Asianet Suvarna News

ಅರಸು ಕರ್ಮಭೂಮಿಯಲ್ಲಿ ಟಫ್‌ ಫೈಟ್‌; ವಿಶ್ವನಾಥ್‌ಗೆ ಪ್ರತಿಷ್ಠೆಯ ಪ್ರಶ್ನೆ

ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್‌ ಅವರಿಗೆ ಸಿದ್ದರಾಮಯ್ಯ ಅವರ ಗರಡಿಯಲ್ಲಿ ರಾಜಕೀಯಕ್ಕೆ ಬಂದ ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಜೊತೆಗೆ ಜೆಡಿಎಸ್‌ನ ಹೊಸಮುಖವಾದ ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಕೂಡ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಹೀಗಾಗಿಯೇ ಹಿಂದೆ 2008ರ ಚುನಾವಣೆಯಂತೆ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಕಾಣುತ್ತಿದೆ. 

By Election 2019 congress BJP and JDS tight fight in Hunsur
Author
Bengaluru, First Published Nov 25, 2019, 3:54 PM IST
  • Facebook
  • Twitter
  • Whatsapp

ಮೈಸೂರು (ನ. 25): ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದ ಎಚ್‌.ವಿಶ್ವನಾಥ್‌ ಅವರು ಪಕ್ಷದ ಸ್ಥಾನಕ್ಕಷ್ಟೇ ಅಲ್ಲದೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿ ತಮ್ಮ ರಾಜಕೀಯ ಪ್ರತಿಷ್ಠೆಯನ್ನೇ ಪಣಕ್ಕಿಟ್ಟು ಕಣಕ್ಕಿಳಿದಿರುವುದರಿಂದ ಹುಣಸೂರು ಕ್ಷೇತ್ರದ ಉಪಚುನಾವಣೆಯ ಅಖಾಡ ರಂಗೇರಿದೆ.

ವಿಶ್ವನಾಥ್‌ ಇದೀಗ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ ಹಿಟ್‌ಲಿಸ್ಟ್‌ನಲ್ಲಿದ್ದಾರೆ. ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದು ಒಂದು ಕಾರಣವಾದರೆ, ಉಭಯ ಪಕ್ಷಗಳ ನಾಯಕರಾದ ಸಿದ್ದರಾಮಯ್ಯ ಮತ್ತು ಎಚ್‌.ಡಿ.ಕುಮಾರಸ್ವಾಮಿ ಅವರಿಬ್ಬರ ವಿರುದ್ಧ ಹಿಂದೆ ಸತತವಾಗಿ ವಾಗ್ದಾಳಿ ನಡೆಸಿದ್ದು ಮತ್ತೊಂದು ಕಾರಣ.

ಪಂಪನ ನಾಡಿನ ಮರಿದುಂಬಿ ಯಾರು? ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ

ಈ ಎರಡೂ ಕಾರಣಕ್ಕಾಗಿ ಉಭಯ ಪಕ್ಷಗಳ ಮುಖಂಡರು ಶತಾಯಗತಾಯ ವಿಶ್ವನಾಥ್‌ ಅವರನ್ನು ಮಣ್ಣು ಮುಕ್ಕಿಸಬೇಕು ಎಂಬ ಹಟಕ್ಕೆ ಬಿದ್ದಿದ್ದಾರೆ. ಇದು ಎಷ್ಟರ ಮಟ್ಟಿಗೆ ಯಶಸ್ಸು ಕಾಣುತ್ತದೆ ಎಂಬುದು ಫಲಿತಾಂಶ ಹೊರಬಿದ್ದ ಬಳಿಕವಷ್ಟೇ ಗೊತ್ತಾಗಲಿದೆ.

ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್‌ ಅವರಿಗೆ ಸಿದ್ದರಾಮಯ್ಯ ಅವರ ಗರಡಿಯಲ್ಲಿ ರಾಜಕೀಯಕ್ಕೆ ಬಂದ ಮಾಜಿ ಶಾಸಕ ಎಚ್‌.ಪಿ. ಮಂಜುನಾಥ್‌ ಜೊತೆಗೆ ಜೆಡಿಎಸ್‌ನ ಹೊಸಮುಖವಾದ ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಕೂಡ ಪ್ರಬಲ ಪೈಪೋಟಿ ಒಡ್ಡುತ್ತಿದ್ದಾರೆ. ಹೀಗಾಗಿಯೇ ಹಿಂದೆ 2008ರ ಚುನಾವಣೆಯಂತೆ ಮೂರು ಪಕ್ಷಗಳ ನಡುವೆ ತ್ರಿಕೋನ ಸ್ಪರ್ಧೆ ಏರ್ಪಡುವ ನಿರೀಕ್ಷೆ ಕಾಣುತ್ತಿದೆ.

ಎಪ್ಪತ್ತರ ದಶಕದಲ್ಲಿ ರಾಜ್ಯದಲ್ಲಿ ಎರಡು ಬಾರಿ ಅಧಿಕಾರದ ಚುಕ್ಕಾಣಿ ಹಿಡಿದು, ಶೋಷಿತರ ಧ್ವನಿಯಾಗಿ ‘ಪರಿವರ್ತನೆಯ ಹರಿಕಾರ’ ಎನಿಸಿಕೊಂಡಿದ್ದ ಡಿ.ದೇವರಾಜ ಅರಸರ ಕರ್ಮಭೂಮಿ ಈ ಹುಣಸೂರು ಕ್ಷೇತ್ರ. ಮೊದಲ ಚುನಾವಣೆಯಿಂದಲೂ ಅಸ್ತಿತ್ವದಲ್ಲಿರುವ ಈ ಕ್ಷೇತ್ರದಲ್ಲಿ ಈವರೆಗೆ ಮೂರು ಉಪಚುನಾವಣೆ ಸೇರಿದಂತೆ ಒಟ್ಟು 18 ಚುನಾವಣೆ ನಡೆದಿವೆ. ಲಕ್ಷ್ಮಣತೀರ್ಥ ನದಿಯ ಆಸುಪಾಸಿನಲ್ಲಿ ಹರಡಿಕೊಂಡಿರುವ ಈ ಕ್ಷೇತ್ರ ರಾಜ್ಯಕ್ಕೆ ಎರಡು ಬಾರಿ ಮುಖ್ಯಮಂತ್ರಿಗಳನ್ನು ನೀಡಿದರೂ ಸಮಸ್ಯೆಗಳಿಂದ ಮುಕ್ತವಾಗಿಲ್ಲ. ಪಟ್ಟಣದ ನಡುವೆ ಹರಿಯುವ ಲಕ್ಷ್ಮಣತೀರ್ಥ ನದಿ ವಿಪರೀತ ಕಲ್ಮಶವಾಗಿದೆ. ಆದಿವಾಸಿಗಳ ಕೆಲ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ.

ಉಪಚುನಾವಣೆ: 15 ರಲ್ಲೂ ಬಿಜೆಪಿ ಗೆಲುವು ಖಚಿತ, ಅಂತರವಷ್ಟೇ ಬಾಕಿ

ಈ ನಡುವೆ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್‌ ಅವರು ಮೈಸೂರನ್ನು ವಿಭಜಿಸಿ, ಹುಣಸೂರು ಉಪ ವಿಭಾಗವನ್ನು ಹೊಸ ಜಿಲ್ಲಾ ಕೇಂದ್ರವಾಗಿಸಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ಸ್ಪಂದಿಸಿ ಮತದಾರರು ವಿಶ್ವನಾಥ್‌ ಅವರ ಕೈಹಿಡಿಯುತ್ತಾರಾ ಎಂಬುದು ಕುತೂಹಲವಾಗಿದೆ. ಆರಂಭದಲ್ಲಿ ವಿಶ್ವನಾಥ್‌ ಅವರು ವಿಧಾನಸಭೆಗೆ ಸ್ಪರ್ಧಿಸುವುದಿಲ್ಲ. ಬದಲಿಗೆ ವಿಧಾನಪರಿಷತ್‌ ಸದಸ್ಯರಾಗಿ ಸಚಿವರಾಗುತ್ತಾರೆ ಎಂಬ ಮಾತು ಕೇಳಿಬಂದಿತ್ತು. ಇದನ್ನು ಬಿಜೆಪಿ ನಾಯಕರೂ ಖಚಿತಪಡಿಸಿದ್ದರು. ಆದರೆ ಅನರ್ಹರು ಗೆಲ್ಲದ ಹೊರತು ಸಚಿವರಾಗುವಂತಿಲ್ಲ ಎಂದು ಸುಪ್ರೀಂಕೋರ್ಟ್‌ ಹೇಳಿದ್ದರಿಂದ ಮತ್ತು ಮುಂದಿನ ಜೂನ್‌ವರೆಗೆ ವಿಧಾನಪರಿಷತ್‌ ಸ್ಥಾನ ಖಾಲಿ ಇಲ್ಲದಿರುವುದರಿಂದ ಕೊನೆ ಕ್ಷಣದಲ್ಲಿ ವಿಶ್ವನಾಥ್‌ ತಾವೇ ವಿಧಾನಸಭಾ ಅಖಾಡಕ್ಕಿಳಿಯಲು ಮುಂದಾದರು.

ಈ ಕ್ಷೇತ್ರದಿಂದ ಗೆದ್ದ ಅರಸು ಅವರು ಎರಡು ಬಾರಿ ಮುಖ್ಯಮಂತ್ರಿಗಳಾದರೆ ಚಂದ್ರಪ್ರಭ ಅರಸು, ಡಾ.ಎಚ್‌.ಎಲ್‌. ತಿಮ್ಮೇಗೌಡ, ಜಿ.ಟಿ. ದೇವೇಗೌಡ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ವಿಜಯಶಂಕರ್‌ ವಿಧಾನ ಪರಿಷತ್‌ ಸದಸ್ಯರಾಗಿದ್ದಾಗ ಸಚಿವರಾಗಿದ್ದರು. ಈಗ ವಿಶ್ವನಾಥ್‌ ಗೆದ್ದರೆ ಸಚಿವರಾಗುತ್ತಾರೆ ಎಂಬ ಪ್ರಚಾರ ಭರ್ಜರಿಯಾಗಿ ನಡೆದಿದೆ.

ಕಾಂಗ್ರೆಸ್‌ನಲ್ಲಿ ಟಿಕೆಟ್‌ ಬಗ್ಗೆ ಯಾವುದೇ ಗೊಂದಲ ಇರಲಿಲ್ಲ. ಮಾಜಿ ಶಾಸಕ ಮಂಜುನಾಥ್‌ ಸಹಜ ಆಯ್ಕೆಯಾಗಿದ್ದರು. 2008ರಲ್ಲಿ ಜಿ.ಟಿ. ದೇವೇಗೌಡ ಬಿಜೆಪಿ ಸೇರಿ ಅಭ್ಯರ್ಥಿಯಾಗಿದ್ದರು. ಜೆಡಿಎಸ್‌ನಿಂದ ಎಸ್‌. ಚಿಕ್ಕಮಾದು ಕಣದಲ್ಲಿದ್ದರು. ಇದರ ಲಾಭ ಪಡೆದ ಮಂಜುನಾಥ್‌ ಗೆದ್ದರು. 2013ರಲ್ಲಿ ಜಿ.ಟಿ.ದೇವೇಗೌಡ ಚಾಮುಂಡೇಶ್ವರಿಗೂ, ಚಿಕ್ಕಮಾದು ಎಚ್‌.ಡಿ. ಕೋಟೆಗೂ ವಲಸೆ ಹೋಗಿದ್ದರು. ಅಲ್ಲದೇ ಟಿಕೆಟ್‌ ಕುರುಬ ಜನಾಂಗದ ಕುಮಾರಸ್ವಾಮಿ ಅವರ ಪಾಲಾಗಿತ್ತು. ಜಿ.ಪಂ. ಸದಸ್ಯರಾಗಿದ್ದ ಸಿ.ಟಿ. ರಾಜಣ್ಣ ಕೂಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಇದರಿಂದಾಗಿ ಮಂಜುನಾಥ್‌ ಭಾರೀ ಅಂತರದಲ್ಲಿ ಜಯಭೇರಿ ಬಾರಿಸಿದರು. ಆದರೆ 2018ರಲ್ಲಿ ಜೆಡಿಎಸ್‌ ಸಂಘಟಿತ ಹೋರಾಟ ನಡೆಸಿದ ಫಲ ಮಂಜುನಾಥ್‌ ಸೋತು, ವಿಶ್ವನಾಥ್‌ ಗೆದ್ದರು. ಬಿಜೆಪಿ ಅಭ್ಯರ್ಥಿ ಜೆ.ಎಸ್‌. ರಮೇಶ್‌ ಕುಮಾರ್‌ಗೆ ಠೇವಣಿ ಕೂಡ ಸಿಕ್ಕಿರಲಿಲ್ಲ.

15 ಅನರ್ಹ ಶಾಸಕರು ಕರ್ನಾಟಕದ ಮುತ್ತುಗಳು, ಇವರು ಮತ್ತೆ ಶಾಸಕರಾಗಬೇಕು: ಕಟೀಲ್

ಜಿಲ್ಲೆಯವರೇ ಆದ ವಿಧಾನಸಭೆಯ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನಾಮಬಲ, ಜೆಡಿಎಸ್‌ನಿಂದ ಜಿ.ಟಿ. ದೇವೇಗೌಡರ ಕುಟುಂಬದವರು ಸ್ಪರ್ಧಿಸದೇ ಇರುವುದು, ವಿಶ್ವನಾಥ್‌ ಬಗ್ಗೆ ಬಹುಸಂಖ್ಯಾತ ಒಕ್ಕಲಿಗ ಸಮುದಾಯದಲ್ಲಿರುವ ಆಕ್ರೋಶ ಮಂಜುನಾಥ್‌ಗೆ ಪ್ಲಸ್‌ ಪಾಯಿಂಟ್‌.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದು, ಬಿ.ಎಸ್‌. ಯಡಿಯೂರಪ್ಪ ಸಿಎಂ ಆಗಿರುವುದು, ಗೆದ್ದರೆ ಮಂತ್ರಿ ಸ್ಥಾನ, ಸ್ವತಃ ಕುರುಬ ಜನಾಂಗದವರಾಗಿರುವುದು, ಆರೋಗ್ಯ ಸಚಿವ ಬಿ.ಶ್ರೀರಾಮುಲು ಬೆಂಬಲ ವಿಶ್ವನಾಥ್‌ಗೆ ಪ್ಲಸ್‌ ಪಾಯಿಂಟ್‌.

ಜೆಡಿಎಸ್‌ನಲ್ಲಿ ಎಲ್ಲವೂ ಸರಿ ಇದ್ದಲ್ಲಿ ಜಿ.ಟಿ.ದೇವೇಗೌಡ ಪುತ್ರ, ಹಾಲಿ ಎಂಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಜಿ.ಡಿ. ಹರೀಶ್‌ಗೌಡ ಅಭ್ಯರ್ಥಿಯಾಗಬೇಕಿತ್ತು. ಆದರೆ ಜಿ.ಟಿ. ದೇವೇಗೌಡರು ಸ್ವಪಕ್ಷೀಯರ ಕಿರುಕುಳದಿಂದ ಪಕ್ಷದಿಂದ ದೂರ ಸರಿದಿರುವುದರಿಂದ ಉಳಿದ 16 ಆಕಾಂಕ್ಷಿಗಳ ಪೈಕಿ ಉದ್ಯಮಿ ದೇವರಹಳ್ಳಿ ಸೋಮಶೇಖರ್‌ ಅವರಿಗೆ ವರಿಷ್ಠರು ಟಿಕೆಟ್‌ ನೀಡಿದ್ದಾರೆ. ತಾಲೂಕಿನಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ವರ್ಚಸ್ಸು ಪ್ಲಸ್‌ ಪಾಯಿಂಟ್‌. ವಿಶ್ವನಾಥ್‌ ಜೆಡಿಎಸ್‌ಗೆ ಮೋಸ ಮಾಡಿದರು ಎಂಬುದನ್ನು ಪೂರಕವಾಗಿ ಪರಿವರ್ತಿಸುವ ಯತ್ನವೂ ನಡೆದಿದೆ.

ಸಾಂಪ್ರದಾಯಿಕ ಮತಗಳ ಜೊತೆಗೆ ಕುರುಬ ಜನಾಂಗದ ಮತಗಳು ಹೆಚ್ಚಿನ ಪ್ರಮಾಣದಲ್ಲಿ ವಿಭಜನೆಯಾಗದಿದ್ದಲ್ಲಿ ಕಾಂಗ್ರೆಸ್‌ನ ಕೈ ಮೇಲಾಗಬಹುದು. ಆದರೆ ವಿಶ್ವನಾಥ್‌ ಕುರುಬ ಜನಾಂಗಕ್ಕೆ ಸೇರಿರುವುದರಿಂದ ಆ ಜನಾಂಗ ಹೆಚ್ಚಿನ ಪ್ರಮಾಣದಲ್ಲಿ ಬಿಜೆಪಿಯನ್ನು ಬೆಂಬಲಿಸಿದಲ್ಲಿ ತೊಂದರೆಗೆ ಸಿಲುಕುತ್ತಾರೆ. ಇವರಿಬ್ಬರ ಜಗಳದಲ್ಲಿ ತೆನೆಹೊತ್ತ ಮಹಿಳೆ ಲಾಭ ಮಾಡಿಕೊಳ್ಳಬಹುದು.

'ಎಂಟಿಬಿ ಎದೆಯಲ್ಲಿ ಆಗ ಸಿದ್ದು, ಈಗ ಬಿಎಸ್‌ವೈ, ಸೋತ ಮೇಲೆ ಯಾರು?'

ಕಣದಲ್ಲಿರುವ ಅಭ್ಯರ್ಥಿಗಳು

ಎಚ್‌. ವಿಶ್ವನಾಥ್‌ (ಬಿಜೆಪಿ)

ಎಚ್‌.ಪಿ. ಮಂಜುನಾಥ್‌ (ಕಾಂಗ್ರೆಸ್‌)

ದೇವರಹಳ್ಳಿ ಸೋಮಶೇಖರ್‌ (ಜೆಡಿಎಸ್‌)

ಇಮ್ತಿಯಾಜ್‌ ಅಹಮದ್‌ (ಬಿಎಸ್ಪಿ)

ಎಸ್‌. ಜಗದೀಶ (ಕೆಜೆಪಿ)

ತಿಮ್ಮಭೋವಿ (ಕೆಆರ್‌ಎಸ್‌)

ದಿವಾಕರ್‌ಗೌಡ (ಉತ್ತಮ ಪ್ರಜಾಕೀಯ ಪಾರ್ಟಿ)

ದೇವನೂರು ಪುಟ್ಟನಂಜಯ್ಯ (ಎಸ್‌ಡಿಪಿಐ)

ಉಮೇಶ (ಪಕ್ಷೇತರ)

ರೇವಣ್ಣ (ಪಕ್ಷೇತರ)

ಜಾತಿವಾರು ಲೆಕ್ಕಾಚಾರ

ಒಕ್ಕಲಿಗರು- 45,000

ಪರಿಶಿಷ್ಟಜಾತಿ- 50,000

ಪರಿಶಿಷ್ಟಪಂಗಡ- 30,000

ಕುರುಬರು- 30,000

ಮುಸ್ಲಿಮರು- 16,000

ವೀರಶೈವ- ಲಿಂಗಾಯತರು- 15,000

ಕ್ರಿಶ್ಚಿಯನ್ನರು- 8,000

ಮರಾಠಿ- 5,000

ವಿಶ್ವಕರ್ಮರು- 5,000

ಗಾಣಿಗರು- 5,000

ಇತರೆ- 20,000

ಕ್ಷೇತ್ರ ವಿವರಣೆ

ವಿಧಾನಸಭಾ ಕ್ಷೇತ್ರ ಸಂಖ್ಯೆ- 212

ಒಟ್ಟು ಮತದಾರರು- 2,27,974

ಪುರುಷರು- 1,14,580

ಮಹಿಳೆಯರು- 1,13,388

ಇತರೆ-6

ಮತಗಟ್ಟೆಗಳು- 274

2018ರ ಫಲಿತಾಂಶ

ಎಚ್‌. ವಿಶ್ವನಾಥ್‌ (ಜೆಡಿಎಸ್‌)- 91,667- ವಿಜೇತರು

ಎಚ್‌.ಪಿ. ಮಂಜುನಾಥ್‌ (ಕಾಂಗ್ರೆಸ್‌)- 83,092

ಜೆ.ಎಸ್‌. ರಮೇಶ್‌ಕುಮಾರ್‌ (ಬಿಜೆಪಿ)- 6,406

- ಅಂಶಿ ಪ್ರಸನ್ನಕುಮಾರ್

Follow Us:
Download App:
  • android
  • ios