ್ ಆಗಿ ಉಳಿದಿರಲಿಲ್ಲ. ಬೆಕ್ಕು ಕಣ್ಣು ಮಚ್ಚಿಕೊಂಡು ಹಾಲು ಕುಡಿದರೆ ಜಗತ್ತಿಗೆ ಗೊತ್ತಾಗದೇ ಇರುತ್ತಾ..? ಅಂತೂ ಇಂತೂ ಎಲ್ಲರಿಗೂ ಗೊತ್ತಿರೋ ವಿಷ್ಯನ ಮತ್ತೊಮ್ಮೆ ಗೊತ್ತು ಮಾಡಿದೆ ಈ ಜೋಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.