ಸೆಲಬ್ರಿಟಿಗಳ ಸೌಂದರ್ಯದ ಹಿಂದಿದೆ ಇಷ್ಟೆಲ್ಲಾ ಕಷ್ಟನಷ್ಟ!

By Web Desk  |  First Published May 19, 2019, 9:59 AM IST

ಸೆಲಬ್ರಿಟಿಗಳೆಂದರೆ ಒಂದಿಷ್ಟು ಸಾರ್ವಜನಿಕ ಕಲ್ಪನೆಗಳಿವೆ. ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮುನ್ನ ಒಂದಿಷ್ಟು ವರ್ಕೌಟ್ ಮಾಡಬೇಕು. ಮೇಕಪ್ ಮಾಡಿಕೊಳ್ಳಬೇಕು. ಅವರಿಗೆ ಅವರದ್ದೇ ಆದ ಕಷ್ಟಗಳಿರುತ್ತವೆ. ಸೆಲಬ್ರಿಟಿಗಳ ಕಷ್ಟಗಳ ಬಗ್ಗೆ ಸೋನಂ ಕಪೂರ್ ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ ನೋಡಿ. 


ಎಲ್ಲ ಹುಡುಗಿಯರಂತೆ ಹದಿಹರೆಯದಲ್ಲಿ ನಾನೂ ಹಲವು ರಾತ್ರಿಗಳನ್ನು ಕನ್ನಡಿ ಮುಂದೆ ಕಳೆದಿದ್ದೇನೆ. ಏಕೆ ನನ್ನ ದೇಹದಲ್ಲಿ ಏನೇನು ಬದಲಾವಣೆಗಳಾಗಬೇಕೋ ಅದಾಗುತ್ತಿಲ್ಲ? ನನ್ನ ಹೊಟ್ಟೆಯ ಭಾಗದಲ್ಲೇಕೆ ಸುಕ್ಕಿದೆ? ಭುಜವೇಕೆ ಚಿಕ್ಕದಿದೆ? ನಾನೇಕೆ ಬೆಳ್ಳಗಿಲ್ಲ? ಕಣ್ಣಿನ ಕೆಳಗೇಕೆ ಕಪ್ಪು ಕಲೆಗಳಿವೆ? ನನ್ನದೇ ಓರಗೆಯವರಿಗಿಂತ ನಾನೇಕೆ ಇಷ್ಟುಎತ್ತರವಿದ್ದೇನೆ? ಈ ಕಲೆಗಳು ಎಂದೂ ಹೋಗುವುದೇ ಇಲ್ಲವೇ ಎಂಬ ಪ್ರಶ್ನೆಗಳು ನನ್ನನ್ನು ಕಾಡಿವೆ.

ಒಮ್ಮೆ ನಾನು ಕುಟುಂಬದವರೊಂದಿಗೆ ಗೋವಾಕ್ಕೆ ಹೋಗಿದ್ದೆ. ಅಲ್ಲಿ ಐಶ್ವರ್ಯ ರೈ ಕೂಡ ಬಂದಿದ್ದರು. ಒಂದು ಸಂಜೆ ಅವರೊಟ್ಟಿಗೆ ಕಳೆದಿದ್ದೆ. ನನಗೀಗಲೂ ನೆನಪಿದೆ, ನೀಲಿ ಬಣ್ಣದ ಪ್ಯಾಂಟ್‌ ಮತ್ತು ಬಿಳಿ ಟಾಪ್‌ನಲ್ಲಿ ಆಕೆ ಅಪ್ಸರೆಯಂತೆ ಕಾಣುತ್ತಿದ್ದರು. ಅದು ನನ್ನ ಚಿಂತೆಗೀಡು ಮಾಡಿತ್ತು.

Latest Videos

ಬರೀ ಪೈನಾಪಲ್‌ ತಿನ್ನುತ್ತಿದ್ದೆ

15ರ ವಯಸ್ಸಿನಲ್ಲಿ ನನಗೆ ಹೆಚ್ಚೇನೂ ತಿಳಿದಿರಲಿಲ್ಲ. ಆದರೆ ನಾನು ಬಾಲಿವುಡ್‌ ನಟಿಯಂತೆ ಕಾಣಲು ಸಾಧ್ಯವೇ ಎಲ್ಲ ಎಂದುಕೊಂಡಿದ್ದೆ. 2 ವರ್ಷದ ನಂತರ ಅಚ್ಚರಿ ಕಾದಿತ್ತು. ಸಂಜಯ್‌ ಲೀಲಾ ಬನ್ಸಾಲಿಯ ‘ಸಾವಾರಿಯಾ’ ಚಿತ್ರದಲ್ಲಿ ನಟಿಸಿದೆ. ನಾನು ಮೂವಿ ಸ್ಟಾರ್‌ ಆಗಿದ್ದರೂ ಆ ಪಾತ್ರಕ್ಕೆ ನಾನು ಸರಿಹೊಂದುತ್ತೇನಾ ಎಂಬ ಅಳುಕಿತ್ತು. ಬ್ಯಾಕ್‌ಲೆಸ್‌ ಚೋಲಿ ಧರಿಸಿ ಕುಣಿಯಲು ಹೇಳಿದರೆ ಏನು ಮಾಡುವುದು? ಅಥವಾ ಇಂಡಸ್ಟ್ರಿಯಿಂದಲೇ ಹೊರಹಾಕಿದರೆ... ಎಂಬ ಭಯವೂ ಇತ್ತು.

ಇದೇ ಭಯದಲ್ಲಿ ಅನಾರೋಗ್ಯಕರ ಹವ್ಯಾಸ ಬೆಳೆಸಿಕೊಂಡೆ. ಡಯೆಟ್‌ ಮಾಡಲು ಆರಂಭಿಸಿದೆ. ನಿತ್ಯವೂ ಪೈನಾಪಲ್‌ ತಿನ್ನತೊಡಗಿದೆ. ದೇಹವನ್ನು ಕಠಿಣವಾಗಿ ದಂಡಿಸಲು ಆರಂಭಿಸಿದೆ. ಒಂದೇ ಆಸನದಲ್ಲಿ ಗಂಟೆಗಟ್ಟಲೆ ನಿಲ್ಲುತ್ತಿದ್ದೆ. 18ನೇ ವರ್ಷದಲ್ಲಿ ಒಬ್ಬ ಹುಡುಗನ ಜೊತೆಗೆ ಡೇಟಿಂಗ್‌ಗೆ ಹೋಗಿದ್ದೆ.

ಅವನು ‘ಸೋನಂ ನೀನು ತುಂಬಾ ದಪ್ಪಗಿದ್ದೀಯಾ’ ಎಂದ. ಅದನ್ನು ಕೇಳಿ ಕೆಲ ದಿನಗಳ ಕಾಲ ನಾನು ಏನನ್ನೂ ತಿಂದಿರಲಿಲ್ಲ. ಜುಹು ಬೀಚ್‌ನ ಬಿಲ್‌ ಬೋರ್ಡ್‌ ಮೇಲೆ ಕಾಣಿಸಿಕೊಂಡರೆ ಈ ಸ್ವ-ಜಿಗುಪ್ಸೆ ಹೊರಟುಹೋಗುತ್ತದೆ ಎಂದು ಭಾವಿಸಿದ್ದೆ. ಆದರೆ ಅದು ತಪ್ಪು ಎಂದು ಕೆಲವು ಕಾಲದ ಬಳಿಕ ಅರಿವಾಯಿತು. ಏಕೆಂದರೆ ಒಮ್ಮೆ ನಟಿಯಾದರೆ ನಮ್ಮ ದೇಹವನ್ನು ಅದಿದ್ದಂತೆಯೇ ಸ್ವೀಕರಿಸುವುದಕ್ಕಿಂತ ಹೆಚ್ಚಾಗಿ ಅದನ್ನು ದ್ವೇಷಿಸಲು ಅನೇಕ ಕಾರಣಗಳು ಸಿಗುತ್ತವೆ.

ಫ್ಲಾಟ್‌ ಎದೆಯೆಂದು ಟೀಕಿಸುತ್ತಾರೆ

ಜನರು ನನ್ನನ್ನು ಸಪಾಟು ಎದೆಯವಳು ಎಂದು ಕರೆಯಲು ಆರಂಭಿಸಿದರು. ನನಗೆ ಅದರ ಬಗ್ಗೆ ಅಭದ್ರತೆ ಅಥವಾ ಕೀಳರಿಮೆ ಇಲ್ಲ. ನನ್ನ ನ್ಯೂನತೆಗಳನ್ನು ಗಮನಿಸಲು ಟ್ಯಾಬ್ಲಾಯ್ಡ್‌ಗಳ ಅವಶ್ಯಕತೆಯೂ ನನಗಿಲ್ಲ. ಏಕೆಂದರೆ ಕ್ಯಾಮೆರಾ ಮಾನಿಟರ್‌ಗಳಲ್ಲಿ ನನ್ನನ್ನು ನಾನು ನೋಡಿ, ಜನರು ಏನೆಲ್ಲಾ ಟೀಕಿಸಬಹುದು ಎಂದು ಊಹಿಸುತ್ತೇನೆ.

ನನಗೀಗಲೂ ನೆನಪಿದೆ, ‘ಬೇವಕೂಫಿಯಾ’ ಸಿನಿಮಾದ ಟೈಟ್‌ ಸಿಲ್ವರ್‌ ಡ್ರೆಸ್‌ ಸೇರಿದಂತೆ ಹಲವು ಡ್ರೆಸ್‌ಗಳಲ್ಲಿ ನನ್ನನ್ನು ನಾನೇ ಇಷ್ಟಪಟ್ಟಿರಲಿಲ್ಲ. ಅಫ್‌ಕೋರ್ಸ್‌ ಮಹಿಳೆಯ ದೇಹದ ‘ಸಮಗ್ರ ಶೋಧನೆ’ ಹೊಸತೇನಲ್ಲ. ಅಥವಾ ಸೆಲೆಬ್ರಿಟಿಗಳಿಗೆ ಅದು ವಿಶೇಷವೇ ಅಲ್ಲ. ನಿಮ್ಮ ಸಂಬಂಧಿಗಳು ‘ನೀನು ಆರೋಗ್ಯವಾಗಿದ್ದೀಯಾ’ ಎಂದು ಯಾವತ್ತಾದರೂ ಕೇಳುತ್ತಾರಾ? ಅಥವಾ ನೀವು ಬಯಸದಿದ್ದರೂ ತೂಕ ಇಳಿಸಿಕೊಳ್ಳುವುದು ಹೇಗೆ ಎಂದು ನಿಮ್ಮ ಸ್ನೇಹಿತರು ಸಲಹೆ ನೀಡುವುದಿಲ್ಲವೇ?

ಸಮಸ್ಯೆ ಇರುವುದು ಎಲ್ಲಿ?

ಕಲೆರಹಿತ ಸೌಂದರ್ಯ ಅಸಾಧ್ಯ ಎಂದು ಗೊತ್ತಿದ್ದರೂ ಮಹಿಳೆ ದೋಷಮುಕ್ತವಾಗಿರಬೇಕು, ಲೈಂಗಿಕ ಭಾವನೆ ಕುಂದಿದ್ದರೂ ಆಕೆ ಸೆಕ್ಸಿಯಾಗಿಯೇ ಕಾಣಿಸಬೇಕೆಂಬ ಯೋಚನೆ ನಮ್ಮಲ್ಲಿದೆ. ಸೌಂದರ್ಯದ ನೀತಿ ನಿಯಮಗಳು ಕಟುವಾದುವು ಮತ್ತು ಅವುಗಳನ್ನು ಗೆಲ್ಲಲು ಸಾಧ್ಯವೇ ಇಲ್ಲ.

ಅನುಷ್ಕಾ ಶರ್ಮ ಸ್ಕಿನ್ನಿ-ಶೇಮ್ಡ್, ಸೋನಾಕ್ಷಿ ಸಿನ್ಹಾ ಫ್ಯಾಟ್‌-ಶೇಮ್‌್ಡ, ಕತ್ರಿನಾ ಕೈಫ್‌ ಫಿಟ್‌-ಶೇಮ್ಡ್. ಈ ಎಲ್ಲಾ ಮಹಿಳೆಯರು ಎಂದೆಂದಿಗೂ ಬೆರಗುಗೊಳಿಸುವ ಸೌಂದರ್ಯವತಿಯರು! ಆದರೆ ಒಡೆದ ವ್ಯವಸ್ಥೆಯಲ್ಲೇ ಪರಿಹಾರವೂ ಇರುತ್ತದೆ. ಏಕೆಂದರೆ ಇಲ್ಲಿ ಸಮಸ್ಯೆ ಇರುವುದು ‘ಸೌಂದರ್ಯ’ದ ಅರ್ಥೈಸುವಿಕೆಯಲ್ಲಿ. ಇದಕ್ಕೆ ಪರಿಹಾರ ಮಹಿಳೆಯರಲ್ಲೇ ಇದೆ.

ಆರೋಗ್ಯವೇ ಸೌಂದರ್ಯ

ನನಗೀಗ 33 ವರ್ಷ. ನಾನಿವತ್ತು ನನ್ನ ದೇಹವನ್ನು ಹೆಚ್ಚು ಇಷ್ಟಪಡುತ್ತೇನೆ. ಏಕೆಂದರೆ ಅದು ಆರೋಗ್ಯಕರವಾಗಿದೆ. ತೆಳ್ಳಗಿರುವುದನ್ನು ಹಾಗೂ ಕೆಲ ನ್ಯೂನತೆಗಳಿರುವುದನ್ನು ನಾನು ಸ್ವೀಕರಿಸಿದ್ದೇನೆ. ಯೋಗ್ಯ ಜೀವನ ಶೈಲಿ, ಚೆನ್ನಾಗಿ ತಿಂದು ಪ್ರತಿದಿನ ಸಂತೋಷದಿಂದ ಎದ್ದೇಳುವುದು ನನಗೆ ಖುಷಿ ಕೊಡುತ್ತದೆ.

ನನ್ನ ಪ್ರಕಾರ ಆರೋಗ್ಯವೇ ಸೌಂದರ್ಯ. ದೇಹದಲ್ಲಿ ಕಲೆ, ಸುಕ್ಕುಗಳಿದ್ದರೆ ತಪ್ಪೇನೂ ಇಲ್ಲವೆಂದು ನನಗೀಗ ಅರ್ಥವಾಗಿದೆ. ಅವು ನಮ್ಮ ಬೆಳವಣಿಗೆಯ ಗುರುತುಗಳು. ಅವುಗಳ ನೈಜತೆಯಲ್ಲಿ ಸೌಂದರ್ಯ ಇದೆ.

ಪ್ರೆಟಿನೆಸ್‌ ಎನ್ನುವುದಕ್ಕೆ ನೀವು ನಿಮ್ಮದೇ ವ್ಯಾಖ್ಯೆ ಕೊಟ್ಟುಕೊಳ್ಳಿ. ಕಲೆಯಿಲ್ಲದ ಸುಂದರ ದೇಹ ಎಂಬ ಕಲ್ಪನೆಯನ್ನು ನಂಬಬೇಡಿ. ಏಕೆಂದರೆ- ನ್ಯೂನತೆ ಇಲ್ಲದಿರುವುದು ಎನ್ನುವುದೇ ಅತಿದೊಡ್ಡ ಸುಳ್ಳು. ಅದನ್ನು ಕೊನೆಗಾಣಿಸಲು ಇದು ಸುಸಮಯ.

ಪರದೆ ಆಚೆಗೆ ನಟಿಯರು

ಹದಿಹರೆಯದ ಕೆಲ ಹುಡುಗಿಯರು ಬೆಡ್‌ ರೂಮ್‌ನಲ್ಲಿ ಕನ್ನಡಿಯ ಮುಂದೆ ನಿಂತು ನಾನೇಕೆ ಸೆಲೆಬ್ರಿಟಿಗಳ ಥರ ಕಾಣಿಸುತ್ತಿಲ್ಲ ಎಂದುಕೊಳ್ಳುತ್ತಾರೆ. ಆದರೆ ನಾನೊಬ್ಬಳೇ ಅಲ್ಲ, ಯಾವುದೇ ನಟಿಯೂ ಟೀವಿಯಲ್ಲಿ ಕಾಣುವಂತೆ ವಾಸ್ತವ ಬದುಕಿನಲ್ಲಿ ಕಾಣುವುದಿಲ್ಲ. ಹಾಗಾದರೆ ಪರದೆ ಮೇಲೆ ಅಷ್ಟುಸುಂದರವಾಗಿ ಕಾಣಲು ಕಾರಣ ಏನು? ಅದರ ಹಿಂದಿನ ಸೀಕ್ರೆಟ್‌ ಹೀಗಿರುತ್ತದೆ.

ನನ್ನ ಕತೆಯನ್ನೇ ತೆಗೆದುಕೊಳ್ಳಿ. ಪ್ರತಿ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವ ಮುಂಚೆ ಮೇಕಪ್‌ ಕುರ್ಚಿಯ ಮೇಲೆ ನಾನು ಕನಿಷ್ಠ 90 ನಿಮಿಷ ಕಳೆಯುತ್ತೇನೆ. ಮೂರರಿಂದ ಆರು ಜನರು ನನ್ನ ಕೂದಲನ್ನು ಸಿಂಗರಿಸುತ್ತಾರೆ. ನನ್ನ ಉಗುರುಗಳನ್ನು ಸುಂದರವಾಗಿ ಕಾಣುವಂತೆ ಮಾಡುತ್ತಾರೆ. ವಾರಕ್ಕೊಮ್ಮೆ ನನ್ನ ಹುಬ್ಬುಗಳನ್ನು ತಿದ್ದುತ್ತಾರೆ. ನನ್ನ ದೇಹದ ಮೇಲಿರುವ ಕಲೆಗಳನ್ನು ಕಾಣದಿರುವಂತೆ ಮರೆಮಾಚುತ್ತಾರೆ.

ಬೆಳಗ್ಗೆ 6 ಗಂಟೆಗೆ ಎದ್ದರೆ 7:30ರ ವರೆಗೆ ಜಿಮ್‌ನಲ್ಲಿರುತ್ತೇನೆ. ಅಲ್ಲಿ ಕನಿಷ್ಠ 90 ನಿಮಿಷ ದೇಹ ದಂಡಿಸುತ್ತೇನೆ. ರಾತ್ರಿ ಮಲಗುವ ಮುನ್ನವೂ ಕೆಲ ಹೊತ್ತು ವ್ಯಾಯಾಮ ಮಾಡುತ್ತೇನೆ. ನಾನೇನು ತಿನ್ನಬೇಕು, ಏನನ್ನು ತಿನ್ನಬಾರದು ಎಂದು ನಿರ್ಧರಿಸುವುದೇ ಕೆಲವರ ಪೂರ್ಣಾವಧಿ ಕೆಲಸ.

ನನ್ನ ಊಟಕ್ಕಿಂತ ಹೆಚ್ಚಾಗಿ ನನ್ನ ಫೇಸ್‌ಪ್ಯಾಕ್‌ಗೆ ಹೆಚ್ಚು ಪದಾರ್ಥಗಳು ಬೇಕು. ನನ್ನ ಬಟ್ಟೆಹೇಗಿರಬೇಕು ಎಂದು ನಿರ್ಧರಿಸುವುದಕ್ಕೆಂದೇ ಒಂದು ಟೀಮ್‌ ಇದೆ. ಇಷ್ಟೆಲ್ಲಾ ಮಾಡಿದ ಮೇಲೂ ನಾನು ‘ದೋಷಮುಕ್ತಳಲ್ಲ.’ ಅನಂತರವೂ ಫೋಟೋಶಾಪ್‌ ಕೈಚಳಕದ ಮೂಲಕವೇ ನಾನು ಸುಂದರವಾಗಿ ಕಾಣುತ್ತೇನೆ.

ನಾನು ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತೇನೆ; ಒಬ್ಬ ನಟಿ ನಿಮ್ಮೆದುರಿಗೆ ಬರುವಾಗ, ಅವರನ್ನು ಸುಂದರವಾಗಿ ರೆಡಿ ಮಾಡಲು ಒಂದು ಸೇನೆ ಬೇಕು, ಸಾಕಷ್ಟುಹಣ ಬೇಕು, ನಂಬಲಸಾಧ್ಯವಾದಷ್ಟುಸಮಯ ಬೇಕು. ಅಷ್ಟೆಲ್ಲಾ ಮಾಡಿಯೂ ಆ ಸೌಂದರ್ಯ ನೈಜವೇ? ಅಲ್ಲ. ಹಾಗಾಗಿ, ನಾನೂ ಹಾಗೆ ಕಾಣಿಸಬೇಕೆಂಬ ಬಯಕೆ ಬಿಟ್ಟುಬಿಡಿ. ಅದರ ಬದಲು ಹೆಚ್ಚೆಚ್ಚು ಹೊತ್ತು ನಿದ್ರೆ ಮಾಡಿ, ವ್ಯಾಯಾಮ ಮಾಡಿ. ಸೌಂದರ್ಯ ಎಂಬುದಕ್ಕೆ ನಿಮ್ಮದೇ ವ್ಯಾಖ್ಯಾನ ನೀಡಿ.

- ಸೋನಂ ಕಪೂರ್, ಬಾಲಿವುಡ್ ನಟಿ 

click me!