
ವಾಷಿಂಗ್ಟನ್ : ವಿಶ್ವ ಪ್ರಸಿದ್ಧ WWE ಸ್ಟಾರ್ ಹಾಗೂ ಹಾಲಿವುಡ್ ನಟ ಜಾನ್ ಸೀನಾ ಅವರು ತಮ್ಮ ಚರ್ಮ ಕ್ಯಾನ್ಸರ್ ಕುರಿತ ಆರೋಗ್ಯ ಸಂಬಂದಿ ಕಾಯಿಲೆಯಿಂದ ಬಳಲಿದ ಅನುಭವವನ್ನು ಸಾರ್ವಜನಿಕವಾಗಿ ಹಂಚಿಕೊಂಡಿದ್ದಾರೆ. ಜಾನ್ ಸೀನಾ ಅವರು 2 ಬಾರಿ ಚರ್ಮದ ಕ್ಯಾನ್ಸರ್‌ಗೆ ತುತ್ತಾಗಿದ್ದು, ಇದರಿಂದಾದ ತಮ್ಮ ಜೀವನದಲ್ಲಿ ಉಂಟಾದ ಪರಿಣಾಮ ಮತ್ತು ಅನುಭವವನ್ನು ಅಭಿಮಾನಿಗಳೊಂದಿಗೆ ಮತ್ತು ಜನಸಾಮಾನ್ಯರೊಂದಿಗೆ ಹಂಚಿಕೊಂಡಿದ್ದಾರೆ.
ಅಮೆರಿಕದ ಫ್ಲೋರಿಡಾದಲ್ಲಿ ನಡೆದ ‘Today’ ಶೋನಲ್ಲಿ ಮಾತನಾಡಿದ ಅವರು, ಬಾಲ್ಯದಲ್ಲಿ ಸನ್‌ಸ್ಕ್ರೀನ್ ಬಳಕೆ ಮಾಡುವುದನ್ನು ನೋಡಿದರೆ ಅಪಹಾಸ್ಯ ಮಾಡುತ್ತಿದ್ದೆ. ಹೀಗಾಗಿ ನಾನು ಯಾವುದೇ ಸನ್‌ಸ್ಕ್ರೀನ್ ಲೋಷನ್ ಬಳಸದಿರುವ ಕಾರಣ ಚರ್ಮದ ಕ್ಯಾನ್ಸರ್ ಬಾಧಿಸಿತ್ತು ಎಂದು ತಿಳಿಸಿದ್ದಾರೆ. 'ನಾನು ಸನ್‌ಸ್ಕ್ರೀನ್ ಬಳಸುವುದನ್ನು ಕಡೆಗಣಿಸಿದ್ದೆ. ಆದ್ದರಿಂದ ನಾನು ಚರ್ಮದ ಕ್ಯಾನ್ಸರ್‌ಗೆ ಒಳಗಾಗು ಇದೀಗ ಎರಡು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದ ಅನುಭವವಿದೆ' ಎಂದು ಸೀನಾ ಹೇಳಿದರು.
ಮೊದಲ ಬಾರಿಗೆ, ಸೀನಾ ಅವರಿಗೆ ಎದೆಯ ಭಾಗದಲ್ಲಿ ವಿಚಿತ್ರವಾದ ಕಲೆಯ ಗುರುತುಗಳು ಹಾಗೂ ಚರ್ಮ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡವು. ನಂತರ, ಚರ್ಮರೋಗ ತಜ್ಞರನ್ನು ಸಂಪರ್ಕಿಸಿದ್ದು, ಪರೀಕ್ಷೆಯನ್ನು ಮಾಡಿಸಿದಾಗ ಚರ್ಮ ಕ್ಯಾನ್ಸರ್ ಇರುವುದು ದೃಢಪಟ್ಟಿತು. ಇದಕ್ಕೆ ಧೃತಿಗೆಡದೇ ನಾನು ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಂಡೆನು. ಇದಾದ ನಂತರ ಇಂತಹದೇ ಚರ್ಮ ಕ್ಯಾನ್ಸರ್ ಉಲ್ಬಣದ ಪರಿಸ್ಥಿತಿ ಒಂದೇ ವರ್ಷದಲ್ಲಿ ಮರುಕಳಿಸಿತು. ಆಗ ನನ್ನ ಭುಜ ಭಾಗದಲ್ಲಿಯೂ ಕ್ಯಾನ್ಸರ್ ಇರುವ ಮಚ್ಚೆ ಕಂಡುಬಂದಿತು. ಆಗ ಎರಡೂ ಬಾರಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವ ಮೂಲಕ ನನಗೆ ಬಂದಿದ್ದ ಮಾರಣಾಂತಿಕ ರೋಗದ ಸಮಸ್ಯೆ ನಿವಾರಣೆಯಾಯಿತು ಎಂದು ಸೀನಾ ಹೇಳಿದರು.
ಸನ್‌ಸ್ಕ್ರೀನ್ ಬಳಸುವ ಬಗ್ಗೆ ಜಾಗೃತಿ
ತಮ್ಮ ಜೀವನದಲ್ಲಿ ಅನುಭವಿಸಿದ ಚರ್ಮದ ಸಮಸ್ಯೆಯಿಂದಾಗಿ ಇದೀಗ ಜಾನ್ ಸೀನಾ ಈಗ ಚರ್ಮದ ಆರೋಗ್ಯ ಕುರಿತ ಜಾಗೃತಿಯ ರಾಯಭಾರಿಯಂತೆ ಎಲ್ಲೆಡೆ ಜಾಗೃತಿ ಮೂಡಿಸುತ್ತಿದ್ದಾರೆ. ಎಲ್ಲರೂ ಪ್ರತಿದಿನ ಕನಿಷ್ಠ SPF 30 ಇರುವ ಸನ್‌ಸ್ಕ್ರೀನ್ ಬಳಸಿ, ಬಟ್ಟೆಯಿಂದ ಮುಚ್ಚಲಾಗದ ತ್ವಚೆಯ ಎಲ್ಲ ಭಾಗಗಳಿಗೆ ಸಮರ್ಪಕವಾಗಿ ಹಚ್ಚಬೇಕು ಎಂದು ಅವರು ಸಲಹೆ ನೀಡುತ್ತಾರೆ. ಮುಖ್ಯವಾಗಿ ಸೂರ್ಯನಿಗೆ ಒಡ್ಡಿಕೊಳ್ಳುವ ದೇಹದ ಭಾಗಗಳಾದ 'ಕಿವಿ, ಕೆಳ ಕತ್ತು (ಕುತ್ತಿಗೆ), ಕೈಗಳ ಹಿಂದೆ ಸೇರಿ ಇತರೆಡೆ ಸನ್ ಸ್ಕ್ರೀನ್ ಹಚ್ಚಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜನತೆಗೆ ಸಂದೇಶ: ತ್ವಚೆಯನ್ನು ಕಾಪಾಡಿ
ಸೂರ್ಯನ ಹಾನಿಕಾರಕ ಕಿರಣಗಳು ಚರ್ಮದ ಮೇಲೆ ನಿಕಟ ಪ್ರಭಾವ ಬೀರುವ ಸಾಧ್ಯತೆ ಹೆಚ್ಚಾಗಿದೆ. ಗಜಕರ್ಣ, ತುರಿಕೆ, ಬ್ಲಾಕ್ ಸ್ಪಾಟ್, ಕ್ಯಾನ್ಸರ್ ಮೊದಲಾದ ಸಮಸ್ಯೆಗಳು ಬರುತ್ತವೆ. ಹೀಗಾಗಿ, ಸನ್‌ಸ್ಕ್ರೀನ್ ಬಳಕೆ ಮಾಡಬೇಕು ಎಂದು ಸೀನಾ ತನ್ನ ಅನುಭವದ ಆಧಾರದ ಮೇಲೆ ಜನರಿಗೆ ಚರ್ಮವನ್ನು ಆರೋಗ್ಯವಾಗಿ ಕಾಪಾಡಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸಿದ್ದಾರೆ. ಯಾವುದೇ ಚರ್ಮದ ಕಲೆಗಳು ಕಂಡುಬಂದರೂ ಅದನ್ನು ನಿರ್ಲಕ್ಷ್ಯ ಮಾಡದೇ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಸೀನಾ ಅವರು ತಮ್ಮ ಸೋಷಿಯಲ್ ಮೀಡಿಯಾದಲ್ಲಿಯೂ ಈ ವಿಷಯದ ಕುರಿತು ಜನರೊಂದಿಗೆ ಮಾತನಾಡಿದ್ದು, 'ನಿಮ್ಮ ದೇಹದ ಬಗ್ಗೆ ಜಾಗೃತರಾಗಿರಿ. ನಾವು ದೊಡ್ಡ ಕೆಲಸಗಳಲ್ಲಿ ತೊಡಗಿರುತ್ತೇವೆ. ಆದರೆ ನಮ್ಮ ಆರೋಗ್ಯವನ್ನೂ ಮರೆತಿರುತ್ತೇವೆ. ಸನ್‌ಸ್ಕ್ರೀನ್ ಬಳಕೆಗೆ ಹೆಚ್ಚು ಹಣ ಬೇಕಾಗಲಾರದು, ಆದರೆ ನಿಮ್ಮ ಜೀವ ಉಳಿಸಬಹುದು' ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.