Asianet Suvarna News

ಪಂಪನ ನಾಡಿನ ಮರಿದುಂಬಿ ಯಾರು? ಬಿಜೆಪಿ, ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ

ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಂದ ಶಿವರಾಮ ಹೆಬ್ಬಾರ್‌, ಮೈತ್ರಿ ಸರ್ಕಾರವನ್ನು ಕೆಡವಿದ ಶಾಸಕರಲ್ಲಿ ಒಬ್ಬರಾಗಿ ಇದೀಗ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಅವರ ಎದುರಾಳಿಯಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಕಣಕ್ಕಿಳಿದಿದ್ದಾರೆ. ಜೆಡಿಎಸ್‌ನಿಂದ ಎ.ಚೈತ್ರಾ ಹಾಗೂ ಇತರ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. 

By Election 2019 Congress JDS and BJP triangle fight in Yellapur
Author
Bengaluru, First Published Nov 25, 2019, 3:04 PM IST
  • Facebook
  • Twitter
  • Whatsapp

ಕಾರವಾರ (ನ. 25): ಕನ್ನಡದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆಗೆ ಪಾತ್ರವಾದ ಐತಿಹಾಸಿಕ ತಾಣ ಬನವಾಸಿಯನ್ನು ಒಳಗೊಂಡಿರುವ ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಾಡಿನ ಗಮನ ಸೆಳೆಯುತ್ತಿದ್ದು, ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ನಡುವೆ ಕದನ ಏರ್ಪಟ್ಟಿದೆ.

ಕಳೆದ 2018ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಬಂದ ಶಿವರಾಮ ಹೆಬ್ಬಾರ್‌, ಮೈತ್ರಿ ಸರ್ಕಾರವನ್ನು ಕೆಡವಿದ ಶಾಸಕರಲ್ಲಿ ಒಬ್ಬರಾಗಿ ಇದೀಗ ಬಿಜೆಪಿಯಿಂದ ಅದೃಷ್ಟಪರೀಕ್ಷೆಗೆ ಇಳಿದಿದ್ದಾರೆ. ಅವರ ಎದುರಾಳಿಯಾಗಿ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ ಕಣಕ್ಕಿಳಿದಿದ್ದಾರೆ.

ಜೆಡಿಎಸ್‌ನಿಂದ ಎ.ಚೈತ್ರಾ ಹಾಗೂ ಇತರ ನಾಲ್ವರು ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಏಳು ಅಭ್ಯರ್ಥಿಗಳು ಹೋರಾಟದ ಹಾದಿಯಲ್ಲಿದ್ದರೂ ನಿಜವಾದ ಪೈಪೋಟಿ ಇರುವುದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮಾತ್ರ.

ಉಪಚುನಾವಣೆ: 15 ರಲ್ಲೂ ಬಿಜೆಪಿ ಗೆಲುವು ಖಚಿತ, ಅಂತರವಷ್ಟೇ ಬಾಕಿ

ಹಾಗೆ ನೋಡಿದರೆ ಈ ಕ್ಷೇತ್ರದ ಯಲ್ಲಾಪುರ ತಾಲೂಕಿನಲ್ಲಿ ಯಾವಾಗಲೂ ಬಿಜೆಪಿಯದ್ದೇ ಪ್ರಾಬಲ್ಯ. ಮುಂಡಗೋಡದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಬಹುತೇಕ ಸರಿಸಮವಾಗಿವೆ. ಬನವಾಸಿಯಲ್ಲಿ ಕಾಂಗ್ರೆಸ್‌ನದ್ದೇ ಬಲ ಇತ್ತು. ಆದರೆ, ಈ ಬಾರಿ ಶಿವರಾಮ ಹೆಬ್ಬಾರ್‌ ಬಿಜೆಪಿಗೆ ಬಂದಿರುವುದರಿಂದ ಏನಾಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಶಿವರಾಮ ಹೆಬ್ಬಾರ್‌ ಬಿಜೆಪಿಗೆ ಬರುವುದು ಪಕ್ಕಾ ಆದಾಗ ಮಾಜಿ ಶಾಸಕ ಬಿಜೆಪಿಯ ವಿ.ಎಸ್‌. ಪಾಟೀಲ್‌ ವಿಚಲಿತರಾಗಿದ್ದರು. ಅವರು ಬಂಡಾಯ ಏಳುವ ವಾಸನೆ ಬಡಿಯುತ್ತಿದ್ದಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ನಿಷ್ಠರಾದ ಅವರಿಗೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ನೀಡಿದರು. ಹೆಬ್ಬಾರ್‌ ಅವರಿಗೆ ಟಿಕೆಟ್‌ ನೀಡಿದರೆ ತಕರಾರಿಲ್ಲ. ನಾವು ಗೆಲ್ಲಿಸುತ್ತೇವೆ. ಆದರೆ, ಅವರ ಪುತ್ರ, ಪತ್ನಿಗೆ ಟಿಕೆಟ್‌ ನೀಡಿದರೆ ನಮ್ಮ ವಿರೋಧ ಇದೆ. ಆಗ ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಪಾಟೀಲ್‌ ಏರಿದ ಧ್ವನಿಯಲ್ಲೇ ಹೇಳಿದ್ದರು. ಆದರೆ, ಅನರ್ಹ ಶಾಸಕರ ಸ್ಪರ್ಧೆಗೆ ಸುಪ್ರೀಂಕೋರ್ಟ್‌ ಹಸಿರು ನಿಶಾನೆ ತೋರಿದ್ದರಿಂದ ಬಿಜೆಪಿಯಲ್ಲಿ ಭಿನ್ನಮತ ಏಳುವ ಮುನ್ನವೇ ಶಮನವಾಯಿತು.

ಶಿವರಾಮ ಹೆಬ್ಬಾರ್‌ ಗೆದ್ದರೆ ಸಚಿವರಾಗಲಿದ್ದಾರೆ. ಅಷ್ಟೇ ಅಲ್ಲ, ಜಿಲ್ಲಾ ಉಸ್ತುವಾರಿ ಸಚಿವರಾಗಲಿದ್ದಾರೆ. ಯಲ್ಲಾಪುರ ಕ್ಷೇತ್ರಕ್ಕೆ ಮೊಟ್ಟಮೊದಲ ಬಾರಿಗೆ ಈ ಭಾಗ್ಯ ಲಭಿಸಲಿದೆ. ಹೀಗಾಗಿ ಹೆಬ್ಬಾರ್‌ ಅವರನ್ನು ಗೆಲ್ಲಿಸುವಂತೆ ಬಿಜೆಪಿ ಪ್ರಚಾರ ನಡೆಸುತ್ತಿದೆ. ಶಿವರಾಮ ಹೆಬ್ಬಾರ್‌ ಅವರಿಗೂ ಬಿಜೆಪಿ ಹೊಸದಲ್ಲ.

ಈ ಹಿಂದೆ ಎರಡು ಅವಧಿಗೆ ಅವರು ಬಿಜೆಪಿಯ ಜಿಲ್ಲಾ ಅಧ್ಯಕ್ಷರಾಗಿದ್ದರು. ಇದು ಹೆಬ್ಬಾರ್‌ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಕಾರ್ಯಕರ್ತರ ನಡುವೆ ಇರುವ ಸಣ್ಣಪುಟ್ಟಭಿನ್ನಾಭಿಪ್ರಾಯ ಬಿಟ್ಟರೆ ಅಂತಹ ದೊಡ್ಡ ಸಮಸ್ಯೆಯೇನೂ ಇಲ್ಲ. ಕಾಂಗ್ರೆಸ್‌ನಿಂದ ಎರಡು ಬಾರಿ ಆಯ್ಕೆಯಾಗಿ ಹಠಾತ್ತಾಗಿ ಪಕ್ಷ ಬಿಟ್ಟು ಹೋಗಿರುವುದು ಹೆಬ್ಬಾರ್‌ ಅವರಿಗೆ ಮೈನಸ್‌ ಪಾಯಿಂಟ್‌ ಆಗಿದೆ.

ಕಳೆದ ಚುನಾವಣೆಯಲ್ಲಿ ಶಿರಸಿಯಿಂದ ಸ್ಪರ್ಧಿಸಿದ್ದ ಭೀಮಣ್ಣ ನಾಯ್ಕ ಈ ಬಾರಿ ಯಲ್ಲಾಪುರ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್‌ ಅವರನ್ನು ಎದುರಿಸುತ್ತಿದ್ದಾರೆ. ಪಕ್ಷ ಎರಡು ಬಾರಿ ಶಾಸಕರನ್ನಾಗಿಸಿದರೂ ಹೆಬ್ಬಾರ್‌ ಅವರು ಪಕ್ಷಕ್ಕೆ, ಮತದಾರರಿಗೆ ದ್ರೋಹ ಬಗೆದಿದ್ದಾರೆ ಎನ್ನುವುದನ್ನೇ ಭೀಮಣ್ಣ ನಾಯ್ಕ ಪ್ರಚಾರದಲ್ಲಿ ಬಿಂಬಿಸುತ್ತಿದ್ದಾರೆ.

15 ಅನರ್ಹ ಶಾಸಕರು ಕರ್ನಾಟಕದ ಮುತ್ತುಗಳು, ಇವರು ಮತ್ತೆ ಶಾಸಕರಾಗಬೇಕು: ಕಟೀಲ್

ಹೆಬ್ಬಾರ್‌ ಪಕ್ಷ ಬಿಟ್ಟು ಬಿಜೆಪಿಗೆ ಹೋಗಿರುವುದು ಭೀಮಣ್ಣ ನಾಯ್ಕ ಅವರಿಗೆ ಪ್ಲಸ್‌ ಪಾಯಿಂಟಾಗಿದೆ. ಆದರೆ, ಕ್ಷೇತ್ರದಲ್ಲಿ ಸಂಘಟನೆಯ ಕೊರತೆ, ಬೇರೆ ಕ್ಷೇತ್ರದಲ್ಲಿ ಬಂದು ನಿಂತಿರುವುದು ಭೀಮಣ್ಣ ಅವರಿಗೆ ಮೈನಸ್‌ ಪಾಯಿಂಟ್‌ ಆಗಿದೆ.

ಇಡೀ ಕ್ಷೇತ್ರದ ಮತದಾರರ ನಾಡಿಮಿಡಿತ, ಮೋದಿ ಅಲೆ, ಬಿಜೆಪಿ ಆಡಳಿತ ಪಕ್ಷವಾಗಿರುವುದು, ಶಿವರಾಮ ಹೆಬ್ಬಾರ್‌ ಅವರಿಗೆ ಭವಿಷ್ಯದ ಮಂತ್ರಿ ಸ್ಥಾನ, ಹೆಬ್ಬಾರ್‌ ಕ್ಷೇತ್ರದ ಮತದಾರರೊಂದಿಗೆ ಇಟ್ಟುಕೊಂಡಿರುವ ಸಂಪರ್ಕ ಇವೆಲ್ಲವನ್ನು ನೋಡಿದಾಗ ಮತದಾರರ ಒಲವು ಶಿವರಾಮ ಹೆಬ್ಬಾರ್‌ ಅವರ ಕಡೆಗೆ ಇದ್ದಂತೆ ಕಾಣಿಸುತ್ತಿದೆ. ಬಿಜೆಪಿ ಹಾಗೂ ಹೆಬ್ಬಾರ್‌ ಅವರ ಜತೆ ಹೆಜ್ಜೆ ಹಾಕಿದ ಕಾಂಗ್ರೆಸ್‌ ಕಾರ್ಯಕರ್ತರು ಒಂದಾದಲ್ಲಿ ಹೆಬ್ಬಾರ್‌ಗೆ ಚುನಾವಣೆ ಎದುರಿಸುವುದು ಸುಲಭವಾಗಲಿದೆ. ಹೊಂದಾಣಿಕೆ ಆಗದೆ ಗೊಂದಲ ಮುಂದುವರಿದಲ್ಲಿ ಹೆಬ್ಬಾರ್‌ ಪ್ರಯಾಸ ಪಡಬೇಕಾಗಲಿದೆ.

ಬಿಜೆಪಿಗೆ ಸರ್ಕಾರ ಉಳಿಸಿಕೊಳ್ಳಬೇಕಾದರೆ ಈ ಕ್ಷೇತ್ರವನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಅನರ್ಹ ಶಾಸಕರಿಗೆ ತಕ್ಕಪಾಠ ಕಲಿಸುವ ಮೂಲಕ ಕಳೆದುಕೊಂಡ ಕ್ಷೇತ್ರವನ್ನು ಉಳಿಸಿಕೊಳ್ಳುವ ಪ್ರತಿಷ್ಠೆಯ ಪ್ರಶ್ನೆ ಕಾಂಗ್ರೆಸ್‌ಗೆ. ಹೀಗಾಗಿ ಕ್ಷೇತ್ರದುದ್ದಕ್ಕೂ ಉಭಯ ಪಕ್ಷಗಳ ನಡುವೆ ಜಿದ್ದಾಜಿದ್ದಿಯ ಹೋರಾಟ ನಡೆಯುತ್ತಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಅತಿರಥ ಮಹಾರಥರು ಪ್ರಚಾರ ಸಭೆ ನಡೆಸುತ್ತಿದ್ದಾರೆ.

ಈ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಭದ್ರವಾದ ನೆಲೆ ಇಲ್ಲ. ಪಕ್ಷೇತರರೂ ಗಮನಾರ್ಹ ಪ್ರಮಾಣದಲ್ಲಿ ಮತ ಗಳಿಸುವ ಸಾಧ್ಯತೆ ಇಲ್ಲ. ಹೀಗಾಗಿ ಹೋರಾಟ ಏನಿದ್ದರೂ ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ಮಾತ್ರ. ಫಲಿತಾಂಶ ಕೇವಲ ಕ್ಷೇತ್ರದ ಜನರಿಗಷ್ಟೇ ಅಲ್ಲ, ಇಡೀ ಜಿಲ್ಲೆ, ರಾಜ್ಯದ ಜನತೆಯನ್ನೇ ತುದಿಗಾಲ ಮೇಲೆ ನಿಲ್ಲಿಸಿದೆ.

ಸಂತ ಶಿಶು‌‌ನಾಳ ಶರೀಫರ ತತ್ವ ಪದ ಹಾಡಿ ಕುಮಟಳ್ಳಿ ವಿರುದ್ಧ ಹರಿಹಾಯ್ದ ಹೆಬ್ಬಾಳಕರ್

ಕ್ಷೇತ್ರ ಹಾಗೂ ಮತದಾರರು:

2008ರ ಕ್ಷೇತ್ರ ಪುನರ್ವಿಂಗಡಣೆಯಲ್ಲಿ ಅಸ್ತಿತ್ವಕ್ಕೆ ಬಂದ ಯಲ್ಲಾಪುರ ವಿಧಾನಸಭೆ ಕ್ಷೇತ್ರ ಯಲ್ಲಾಪುರ ಹಾಗೂ ಮುಂಡಗೋಡ ಸಂಪೂರ್ಣ ತಾಲೂಕನ್ನು ಒಳಗೊಂಡಿದೆ. ಜತೆಗೆ ಶಿರಸಿ ತಾಲೂಕಿನ ಬನವಾಸಿ ಹೋಬಳಿ ಈ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಈ ಉಪ ಚುನಾವಣೆಯಲ್ಲಿ ಒಟ್ಟು 1,72,547 ಮತದಾರರು ಇದ್ದಾರೆ. ಇವರಲ್ಲಿ 84,687 ಮಹಿಳೆ, 87,899 ಪುರುಷ ಹಾಗೂ ಒಬ್ಬರು ಇತರ ಮತದಾರರಿದ್ದಾರೆ. ಒಟ್ಟು 231 ಮತಗಟ್ಟೆಇದೆ.

ಯಲ್ಲಾಪುರ ತಾಲೂಕಿನಲ್ಲಿ 63,693, ಮುಂಡಗೋಡ 70,492 ಹಾಗೂ ಬನವಾಸಿಯಲ್ಲಿ 38,445 ಮತದಾರರಿದ್ದಾರೆ. ಕ್ಷೇತ್ರದಲ್ಲಿ ಬ್ರಾಹ್ಮಣ ಮತದಾರರು 28 ಸಾವಿರದಷ್ಟಿದ್ದಾರೆ. ಪರಿಶಿಷ್ಟಜಾತಿ, ಜನಾಂಗದ 20 ಸಾವಿರ, ಮರಾಠಿ 18 ಸಾವಿರ, ನಾಮಧಾರಿ 16 ಸಾವಿರ, ಮುಸ್ಲಿಂ 16 ಸಾವಿರ, ಲಿಂಗಾಯತ 12 ಸಾವಿರದಷ್ಟುಮತದಾರರಿದ್ದಾರೆ. ಈ ಲೆಕ್ಕಾಚಾರ ಕೂಡ ಶಿವರಾಮ ಹೆಬ್ಬಾರ್‌ ಅವರಿಗೆ ಅನುಕೂಲಕರವಾಗಿಯೇ ಇದೆ.

- ವಸಂತ್‌ಕುಮಾರ್ ಕತಗಾಲ 

Follow Us:
Download App:
  • android
  • ios