ರಾಖಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಆರ್ಯನ್ ಖಾನ್ ಡ್ರಗ್ಸ್ ಕೇಸ್ ಅಧಿಕಾರಿ ಸಮೀರ್ ವಾಂಖೆಡೆ. ಕಾರಣ ಏನು?
ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ತನಿಖೆ ನಡೆಸಿದ ಬೆನ್ನಲ್ಲೇ, ಮಾಜಿ ಎನ್ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ಅವರ ವಿರುದ್ಧ ಬಂದಿರುವ ಆರೋಪಗಳ ದೊಡ್ಡ ಪಟ್ಟಿಯೇ ಇದೆ. ಅಷ್ಟಕ್ಕೂ 2021ರಲ್ಲಿ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಕೇಸ್ನಲ್ಲಿ ಸಿಲುಕಿರುವುದು ಎಲ್ಲರಿಗೂ ತಿಳಿದೇ ಇದೆ. ಕ್ರೂಸ್ ಡ್ರಗ್ಸ್ ಪ್ರಕರಣ (Cruise Drugs Case) ಎಂದು ಇದು ಫೇಮಸ್ ಆಗಿತ್ತು. ಶಾರುಖ್ ಪುತ್ರ ಆರ್ಯನ್ ಸೇರಿದಂತೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು, ಅವರ ಮಕ್ಕಳು ಈ ಕೇಸ್ನಲ್ಲಿ ಸಿಲುಕಿದ್ದರಿಂದ ಇದು ಭಾರಿ ಸದ್ದು ಮಾಡಿತ್ತು. ಈ ಘಟನೆಯಿಂದ ಶಾರುಖ್ ಖಾನ್ ಝರ್ಜರಿತರಾಗಿದ್ದೂ ಸುಳ್ಳಲ್ಲ. ಇಂದಿಗೂ ಇದರ ಕುರಿತು ಚರ್ಚೆಯಾಗುತ್ತಲೇ ಇದೆ. 2021 ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಡ್ರಗ್ಸ್ ಪತ್ತೆ ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ಮುಂಬೈನ ಸಮುದ್ರ ತೀರದ ಐಷಾರಾಮಿ ಹಡಗಿನಲ್ಲಿ ಡ್ರಗ್ ಪಾರ್ಟಿ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಈ ಕಾರ್ಯಾಚರಣೆ ನಡೆದಿತ್ತು. ನಂತರ ಆರ್ಯನ್ ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. 28 ದಿನಗಳವರೆಗೆ ಜೈಲಿನಲ್ಲಿದ್ದ ಆರ್ಯನ್ ಅವರಿಗೆ ನಂತರ ನಡೆದ ನಾಟಕೀಯ ಬೆಳವಣಿಗೆಯಲ್ಲಿ ಕೊನೆಗೆ ಕೋರ್ಟ್ ಕ್ಲೀನ್ ಚಿಟ್ ನೀಡಿತ್ತು.
ಇದಾದ ಬಳಿಕ ಸಮೀರ್ ಅವರನ್ನೇ ಆರೋಪಿಯನ್ನಾಗಿ ಮಾಡಲಾಗಿದೆ. ಇವರು ಶಾರುಖ್ ಅವರಿಂಗೆ 25 ಕೋಟಿ ರೂಪಾಯಿ ಲಂಚ ಕೇಳಿದ್ದಾರೆ ಎಂಬ ಆರೋಪ ಮಾಡಲಾಗಿದ್ದು ಇವರ ವಿರುದ್ಧದ ಪ್ರಕರಣ ಇನ್ನೂ ವಿಚಾರಣೆಯ ಹಂತದಲ್ಲಿದೆ. ಇದರ ನಡುವೆಯೇ ಕುತೂಹಲದ ಬೆಳವಣಿಗೆಯೊಂದರಲ್ಲಿ, ಸಮೀರ್ ವಾಂಖೆಡೆ ಅವರು ಬಾಲಿವುಡ್ ನಟಿ ರಾಖಿ ಸಾವಂತ್ ಹಾಗೂ ವಕೀಲ ಅಲಿ ಖಾಸಿಫ್ ಖಾನ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ಶಾರುಖ್ ಪುತ್ರನ ಡ್ರಗ್ಸ್ ಕೇಸ್ ನಡೆಸಿದ ಅಧಿಕಾರಿಯ ಪತ್ನಿಗೆ ಪಾಕ್ನಿಂದ ಜೀವ ಬೆದರಿಕೆ!
ಅಷ್ಟಕ್ಕೂ ಆಗಿರುವುದು ಏನೆಂದರೆ, ಆರ್ಯನ್ ಖಾನ್ರನ್ನು ಬಂಧಿಸಿದ್ದ ಕೇಸ್ನಲ್ಲಿಯೇ ಸಮೀರ್ ವಾಂಖೆಡೆ ಅವರು, ಆರ್ಯನ್ ಸ್ನೇಹಿತ ಮುನ್ಮುನ್ ಧಮೇಚ ಅವರನ್ನೂ ಬಂಧಿಸಿದ್ದರು. ಈ ಸಂದರ್ಭದಲ್ಲಿ, ಮುನ್ಮುನ್ ಧಮೇಚಾ ಪರವಾಗಿ ಕೋರ್ಟ್ನಲ್ಲಿ ವಕೀಲ ಅಲಿ ಖಾಸಿಫ್ ಖಾನ್ ವಾದ ಮಂಡಿಸಿದ್ದರು. ಈ ಕೇಸ್ಗೆ ಸಂಬಂದಿಸಿದಂತೆ ಅಲಿ ಅವರು ಇತ್ತೀಚೆಗೆ ಮರಾಠಿ ಟಿವಿ ಚಾನೆಲ್ ಒಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಸಮೀರ್ ವಾಂಖೆಡೆ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಸಮೀರ್ ವಾಂಖೆಡೆ ಪ್ರಚಾರ ಪ್ರಿಯ, ಇದೇ ಕಾರಣಕ್ಕೆ ಆತ ಕೇವಲ ಸೆಲೆಬ್ರಿಟಿಗಳನ್ನು ಗುರಿ ಮಾಡಿಕೊಂಡು ಅವರಿಗೆ ಹಿಂಸೆ ನೀಡಿದ್ದ. ಆತ ಭ್ರಷ್ಟ, ಸೆಕ್ಷನ್ 29 ಅನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ’ ಎಂದಿದ್ದರು.
ಈ ವಿಡಿಯೋ ಅನ್ನು ನಟಿ ರಾಖಿ ಸಾವಂತ್ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದರು. ಇದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳನ್ನು ಸಹ ರಾಖಿ ಸಾವಂತ್ ಶೇರ್ ಮಾಡಿದ್ದರು. ಇದೇ ಕಾರಣಕ್ಕೆ ಇಬ್ಬರ ವಿರುದ್ಧವೂ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಸಮೀರ್. 11 ಲಕ್ಷ ರೂಪಾಯಿಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಕೀಲ ಅಲಿ ಖಾಸಿಫ್ ಖಾನ್, ‘ಸಾರ್ವಜನಿಕ ಹಿತಾಸಕ್ತಿಯಿಂದ ಸತ್ಯವನ್ನು ಹೇಳಿದ್ದೇನೆ. ನನ್ನ ಬಳಿ ಎಲ್ಲಾ ದಾಖಲೆ ಇದೆ. ಈ ಪ್ರಕರಣದಲ್ಲಿ ಅವರಿಗೆ ಗೆಲುವು ಸಿಗುವುದಿಲ್ಲ. ಒಂದೊಮ್ಮೆ ಅವರೇನಾದರೂ ಈ ಕಾನೂನು ಸಮರದಲ್ಲಿ ಗೆದ್ದರೆ ಅವರು ಹೂಡಿದ ದಾವೆಗಿಂತಲೂ ಹೆಚ್ಚಿನ ಹಣವನ್ನು ಅವರಿಗೆ ಕೊಡುತ್ತೇನೆ’ ಎಂದು ಸವಾಲು ಹಾಕಿದ್ದಾರೆ.
ಆರ್ಯನ್ ಖಾನ್ ಡ್ರಗ್ಸ್ ಕೇಸ್: ಅಪ್ಪ ಶಾರುಖ್ ಕುರಿತು ತನಿಖಾಧಿಕಾರಿ ವಾಂಖೆಡೆಯಿಂದ ಭಾರಿ ಹೇಳಿಕೆ!