ಮಾಡಿದ ಚಿತ್ರಗಳೆಲ್ಲ ಫ್ಲಾಪ್, ಸಂಭಾವನೆ ಕಡಿಮೆ ಮಾಡಿದ ಆಮೀರ್, ಆಮಿತಾಭ್, ಅಕ್ಷಯ್!

By Suvarna NewsFirst Published Dec 28, 2022, 1:12 PM IST
Highlights

2022 ವರ್ಷ ಅನೇಕ ಮಹಾ ಸ್ಟಾರ್‌ ನಟರ ಆಶಾಲೋಕವನ್ನೂ ಮುರಿದು ಚೂರು ಚೂರಾಗಿಸಿದೆ. ಸಾಮಾನ್ಯ ನಟರಲ್ಲ, ಬಾಲಿವುಡ್‌ನ ದೊಡ್ಡ ದೊಡ್ಡ ಸ್ಟಾರ್‌ಗಳೇ ಈ ವರ್ಷ ಬಿದ್ದ ಹೊಡೆತಕ್ಕೆ ಕಂಗಾಲಾಗಿದ್ದಾರೆ. ಅಮೀರ್‌ ಖಾನ್‌, ಅಮಿತಾಭ್‌ ಬಚ್ಚನ್‌ ಮುಂತಾದವರು ಕೂಡ ಈ ಲಿಸ್ಟಿನಲ್ಲಿದ್ದಾರೆ ಎಂದರೆ ಗಾಬರಿಯಾಗಬೇಡಿ. ತಮಗೆ ಎಂದೆಂದೂ ಬೇಡಿಕೆ ಇಳಿಯದು ಎಂದು ಭಾವಿಸಿದ್ದ ಇವರು ಕೂಡ ಪಾಠ ಕಲಿಯುವಂತೆ ಮಾಡಿದ್ದು ಈ ವರ್ಷದ ಬಿಗ್‌ ಫ್ಲಾಪ್‌ಗಳು.

ಯಾರು ಈ ವರ್ಷ ಫ್ಲಾಟ್‌ಗಳ ಹೊಡೆತ ತಿಂದ ಬಳಿಕ ತಮ್ಮ ಸಂಭಾವನೆ ಇಳಿಸಿಕೊಳ್ಳಬೇಕಾಗಿ ಬಂದಿದೆ ಅಂತ ನೋಡೋಣವೇ?

ಅಕ್ಷಯ್‌ ಕುಮಾರ್‌
ಬಾಲಿವುಡ್‌ನ ಖಿಲಾಡಿ ಸ್ಟಾರ್‌ ಅಕ್ಷಯ್‌ ಕುಮಾರ್‌ನ ನಾಲ್ಕು ದೊಡ್ಡ ದೊಡ್ಡ ರಿಲೀಸ್‌ಗಳು ಈ ವರ್ಷ ಮಹಾ ಫ್ಲಾಪ್‌ ಆಗಿವೆ. ಇವು ಬ್ಲಾಕ್‌ಬಸ್ಟರ್‌ ಆಗಬಹುದು ಅಂತ ನಿರೀಕ್ಷಿಸಲಾಗಿತ್ತು. ಬಚ್ಚನ್‌ ಪಾಂಡೆ, ಸಾಮ್ರಾಟ್‌ ಪೃಥ್ವಿರಾಜ್‌, ರಕ್ಷಾ ಬಂಧನ್‌, ರಾಮ್‌ ಸೇತು ಫಿಲಂಗಳು ನೆಲ ಕಚ್ಚಿದವು. ಈತ ಸಾಮಾನ್ಯವಾಗಿ ಒಂದು ಫಿಲಂಗೆ 100 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದ. ಆದರೆ ಈಗ ಸಂಭಾವನೆ ಇಳಿಸದೇ ನಿರ್ವಾಹ ಇಲ್ಲದಾಗಿದೆ. ಸದ್ಯ ಈತನ ನಟನೆಯ ಸೆಲ್ಫೀ ಮತ್ತು ಸೂರಾರೈ ಪೋಟ್ರು ತಮಿಳು ಫಿಲಂನ ಹಿಂದಿ ರಿಮೇಕ್‌ಗಳು ನಿರ್ಮಾಣ ಹಂತದಲ್ಲಿವೆ. ಇವೆರಡೂ ಅಷ್ಟೇನೂ ಬಿಗ್‌ ಬಜೆಟ್‌ ಫಿಲಂಗಳಲ್ಲ. ಇವೆರಡರ ಪ್ರೊಡಕ್ಷನ್‌ ವೆಚ್ಚ ಕೂಡ ನೂರು ಕೋಟಿಯ ಒಳಗೇ ಇದೆ. ಹೀಗಾಗಿ ಈತ ತನ್ನ ಸಂಭಾವನೆಯನ್ನು 70 ಕೋಟಿಗೆ ಇಳಿಸಿಕೊಂಡಿರಬಹುದು ಎಂದು ಊಹಿಸಲಾಗಿದೆ.

ಆಮೀರ್‌ ಖಾನ್‌
ಬಾಲಿವುಡ್‌ನ ಮಿಸ್ಟರ್‌ ಪರ್‌ಫೆಕ್ಷನಿಸ್ಟ್‌ (Mr Perfectionist of Bollywood) ಆಮೀರ್‌ ಖಾನ್‌ನ ಲಾಲ್‌ಸಿಂಗ್‌ ಛಡ್ಡಾ ಇನ್ನಿಲ್ಲದಂತೆ ಸೋತಿತು. ಬಾಯ್ಕಾಟ್‌ ಬಾಲಿವುಡ್‌ (Boycott Bollywood) ಆತನನ್ನೂ ಬಾಧಿಸಿತು. ʼಫಾರೆಸ್ಟ್‌ ಗಂಪ್‌ʼ ಹಾಲಿವುಡ್‌ ಬ್ಲಾಕ್‌ಬಸ್ಟರ್‌ ಫಿಲಂನ ರಿಮೇಕ್‌ ಎಂಬ ಪ್ರಭಾವಳಿಯೂ ಅದನ್ನು ರಕ್ಷಿಸಲಿಲ್ಲ. ಸಾಮಾನ್ಯವಾಗಿ ಈತ ಒಂದು ಸಿನಿಮಾಗೆ 200 ಕೋಟಿ ಪಡೆಯುತ್ತಾನೆ ಎಂದು ಸುದ್ದಿಯಿದೆ. ಅಂದರೆ ಇದು ಸಂಭಾವನೆಯಲ್ಲ. ಈತ ಸಿನಿಮಾದ ಲಾಭದಲ್ಲಿ ಶೇರು ಪಡೆದುಕೊಳ್ಳುತ್ತಾನೆ. ಲಾಲ್‌ಸಿಂಗ್‌ ಛಡ್ಡಾಗೆ ಈತ ಸುರಿದ 100 ಕೋಟಿ ರೂಪಾಯಿ ಕೂಡ ಹೊಳೆಯಲ್ಲಿ ಹುಣಸೆಹಣ್ಣೂ ತೊಳೆದಂತೆ ಹೋಗಿದೆ. ಅಷ್ಟೂ ನಷ್ಟವನ್ನು ಈತ ತಾನೇ ಭರಿಸಿದ್ದಾನೆ. ಮುಂದಿನ ಫಿಲಂಗೆ ಈತನನ್ನು ಹಾಕಿಕೊಳ್ಳುವವರು ಹಿಂದೆಮುಂದೆ ನೋಡುತ್ತಿದ್ದಾರೆ.

ಟೈಗರ್‌ ಶ್ರಾಫ್‌
ಟೈಗರ್‌ ಶ್ರಾಫ್‌ನ ಆಸ್ತಿ ಮೌಲ್ಯ (Net Worth) ಈಗ ಸುಮಾರು ನೂರು ಕೋಟಿ. ಈತ ಒಂದು ಫಿಲಂಗೆ ಸುಮಾರು 65 ಕೋಟಿ ರೂಪಾಯಿ ಚಾರ್ಜ್‌ ಮಾಡುತ್ತಾನೆ. ಚೆನ್ನಾಗಿ ಡ್ಯಾನ್ಸ್‌ ಮಾಡುವ ಈತ ಆಕ್ಷನ್‌ ಫಿಲಂ ಮೇಕರ್‌ಗಳಿಗೆ ಅತ್ಯಾಪ್ತ. ಈ ವರ್ಷ ಆತ ನಟಿಸಿದ ಹೇರೋಪಂತಿ-2 ದಾರುಣವಾಗಿ ಸೋತಿತು. 100 ಕೋಟಿಯ ಫಿಲಂ 25 ಕೋಟಿಯನ್ನೂ ಗಳಿಸಲಿಲ್ಲ. ಹೀಗಾಗಿ ಈತ ತನ್ನ ಸಂಭಾವನೆಯನ್ನು ಅರ್ಧಕ್ಕೆ, ಅಂದರೆ ಸುಮಾರು 32 ಕೋಟಿಗೆ ಇಳಿಸಿಕೊಂಡಿದ್ದಾನೆ ಎನ್ನಲಾಗಿದೆ.

ಹಿಂದಿ ಹಾಡುಗಳು ಹೆಚ್ಚು ರೊಮ್ಯಾಂಟಿಕ್, ಸೌತ್‌ ಸಾಂಗ್ಸ್ ಮಸಾಲ ಜಾಸ್ತಿ; ನಟಿ ರಶ್ಮಿಕಾ ಮಂದಣ್ಣ

ಜಾನ್‌ ಅಬ್ರಾಹಂ
ಅಬ್ರಹಾಂ ಜಿಸ್ಮ್ (2003) ಮತ್ತು ಧೂಮ್ (2004), ದೋಸ್ತಾನಾ, ಮದ್ರಾಸ್ ಕೆಫೆ, ಸತ್ಯಮೇವ ಜಯತೆಯಂತಹ ಬ್ಲಾಕ್‌ಬಸ್ಟರ್‌ಗಳಿಂದ(Blockbuster) ಗೆದ್ದಿದ್ದ. ಆದರೆ 49 ವರ್ಷ ವಯಸ್ಸಿನ ಅವರ ಇತ್ತೀಚಿನ ಚಲನಚಿತ್ರಗಳು ಸತ್ಯಮೇವ ಜಯತೆ 2, ಅಟ್ಯಾಕ್: ಭಾಗ 1 ಮತ್ತು ಏಕ್ ವಿಲನ್ ರಿಟರ್ನ್ಸ್- ಎಲ್ಲಾ ವಿಫಲವಾಗಿವೆ. ಜಾನ್ ಅಬ್ರಹಾಂನ ಆಸ್ತಿ ಮೌಲ್ಯ ಈಗ ಸುಮಾರು 300 ಕೋಟಿ ರೂ. ಎಂದು ಅಂದಾಜು. ತನ್ನ ಚಿತ್ರಕ್ಕೆ ಸುಮಾರು 50 ಕೋಟಿ ರೂ. ಪಡೆಯುತ್ತಿದ್ದ ಈತ ಮುಂದಿನ ಚಿತ್ರಗಳಿಗೆ ಸಂಭಾವನೆಯನ್ನು ಅರ್ಧಕ್ಕರ್ಧ ಇಳಿಸಿದ್ದಾನೆ ಎಂದು ಮಾಹಿತಿಯಿದೆ. ನಿರ್ದೇಶಕ ಸಾಜಿದ್ ಖಾನ್ ಅವರ ಮುಂದಿನ ಚಿತ್ರಕ್ಕೆ ಈತ 25 ಕೋಟಿಯಷ್ಟೇ ಪಡೆಯಲಿದ್ದಾನಂತೆ.

ವಿಜಯ್‌ ದೇವರಕೊಂಡ
ಟಾಲಿವುಡ್ ತಾರೆಯಾದ ವಿಜಯ್‌ ದೇವರಕೊಂಡನ ಬಾಲಿವುಡ್ ಚೊಚ್ಚಲ ಚಿತ್ರ ಲಿಗರ್ ವಾಶ್‌ಔಟ್(Washout) ಆಗಿದೆ. ಹಾಕಿದ 100 ಕೋಟಿ ರೂಪಾಯಿಯಲ್ಲಿ ಕೇವಲ 20 ಕೋಟಿ ಮಾತ್ರ ವಾಪಸು ಬಂತು. ನಷ್ಟವನ್ನು ಮರುಪಾವತಿಸಲು ಸಹಾಯ ಮಾಡಲು ದೇವರಕೊಂಡ ತನ್ನ ಸಂಭಾವನೆಯ (Remuneration) ಮುಕ್ಕಾಲು ಭಾಗವನ್ನು ತ್ಯಜಿಸಿದ್ದಾನೆ ಎಂದು ಸುದ್ದಿ. ಅಂದರೆ 80 ಕೋಟಿ ರೂಪಾಯಿಯನ್ನು ಪಡೆಯುವ ಈತ 50 ಕೋಟಿ ರೂಪಾಯಿಗಳನ್ನು ಬಿಟ್ಟುಕೊಟ್ಟಿದ್ದಾನಂತೆ. ಈತನ ಮುಂದಿನ ಫಿಲಂ ಜನ ಗಣ ಮನಕ್ಕೆ ಸಂಭಾವನೆಯನ್ನು ಗಣನೀಯ ಪ್ರಮಾಣಕ್ಕೆ ಇಳಿಸಿಕೊಂಡಿದ್ದಾನಂತೆ.

ಹಿಂದಿ ಚಿತ್ರರಂಗವನ್ನು ಆಳುತ್ತಿರುವ Non-Nepo ಸ್ಟಾರ್ಸ್‌!

click me!