
ಕಾಲಿವುಡ್‌ನಲ್ಲಿ ಬಿರುಗಾಳಿ: ವಿಜಯ್ ಬೆನ್ನಲ್ಲೇ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಧನುಷ್? ತಂದೆಯ ಮಾತಿನಲ್ಲಿದೆ ಬಿಗ್ ಸುಳಿವು!
ತಮಿಳುನಾಡು ಅಂದ್ರೆ ಅಲ್ಲಿ ಸಿನಿಮಾವೂ ಒಂದು ಧರ್ಮ, ರಾಜಕೀಯವೋ ಒಂದು ಮರ್ಮ! ಬೆಳ್ಳಿಪರದೆಯ ಮೇಲೆ ಮಿಂಚಿದವರು ಕೋಟೆ ಕಟ್ಟಿ ಆಳೋದು ಅಲ್ಲಿನ ಹಳೆಯ ಸಂಪ್ರದಾಯ. ಈಗ ತಾನೇ ದಳಪತಿ ವಿಜಯ್ (Thalapathy Vijay) ತಮ್ಮ ರಾಜಕೀಯ ಇನಿಂಗ್ಸ್ ಆರಂಭಿಸಿ ದೊಡ್ಡ ಸಂಚಲನ ಮೂಡಿಸಿದ್ದಾರೆ. ವಿಜಯ್ ಅವರ ಈ 'ಮಾಸ್ ಎಂಟ್ರಿ'ಯ ಬೆನ್ನಲ್ಲೇ ಈಗ ಮತ್ತೊಬ್ಬ ಸ್ಟಾರ್ ನಟನ ಹೆಸರು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಅವರೇ 'ಕೋಲವರಿ' ಬಾಯ್, ಸಾಲು ಸಾಲು ಹಿಟ್ ಚಿತ್ರಗಳ ಸರದಾರ ಧನುಷ್!
ಅಪ್ಪ ಹಾಕಿದ ಅಡ್ಡಗೋಡೆ ಮೇಲಿನ ದೀಪ!
ಧನುಷ್ (Dhanush) ರಾಜಕೀಯಕ್ಕೆ ಬರ್ತಾರಾ ಅನ್ನೋ ಪ್ರಶ್ನೆಗೆ ಸ್ವತಃ ಅವರ ತಂದೆ, ಹಿರಿಯ ನಿರ್ದೇಶಕ ಕಸ್ತೂರಿ ರಾಜಾ ಅವರು ನೀಡಿರುವ ಉತ್ತರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬೆಂಕಿ ಹಚ್ಚಿದೆ. ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಈ ಬಗ್ಗೆ ಮಾತನಾಡಿದ ಅವರು, "ಯಾರೇ ಆದರೂ ರಾಜಕೀಯಕ್ಕೆ ಬರಬಹುದು, ಅದು ಅವರ ವೈಯಕ್ತಿಕ ಇಚ್ಛೆ. ಧನುಷ್ ಕೂಡ ಭವಿಷ್ಯದಲ್ಲಿ ರಾಜಕೀಯಕ್ಕೆ ಬರಬಾರದು ಎಂದೇನಿಲ್ಲ. ಬರುವುದಾದರೆ ಬರಲಿ, ನಾವು ಬೇಡ ಅನ್ನಲು ಯಾರು?" ಎಂದು ಹೇಳುವ ಮೂಲಕ ಸಸ್ಪೆನ್ಸ್ ಉಳಿಸಿದ್ದಾರೆ.
ಇದು ಕೇವಲ ತಂದೆಯ ಹಾರೈಕೆಯಲ್ಲ, ಬದಲಾಗಿ ಧನುಷ್ ರಾಜಕೀಯ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದಾರಾ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ವಿಜಯ್ ಅವರು ಪಕ್ಷ ಕಟ್ಟುವ ಮೊದಲೇ ಅಭಿಮಾನಿ ಸಂಘಗಳ ಮೂಲಕ ಸಮಾಜಮುಖಿ ಕೆಲಸಗಳನ್ನು ಮಾಡಿದ್ದರು. ಈಗ ಅದೇ ಹಾದಿಯಲ್ಲಿ ಧನುಷ್ ಕೂಡ ತಮ್ಮ ಅಭಿಮಾನಿ ಸಂಘಗಳ ಮೂಲಕ ಸದ್ದಿಲ್ಲದೆ ಬಡವರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಹುಟ್ಟುಹಬ್ಬದ ನೆಪದಲ್ಲಿ ನಡೆಯುತ್ತಿರುವ ಈ ಸಮಾಜ ಸೇವೆಗಳು ಬರೀ ಉದಾರತೆಯೋ ಅಥವಾ ಭವಿಷ್ಯದ ವೋಟ್ ಬ್ಯಾಂಕ್ ಗಾಗಿ ನಡೆಯುತ್ತಿರುವ ತಾಲೀಮೋ ಎಂಬ ಚರ್ಚೆ ಶುರುವಾಗಿದೆ.
ಇದೇ ವೇಳೆ ಕಸ್ತೂರಿ ರಾಜಾ ಅವರು ತಮ್ಮ ಜೀವನದ ಸಂಕಷ್ಟದ ದಿನಗಳನ್ನು ನೆನೆದು ಭಾವುಕರಾದರು. "ಒಂದು ಕಾಲದಲ್ಲಿ ನನ್ನ ಹತ್ತಿರ ತೇನಿಯಿಂದ ಚೆನ್ನೈಗೆ ಬರಲು ಕೇವಲ 50 ರೂಪಾಯಿ ಕೂಡ ಇರಲಿಲ್ಲ. ಅಷ್ಟು ಬಡತನದ ದಿನಗಳನ್ನು ನಾನು ನೋಡಿದ್ದೇನೆ. 19ನೇ ವಯಸ್ಸಿನಲ್ಲೇ ಸಂಸಾರದ ನೊಗ ಹೊತ್ತಿದ್ದೆ. ನನ್ನ ಪತ್ನಿ ವಿಜಯಲಕ್ಷ್ಮಿ ಸಾಥ್ ನೀಡದಿದ್ದರೆ ಇಂದು ನಾನು ಇಲ್ಲಿ ಇರುತ್ತಿರಲಿಲ್ಲ" ಎಂದು ಹಳೆ ದಿನಗಳನ್ನು ಮೆಲುಕು ಹಾಕಿದರು.
ಧನುಷ್ ಕುಟುಂಬ ಇಂದು ಕೇವಲ ಸಿನಿಮಾ ಕುಟುಂಬವಲ್ಲ, ಅದು ಪ್ರತಿಭೆಗಳ ಗಣಿ. ಧನುಷ್ ನಟನೆಯಲ್ಲಿ ಇಂಟರ್ ನ್ಯಾಷನಲ್ ಲೆವೆಲ್ ತಲುಪಿದ್ದರೆ, ಅಣ್ಣ ಸೆಲ್ವರಾಘವನ್ ಕೆಮಿಕಲ್ ಇಂಜಿನಿಯರಿಂಗ್‌ನಲ್ಲಿ ಗೋಲ್ಡ್ ಮೆಡಲ್ ಪಡೆದು ನಂತರ ನಿರ್ದೇಶನದಲ್ಲಿ ಕ್ರಾಂತಿ ಮಾಡಿದವರು. ಇನ್ನು ಧನುಷ್ ಅವರ ಇಬ್ಬರು ಸಹೋದರಿಯರು ವೃತ್ತಿಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಒಟ್ಟಿನಲ್ಲಿ, 'ತುಳ್ಳುವದೋ ಇಳಮೈ' ಚಿತ್ರದಿಂದ ಶುರುವಾದ ಈ ಕುಟುಂಬದ ಪಯಣ ಈಗ ರಾಜಕೀಯದ ಹೊಸ್ತಿಲಿಗೆ ಬಂದು ನಿಂತಿದೆ. ಧನುಷ್ ರಾಜಕೀಯಕ್ಕೆ ಬಂದರೆ ಅದು ತಮಿಳುನಾಡು ರಾಜಕೀಯದಲ್ಲಿ ಹೊಸ ಮನ್ವಂತರಕ್ಕೆ ನಾಂದಿ ಹಾಡುವುದಂತೂ ಖಚಿತ. ಧನುಷ್ ಅವರ ಈ 'ಪೊಲಿಟಿಕಲ್ ಮೂವ್' ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.