ಬಿಜೆಪಿ ಗೆಲ್ಲದ ಕ್ಷೇತ್ರದಲ್ಲಿ ‘ಕಮಲ’ ಅರಳಿಸುತ್ತಾರಾ ಡಾಕ್ಟರ್‌?

By Kannadaprabha News  |  First Published Nov 26, 2019, 3:14 PM IST

ಚಿಕ್ಕಬಳ್ಳಾಪುರದಲ್ಲಿ ಡಾ. ಸುಧಾಕರ್‌ ಸೇರ್ಪಡೆಯಿಂದ ಬಿಜೆಪಿಗೆ ಹುಮ್ಮಸ್ಸು |  ಮೆಡಿಕಲ್‌ ಕಾಲೇಜು, ತಾಲೂಕು ಘೋಷಣೆ ಕೈಹಿಡಿಯುವ ನಿರೀಕ್ಷೆಯಲ್ಲಿ ಅನರ್ಹ ಶಾಸಕ - ಬಿಜೆಪಿಗೆ ಕಾಂಗ್ರೆಸ್‌ ಪೈಪೋಟಿ: ಕೊನೆ ಕ್ಷಣದ ಜೆಡಿಎಸ್‌ ನಡೆ ಸಸ್ಪೆನ್ಸ್‌ | 


ಚಿಕ್ಕಬಳ್ಳಾಪುರ (ನ. 26): ಪ್ರಸ್ತುತ ಉಪ ಚುನಾವಣೆಯು ಕ್ಷೇತ್ರದಲ್ಲಿ ಅಭಿವೃದ್ಧಿ, ಸ್ವಾಭಿಮಾನ, ಸ್ಥಳೀಯ ಅಭ್ಯರ್ಥಿ ಮತ್ತು ಸ್ಥಳೀಯರಲ್ಲದ ಅಭ್ಯರ್ಥಿಗಳ ನಡುವೆ ನಡೆಯುತ್ತಿರುವ ಕದನವಾಗಿ ಮಾರ್ಪಟ್ಟಿದ್ದು, ಇದರಲ್ಲಿ ಯಾವುದಕ್ಕೆ ಜಯ ಸಿಗಲಿದೆ ಎಂಬುದು ಕುತೂಹಲವಾಗಿದೆ.

ಜೆಡಿಎಸ್‌, ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿ ಅಭಿವೃದ್ಧಿಗೆ ಸಹಕಾರ ಸಿಗಲಿಲ್ಲ ಎಂಬ ಕಾರಣಕ್ಕೆ ಡಾ.ಕೆ. ಸುಧಾಕರ್‌ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಪರಿಣಾಮ ಉಪಚುನಾವಣೆ ಎದುರಾಗಿದೆ. ಈ ಉಪಚುನಾವಣೆಯಲ್ಲಿ ಶಾಸಕರಾಗಿ ಒಂದೂವರೆ ವರ್ಷ ಮಾಡಿದ ಅಭಿವೃದ್ಧಿಗಿಂತ ರಾಜೀನಾಮೆ ನೀಡಿದ ನಂತರದ ಒಂದೂವರೆ ತಿಂಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿಯನ್ನು ತೋರಿಸಿ ಮತದಾರರ ಮನ ಗೆಲ್ಲುವ ಕೆಲಸದಲ್ಲಿ ಸುಧಾಕರ್‌ ನಿರತರಾಗಿರುವುದು ಸ್ವಾರಸ್ಯಕರ ಸಂಗತಿ.

Tap to resize

Latest Videos

undefined

ಚಿಕ್ಕಬಳ್ಳಾಪುರದಲ್ಲಿ ಹೇಗಿದೆ ಉಪಚುನಾವಣೆ ಟ್ರೆಂಡ್? ಇಲ್ಲಿದೆ ಗ್ರೌಂಡ್ ರಿಪೋರ್ಟ್

ಕಳೆದ ಎರಡು ಅವಧಿಗೆ ಕಾಂಗ್ರೆಸ್‌ನಿಂದ ಗೆದ್ದು ಶಾಸಕರಾಗಿದ್ದ ಸುಧಾಕರ್‌ ತಮ್ಮ ರಾಜಕೀಯ ಕಡು ವಿರೋಧಿ ಜೆಡಿಎಸ್‌ನೊಂದಿಗೆ ಸೆಣಸಿದ್ದರು. ಹಾಗಾಗಿ ಈವರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಕ್ಷೇತ್ರದಲ್ಲಿ ನಡೆಯುತ್ತಿತ್ತು. ಆದರೆ ಈಗ ಸುಧಾಕರ್‌ ಬಿಜೆಪಿ ಸೇರಿರುವ ಕಾರಣ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ನೇರ ಹಣಾಹಣಿಯಾಗಿ ಬದಲಾಗಿದೆ.

ಕಾಂಗ್ರೆಸ್‌ನ ಭದ್ರಕೋಟೆ

ಈ ಕ್ಷೇತ್ರ ಕಾಂಗ್ರೆಸ್ಸಿನ ಭದ್ರಕೋಟೆಯಾಗಿದ್ದು, ಜೆಡಿಎಸ್‌ ಕೂಡ ಪ್ರಬಲವಾಗಿದೆ. ಆದರೆ ಬಿಜೆಪಿ ಈವರೆಗೆ ಜಿಲ್ಲೆಯಲ್ಲಿ ಖಾತೆಯನ್ನೇ ತೆರೆದಿಲ್ಲ. ಸಂಸತ್‌ ಸ್ಥಾನ ಗೆಲ್ಲುವಲ್ಲಿ ಬಿಜೆಪಿ ಯಶಸ್ಸು ಕಾಣುವ ಜೊತೆಗೆ ಜಿ.ಪಂ. ಸೇರಿದಂತೆ ಹಲವು ಸ್ಥಳೀಯ ಸಂಸ್ಥೆಗಳಲ್ಲಿ ಗೆಲವು ಸಾಧಿಸಿದ್ದರೂ ಈವರೆಗೆ ಶಾಸಕರಾಗಿ ಕಮಲದ ಅಭ್ಯರ್ಥಿ ಆಯ್ಕೆಯಾಗಿಲ್ಲ. ಇದು ಬಿಜೆಪಿ ಪಾಲಿಗೆ ಪ್ರಮುಖ ಮೈನಸ್‌ ಆಗಿದೆ.

ಈವರೆಗೆ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ಇದ್ದ ಹಣಾಹಣಿ ಪ್ರಸ್ತುತ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಿನ ನೇರ ಸ್ಪರ್ಧೆಯಾಗಿ ಪರಿವರ್ತನೆಯಾಗಿದೆ. ಜೆಡಿಎಸ್‌ ತನ್ನ ಹಳೆಯ ವೈಭವ ಕಳೆದುಕೊಂಡಿದ್ದರೂ ಗ್ರಾಮೀಣ ಪ್ರದೇಶದಲ್ಲಿ ತನ್ನ ವೋಟ್‌ ಬ್ಯಾಂಕ್‌ ಉಳಿಸಿಕೊಂಡಿದ್ದು, ಕೊನೇ ಕ್ಷಣದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲಿದೆ ಎಂಬ ಮಾತುಗಳು ಜೆಡಿಎಸ್‌ ಮತದಾರರನ್ನು ಗೊಂದಲಕ್ಕೆ ಈಡುಮಾಡುತ್ತಿವೆ.

ಪ್ರಸ್ತುತ ಕಣದಲ್ಲಿ ಬಿಜೆಪಿ, ಜೆಡಿಎಸ್‌, ಕಾಂಗ್ರೆಸ್‌ ಮತ್ತು ಬಿಎಸ್‌ಪಿ ಸೇರಿ ಒಟ್ಟು 9 ಅಭ್ಯರ್ಥಿಗಳಿದ್ದಾರೆ. ಆದರೆ ಪ್ರಮುಖ ಮೂರು ಪಕ್ಷಗಳನ್ನು ಹೊರತುಪಡಿಸಿದರೆ ಉಳಿದ ಆರು ಮಂದಿ ಅಭ್ಯರ್ಥಿಗಳು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಬಿಎಸ್‌ಪಿ ಪ್ರಚಾರದಲ್ಲಿ ಅಬ್ಬರವಿದ್ದರೂ ಅದು ಬಿಜೆಪಿ ಪಾಲಿಗೆ ವರದಾನ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿಬರುತ್ತಿವೆ.

ಪಂಪನ ನಾಡಿನ ಮರಿದುಂಬಿ ಯಾರು? ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ

ಮತದಾರರ ಒಲವು ಹೇಗಿದೆ?

ಕ್ಷೇತ್ರದಲ್ಲಿ ಪರಿಶಿಷ್ಟರು ಮತ್ತು ಹಿಂದುಳಿದ ವರ್ಗಗಳ ಮತಗಳು ಯಾವುದೇ ಅಭ್ಯರ್ಥಿಯ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ. ಈವರೆಗೆ ಈ ಎರಡೂ ಸಮುದಾಯದ ಮತಗಳು ಕಾಂಗ್ರೆಸ್‌ನಲ್ಲಿದ್ದ ಸುಧಾಕರ್‌ ಬೆಂಬಲಕ್ಕಿದ್ದವು. ಆದರೆ ಈಗ ಬಿಜೆಪಿ ಸೇರಿರುವ ಕಾರಣ ಈ ಉಭಯ ಸಮುದಾಯಗಳ ಮತಗಳು ಚದುರಿ ಹೋಗುವ ಆತಂಕ ಎಂದುರಾಗಿದೆ.

ಇನ್ನು ಅಲ್ಪಸಂಖ್ಯಾತ ಮತಗಳು ಬಿಜೆಪಿಯಿಂದ ದೂರವೇ ಉಳಿಯುವ ಸಾಧ್ಯತೆ ಇರುವುದರಿಂದ ಇದು ಸುಧಾಕರ್‌ಗೆ ತುಸು ನಷ್ಟಉಂಟು ಮಾಡಬಹುದು. ಹೆಚ್ಚಿನ ಮತ ಹೊಂದಿರುವ ಒಕ್ಕಲಿಗ ಸಮುದಾಯದವರೇ ಮೂರೂ ಪಕ್ಷಗಳ ಅಭ್ಯರ್ಥಿಗಳಾಗಿರುವ ಕಾರಣ ಒಕ್ಕಲಿಗ ಸಮುದಾಯದ ಮತಗಳು ಸಹಜವಾಗಿಯೇ ಚದುರಿ ಹೋಗಲಿದ್ದು, ಪ್ರಸ್ತುತ ಚುನಾವಣೆಯಲ್ಲಿ ಬಲಿಜ ಸಮುದಾಯ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿ ಬೆನ್ನಿಗೆ ನಿಂತಿರುವುದು ವಿಶೇಷ.

ಅರಸು ಕರ್ಮಭೂಮಿಯಲ್ಲಿ ಟಫ್‌ ಫೈಟ್‌; ವಿಶ್ವನಾಥ್‌ಗೆ ಪ್ರತಿಷ್ಠೆಯ ಪ್ರಶ್ನೆ

ಸ್ಥಳೀಯರಲ್ಲದ ಅಭ್ಯರ್ಥಿಗಳು!

ಇನ್ನು ಪ್ರಸ್ತುತ ಉಪ ಚುನಾವಣೆಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಆರೋಪವೆಂದರೆ ಸ್ಥಳೀಯರು ಮತ್ತು ಹೊರಗಿನವರು. ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಅವರು ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಗ್ರಾಮಕ್ಕೆ ಸೇರಿದವರಾಗಿರುವುದು ಇವರ ಪಾಲಿಗೆ ಪ್ಲಸ್‌ ಆಗಿದ್ದರೆ ಉಳಿದೆರಡೂ ಪಕ್ಷಗಳಿಗೆ ಇದು ಮೈನಸ್‌ ಆಗಿದೆ.

ಕಾಂಗ್ರೆಸ್‌ ಅಭ್ಯರ್ಥಿ ನಂದಿ ಎಂ. ಆಂಜಿನಪ್ಪ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿಗೆ ಸೇರಿದವರು ಎಂಬುದು ಪ್ರಮುಖ ಆರೋಪ. ಅದೇ ರೀತಿಯಲ್ಲಿ ಜೆಡಿಎಸ್‌ ಅಭ್ಯರ್ಥಿ ರಾಧಾಕೃಷ್ಣ ಅವರು ಶಿಡ್ಲಘಟ್ಟತಾಲೂಕಿಗೆ ಸೇರಿದವರಾಗಿರುವುದು ಉಭಯ ಪಕ್ಷಗಳಿಗೆ ಮೈನಸ್‌ ಮತ್ತು ಬಿಜೆಪಿ ಪಾಲಿಗೆ ಅನುಕೂಲಕರವಾಗಿ ಪರಿಣಮಿಸುವ ನಿರೀಕ್ಷೆಯಿದೆ.

ಜೆಡಿಎಸ್‌ ಬಿಡದ ನೆಂಟಸ್ತಿಕೆ!

ಜೆಡಿಎಸ್‌ ಪಕ್ಷದಲ್ಲಿ ನೆಂಟರಿಗೆ ಮಾತ್ರ ಟಿಕೆಟ್‌ ನೀಡಲಾಗುತ್ತದೆ ಎಂಬ ಆರೋಪ ಪ್ರಸ್ತುತ ಉಪ ಚುನಾವಣೆಯಲ್ಲಿಯೂ ಮುಂದುವರಿದಿದ್ದು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ರಾಧಾಕೃಷ್ಣ ಅವರು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಹತ್ತಿರದ ಸಂಬಂಧಿ ಆಗಿರುವುದು ಈ ಆರೋಪಕ್ಕೆ ಮತ್ತಷ್ಟುಪುಷ್ಟಿನೀಡಿದೆ. ಇದು ಪ್ರಸ್ತುತ ಚುನಾವಣೆಯಲ್ಲಿ ಜೆಡಿಎಸ್‌ ಪಾಲಿಗೆ ಹಿನ್ನಡೆ ಆಗಬಹುದು.

ಪ್ರಸ್ತುತ ಚುನಾವಣಾ ಪ್ರಚಾರ ನೆಂಟಸ್ತಿಕೆ, ಸ್ಥಳೀಯ ಅಭ್ಯರ್ಥಿ, ಅಭಿವೃದ್ಧಿ ಮತ್ತು ಸ್ವಾಭಿಮಾನದ ಅಂಶಗಳ ನಡುವೆ ನಡೆಯುತ್ತಿದೆ. ಕ್ಷೇತ್ರದ ಅಭಿವೃದ್ಧಿ ಜೊತೆಗೆ ಸ್ಥಳೀಯ ಸ್ವಾಭಿಮಾನಕ್ಕಾಗಿ ಬಿಜೆಪಿ ಗೆಲ್ಲಿಸುವಂತೆ ಸುಧಾಕರ್‌ ಮನವಿ ಮಾಡಿದರೆ, ಪಕ್ಷಕ್ಕೆ ದ್ರೋಹ ಬಗೆದ ಸುಧಾಕರ್‌ಗೆ ಮತ್ತೆ ಮತ ಹಾಕಬೇಡಿ ಎಂಬುದು ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪ್ರಚಾರ ನಡೆಸುತ್ತಿವೆ. ರಾಜೀನಾಮೆ ನಂತರದ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಶ್ರೀರಕ್ಷೆ ಎಂಬುದು ಸುಧಾಕರ್‌ ಅವರ ಘೋಷವಾಕ್ಯವಾಗಿದೆ.

ವರವಾಗಲಿದೆಯೇ ವೈದ್ಯಕೀಯ ಕಾಲೇಜು?

2014ರಲ್ಲಿಯೇ ಜಿಲ್ಲಾ ಕೇಂದ್ರಕ್ಕೆ ಮಂಜೂರಾಗಿದ್ದ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಸತತ ಆರು ವರ್ಷಗಳ ಕಾಲ ಯಾವುದೇ ಅನುದಾನ ಸಿಗಲಿಲ್ಲ. ಜೊತೆಗೆ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಕೇಂದ್ರದ ವೈದ್ಯಕೀಯ ಕಾಲೇಜಿಗೆ ಅನುದಾನ ನೀಡುವ ಬದಲು, ಕನಕಪುರಕ್ಕೆ ವೈದ್ಯಕೀಯ ಕಾಲೇಜು ನೀಡುವ ಜೊತೆಗೆ 450 ಕೋಟಿ ರು. ಅನುದಾನವನ್ನೂ ನೀಡಿರುವುದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬೈ ಎಲೆಕ್ಷನ್ ಕಣ: ಬಿಜೆಪಿ ನಾಯಕರ ಮುಖದಲ್ಲಿ ಮಂದಹಾಸಕ್ಕೆ 10 ಕಾರಣ

ಅಲ್ಲದೆ ಕನಕಪುರ ವೈದ್ಯಕೀಯ ಕಾಲೇಜು ವಿಚಾರದಲ್ಲಿ ಡಿ.ಕೆ. ಶಿವಕುಮಾರ್‌ ಸವಾಲು ಕ್ಷೇತ್ರದ ಜನರ ಆಕ್ರೋಶ ಹೆಚ್ಚಲು ಕಾರಣವಾಗಿದೆ. ಸುಧಾಕರ್‌ ರಾಜೀನಾಮೆ ಸಲ್ಲಿಸಿದ ಒಂದೂವರೆ ತಿಂಗಳ ಅಲ್ಪಾವಧಿಯಲ್ಲಿ ಜಿಲ್ಲಾ ಕೇಂದ್ರಕ್ಕೆ ವೈದ್ಯಕೀಯ ಕಾಲೇಜು ಲಭಿಸಿದ್ದು ಮಾತ್ರವಲ್ಲದೆ, 610 ಕೋಟಿ ರು. ಅನುದಾನವನ್ನೂ ನೀಡುವಲ್ಲಿ ಬಿಜೆಪಿ ಸರ್ಕಾರ ಯಶಸ್ವಿಯಾದ ಜೊತೆಗೆ ಸ್ವತಃ ಮುಖ್ಯಮಂತ್ರಿಗಳೇ ಆಗಮಿಸಿ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿರುವುದು ಬಿಜೆಪಿ ಬಗ್ಗೆ ಕ್ಷೇತ್ರದ ಜನತೆ ಒಲವು ತೋರಿಸಲು ಕಾರಣವಾಗಿದೆ.

ವೈದ್ಯಕೀಯ ಕಾಲೇಜಿನ ಜೊತೆಗೆ ಒಂದು ಸಾವಿರ ಹಾಸಿಗೆಯ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಕ್ಷೇತ್ರದ ಜನತೆಗೆ ಲಾಭವಾಗಲಿದೆ ಎಂಬುದು ಸುಧಾಕರ್‌ ಪಾಲಿಗೆ ಪ್ಲಸ್‌. ಅಲ್ಲದೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಮತ್ತು ಜಿಲ್ಲೆಯ ಆರೂ ತಾಲೂಕುಗಳ ಮಧ್ಯದಲ್ಲಿರುವ ಅರೂರಿನಲ್ಲಿ ಆಸ್ಪತ್ರೆ ನಿರ್ಮಾಣವಾಗುತ್ತಿರುವುದು ಈ ಭಾಗದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಬಿಂಬಿಸಲಾಗುತ್ತಿದ್ದು, ಇದು ಸುಧಾಕರ್‌ಗೆ ಅನುಕೂಲವಾಗುವ ಸೂಚನೆಗಳಿವೆ.

ಮಂಚೇನಹಳ್ಳಿ ತಾಲೂಕು ಕೊಡುಗೆ

ದಶಕಗಳ ಬೇಡಿಕೆಯಾಗಿದ್ದ ಮಂಚೇನಹಳ್ಳಿ ತಾಲೂಕು ಸುಧಾಕರ್‌ ರಾಜೀನಾಮೆ ನಂತರ ಸಿಕ್ಕ ಮತ್ತೊಂದು ಕೊಡುಗೆಯಾಗಿದೆ. ಕೇವಲ ತಾಲೂಕು ಘೋಷಣೆಗೆ ಮಾತ್ರ ಸೀಮಿತವಾಗಿರದೆ ಅದಕ್ಕೆ ಅಗತ್ಯವಿರುವ ಕಟ್ಟಡಗಳ ನಿರ್ಮಾಣಕ್ಕೆ ಅಗತ್ಯವಿರುವ ಅನುದಾನ ನೀಡುವ ಭರವಸೆಯನ್ನೂ ಮುಖ್ಯಮಂತ್ರಿ ಯಡಿಯೂರಪ್ಪನವರೇ ನೀಡಿರುವುದು ಬಿಜೆಪಿ ಬಲವನ್ನು ಮತ್ತಷ್ಟುಹೆಚ್ಚಿಸಲು ಸಹಕಾರಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ಅಲ್ಲದೆ ಮಂಚೇನಹಳ್ಳಿ ತಾಲೂಕು ವಿಚಾರದಲ್ಲಿ ಗೌರಿಬಿದನೂರು ಶಾಸಕ ಎನ್‌.ಎಚ್‌. ಶಿವಶಂಕರರೆಡ್ಡಿ ನೀಡಿದ ಹಲವು ಹೇಳಿಕೆಗಳು ಚಿಕ್ಕಬಳ್ಳಾಪುರ ಜನತೆಯ ಸ್ವಾಭಿಮಾನವನ್ನು ಕೆರಳಿಸಿವೆ ಎಂಬುದು ಬಿಜೆಪಿ ಪ್ರಚಾರದ ಪ್ರಮುಖ ಅಂಶವಾಗಿದೆ. ಅಭಿವೃದ್ಧಿಯ ವಿಚಾರದಲ್ಲಿಯೂ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಸಹಕಾರ ನೀಡಲಿಲ್ಲ ಎಂಬ ಆರೋಪ ಬಿಜೆಪಿ ಪಾಲಿಗೆ ಪ್ಲಸ್‌ ಆದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಾಲಿಗೆ ಮೈನಸ್‌ ಆಗಿ ಪರಿಣಮಿಸಿದೆ.

'ಬಿಜೆಪಿಗೆ ಜೆಡಿಎಸ್‌ ಬೆಂಬಲ ಸಿಗಲ್ಲ, ನಾನು ಆ ಪಕ್ಷದಲ್ಲಿದ್ದೆ, ನನಗೆ ಗೊತ್ತಿದೆ'

5 ಸಾವಿರ ನಿವೇಶನ ಹಂಚಿಕೆ

ಬಿಜೆಪಿ ಮತ್ತು ಸುಧಾಕರ್‌ ಪಾಲಿಗೆ ನಗರ ವ್ಯಾಪ್ತಿಯ ಮತಗಳು ಈ ಹಿಂದಿನ ಎರಡೂ ಚುನಾವಣೆಯಲ್ಲಿಯೂ ಸವಾಲಾಗಿ ಪರಿಣಮಿಸಿದ್ದವು. ಆದರೆ ಪ್ರಸ್ತುತ ಉಪ ಚುನಾವಣೆಗೂ ಮುನ್ನ ನಗರ ವ್ಯಾಪ್ತಿಯ 5 ಸಾವಿರ ಮಂದಿ ಬಡವರಿಗೆ ಉಚಿತ ನಿವೇಶನದ ಹಕ್ಕು ಪತ್ರ ವಿತರಿಸಲಾಗಿದೆ. ಅಲ್ಲದೆ ನಿವೇಶನಗಳಲ್ಲಿ ಉಚಿತವಾಗಿ ಮನೆಗಳನ್ನೂ ನಿರ್ಮಿಸಿಕೊಡುವ ಭರವಸೆ ನೀಡಲಾಗಿದ್ದು, ಬಿಜೆಪಿಗೆ ಇದು ಅನುಕೂಲವಾದರೆ ಇತರ ಪಕ್ಷಗಳಿಗೆ ಅನನುಕೂಲವಾಗಬಹುದು ಎಂದೇ ವಿಶ್ಲೇಷಿಸಲಾಗುತ್ತಿದೆ.

- ಅಶ್ವತ್ಥ ನಾರಾಯಣ ಎಲ್ 

 

 

click me!