ಮಿಸ್ ವರ್ಲ್ಡ್ ಸ್ಪರ್ಧೆ ಮುಕ್ತಾಯವಾಗಿದೆ. ಜೆಕ್ ಗಣರಾಜ್ಯದ ಸುಂದರಿ 25 ವರ್ಷದ ಕ್ರಿಸ್ಟೈನಾ ಪಿಸ್ಕೋವಾ ಈ ವರ್ಷದ ವಿಶ್ವ ಸುಂದರಿಯಾಗಿ ಹೊರ ಹೊಮ್ಮಿದ್ದಾರೆ. ಆದರೆ ಈ ವಿಶ್ವ ಸುಂದರಿ ಸ್ಪರ್ಧೆ ನಾವಂದುಕೊಂಡ ಹಾಗೆ ಅಲ್ವೇ ಅಲ್ಲ. ಇಲ್ಲಿ ಏನೆಲ್ಲ ರಾಜಕೀಯ ನಡಿಯುತ್ತೆ ಗೊತ್ತಾ?
ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯ ಆತಿಥ್ಯದ ಹೊಣೆ ಹೊತ್ತಿದ್ದು ಭಾರತ. ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಅದ್ದೂರಿ ವಿಶ್ವ ಸುಂದರಿ ಸ್ಪರ್ಧೆ ನಡೆಯಿತು. ಭಾರತದಲ್ಲಿ 28 ವರ್ಷಗಳ ಬಳಿಕ ನಡೆದ ಮಿಸ್ ವರ್ಲ್ಡ್ ಸ್ಪರ್ಧೆಯಲ್ಲಿ ಕ್ರಿಸ್ಟಿನಾ ಪಿಸ್ಕೋವಾ ವಿಶ್ವಸುಂದರಿ ಕಿರೀಟ ಧರಿಸಿದ್ದಾರೆ. ಕರ್ನಾಟಕ ಮೂಲದ ಸಿನಿ ಶೆಟ್ಟಿ ವಿಶ್ವ ಸುಂದರಿ ಕಿರೀಟ ಜಸ್ಟ್ ಮಿಸ್ ಆಗಿದೆ. ಈ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ 8ನೇ ಸ್ಥಾನ ಪಡೆಯಲಷ್ಟೇ ಶಕ್ತರಾದರು. 2023 ರ ಮಿಸ್ ವರ್ಲ್ಡ್ ಆಗಿದ್ದ ಪೋಲೆಂಡ್‌ನ ಕರೋಲಿನಾ ಬಿಲಾವ್ಸ್ಕಾ ಅವರಿಂದ ಕ್ರಿಸ್ಟಿನಾ ಕಿರೀಟವನ್ನು ಹಾಕಿಸಿಕೊಂಡರು. ಈ ಮೂಲಕ ಕ್ರಿಸ್ಟಿನಾ ಕೋಟ್ಯಂತರ ರೂಪಾಯಿ ಸವಲತ್ತುಗಳನ್ನೂ ತಮ್ಮದಾಗಿಸಿಕೊಂಡಿದ್ದಾರೆ. ಸಾಮಾನ್ಯಾಗಿ ಈ ಪ್ರಶಸ್ತಿಯನ್ನು ಗೆಲ್ಲುವ ಸ್ಪರ್ಧಿಯ ಅದೃಷ್ಟವು ತೆರೆದುಕೊಳ್ಳುತ್ತದೆ. ವಜ್ರಗಳಿಂದ ಕೂಡಿದ ಕಿರೀಟ, 10 ಕೋಟಿ ರೂಪಾಯಿಗಳ ಬಹುಮಾನದ ಮೊತ್ತ ಮತ್ತು ಉಚಿತವಾಗಿ ಜಗತ್ತನ್ನು ಸುತ್ತುವ ಅವಕಾಶವನ್ನು ಈ ಸುಂದರಿ ಪಡೆಯುತ್ತಾಳೆ.
ಕ್ರಿಸ್ಟಿನಾ ಪಿಸ್ಕೋವಾ ಅವರು ಜೆಕ್ ಗಣರಾಜ್ಯದ ನಿವಾಸಿ. 25 ವರ್ಷದ ಈಕೆ ಕಾನೂನು ಓದುತ್ತಿದ್ದಾಳೆ. ಇದರೊಂದಿಗೆ, ಅನೇಕ ಚಾರಿಟಿ ಟ್ರಸ್ಟ್‌ಗಳನ್ನು ಸಹ ನಡೆಸುತ್ತಿದ್ದಾಳೆ. 19 ಜನವರಿ 1999 ರಂದು ಜನಿಸಿದ ಕ್ರಿಸ್ಟಿನಾ ಪಿಸ್ಕೋವಾ ತನ್ನ ಹೆಸರಿನಲ್ಲಿ ಪ್ರತಿಷ್ಠಾನವನ್ನು ನಡೆಸುತ್ತಾಳೆ. ಈ ಪ್ರತಿಷ್ಠಾನವು ದಕ್ಷಿಣ ಆಫ್ರಿಕಾದ ದೇಶವಾದ ಟಾಂಜಾನಿಯಾದಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಒದಗಿಸುತ್ತದೆ. ಈಕೆಗೆ ಮಿಸ್ ವರ್ಲ್ಡ್ ಕಿರೀಟ ಬಂದಿದ್ದು ಆ ಪ್ರಾಂತ್ಯದವರಿಗೆಲ್ಲ ಖುಷಿ ಕೊಟ್ಟಿದೆ.
ಮಿಸ್ ವರ್ಲ್ಡ್ ವೇದಿಕೆಯಲ್ಲಿ ನೀತಾ ಅಂಬಾನಿಗೆ ವಿಶೇಷ ಮಾನವೀಯ ಪ್ರಶಸ್ತಿ: ಪ್ರಿಯಾಂಕಾ ಚೋಪ್ರಾ ಹೇಳಿದ್ದೇನು?
ಈ ಸೌಂದರ್ಯ ಸ್ಪರ್ಧೆ ಶುರುವಾಗಿದ್ದು 1951 ರಲ್ಲಿ. ಎರಿಕ್ ಮೊರ್ಲೆ ಎಂಬುವವರು ಇದನ್ನು ಪ್ರಾರಂಭಿಸಿದರು, ಇದು ವಿಶ್ವದ ಅತ್ಯಂತ ಹಳೆಯ ಸೌಂದರ್ಯ ಸ್ಪರ್ಧೆಗಳಲ್ಲಿ (Beauty pageant) ಒಂದಾಗಿದೆ. ಪ್ರತಿ ವರ್ಷ ಪ್ರಪಂಚದಾದ್ಯಂತದ ಮಾಡೆಲ್‌ಗಳು (Model) ಈ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ. ಈ ವರ್ಷ ಭಾರತದಲ್ಲಿ ಆಯೋಜಿಸಲಾದ ವಿಶ್ವ ಸುಂದರಿ ಸ್ಫರ್ಧೆ 71 ನೇ ವರ್ಷದ ಸ್ಪರ್ಧೆ.
ಈಗ ವಿಷಯಕ್ಕೆ ಬರೋಣ. ಈ ಸೌಂದರ್ಯ ಸ್ಪರ್ಧೆಯಲ್ಲಿ ನಮ್ಮ ಕಣ್ಣೆದುರಿಗೆ ಕಾಣುವುದು ಝಗಮಗಿಸುವ ವೇದಿಕೆ. ವಿಶ್ವದ ಮೂಲೆ ಮೂಲೆಗಳ ಸುಂದರಿಯರು. ಎಲ್ಲೆಲ್ಲೂ ಅದ್ದೂರಿತನ, ಸೌಂದರ್ಯದ ವಿವಿಧ ಅವತರಣಿಕೆಗಳು. ಆದರೆ ಇದರ ಹಿಂದೆ ಸೂಕ್ಷ್ಮ ರಾಜಕೀಯಗಳೂ ನಡೆಯುತ್ತವೆ ಅನ್ನೋದು ಹಲವರಿಗೆ ತಿಳಿದಿಲ್ಲ. ಯೆಸ್, ಈ ಸೌಂದರ್ಯ ಸ್ಪರ್ಧೆಗಳ ಹಿಂದೆ ಜಾಗತಿಕ ಮಟ್ಟದ ಸೌಂದರ್ಯ ಉತ್ಪನ್ನಗಳ ಲಾಬಿ ನಡೆಯುತ್ತದೆ. ಸಾಮಾನ್ಯವಾಗಿ ಈ ಮಿಸ್ ವರ್ಲ್ಡ್ (Miss World) ಪೇಟೆಂಟ್ ಅನ್ನು ಅಭಿವೃದ್ಧಿ ಶೀಲ ರಾಷ್ಟ್ರಗಳ ಸುಂದರಿಯರಿಗೇ ಪ್ರದಾನ ಮಾಡುತ್ತಾರೆ. ಅಲ್ಲಿ ತಮ್ಮ ಕಾಸ್ಮೆಟಿಕ್ (Cosmetics) ಉತ್ಪನ್ನಗಳಿಗೆ ದೊಡ್ಡ ಮಟ್ಟದ ಮಾರ್ಕೆಟಿಂಗ್ ಕಂಡುಕೊಳ್ಳುತ್ತಾರೆ. ಇದರಿಂದ ಕಾಸ್ಮೆಟಿಕ್ ಕಂಪನಿಗಳಿಗೆ ಸಾವಿರಾರು ಕೋಟಿಗಳ ಆರ್ಥಿಕತೆ ಹರಿದುಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಈ ಪೇಟೆಂಟ್‌ಗಳು ಸೌತ್ ಅಮೆರಿಕನ್ ದೇಶಗಳನ್ನು ಹೆಚ್ಚು ಓಲೈಸುತ್ತಿವೆ. ಆ ಮೂಲಕ ತಮ್ಮ ಕಾಸ್ಮೆಟಿಕ್ ಮಾರ್ಕೆಟಿಂಗ್ ಅನ್ನು ಅಲ್ಲಿ ಸದೃಢವಾಗಿ ಸ್ಥಾಪಿಸಿ ಆರ್ಥಿಕವಾಗಿ ಬಲಾಢ್ಯವಾಗಿ ಬೆಳೆಯುವ ಪ್ರಯತ್ನ ಮಾಡುತ್ತಿವೆ.
ಅಮಿತಾಬ್ ಬಚ್ಚನ್‌ರನ್ನೇ ಬೀದಿಗೆ ತಂದಿದ್ದ ವಿಶ್ವ ಸುಂದರಿ 1996 !
ಈ ಪ್ರಯತ್ನಗಳೆಲ್ಲ ತೆರೆಯ ಹಿಂದೆ ಬಹಳ ಸೂಕ್ಷ್ಮವಾಗಿ ನಡೆಯುವ ಕಾರಣ ಹೆಚ್ಚಿನವರಿಗೆ ಇಂಥವೆಲ್ಲ ತಿಳಿಯೋದೇ ಇಲ್ಲ. ಆದರೆ ಈ ಮಾರ್ಕೆಟಿಂಗ್ ತಂತ್ರ ಬಹಳ ಪ್ರಭಾವಶಾಲಿಯಾಗಿ ಕೆಲಸ ಮಾಡೋದು ಸುಳ್ಳಲ್ಲ. ಅಂದ ಹಾಗೆ ನಮ್ಮ ದೇಶದ ಸುಂದರಿಯರೂ ಈ ಹಿಂದೆ ವಿಶ್ವ ಸುಂದರಿ ಕಿರೀಟ ಧರಿಸಿದ್ದಾರೆ. ರೀಟಾ ಫರಿಯಾ (1966), ಐಶ್ವರ್ಯ ರೈ ಬಚ್ಚನ್ (1994), ಡಯಾನಾ ಹೇಡನ್ (1997), ಯುಕ್ತಾ ಮುಖಿ (1999), ಪ್ರಿಯಾಂಕಾ ಚೋಪ್ರಾ ಜೋನಾಸ್ (2000), ಮತ್ತು ಮಾನುಷಿ ಚಿಲ್ಲರ್ (2017) ವಿಶ್ವ ಸುಂದರಿ ಕಿರೀಟ ಧರಿಸಿ ಹೆಮ್ಮೆಯಿಂದ ಬೀಗಿದ್ದಾರೆ. ಅವರ ಮೂಲಕ ದೇಶದಲ್ಲಿ ಕಾಸ್ಮೆಟಿಕ್ಸ್ ಮಾರ್ಕೆಟಿಂಗ್ ಗಣನೀಯವಾಗಿ ವೃದ್ಧಿಸಿದ್ದು ಸೂಕ್ಷ್ಮವಾಗಿ ಅವಲೋಕಿಸಿದರೆ ತಿಳಿದುಬಿಡುತ್ತದೆ.