OTTಗಳ ಹೊಸ ತಂತ್ರದಿಂದ ಚಿತ್ರರಂಗದಲ್ಲಿ ಬಿಸಿನೆಸ್ ಕ್ರಾಂತಿ: ನ್ಯೂ ಟ್ರೆಂಡ್‌ಗೆ ಪ್ರೇಕ್ಷಕರಿಗೆ ಅಚ್ಚರಿ!

Published : Oct 31, 2025, 11:21 AM IST
OTT release strategy

ಸಾರಾಂಶ

ಸೋಲು, ಗೆಲುವು, ಥಿಯೇಟರ್‌ಗಳಲ್ಲಿ ಸಕ್ಸಸ್‌ಫುಲ್‌ ರನ್ನಿಂಗ್‌, ಹೌಸ್‌ಫುಲ್‌ ಬೋರ್ಡ್‌ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಿನಿಮಾ ಬಿಡುಗಡೆ ಆಗಿ ಒಂದೆರಡು ತಿಂಗಳಲ್ಲಿ ಆ ಚಿತ್ರಗಳನ್ನು ಪ್ರೇಕ್ಷಕನ ಅಂಗೈಗೆ ಕೊಡುತ್ತಿವೆ ಓಟಿಟಿ ವೇದಿಕೆಗಳು.

ಆರ್‌. ಕೇಶವಮೂರ್ತಿ

ದೀಪ ಉರಿಯುವಾಗಲೇ ಮನೆ ಭದ್ರ ಮಾಡ್ಕೊಬೇಕು! ಈ ಮಾತು ಸದ್ಯ ಓಟಿಟಿಗಳಿಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ‘ದೀಪ’ ಎಂದರೆ ಸಿನಿಮಾಗಳು, ‘ಮನೆ’ ಎಂದರೆ ಓಟಿಟಿಗಳ ಬಿಸಿನೆಸ್‌. ಸೋಲು, ಗೆಲುವು, ಥಿಯೇಟರ್‌ಗಳಲ್ಲಿ ಸಕ್ಸಸ್‌ಫುಲ್‌ ರನ್ನಿಂಗ್‌, ಹೌಸ್‌ಫುಲ್‌ ಬೋರ್ಡ್‌ ಇತ್ಯಾದಿಗಳ ಬಗ್ಗೆ ತಲೆ ಕೆಡಿಸಿಕೊಳ್ಳದೆ ಸಿನಿಮಾ ಬಿಡುಗಡೆ ಆಗಿ ಒಂದೆರಡು ತಿಂಗಳಲ್ಲಿ ಆ ಚಿತ್ರಗಳನ್ನು ಪ್ರೇಕ್ಷಕನ ಅಂಗೈಗೆ ಕೊಡುತ್ತಿವೆ ಓಟಿಟಿ ವೇದಿಕೆಗಳು. ಸಣ್ಣ ಬಜೆಟ್‌ನ ಸಿನಿಮಾಗಳಿಗಿಂತ ದೊಡ್ಡ ಬಜೆಟ್‌ನ ಪ್ಯಾನ್‌ ಇಂಡಿಯಾ ಚಿತ್ರಗಳೇ ಹೀಗೆ ಬಿಡುಗಡೆ ಆದ ಒಂದೇ ತಿಂಗಳಲ್ಲೇ ಓಟಿಟಿ ಪ್ಲಾಟ್‌ಫಾರಂಗೆ ಬರುತ್ತಿರುವುದನ್ನು ಕಂಡು ಪ್ರೇಕ್ಷಕರೇ ಅಚ್ಚರಿಗೊಂಡಿದ್ದಾರೆ.

ಚಿತ್ರಮಂದಿರಗಳಲ್ಲಿ ಬೇಡಿಕೆ ಇದ್ದಾಗಲೇ ಪವನ್‌ ಕಲ್ಯಾಣ್‌ ‘ಓಜಿ’ ಚಿತ್ರವನ್ನು ಓಟಿಟಿಯಲ್ಲಿ ಬಿಡುಗಡೆ ಮಾಡಲಾಯಿತು. ಅತ್ಯಂತ ಕಡಿಮೆ ಸಮಯದಲ್ಲೇ ಈ ಚಿತ್ರ 100 ಮಿಲಿಯನ್ ಸ್ಟ್ರೀಮಿಂಗ್‌ ಮಿನಿಟ್ಸ್‌ ಕಂಡ ದಾಖಲೆ ಮಾಡಿತು. ಇದೇ ತಂತ್ರವನ್ನು ಮತಷ್ಟು ಚಿತ್ರಗಳಿಗೆ ಅನ್ವಯಿಸಲಾಗುತ್ತಿದೆ. ಹೀಗಾಗಿ ಇದೇ ಅಕ್ಟೋಬರ್‌ 2ಕ್ಕೆ ಬಿಡುಗಡೆ ಆಗಿದ್ದ ‘ಕಾಂತಾರ 1’ ಒಂದು ತಿಂಗಳು ಮುಗಿಯುವ ಮುನ್ನವೇ ಅಮೇಜಾನ್‌ ಪ್ರೈಮ್‌ನಲ್ಲಿ ದರ್ಶನ ಕೊಡುತ್ತಿದೆ. ಇದು ಒಂದು ‘ಕಾಂತಾರ 1’ ಚಿತ್ರದ ಕತೆಯಲ್ಲ. ಮಲಯಾಳಂನ ‘ಲೋಕ 1’, ತೆಲುಗಿನ ‘ಮಿರಾಯ್‌’, ‘ಲಿಟ್ಲ್ ಹಾರ್ಟ್ಸ್‌’, ತಮಿಳಿನ ‘ಇಡ್ಲಿ ಕಡೈ’... ಹೀಗೆ ಇತ್ತೀಚೆಗೆ ತೆರೆಕಂಡು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವ ಹೊತ್ತಿನಲ್ಲೇ ‘ಓಟಿಟಿಯಲ್ಲಿ ಸ್ಟ್ರೀಮಿಂಗ್‌ಗೆ ರೆಡಿ’ ಎನ್ನುತ್ತಿರುವ ಚಿತ್ರಗಳ ಪಟ್ಟಿ ಬೆಳೆಯುತ್ತಿದೆ.

ಯಾರೂ ಕೂಡ ಓಡೋ ಕುದುರೆಯನ್ನ ನೋಡಿ ಸುಮ್ಮನಿರಲ್ಲ. ಅದನ್ನ ಮತ್ತಷ್ಟು ಓಡಿಸುತ್ತಾರೆ. ‘ಮೈಯಲ್ಲಿ ಶಕ್ತಿ ಇರೋವಾಗಲೇ ನಾಲ್ಕು ಕಾಸು ಮಾಡಿಕೊಳ್ಳಬೇಕು ಅಂತಾರಲ್ಲ’ ಹಾಗೆ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವಾಗಲೇ ಆ ಸಿನಿಮಾಗಳನ್ನು ಸ್ಟ್ರೀಮಿಂಗ್‌ ಮಾಡುವ ಮೂಲಕ ಓಟಿಟಿ ವೇದಿಕೆಗಳು ತಮ್ಮ ಬಿಸಿನೆಸ್‌ ತಂತ್ರ ಬದಲಿಸಿವೆ.

ಹಾಗೆ ನೋಡಿದರೆ ಚಿತ್ರಮಂದಿರಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಂಡ ಚಿತ್ರಗಳು ಓಟಿಟಿ ಅಥವಾ ಟಿವಿಗಳಲ್ಲಿ ನೋಡಲು ತಿಂಗಳುಗಳ ಕಾಲ ಕಾಯಬೇಕಿತ್ತು. ಈಗ ಕಾಯುವ ಸಮಯ ಪ್ರೇಕ್ಷಕರಿಗೂ ಇಲ್ಲ, ಸಿನಿಮಾ ಮಾಡುವವರಿಗೂ ಇಲ್ಲ. ಯಾಕೆಂದರೆ ಈಗ ಪ್ಯಾನ್‌ ಇಂಡಿಯಾ ಟ್ರೆಂಡ್‌ನಿಂದ ಸಿನಿಮಾಗಳ ಬಜೆಟ್‌ ಮಿತಿಮೀರಿದೆ. ಸಿನಿಮಾಗಳ ನಿರ್ಮಾಣಕ್ಕೆ ಕೋಟಿಗಳ ಕೋಟೆ ಹೊರುವ ನಿರ್ಮಾಣ ಸಂಸ್ಥೆಗಳಿಗೆ ಹೆಗಲು ಕೊಡುವ ಓಟಿಟಿಗಳ ಷರತ್ತುಗಳು ಸೈ ಎನ್ನುತ್ತಿದ್ದಾರೆ. ಹೀಗಾಗಿ ಓಡೋ ಪ್ಯಾನ್‌ ಇಂಡಿಯಾ ಸಿನಿ ಕುದುರೆಗಳ ಮೇಲೆ ಹಣ ಹೂಡುತ್ತಿರುವ ಓಟಿಟಿಗಳು ಸ್ಟ್ರೀಮಿಂಗ್‌ ಶರತ್ತುಗಳನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಮಾಡಿಕೊಳ್ಳುತ್ತಿದ್ದಾರೆ.

‘ಆಯಾ ಹೀರೋ ಅಭಿಮಾನಿಗಳಿಗೆ, ಪ್ರೇಕ್ಷಕರಿಗೆ ಎರಡರಿಂದ ಮೂರು ವಾರ ಚಿತ್ರಮಂದಿರಗಳಲ್ಲಿ ಸಿನಿಮಾ ಇದ್ದರೆ ಸಾಕು. ಬೇಗ ಸ್ಟ್ರೀಮಿಂಗ್‌ ಮಾಡುವ ಓಟಿಟಿಗಳಿಂದ ದೊಡ್ಡ ಮೊತ್ತದ ಹಣ ಬರುತ್ತದೆ. ಇದರಿಂದ ಪೈರೆಸಿಗೂ ತಡೆಯಾಗಿ, ಮನೆಯಲ್ಲೇ ಒಳ್ಳೆಯ ಪ್ರಿಂಟ್‌ ಸಿನಿಮಾ ನೋಡುವಂತಾಗುತ್ತದೆ’ ಎಂಬುದು ನಿರ್ಮಾಪಕರೊಬ್ಬರ ಮಾತು. ಹಾಗೆ ನೋಡಿದರೆ ನಿರ್ಮಾಪಕರಿಗೂ ತಮ್ಮ ಚಿತ್ರಗಳನ್ನು ಹತ್ತಾರು ತಿಂಗಳುಗಳ ಕಾಲ ಥಿಯೇಟರ್‌ಗಳಲ್ಲಿ ಉಳಿಸಿಕೊಳ್ಳುವ ಯೋಚನೆ ಇಲ್ಲ. ಎಷ್ಟೇ ದೊಡ್ಡ ಹಿಟ್‌ ಸಿನಿಮಾ ಆಗಿದ್ದರೂ ಥಿಯೇಟರ್‌ಗಳಲ್ಲಿ ಆ ಚಿತ್ರ ಎರಡ್ಮೂರು ವಾರಗಳಿಗಿಂತ ಹೆಚ್ಚು ಕಾಲ ನಿಲ್ಲುತ್ತಿಲ್ಲ. ಅಲ್ಲದೆ ದೊಡ್ಡ ತಾರೆಗಳ ಸಿನಿಮಾಗಳನ್ನು ಥಿಯೇಟರ್‌ಗಳಲ್ಲಿ ಮೊದಲ ವಾರವೇ ಅಭಿಮಾನಿಗಳು ನೋಡುತ್ತಾರೆ. ನಂತರ ಎರಡು ವಾರ ಮಾಮೂಲಿ ಪ್ರೇಕ್ಷಕರ ಸರದಿ. ಅಲ್ಲಿಗೆ ನಿರ್ಮಾಪಕರ ಥಿಯೇಟರ್‌ ಸಂಭ್ರಮ ಮುಗಿದಿರುತ್ತದೆ. ಓಟಿಟಿಗಳು ಸ್ಟ್ರೀಮಿಂಗ್‌ ಬಾವುಟ ಹಾರಿಸುತ್ತವೆ.

ಮೂರು ವರ್ಷಗಳ ಹಿಂದೆಯೇ ಕಾಂತಾರ 1 ಓಟಿಟಿ ಒಪ್ಪಂದ

ಕಾಂತಾರ 1 ಸಿನಿಮಾದ ಓಟಿಟಿ ಒಪ್ಪಂದ ಮೂರು ವರ್ಷಗಳ ಹಿಂದೆಯೇ ನಡೆದಿದೆ. ಸಿನಿಮಾ ಬಿಡುಗಡೆಯಾದ ನಾಲ್ಕು ವಾರಕ್ಕೆ ದಕ್ಷಿಣ ಭಾರತದ ಭಾಷೆಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಎಂಟು ವಾರದ ಬಳಿಕ ಹಿಂದಿ ಭಾಷೆಯ ಆವೃತ್ತಿ ಬಿಡುಗಡೆಯಾಗಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಹೀರೋ ಆಗುವ ಮುನ್ನ ಶಾಕ್ ಕೊಟ್ಟ ಅಕೀರಾ ನಂದನ್: ರೇಣು ದೇಸಾಯಿ ಫೋನ್ ಮಾಡಿದಾಗ ಪವನ್ ನಕ್ಕಿದ್ದೇಕೆ?
'ನನಗೆ ಡೈವೋರ್ಸ್‌ ಸಿಗೋದು ಪಕ್ಕಾ..' ನ್ಯಾಷನಲ್‌ ಕ್ರಶ್‌ ಗಿರಿಜಾ ಓಕ್‌ ಫೋಟೋಗೆ ಫ್ಯಾನ್ಸ್ ರಿಯಾಕ್ಷನ್‌