ಮೊದಲ ದಿನವೇ ‘ಕಾಂತಾರ ಚಾಪ್ಟರ್‌ 1’ ₹55 ಕೋಟಿ ಗಳಿಕೆ: ಇಂದು 100 ಕೋಟಿ ಕ್ಲಬ್‌ಗೆ?

Published : Oct 03, 2025, 05:32 AM IST
Kantara

ಸಾರಾಂಶ

ರಿಷಬ್‌ ಶೆಟ್ಟಿ ನಟನೆ, ನಿರ್ದೇಶನದ ‘ಕಾಂತಾರ ಚಾಪ್ಟರ್‌ 1’ ಚಿತ್ರಕ್ಕೆ ವಿಶ್ವಾದ್ಯಂತ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ ವಿಶ್ವಾದ್ಯಂತ 55 ಕೋಟಿಗೂ ಹೆಚ್ಚಿನ ಗಳಿಕೆ ದಾಖಲಿಸಿದೆ.

ಬೆಂಗಳೂರು (ಅ.03): ಪ್ರೀಮಿಯರ್‌ ಶೋಗಳು ಮತ್ತು ಮೊದಲ ದಿನದ ಗಳಿಕೆಯಿಂದ ಇಷ್ಟು ದೊಡ್ಡ ಮೊತ್ತ ಸಂಪಾದಿಸಿರುವುದು ಹೊಸ ದಾಖಲೆಯಾಗಿದೆ. ಭಾರತದಲ್ಲಿ ಒಟ್ಟು 6500 ಸ್ಕ್ರೀನ್‌ಗಳಲ್ಲಿ ಸುಮಾರು 12,511ಕ್ಕೂ ಹೆಚ್ಚು ಶೋಗಳು ಪ್ರದರ್ಶನ ಕಂಡಿದ್ದು, ಎಲ್ಲಾ ಭಾಷೆಗಳೂ ಸೇರಿ ಭಾರತದಲ್ಲಿ ಅಂದಾಜು 45 ಕೋಟಿ ರು.ಗಳಷ್ಟು ಕಲೆಕ್ಷನ್‌ ದಾಖಲಾಗಿದೆ. ಶುಕ್ರವಾರದ ಹೊತ್ತಿಗೆ ಸಿನಿಮಾ 100 ಕೋಟಿ ರು. ಕ್ಲಬ್‌ ಸೇರುವ ಸಾಧ್ಯತೆ ಇದೆ.

ರಿಲೀಸ್‌ಗೂ ಒಂದು ದಿನ ಮೊದಲೇ ಅಂದರೆ ಬುಧವಾರ ದೇಶದ ವಿವಿಧೆಡೆ ಪ್ರೀಮಿಯರ್‌ ಶೋಗಳು ನಡೆದಿದ್ದು, ಈ ಶೋಗಳೆಲ್ಲ ಹೌಸ್‌ಫುಲ್‌ ಪ್ರದರ್ಶನ ಕಂಡಿದ್ದವು. ಇದರಿಂದ ಸಿನಿಮಾಗೆ ಉತ್ತಮ ಪ್ರಚಾರ ಸಿಕ್ಕಿದ್ದು, ಬಿಡುಗಡೆ ದಿನವಾದ ಗುರುವಾರ ಸಿನಿಮಾ ಉತ್ತಮ ಪ್ರದರ್ಶನ ಕಾಣಲು ಕಾರಣವಾಗಿದೆ. ಹೊರದೇಶಗಳಲ್ಲಿ ಅಮೆರಿಕ ಒಂದರಲ್ಲೇ ಸಿನಿಮಾ ಅಂದಾಜು 4.20 ಕೋಟಿ ರು. ಗಳಿಕೆ ಮಾಡಿದೆ. 30 ದೇಶಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು, ಹೊರದೇಶಗಳಲ್ಲಿ ಅಂದಾಜು 10 ಕೋಟಿ ರು.ವರೆಗೆ ಮೊದಲ ದಿನದ ಗಳಿಕೆ ಅಂದಾಜಿಸಲಾಗಿದೆ. ಬ್ಲಾಕ್‌ ಬಸ್ಟರ್‌ ಆರಂಭ ಕಂಡಿರುವ ಈ ಸಿನಿಮಾದ 10 ಲಕ್ಷಕ್ಕೂ ಅಧಿಕ ಟಿಕೆಟ್‌ ಈವರೆಗೆ ಮಾರಾಟವಾಗಿದೆ ಎನ್ನಲಾಗಿದ್ದು, ಗುರುವಾರ ಪ್ರತಿ ಗಂಟೆಗೆ 60,000 ಟಿಕೆಟ್ ಬಿಕರಿಯಾಗಿದೆ. ಗರಿಷ್ಠ ದರ 2400 ರು. ದೆಹಲಿಯಲ್ಲಿ ದಾಖಲಾಗಿದೆ. ಬೆಂಗಳೂರಿನಲ್ಲಿ 1200 ರು. ಗರಿಷ್ಠ ದರವಿತ್ತು.

ಬೆಂಗಳೂರಿನಲ್ಲಿ ಮುಂಜಾನೆ 6ರಿಂದಲೇ ಶುರುವಾದ ಸಿನಿಮಾ ಪ್ರದರ್ಶನ ತಡರಾತ್ರಿಯವರೆಗೆ ನಡೆದಿದೆ. ದೇಶಾದ್ಯಂತ ಹೌಸ್‌ಫುಲ್‌ ಪ್ರದರ್ಶನ ದಾಖಲಾಗಿದ್ದು, ರಾಜ್ಯದಲ್ಲಿ ತುಂಬಿದ ಗೃಹದ ಪ್ರದರ್ಶನ ಕಂಡಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಬಾಯ್ಕಾಟ್‌ ಬೆದರಿಕೆ ಇದ್ದರೂ ಇದು ಸಿನಿಮಾ ಪ್ರದರ್ಶನ ಮೇಲೆ ಪರಿಣಾಮ ಬೀರಿಲ್ಲ. ಚೆನ್ನೈ, ಕೊಚ್ಚಿ, ಮುಂಬೈ ಸೇರಿ ಮಹಾನಗರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಭಾರತದಲ್ಲಿ ಸಿನಿಮಾಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಉತ್ತರ ಭಾರತ ಒಂದರಲ್ಲೇ ಈ ಚಿತ್ರ ಅಂದಾಜು 8 ರಿಂದ 10 ಕೋಟಿ ರು. ಗಳಿಕೆ ಮಾಡಿದೆ ಎನ್ನಲಾಗಿದೆ. ಉಳಿದಂತೆ ಕರ್ನಾಟಕದಲ್ಲಿ ಅಂದಾಜು 20 ಕೋಟಿ ರು, ಆಂಧ್ರದಲ್ಲಿ ಅಂದಾಜು 5.3 ಕೋಟಿ, ತಮಿಳುನಾಡಿನಲ್ಲಿ 3 ಕೋಟಿಗಳಷ್ಟು ಗಳಿಕೆ ಮಾಡಿರುವ ಸಾಧ್ಯತೆ ಇದೆ. ಮಲಯಾಳಂನಲ್ಲಿ ಸುಮಾರು 65 ಲಕ್ಷ ರು.ಗಳಷ್ಟು ಗಳಿಕೆ ಮಾಡಿದೆ ಎನ್ನಲಾಗಿದೆ.

ಪ್ರಭಾಸ್, ಜೂ.ಎನ್‌ಟಿಆರ್‌, ಶಿವಣ್ಣ ಸೇರಿ ದಿಗ್ಗಜರ ಮೆಚ್ಚುಗೆ

ಸಿನಿಮಾಗೆ ಭಾರತೀಯ ಚಿತ್ರರಂಗದ ದಿಗ್ಗಜರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಶಿವರಾಜ್‌ ಕುಮಾರ್‌, ‘ಕಾಂತಾರ ನಮ್ಮ ನೆಲದ ಕಥೆ. ನಮ್ಮ ನಾಡಿನ ಕಥೆ. ಇಂದು ಕಾಂತಾರವನ್ನು ಇಡೀ ದೇಶವೇ ಮೆಚ್ಚುತ್ತಿರುವುದು ತುಂಬಾ ಹೆಮ್ಮೆಯ ವಿಷಯ’ ಎಂದು ಚಿತ್ರತಂಡವನ್ನು ಅಭಿನಂದಿಸಿದರೆ, ಜೂ.ಎನ್‌ಟಿಆರ್‌, ‘ರಿಷಬ್‌ ಶೆಟ್ಟಿ ಅದ್ಭುತ ನಟನಾಗಿ, ಅದ್ಭುತ ನಿರ್ದೇಶಕನಾಗಿ ಊಹಿಸಲಾಗದ್ದನ್ನು ಸಾಧಿಸಿದ್ದಾರೆ’ ಎಂದಿದ್ದಾರೆ. ಅದೇ ರೀತಿ ಪ್ರಭಾಸ್‌, ‘ಇದು ಅದ್ಭುತ ಚಿತ್ರ. ಪ್ರತಿಯೊಬ್ಬ ಕಲಾವಿದರದ್ದೂ ಸೊಗಸಾದ ಪಾತ್ರ ನಿರ್ವಹಣೆ. ಕಾಂತಾರ ಈ ವರ್ಷದ ಅತೀ ದೊಡ್ಡ ಬ್ಲಾಕ್‌ ಬಸ್ಟರ್‌ ಸಿನಿಮಾವಾಗಿ ಹೊರಹೊಮ್ಮಲಿದೆ’ ಎಂದು ಹೇಳಿದ್ದಾರೆ. ಗಾಂಧೀ ಜಯಂತಿ, ದಸರಾ, ವೀಕೆಂಡ್‌ ರಜೆಗಳೆಲ್ಲ ಸಿನಿಮಾದ ಉತ್ತಮ ಗಳಿಕೆಗೆ ಮುಖ್ಯ ಕಾರಣವಾಗಿದೆ. ಈ ವಾರಾಂತ್ಯಕ್ಕೆ ಸಿನಿಮಾ 150 ಕೋಟಿ ರು. ಗಳಿಸುವ ಸಾಧ್ಯತೆ ಇದೆ ಎಂದು ತಜ್ಞರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬ್ಲಾಕ್‌ ಬಸ್ಟರ್‌ ಓಪನರ್‌ ಎಂದು ಕರೆಸಿಕೊಂಡಿರುವ ಸಿನಿಮಾಕ್ಕೆ ಸರಾಸರಿ 5 ರಲ್ಲಿ 4 ರೇಟಿಂಗ್‌ ಸಿಕ್ಕಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಹೊಟ್ಟೆಗೆ ಹಿಟ್ಟಿಲ್ಲದೇ ಬದುಕಬಲ್ಲೆ, ಆದ್ರೆ 'ಅದಿಲ್ಲದೇ' ಬದುಕಲಾರೆ: ಮದುವೆ ಬೆನ್ನಲ್ಲೇ ಸಮಂತಾ ಹಳೆಯ ಹೇಳಿಕೆ ವೈರಲ್!
ಹೊರ ಹೋದ್ಮೇಲೆ ನೀನೇ ಟ್ರೇನ್ ಮಾಡ್ಬೇಕಲ್ವಾ ! ಮನಸ್ಸಿನ ಮಾತು ಹೊರ ಹಾಕಿದ ರಾಶಿಕಾ