
ಮುಂಬೈ: 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದ ಖ್ಯಾತ ನಟ ಗೋಪಾಲ್ ರೈ ನಿಧನರಾಗಿದ್ದಾರೆ. ಗೋಪಾಲ್ ರೈ ಹಿಂದಿ ಸೇರಿದಂತೆ ಭೋಜ್‌ಪುರಿ ಚಿತ್ರಗಳಲ್ಲಿ ತಮ್ಮ ಅಭಿನಯ ಮತ್ತು ಸರಳತೆಯಿಂದ ಗುರುತಿಸಿಕೊಂಡಿದ್ದರು. ಇಂದು (ಮೇ 25) ನಟ ಗೋಪಾಲ್ ರೈ ನಿಧನರಾಗಿರೋದನ್ನು ಭೋಜ್‌ಪುರಿ ಚಿತ್ರರಂಗದ ಪ್ರಚಾರಕ ಮತ್ತು ವ್ಯವಸ್ಥಾಪಕ ಸಂಜಯ್ ಭೂಷಣ್ ಪಟಿಯಾಲ ದೃಢಪಡಿಸಿದ್ದಾರೆ. ತಮ್ಮ ಅದ್ಭುತ ನಟನೆಯಿಂದ ಅಪಾರ ಅಭಿಮಾನಿಗಳನ್ನು ಗೋಪಾಲ್ ರೈ ಹೊಂದಿದ್ದು, ಇವರ ನಟನೆಗೆ ಹಲವು ಪ್ರಶಸ್ತಿಗಳು ಇವರನ್ನು ಅರಸಿಕೊಂಡು ಬಂದಿವೆ. ಗೋಪಾಲ್ ರೈ ನಿಧನಕ್ಕೆ ಅಭಿಮಾನಿಗಳು ಸೇರಿದಂತೆ ಚಿತ್ರರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ವರದಿಗಳ ಪ್ರಕಾರ, ಸೋಮವಾರ (ಮೇ 26) ಗೋಪಾಲ್ ರೈ ಅವರ ಅಂತ್ಯಕ್ರಿಯೆ ರೇವಾ ಘಾಟ್‌ನಲ್ಲಿ ನಡೆಯಲಿದೆ. ಗೋಪಾಲ್ ಅವರಿಗೆ 76 ವರ್ಷ ವಯಸ್ಸು ಆಗಿತ್ತು.
ಪ್ರತಿ ಪಾತ್ರಕ್ಕೂ ಜೀವ ತುಂಬುತ್ತಿದ್ದ ಗೋಪಾಲ್ ರೈ
ಗೋಪಾಲ್ ರೈ ಅತ್ಯುತ್ತಮ ಕಲಾವಿದರಾಗಿದ್ದು, ಹೆಚ್ಚಾಗಿ ಪೋಷಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ತಮ್ಮ ವೃತ್ತಿಜೀವನದಲ್ಲಿ ವಿವಿಧ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಪ್ರತಿ ಪಾತ್ರಕ್ಕೂ ಗೋಪಾಲ್ ರೈ ಒಗ್ಗಿಕೊಳ್ಳುತ್ತಿದ್ದರು. ಭೋಜ್‌ಪುರಿ ಭಾಷೆಯ ಮೇಲಿನ ಅಪಾರ ಪಾಂಡಿತ್ಯದಿಂದ ಪ್ರೇಕ್ಷಕರ ಪ್ರೀತಿ ಗಳಿಸಿದ್ದರು. ಗೋಪಾಲ್ ರೈ ಅವರ ನಿಧನದಿಂದ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಉಂಟಾಗಿದೆ. ರೈ ಅವರ ನಿಧನದಿಂದ ಅವರ ಮನೆಯಲ್ಲಿ ಮಾತ್ರವಲ್ಲ, ಭೋಜ್‌ಪುರಿ ಚಿತ್ರರಂಗದಲ್ಲೂ ದುಃಖ ಮಡುಗಟ್ಟಿದೆ.
ಖೇಸರಿ ಲಾಲ್ ಯಾದವ್ ಅವರ ಚಿತ್ರ 'ರಾಜಾ ಜಾನಿ', ಪವನ್ ಸಿಂಗ್ ಅವರ 'ಚಾಲೆಂಜ್', ನಿರಾಹುವಾ ಚಿತ್ರ 'ನಿರಾಹುವಾ ಚಲೇ ಲಂಡನ್' ಮತ್ತು 'ನಿರಾಹುವಾ ಚಲೇ ಅಮೇರಿಕಾ' ಸೇರಿದಂತೆ ಹಲವು ಸ್ಟಾರ್ ಕಲಾವಿದರೊಂದಿಗೆ ಗೋಪಾಲ್ ರೈ ಕೆಲಸ ಮಾಡಿದ್ದು, ಸಾಹಸ ದೃಶ್ಯದ ಚಿತ್ರೀಕರಣದಲ್ಲಿಯೂ ಭಾಗಿಯಾಗುತ್ತಿದ್ದರು.
ಗೋಪಾಲ್ ರೈ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ ಮತ್ತು ಅವರ ಕುಟುಂಬಕ್ಕೆ ಸಾಂತ್ವನ ಹೇಳುತ್ತೇವೆ. ದೇವರು ಅವರಿಗೆ ಚಿರಶಾಂತಿ ನೀಡಲಿ, ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿ ನೀಡಲಿ ಎಂದು ಸಂಜಯ್ ಭೂಷಣ್ ಪಟಿಯಾಲ ಸಂತಾಪ ಸೂಚಿಸಿದ್ದಾರೆ. ಪಿಆರ್ ಏಜೆನ್ಸಿ ನೀಡಿದ ಮಾಹಿತಿಯ ಪ್ರಕಾರ, ಗೋಪಾಲ್ ರೈ ಅವರ ಅಂತ್ಯಕ್ರಿಯೆ ಮೇ 26 ರಂದು ನಡೆಯಲಿದೆ. ಭೋಜ್‌ಪುರಿ ಚಿತ್ರರಂಗದ ಅನೇಕ ದಿಗ್ಗಜ ನಟರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಅವರು ಮೃತ ಗೋಪಾಲ್ ರೈ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.
ಗಂಗಾ ಕಿನಾರೆ ಮೋರಾ ಗಾಂವ್ ಚಿತ್ರದ ಮೂಲಕ ಪ್ರವೇಶ
38 ವರ್ಷಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ ಗೋಪಾಲ್ ರೈ, 1987 ರಲ್ಲಿ ಬಿಡುಗಡೆಯಾದ 'ಗಂಗಾ ಕಿನಾರೆ ಮೋರಾ ಗಾಂವ್' ಚಿತ್ರದ ಮೂಲಕ ಸಹಾಯಕ ಕ್ಯಾಮೆರಾಮನ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಚಿಕ್ಕ ಚಿಕ್ಕ ಪಾತ್ರಗಳ ಮೂಲಕ ಬೆಳ್ಳಿ ತೆರೆಗೆ ಎಂಟ್ರಿ ನೀಡಿದ ಗೋಪಾಲ್ ರೈ, ತಮ್ಮ ಪ್ರತಿಭೆಯಿಂದಲೇ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಅವಕಾಶ ಪಡೆದುಕೊಳ್ಳುತ್ತಿದ್ದರು. ಭೋಜ್‌ಪುರಿ ಚಲನಚಿತ್ರ ಪ್ರಶಸ್ತಿ ಮತ್ತು ಬಿಹಾರ ಚಲನಚಿತ್ರ ಪ್ರಶಸ್ತಿ ಹಲವು ಅವಾರ್ಡ್‌ಗಳು ಪಡೆದುಕೊಂಡಿದ್ದಾರೆ. ಗೋಪಾಲ್ ರೈ 100ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ನಾಳೆ ನಡೆಯಲಿದೆ ಅಂತ್ಯಕ್ರಿಯೆ
ಬೆಳ್ಳಿ ತೆರೆಯ ಮೇಲೆ ಅದ್ಭುತವಾಗಿ ನಟಿಸಿದ ಗೋಪಾಲ್ ರೈ, ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸರಳ ಜೀವನವನ್ನೇ ಆಯ್ಕೆ ಮಾಡಿಕೊಂಡಿದ್ದ, ಗೋಪಾಲ್ ರೈ ಸಾಮಾಜಿಕ ಜಾಲತಾಣದಲ್ಲಿಯೂ ಸಕ್ರಿಯರಾಗಿರಲಿಲ್ಲ. ನಾಳೆ ಅಂತ್ಯಕ್ರಿಯೆಯಲ್ಲಿ ಭೋಜಪುರಿ ಚಿತ್ರರಂಗದ ಗಣ್ಯರೆಲ್ಲರೂ ಭಾಗಿಯಾಗಲಿದ್ದಾರೆ ಎಂದು ತಿಳಿದು ಬಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.