
ಈ ಬಾರಿಯ ಲೋಕಸಭೆಗೆ ಆಯ್ಕೆಯಾದವರಲ್ಲಿ ಬಾಲಿವುಡ್ ಜೋಡಿ ಕಂಗನಾ ರಣಾವತ್ ಮತ್ತು ಚಿರಾಗ್ ಪಾಸ್ವಾನ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಕಾಂಟ್ರವರ್ಸಿ ಕ್ವೀನ್ ಎಂದೇ ಎನಿಸಿಕೊಂಡಿರೋ ಕಂಗನಾ ರಣಾವತ್ ಹಾಗೂ ತರುಣಿಯರ ಕ್ರಷ್ ಎಂದೇ ಹೇಳುತ್ತಿರುವ ಚಿರಾಗ್ ಪಾಸ್ವಾನ್ ಅವರ ಬಗ್ಗೆ ಎಲ್ಲರ ಗಮನ ನಿಟ್ಟಿದೆ. ಅಷ್ಟಕ್ಕೂ ಇವರಿಬ್ಬರೂ ಈ ಹಿಂದೆ ಚಿತ್ರವೊಂದರಲ್ಲಿ ನಟಿಸಿ ಸಕತ್ ಫೇಮಸ್ ಆದವರು. ಕುತೂಹಲದ ವಿಷಯ ಎಂದರೆ ಇದೇ ಜೋಡಿ ಈಗ ಸಂಸದರಾಗಿ ಒಟ್ಟಿಗೇ ಲೋಕಸಭೆಯನ್ನು ಪ್ರವೇಶಿಸಿದ್ದಾರೆ. ಹಿಮಾಚಲ ಪ್ರದೇಶದ ಮಂಡಿ ಕ್ಷೇತ್ರದ ಸಂಸದೆ ಕಂಗನಾ ರಣಾವತ್ ಗೆಲುವು ಸಾಧಿಸಿದ್ದರೆ, ಬಿಹಾರದ ಜುಮೈನಿಂದ ಚಿರಾಗ್ ಪಾಸ್ವಾನ್ ಲೋಕಸಭೆ ಮೆಟ್ಟಿಲೇರಿದ್ದಾರೆ. ಸದ್ಯ ಇವರಿಬ್ಬರೂ ಇದೀಗ ಲೋಕಸಭೆಯಲ್ಲಿ ಸ್ಟಾರ್ ಅಟ್ರಾಕ್ಷನ್. ಕುತೂಹಲದ ವಿಷಯವೇನೆಂದರೆ ಇಬ್ಬರೂ ಒಂದೇ ಪಕ್ಷದವರು. ಕಂಗನಾ ಬಿಜೆಪಿಯವರಾದರೆ, ಲೋಕ್ ಜನ ಶಕ್ತಿ ಪಕ್ಷದವರಾಗಿರುವ ಚಿರಾಗ್ ಅವರ ತಂದೆ ರಾಮ್ವಿಲಾಸ್ ಪಾಸ್ವಾನ್ ಅವರು , ವಾಜಪೇಯಿ ಕಾಲದಿಂದಲೂ ಎನ್ಡಿಎ ಜೊತೆ ಗುರುತಿಸಿಕೊಂಡವರು. ಇನ್ನೂ ಕುತೂಹಲದ ವಿಷಯ ಏನೆಂದರೆ, ಚಿರಾಗ್ ಪಾಸ್ವಾನ್ ಮತ್ತು ಕಂಗನಾ ಅವರು, 2011ರಲ್ಲಿ ಬಿಡುಗಡೆಯಾದ ಮಿಲೇ ನಾ ಮಿಲೇ ಚಿತ್ರದ ನಾಯಕ-ನಾಯಕಿ.
ಇದೀಗ ಸಂದರ್ಶನವೊಂದರಲ್ಲಿ ಚಿರಾಗ್ ಪಾಸ್ವಾನ್ ಕಂಗನಾ ಜೊತೆಗಿನ ಸಿನಿ ಪಯಣ ಹಾಗೂ ತಮ್ಮ ಮದುವೆಯ ಕುರಿತು ಮಾತನಾಡಿದ್ದಾರೆ. ಮಿಲೇ ನಾ ಮಿಲೇ ಬಳಿಕ ಚಿರಾಗ್ ಸಿನಿಮಾದತ್ತ ಮುಖ ಮಾಡಿಲ್ಲ. ಇದಕ್ಕೆ ಕಾರಣವನ್ನು ಇದೀಗ ಎಎನ್ಐ ಜೊತೆ ಮಾತನಾಡಿರುವ ಸಂದರ್ಶನದಲ್ಲಿ ಚಿರಾಗ್ ಹೇಳಿದ್ದಾರೆ. ದೇಶವು ನನ್ನನ್ನು ಸಿನಿಮಾ ರಂಗದ ದುರಂತ ಎನ್ನುವ ಕರೆಯುವ ಮುನ್ನವೇ ನಾನು ಸಿನಿಮಾ ಬಿಡಲು ನಿರ್ಧರಿಸಿದ್ದೆ ಎಂದು ನಗುತ್ತಲೇ ಹೇಳಿರುವ ಚಿರಾಗ್, ಮಿಲೇ ನಾ ಮಿಲೇ ಚಿತ್ರದ ಬಳಿಕ ನಾನೊಬ್ಬ ಕೆಟ್ಟ ನಟ ಎಂದು ತಿಳಿಯಿತು ಎಂದಿದ್ದಾರೆ. ನನ್ನ ಇಡೀ ಕುಟುಂಬಕ್ಕೆ ಸಿನಿಮಾದ ನಂಟು ಇಲ್ಲ. ನಾನು ಸಿನಿಮಾಕ್ಕೆ ಬಂದ ಮೊದಲ ತಲೆಮಾರಿನವ. ಆದರೆ ಇದು ಒಂದು ದುರಂತ ಎಂದು ನಾನು ಅರಿತುಕೊಂಡೆ. ದೇಶ ನನ್ನನ್ನು ಸಿನಿಮಾದ ದುರಂತ ಎಂದು ಕರೆಯುವ ಮೊದಲೇ ನಾನೊಬ್ಬ ಕೆಟ್ಟ ನಟ ಎಂದುಕೊಂಡು ಸಿನಿಮಾದಿಂದ ದೂರ ಉಳಿದೆ ಎಂದಿದ್ದಾರೆ.
ಕಂಗನಾ ಜೊತೆ ನಟಿಸಿದ ಬಳಿಕ ಚಿರಾಗ್ ಪಾಸ್ವಾನ್ ಸಿನಿಮಾನೇ ಮಾಡಿಲ್ಲ ಯಾಕೆ? ಕಾರಣ ಹೇಳಿದ ಸಂಸದ
ಇದೇ ವೇಳೆ ಕಂಗನಾ ಕುರಿತು ಮಾತನಾಡಿರುವ ಚಿರಾಗ್, ಸಿನಿಮಾದಲ್ಲಿ ಈಗ ಬೇಕಿದ್ರೆ ಕೇಳಿ, ಕಂಗನಾ ನನ್ನ ಜೊತೆ ಕೆಲಸ ಮಾಡಲು ಇಷ್ಟಪಡುವುದಿಲ್ಲ, ಏಕೆಂದರೆ ನನಗೆ ನಟನೆ ಒಗ್ಗುವುದೇ ಇಲ್ಲ ಎಂದು ನಕ್ಕಿದ್ದಾರೆ. ನಂತರ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಅವರು, ಸದ್ಯಕ್ಕೆ ಮದುವೆಯಾಗುವ ಯಾವುದೇ ಯೋಚನೆ ಇಲ್ಲ. ಮದುವೆ ಪ್ರಸ್ತಾಪ ಬರುತ್ತಾ ಇದೆ. ನನ್ನ ತಾಯಿ ಕೂಡ ಇದಕ್ಕೆ ಒತ್ತಾಯಿಸುತ್ತಿದ್ದಾರೆ. ಅವರೇ ಮದುವೆಯ ಕುರಿತು ಏನೇನೋ ಮಾಡುತ್ತಲೇ ಇರುತ್ತಾರೆ. ಆದರೆ ಸದ್ಯಕ್ಕಂತೂ ಮದುವೆ ಬೇಡ ಎಂದಿದ್ದಾರೆ. ಮುಂದಿನ ಎರಡು ವರ್ಷವಂತೂ ಮದುವೆಯ ಬಗ್ಗೆ ಯೋಚನೆ ಮಾಡುವುದಿಲ್ಲ. ಈಗ ತಾನೇ ಸಂಸದನಾಗಿದ್ದೇನೆ. ನನ್ನ ಎದುರು ಅನೇಕ ಸವಾಲು ಇದ್ದು, ಈ ಬಗ್ಗೆ ಸದ್ಯ ಗಮನ ಕೊಡುತ್ತೇನೆ. ಮದುವೆಯಾದರೆ ಪತ್ನಿಗೆ ಸಮಯ ಕೊಡುವುದು ಕಷ್ಟ ಆಗಬಹುದು. ಅದಕ್ಕಾಗಿ ಸೆಟ್ಲ್ ಆದ ಮೇಲೆ ಮದುವೆ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದಾರೆ.
ಇದೇ ವೇಳೆ ಕಂಗನಾ ಜೊತೆಗಿನ ಸಂಬಂಧದ ಕುರಿತು ಮಾತನಾಡಿದ ಅವರು, ಆಕೆ ನನ್ನ ಬೆಸ್ಟ್ ಫ್ರೆಂಡ್. ನನಗೆ ಸಿಕ್ಕಿರುವುದು ಮಾತ್ರ ತುಂಬಾ ಸಂತೋಷ ಎಂದಿದ್ದಾರೆ. ಆ ಚಿತ್ರದ ಬಳಿಕ ನನ್ನ ಮತ್ತು ಅವರ ಸಂಪರ್ಕ ಹೆಚ್ಚಿಗೆ ಇರಲಿಲ್ಲ. ಆದರೆ ಇಬ್ಬರೂ ಸಂಸದರಾಗಿ ಹೀಗೆ ಒಟ್ಟಿಗೇ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ನಿಜಕ್ಕೂ ಇದು ವಿಸ್ಮಯವಾದದ್ದೇ ಎಂದಿದ್ದಾರೆ. ಅಂದಹಾಗೆ ಈ ಚಿತ್ರಕ್ಕೂ ಮುನ್ನ ಚಿರಾಗ್ ಅವರು, ದಿಲ್ ದೋಸ್ತಿ ದೀವಾನಗಿ, ಮರಾಠಿ ಪಾಲ್ ಪಡ್ತೆ ಪುಧೆ, ನಾಯಕಾ ದೇವಿ: ದಿ ವಾರಿಯರ್ ಕ್ವೀನ್, ಹ್ಯಾಂಗೊವರ್ ಮತ್ತು ಬದ್ರಿ: ದಿ ಕ್ಲೌಡ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಆದರೆ ಅವರಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟ ಚಿತ್ರ ಕಂಗನಾ ರಣಾವತ್ ಅವರ ಜೊತೆ ನಟಿಸಿರುವ ಮಿಲೇ ನಾ ಮಿಲೇ ಚಿತ್ರ. ಅಂದಹಾಗೆ, ಕಂಗನಾ ಅವರಿಗೆ ಈಗ 38 ವರ್ಷ ವಯಸ್ಸಾದರೆ, ಚಿರಾಗ್ ಅವರಿಗೆ 41 ವರ್ಷ ವಯಸ್ಸು.
ಸದನದಲ್ಲಿ ಚಿರಾಗ್- ಕಂಗನಾ ಜೊತೆ ಜೊತೆಯಲಿ.... 'ಮಿಲೇ ನಾ ಮಿಲೇ' ಪಾರ್ಟ್-2 ಎಂದ ನೆಟ್ಟಿಗರು!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.